ಲೋಕಸಭೆ ಚುನಾವಣೆ: ಕಲಬುರಗಿ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಕಸರತ್ತು, ನಿತಿನ್ ಗುತ್ತೆದಾರ್ ಸೆಳೆಯಲು ‘ಕೈ’ ತಂತ್ರ

| Updated By: Ganapathi Sharma

Updated on: Feb 05, 2024 | 9:48 AM

Lok Sabha Elections 2024: ನಿತಿನ್ ಗುತ್ತೇದಾರ್ ಅವರನ್ನು ಪಕ್ಷಕ್ಕೆ ಸೆಳೆದುಕೊಂಡರೆ ಲೋಕಸಭೆ ಚುನಾವಣೆಯಲ್ಲಿ ಬಹಳಷ್ಟು ಅನುಕೂಲ ಆಗಬಹುದು ಎಂಬ ಲೆಕ್ಕಾಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರದ್ದು. ವಿಧಾನಸಭೆ ಚುನಾವಣೆಯಲ್ಲಿ ಸಹೋದರ ಮಾಲೀಕಯ್ಯ ಗುತ್ತೇದಾರ್ ವಿರುದ್ಧವೇ ಸ್ಪರ್ಧಿಸಿದ್ದ ನಿತಿನ್, ಬಿಜೆಪಿ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಇದೀಗ ಅವರನ್ನು ಪಕ್ಷಕ್ಕೆ ಸೆಳೆಯಲು ‘ಕೈ’, ‘ಕಮಲ‘ ಕಸರತ್ತು ಆರಂಭಿಸಿವೆ.

ಲೋಕಸಭೆ ಚುನಾವಣೆ: ಕಲಬುರಗಿ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಕಸರತ್ತು, ನಿತಿನ್ ಗುತ್ತೆದಾರ್ ಸೆಳೆಯಲು ‘ಕೈ’ ತಂತ್ರ
ರೇವು ನಾಯಕ್ ಬೆಳಮಗಿ & ನಿತಿನ್ ಗುತ್ತೇದಾರ್
Follow us on

ಕಲಬುರಗಿ, ಫೆಬ್ರವರಿ 5: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್, ಬಿಜೆಪಿ ತಂತ್ರಗಾರಿಕೆ ಚುರುಕುಗೊಳಿಸಿವೆ. ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಕಸರತ್ತುಗಳನ್ನೂ ಆರಂಭಿಸಿವೆ. ಕಲಬುರಗಿ ಲೋಕಸಭಾ ಕ್ಷೇತ್ರ (Kalaburagi Lok Sabha Constituency) ಗೆಲ್ಲಲು ಕೈ, ಕಮಲ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿದ್ದು, ನಿತಿನ್ ಗುತ್ತೇದಾರ್ (Nitin Guttedar) ಬೆನ್ನುಬಿದ್ದಿವೆ. ನಿತಿನ್​ರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್, ಬಿಜೆಪಿ ನಾಯಕರು ಕಸರತ್ತು ಆರಂಭಿಸಿದ್ದಾರೆ.

ಈ ಬೆಳವಣಿಗೆಗಳ ಮಧ್ಯೆ ನಿತಿನ್ ಗುತ್ತೇದಾರ್ ಅವರನ್ನು ಕಾಂಗ್ರೆಸ್ ನಾಯಕ ರೇವು ನಾಯಕ್ ಬೆಳಮಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಿತಿನ್ ಗುತ್ತೇದಾರ್ ಮನೆಗೆ ಭೇಟಿ ನೀಡಿ ತಾಸುಗಟ್ಟಲೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಹೀಗಾಗಿ ನಿತಿನ್​ರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ರೇವು ನಾಯಕ್ ಬೆಳಮಗಿ ಮುಂದಾದರೇ ಎಂಬ ಅನುಮಾನ ಮೂಡಿದೆ.

ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ದಿನವೇ ನಿತಿನ್ ಗುತ್ತೇದಾರ್ ಮನೆಗೆ ಬೆಳಮಗಿ ಕೂಡ ಭೇಟಿ ನೀಡಿದ್ದಾರೆ. ಶನಿವಾರವಷ್ಟೇ ಕಲಬುರಗಿಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್, ನಿತಿನ್ ಗುತ್ತೇದಾರ್ ಮನೆಗೆ ಬೇಟಿ ನೀಡಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾಗಿದ್ದ ನಿತಿನ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿತಿನ್ ಗುತ್ತೇದಾರ್ 51 ಸಾವಿರ ಮತಗಳನ್ನು ಪಡೆದಿದ್ದರು. ಸಹೋದರ ಮಾಲೀಕಯ್ಯ ಗುತ್ತೇದಾರ್ ವಿರುಧ್ದವೇ ಸ್ಪರ್ಧಿಸಿದ್ದರು. ಪರಿಣಾಮವಾಗಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಆಗಿದ್ದರು.

ಈ ಮಧ್ಯೆ, ಕೈ ತಪ್ಪಿರುವ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ನಿತಿನ್ ಗುತ್ತೇದಾರ್ ಅವರನ್ನು ಸೆಳೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸರಳವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ‘ಕೈ’ ಪಾಳಯ ಕಾರ್ಯಪ್ರವೃತ್ತವಾಗಿದೆ. ಶತಾಯಗತಾಯ ನಿತಿನ್ ಗುತ್ತೇದಾರ್ ಕೈ ಹಿಡಿಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಮತ್ತೊಂದೆಡೆ, ಬಿಜೆಪಿ ಕೂಡ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಫೆಬ್ರವರಿ 9, 10 ರಂದು 2 ದಿನ ಕೇಂದ್ರ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ

ಕಳೆದ ಡಿಸೆಂಬರ್​ನಲ್ಲಿ ನಿತಿನ್ ಅವರನ್ನು ಬಿಜೆಪಿ ನಾಯಕ ಸಿಟಿ ರವಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲೇ ಬಿಜೆಪಿಗೆ ಸೇರುವಂತೆ ನಿತಿನ್​ಗೆ ಆಫರ್ ನೀಡಿದ್ದರು ಎನ್ನಲಾಗಿದೆ.

ಮತ್ತೊಂದೆಡೆ, ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಬಗ್ಗೆಯೂ ಕಾಂಗ್ರೆಸ್ ಸಮಾಲೋಚನೆ ಆರಂಭಿಸಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಸಹ ಕ್ಷೇತ್ರ ಹಂಚಿಕೆ ಬಗ್ಗೆ ಅಂತಿಮ ಹಂತದ ನಿರ್ಧಾರ ತೆಗೆದುಕೊಳ್ಳಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ