
ಕಲಬುರಗಿ, ನವೆಂಬರ್ 08: ಪಟಾಕಿ ಹಚ್ಚುವ ಸಂಭ್ರಮ ಕ್ಷಣಾರ್ಧದಲ್ಲೇ ಸಾವಿನ ದುರಂತವಾಗಿ ಬದಲಾಗಿದೆ. ದೀಪಾವಳಿ ಪಟಾಕಿ ಅಂತ ಕಾಡುಹಂದಿಗಳಿಗಾಗಿ ತಂದಿಟ್ಟಿದ್ದ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭೀಮರಾಯ ಮೃತ ಬಾಲಕ. ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘೋರ ದುರಂತ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದ ಬಾಲಕ ಭೀಮರಾಯ, ದೀಪಾವಳಿ ಪಟಾಕಿ ಅಂತ ಮನೆಯಲ್ಲಿ ಇಟ್ಟಿದ್ದ ಮದ್ದಿಗೆ ಬೆಂಕಿ ಹಚ್ಚಿದ್ದಾನೆ. ಆದರೆ ಅದು ಸಾಮಾನ್ಯ ಪಟಾಕಿಯಾಗಿರಲಿಲ್ಲ. ಕಾಡುಹಂದಿಗಳನ್ನ ಓಡಿಸಲು ತಂದಿಟ್ಟಿದ್ದ ಸ್ಫೋಟಕವಾಗಿತ್ತು. ಆ ಮದ್ದಿನ ಅಪಾಯ ಅರಿಯದ ಭೀಮರಾಯ, ಬೆಂಕಿ ಹಚ್ಚಿದ ಕ್ಷಣವೇ ದೊಡ್ಡ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಬಾಲಕನ ತಲೆ ಛಿದ್ರಛಿದ್ರವಾಗಿದೆ. ಸ್ಥಳದಲ್ಲೇ ಭೀಮರಾಯ ಸಾವನ್ನಪ್ಪಿದ್ದಾನೆ. ಕೆಲವೇ ಕ್ಷಣಗಳ ಹಿಂದೆ ಜೀವಂತವಾಗಿದ್ದ ಮಗ, ಕಣ್ಣೆದುರೇ ಪ್ರಾಣ ಕಳೆದುಕೊಂಡಿರುವ ದುರಂತ ಕುಟುಂಬವನ್ನ ಶೋಕಸಾಗರದಲ್ಲಿ ಮುಳುಗಿಸಿದೆ. ಪಟಾಕಿ ಹಚ್ಚುವ ಖುಷಿಯಲ್ಲಿ ಇದ್ದ ಬಾಲಕನ ಬದುಕು ಒಂದೇ ಕ್ಷಣದಲ್ಲಿ ಅಂತ್ಯವಾಗಿದೆ.
ಇನ್ನು ಭೀಮರಾಯನ ತಂದೆ ಕಾಡುಹಂದಿಗಳನ್ನ ಓಡಿಸಲು ಸ್ಫೋಟಕ ಮದ್ದನ್ನ ಮನೆಯಲ್ಲಿ ತಂದಿಟ್ಟಿದ್ದರು. ಅದನ್ನೇ ದೀಪಾವಳಿ ಪಟಾಕಿ ಅಂತ ಬಾಲಕ ಭಾವಿಸಿದ್ದಾನೆ. ಅಪಾಯಕಾರಿ ಮದ್ದು ಮನೆಯಲ್ಲಿ ಇರುವುದೇ ಈ ದುರಂತಕ್ಕೆ ಕಾರಣವಾಗಿದೆ. ಮಕ್ಕಳ ಕೈಗೆ ಇಂಥ ಸ್ಫೋಟಕ ವಸ್ತುಗಳು ಸಿಕ್ಕರೆ ಎಂಥ ಅನಾಹುತ ಸಂಭವಿಸುತ್ತೆ ಅನ್ನೋದಕ್ಕೆ ಹಂದರಕಿ ಗ್ರಾಮದಲ್ಲಿ ನಡೆದಿರುವ ಈ ಘಟನೆಯೇ ಉದಾಹರಣೆ.
ಇದನ್ನೂ ಓದಿ: ದೀಪಾವಳಿ ಅಚ್ಚರಿ: ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಇನ್ನು ಮಗನನ್ನ ಕಳೆದುಕೊಂಡ ಕುಟುಂಬದ ನೋವು ಹೇಳತೀರದಾಗಿದೆ. ಮಗನ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ಹೆತ್ತವರಿಗೆ ಈಗ ಉಳಿದಿರುವುದು ದುಃಖ ಮಾತ್ರ. ಹದಿನೈದು ವರ್ಷದ ಭೀಮರಾಯ ಇನ್ನೂ ಬದುಕಿ ಬಾಳಬೇಕಿತ್ತು, ಓದಿ ಬೆಳೆದು ಹೆತ್ತವರಿಗೆ ಆಸರೆಯಾಗಬೇಕಿತ್ತು. ಆದರೆ ಪಟಾಕಿ ಅಂತ ಬೆಂಕಿ ಹಚ್ಚಿದ ಮದ್ದು ಆತನ ಬದುಕನ್ನೇ ಕಸಿದುಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.