ಜನನಿಬಿಡ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಕಾಲಿಗೆ ಗುಂಡು ಹಾರಿಸಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯನ್ನು ಉತ್ತರ ಪ್ರದೇಶದ ಸಹರಾನ್‌ಪುರಕ್ಕೆ ಲಿಂಕ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಸಹರಾನ್‌ಪುರದ್ದು ಎಂದು ಹೇಳುವ ಮೂಲಕ ಕೆಲವು ಬಳಕೆದಾರರು ಯುಪಿ ಪೊಲೀಸರನ್ನು ಹೊಗಳುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಉತ್ತರ ಪ್ರದೇಶದ ಸಹರಾನ್‌ಪುರದ ಅಜ್ಜ ಅಬ್ದುಲ್ ಗಫಾರ್ ಭಾನುವಾರ ಮಾರುಕಟ್ಟೆಯಲ್ಲಿ ಬೆದರಿಸುತ್ತಿದ್ದರು, ನಂತರ ಯೋಗಿ ಜಿ ಅವರ ಪೊಲೀಸರು ಬಂದರು, ಆ ದೃಶ್ಯವು ನಿಮ್ಮ ಮುಂದೆ ಇದೆ’’ ಎಂದು ಬರೆದುಕೊಂಡಿದ್ದಾರೆ.
https://www.instagram.com/sunilkashyap9081/reel/DDeNw1TNjO5/
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಉತ್ತರಪ್ರದೇಶದ ಸಹರಾನ್‌ಪುರಕ್ಕು ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕರ್ನಾಟಕದ ಕಲಬುರಗಿಯಲ್ಲಿ ನಡೆದ ಘಟನೆ ಆಗಿದೆ.
ಗೂಗಲ್ ಲೆನ್ಸ್‌ನೊಂದಿಗೆ ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ಹುಡುಕಿದಾಗ ಈ ಘಟನೆಗೆ ಸಂಬಂಧಿಸಿದ ಅನೇಕ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ವರದಿಗಳ ಪ್ರಕಾರ, ಕರ್ನಾಟಕದ ಕಲಬುರಗಿ ಪೊಲೀಸರು ಮಾರುಕಟ್ಟೆಯಲ್ಲಿ ಮೊಹಮ್ಮದ್ ಫಜಲ್ ಜಾಫರ್ (28) ಎಂಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾರೆ. ಈತ ಚಾಕು ಮತ್ತು ಆಯುಧಗಳಿಂದ ಜನರನ್ನು ಬೆದರಿಸುತ್ತಿದ್ದ ಎನ್ನಲಾಗಿದೆ. ನಂತರ ಆತನನ್ನು ಬಂಧಿಸಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫಜಲ್ ಹಣ್ಣು ಮಾರಾಟಗಾರನಾಗಿದ್ದು, ವಿಡಿಯೋದಲ್ಲಿ ಆತ ಚಾಕು ಹಿಡಿದು ತಿರುಗಾಡುತ್ತಿರುವುದು ಕಂಡು ಬಂದಿದೆ. ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಲ್ಲದೆ ಸ್ವತಃ ಟಿವಿ9 ಕನ್ನಡ ವೆಬ್ವೈಟ್ ಈ ಕುರಿತು ಸುದ್ದಿ ಪ್ರಕಟಿಸಿತ್ತು. ‘ಕಲಬುರಗಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಮೇಲೆ ಫೈರಿಂಗ್’ ಎಂಬ ಹೆಡ್ಲೈನ್ನೊಂದಿಗೆ ಫೆಬ್ರವರಿ 5, 2023 ರಂದು ಸುದ್ದಿ ಪಬ್ಲಿಶ್ ಆಗಿದೆ.
ಇದರಲ್ಲಿರುವ ಮಾಹಿತಿಯ ಪ್ರಕಾರ, ಮಾರಕಾಸ್ತ್ರಗಳನ್ನು ಹಿಡಿದ ಜನಬಿಡ ಪ್ರದೇಶಕ್ಕೆ ಬಂದ ವ್ಯಕ್ತಿಯೊಬ್ಬ ಸಾರ್ವಜನಿಕಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ತಿಳಿದ ಚೌಕ್ ಠಾಣೆ ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಗಂಡೇಟು ತಿಂದ ಆರೋಪಿ ಅಬ್ದುಲ್ ಜಾಫರ್ ಪೊಲೀಸರು ಜಿಮ್ಸ್ ಆಸ್ಪತ್ರೆಗೆ ಸೇರಿಸಿದ್ದು, ಚೇತರಿಕೆ ನಂತರ ಜೈಲಿಗಟ್ಟಲಿದ್ದಾರೆ.
ತಮ್ಮ ಮೇಲೆ ದಾಳಿ ಮಾಡುವ ವಾತಾವರಣ ತಿಳಿದ ಪಿಎಸ್ಐ ತಮ್ಮ ಹಾಗೂ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸುತ್ತಾರೆ. ಇದಕ್ಕೂ ಜಗ್ಗದಿದ್ದಾಗ ಪಿಎಸ್ಐ ವಹೀದ್ ಕೊತ್ವಾಲ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಸ್ಥಳದಲ್ಲಿ ಕುಸಿದುಬಿದ್ದ ಆರೋಪಿಗೆ ಪೊಲೀಸರು ಹಿಗ್ಗಾಮುಗ್ಗ ಲಾಠಿ ರುಚಿ ತೋರಿಸಿದರು. ಬಳಿಕ ವಶಕ್ಕೆ ಪಡೆದು ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ.
ಕಲಬುರಗಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಮೇಲೆ ಫೈರಿಂಗ್
ನಾವು ಕಲಬುರಗಿ ವರದಿಗಾರರನ್ನು ಕೂಡ ಸಂಪರ್ಕಿಸಿದ್ದೆವು. ವೈರಲ್ ಆಗಿರುವ ವಿಡಿಯೋ ಬಗ್ಗೆ ಹೇಳುತ್ತಿರುವ ಆರೋಪಗಳು ಸುಳ್ಳು ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಒಂದರಲ್ಲಿ ನಡೆದ ಘಟನೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆತ್ಮರಕ್ಷಣೆಗಾಗಿ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಹೀಗಾಗಿ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಆಯುಧ ತೋರಿಸಿ ಬೆದರಿಸುವ ವಿಡಿಯೋ ಉತ್ತರ ಪ್ರದೇಶದ ಸಹರಾನ್‌ಪುರದ್ದಲ್ಲ. ಇದು ಕಳೆದ ವರ್ಷ ಕರ್ನಾಟಕದ ಕಲಬುರಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಘಟನೆಯಾಗಿದೆ ಎಂದು ಟಿವಿ9 ಕನ್ನಡ ಖಚಿತ ಪಡಿಸುತ್ತದೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Mon, 16 December 24