ಕಲಬುರಗಿ, ಜುಲೈ 31: ಅನೈತಿಕ ಸಂಬಂಧ ಬೆಳೆಸುವಂತೆ ತನ್ನ ಸಹೋದರಿಗೆ ಒತ್ತಾಯಿಸುತ್ತಿದ್ದ ವ್ಯಕ್ತಿಯ ಕಾಲನ್ನು ಮುರಿದಿದ್ದ ಸಹೋದರನೇ ಇದೀಗ ಕೊಲೆಯಾಗಿದ್ದಾನೆ. ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಭಾನುವಾರ (ಜುಲೈ 30) ರಾತ್ರಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಾಂತಪ್ಪ ಗಂಡೋಳಿ (26) ಎಂಬವರನ್ನು ಕೊಲೆ (Murder) ಮಾಡಲಾಗಿದೆ.
ನಿನ್ನೆ ರಾತ್ರಿ ತನ್ನ ಸಂಬಂಧಿ ಜೊತೆ ಚೌಡಾಪುರ ಗ್ರಾಮದಲ್ಲಿರುವ ಬಾರ್ ಆಂಡ್ ರೆಸ್ಟೋರಂಟ್ಗೆ ಹೋಗಿದ್ದ ಮಹಾಂತಪ್ಪ ಮದ್ಯ ಸೇವನೆ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಬಾರ್ಗೆ ಬಂದಿದ್ದ ಇಬ್ಬರು ಯುವಕರು, ಮಹಾಂತಪ್ಪನ ಜೊತೆ ಜಗಳ ಆರಂಭಿಸಿದ್ದರು. ಬಾರ್ನವರು ಹೊರಗೆ ಹೋಗಿ ಅಂತ ಹೇಳಿದ್ದಾರೆ. ಇದೇ ವೇಳೆ ತನ್ನ ಕೊಲೆಗೆ ಯತ್ನಿಸುತ್ತಿದ್ದಾರೆ ಎಂದು ಅರಿತ ಮಹಾಂತಪ್ಪ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ತಪ್ಪಿಸಿಕೊಳ್ಳುತ್ತಿದ್ದ ಮಹಾಂತಪ್ಪರನ್ನು ಬಿಡದ ಯುವಕರು ಮಾರಕಾಸ್ತ್ರದೊಂದಿಗೆ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮಹಾಂತಪ್ಪರನ್ನು ಚೌಡಾಪುರ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಮತ್ತು ದಶರಥ್ ಎಂಬವರು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: 10 ವರ್ಷದ ಹಿಂದಿನ ಪ್ರೇಮ ವಿವಾಹದ ಸಿಟ್ಟು: ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ, 8 ಜನರಿಗೆ ಗಾಯ
ಕೊಲೆಯಾಗಿರುವ ಮಹಾಂತಪ್ಪನ ಸಹೋದರಿ ಸುನಿತಾಗೆ ಮದುವೆಯಾಗಿದ್ದು, ಕೆಲವು ವರ್ಷಗಳ ಹಿಂದೆ ಆಕೆಯ ಪತಿ ಮೃತಪಟ್ಟಿದ್ದಾರೆ. ತನ್ನ ಪತಿ ಸಾವಿನ ನಂತರ ಮೂವರು ಮಕ್ಕಳೊಂದಿಗೆ ಸುನಿತಾ ತವರು ಸೇರಿದ್ದರು. ಜೀವನ ಸಾಗಿಸಲು ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಈಕೆಯ ಮೇಲೆ ಕಣ್ಣು ಹಾಕಿದ ಆರೋಪಿ ಪ್ರಶಾಂತ್, ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವಂತೆ ಸುನಿತಾಗೆ ಪೀಡಿಸಲು ಆರಂಭಿಸಿದ್ದನು.
ಒಂದು ಬಾರಿ ಸುನಿತಾಳ ಮೇಲೆ ಅತ್ಯಾಚಾರಕ್ಕೂ ಪ್ರಶಾಂತ್ ಯತ್ನಸಿದ್ದನಂತೆ. ಎರಡು ವರ್ಷಗಳ ಹಿಂದೆ ಈ ವಿಚಾರವಾಗಿ ಮಹಾಂತಪ್ಪ, ಪ್ರಶಾಂತ್ನನ್ನು ಹಿಡಿದು ಕಾಲು ಮುರಿದಿದ್ದನು. ಈ ಕಾರಣಕ್ಕೆ ಪ್ರಶಾಂತ್ ಮಹಾಂತಪ್ಪನ ಮೇಲೆ ದ್ವೇಷ ಬೆಳೆಸಿದ್ದನು. ಅದರಂತೆ ನಿನ್ನೆ ಮಹಾಂತಪ್ಪರನ್ನು ಪ್ರಶಾಂತ್ ಮತ್ತು ಸಹಚರ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದ್ದೊಬ್ಬ ಗಂಡು ಮಗನನ್ನು ಕಳೆದುಕೊಂಡ ಕುಟುಂಬ ಇದೀಗ ಕಂಗಾಲಾಗಿದೆ.
ಪ್ರಕರಣದ ಬಗ್ಗೆ ಮಾತನಾಡಿದ ಕಲಬುರಗಿ ಎಸ್.ಪಿ. ಇಶಾ ಪಂತ್, ಮಹಾಂತಪ್ಪನ ಕೊಲೆಗೆ ಸಂಬಂಧಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ತನ್ನ ಸಹೋದರಿ ಜೊತೆ ಕಿರಿಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಆರೋಪಿ, ಮಹಾಂತಪ್ಪನನ್ನು ಕೊಲೆ ಮಾಡಿದ್ದಾನೆ. ಆರೋಪಿಗಳಿಗೆ ಕಠೀಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಕ್ರೈಂ ಸುದ್ದಿಗಳಣ್ನು ಓದಲು ಇಲ್ಲಿ ಕ್ಲಿಕ್ ಮಾಡಿ