ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಕ್ಕೆ ತೊಂದರೆ ಆಗುತ್ತಿದೆ: ಕಾಂಗ್ರೆಸ್ ಶಾಸಕ

| Updated By: ಡಾ. ಭಾಸ್ಕರ ಹೆಗಡೆ

Updated on: Feb 26, 2024 | 10:37 AM

ಗ್ಯಾರಂಟಿ ಯೋಜನೆಗಳಿಂದ ಬಹಳಷ್ಟು ಖರ್ಚು ಆಗುತ್ತಿದೆ, ಇದರಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಆದರೂ ನಿಮ್ಮ ನಿರೀಕ್ಷೆ ಹುಸಿಗೊಳಿಸದಂತೆ ಕೆಲಸ ಮಾಡುತ್ತಿದ್ದೇವೆ. ಐದು ವರ್ಷದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಕ್ಕೆ ತೊಂದರೆ ಆಗುತ್ತಿದೆ: ಕಾಂಗ್ರೆಸ್ ಶಾಸಕ
ಶಾಸಕ ಅಲ್ಲಮಪ್ರಭು ಪಾಟೀಲ್
Follow us on

ಕಲಬುರಗಿ, ಫೆಬ್ರವರಿ 26: ಗ್ಯಾರಂಟಿ ಯೋಜನೆಗಳಿಂದ (Guarantee Schemes) ಅಭಿವೃದ್ಧಿ ಕೆಲಸಕ್ಕೆ ತೊಂದರೆ ಆಗುತ್ತಿದೆ ಎಂದು ಕಲಬುರಗಿ (Kalaburagi) ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ (Congress MLA Allamprabhu Patil) ಹೇಳಿದ್ದಾರೆ. ರವಿವಾರ (ಫೆಬ್ರವರಿ 25) ರಂದು ಕಲಬುರಗಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ 65 ಸಾವಿರ ಕೋಟಿ ಹಣ ಖರ್ಚಾಗುತ್ತಿದೆ. ಎಲ್ಲ ಹೆಣ್ಣು ಮಕ್ಕಳು ಸರ್ಕಾರಿ ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಉಚಿತ ಅಕ್ಕಿ, ತಲಾ ಎರಡು ಸಾವಿರ ಹಣ ಮಹಿಳೆಯರ ಖಾತೆ ಹಾಕುತ್ತಿದ್ದೇವೆ. ಇದರಿಂದ ಬಹಳಷ್ಟು ಖರ್ಚು ಆಗುತ್ತಿದೆ, ಇದರಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದರು.

ಆದರೂ ನಿಮ್ಮ ನಿರೀಕ್ಷೆ ಹುಸಿಗೊಳಿಸದಂತೆ ಕೆಲಸ ಮಾಡುತ್ತಿದ್ದೇವೆ. ಐದು ವರ್ಷದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಈ ವರ್ಷ ನಮ್ಮ ಕ್ಷೇತ್ರಕ್ಕೆ 9 ಕೋಟಿ ರೂ. ಅನುದಾನ ಬಂದಿದೆ. 38 ಹಳ್ಳಿ ಮತ್ತು 23 ವಾರ್ಡ್​ಗಳಿಗೆ ಹಂಚಬೇಕು. ಒಂದೊಂದು ಹಳ್ಳಿ, ವಾರ್ಡ್​ಗೆ 20 ಲಕ್ಷ ರೂ. ಬರುತ್ತೆ. ಈಗಾಗಲೆ ಕಾಮಕಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಕಾಮಗಾರಿಗಳಿಗೆ ಹಣ ನೀಡಬೇಕು. ನಾಲ್ಕು ಕೋಟಿ ರೂ. ನಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ.

ಇದನ್ನೂ ಓದಿ: ಗ್ಯಾರೆಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸರ್ಕಾರದಿಂದ ಪ್ರಾಧಿಕಾರ, ಸಮಿತಿ ರಚನೆ

ಅಭಿವೃದ್ಧಿ ಸಾಧ್ಯವಿಲ್ಲ ಎಂದ ಡಿಕೆ ಶಿವಕುಮಾರ್

ಅಧಿಕಾರಕ್ಕೆ ಬಂದ ಕೆಲವೆ ದಿನಗಳಲ್ಲಿ ಕಾಂಗ್ರೆಸ್​ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿತ್ತು. ಈ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ ಕೆಲವೆ ದಿನಗಳಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆಯೊಂದು ನೀಡಿದ್ದರು. ಅದು ” ಈ ವರ್ಷ (2023) ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ನಾವು (ಐದು ಗ್ಯಾರಂಟಿ ಯೋಜನೆಗಳಿಗಾಗಿ) 40,000 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕಾಗಿತ್ತು. ನಾವು ಅಭಿವೃದ್ಧಿಗೆ ಅನುದಾನ ನೀಡಲು ಸಾಧ್ಯವಿಲ್ಲ. ನೀರಾವರಿ ಮತ್ತು ಸಾರ್ವಜನಿಕ ಕಾರ್ಯಗಳಿಗೂ ಸಹ (ಅನುದಾನ) ನೀಡಲು ಸಾಧ್ಯವಿಲ್ಲ, ಆದರೆ ನಿರೀಕ್ಷೆಗಳು ಹೆಚ್ಚಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತಾಳ್ಮೆಯಿಂದ ಇರುವಂತೆ ಸೂಚಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆಯೇ ಹಿಂದಿನ ಬಿಜೆಪಿ ಸರ್ಕಾರವನ್ನು ದೂಷಿಸಿದ ಶಿವಕುಮಾರ್, ಹಿಂದಿನ ಬಿಜೆಪಿ ಸರ್ಕಾರ ಬೊಕ್ಕಸವನ್ನು ಬರಿದುಮಾಡಿತು. ಹೆಚ್ಚುವರಿ ಟೆಂಡರ್‌ಗಳನ್ನು ಕರೆಯಲಾಗಿತ್ತು. ಅದರ ಪರಿಣಾಮವಾಗಿ ಖಜಾನೆ ಖಾಲಿಯಾಗಿದೆ ಎಂದು ದೂರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 am, Mon, 26 February 24