
ಕಲಬುರಗಿ, ಅಕ್ಟೋಬರ್ 21: ಎನ್‌ಡಿಎ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದು, ಹೀಗಾಗಿ ಒಬ್ಬೊಬ್ಬರಾಗೇ ಎನ್ಡಿಎಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ 2023ರಲ್ಲಿ ಎನ್ಡಿಎಗೆ ಬೆಂಬಲಿಸಿದ್ದರು. ಈಗ ಅವರೇ ನಾನು ತಪ್ಪು ಮಾಡಿದೆ ಎಂದು ಜನರ ಕ್ಷಮೆ ಕೇಳಿದ್ದಾರೆ. ಎನ್‌ಡಿಎ ಒಕ್ಕೂಟಕ್ಕೆ ಮತ ಕೊಟ್ಟವರಿಗೆ ಬಿಜೆಪಿಯವರು ಮತಗಳ್ಳತನದಿಂದ ಗೆದ್ದಿದ್ದಾರೆ ಎಂದುಇವಾಗ ಗೊತ್ತಾಗಿದೆ ಎಂದವರು ಹೇಳಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ವಿರುದ್ಧ ಬರೀ ಟೀಕಿಸುತ್ತಾರೆ. ರಾಹುಲ್ ಹೆಸರು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡ್ತೀರಿ? ಈ ಹಿಂದೆ ಬಿಜೆಪಿಯವರು ಇಂದಿರಾ ಗಾಂಧಿಗೆ ಬೈತಿದ್ದರು. ಈಗ ರಾಹುಲ್ ಗಾಂಧಿಗೆ ಬೈಯ್ಯೋದೆ ಮೋದಿ ಮತ್ತು ಅಮಿತ್ ಶಾ ಕೆಲಸವಾಗಿದೆ ಎಂದು ಖರ್ಗೆ ದೂರಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದರ ಮೇಲೊಂದು ತಪ್ಪು ಮಾಡಿ ದೇಶದ ಯುವಕರ ದಿಕ್ಕು ತಪ್ಪಿಸುತ್ತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಮೋದಿ ಸರ್ಕಾರ ಶಿಕ್ಷಣಕ್ಕೆ ಯಾವುದೇ ಒತ್ತುಕೊಡುತ್ತಿಲ್ಲ. ಹೀಗಾಗಿ ಯುವಕರು ಸಹ ನರೇಂದ್ರ ಮೋದಿ ಅವರನ್ನು ನಂಬುತ್ತಿಲ್ಲ ಅಂತಲೂ ಖರ್ಗೆ ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಉತ್ತಮ ಆಡಳಿತಕ್ಕೆ ರಾಮರಾಜ್ಯವೇ ಮಾನದಂಡ’; ಪ್ರಧಾನಿ ಮೋದಿ ದಸರಾ ಸಂದೇಶ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿರುವ ಖರ್ಗೆ, ಇಡೀ ದೇಶದಲ್ಲಿ ಬಿಜೆಪಿಗೆ ಹಾಗೂ ವಿಶೇಷವಾಗಿ ಮೋದಿಯವರ ನೇತೃತ್ವಕ್ಕೆ ಆತ ಬೆಂಬಲ ಕೊಟ್ಟಿದ್ದಾನೆ. ಬೋಗಸ್ ಮತದಾನ ಮಾಡಿಸಿದ್ದಾರೆ. ಆಯೋಗದ ತಪ್ಪು ಎತ್ತಿ ತೋರಿಸಿದ್ರು ಮೋದಿ ಗಮನ ಹರಿಸಲಿಲ್ಲ. ಜ್ಞಾನೇಶ್ ಕುಮಾರ್ ಎಷ್ಟೇ ತಪ್ಪು ಮಾಡಿದ್ರು ಶಿಕ್ಷೆ ನೀಡಿಲ್ಲ. ಈ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡಬೇಕು, ತನ್ನ ಕೈಯಲ್ಲಿ ಸರ್ವಾಧಿಕಾರ ಮುಂದುವರಿಸಬೇಕು ಎಂಬ ಇಚ್ಛೆಯಲ್ಲಿದ್ದಾರೆ. ಮೋದಿ ಹಿಟ್ಲರ್ ಶಾಹಿ ಆಡಳಿತ ಮಾಡುತ್ತಿದ್ದು, ನಾವು ದೇಶದ ಎಲ್ಲರ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಎಐಸಿಸಿ ಅಧ್ಯಕ್ಷರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Wed, 21 October 26