ಅಧಿಕಾರಿಗಳ ನಿರ್ಲಕ್ಷ್ಯ; ಅಂಗವಿಕಲರಿಗೆ ವಿತರಣೆಯಾಗದೇ ತುಕ್ಕು ಹಿಡಿತಿವೆ 180 ಬೈಕ್​​ಗಳು!

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 09, 2024 | 7:51 PM

ದೇವರು ವರ ಕೊಟ್ಟರು, ಪೂಜಾರಿ ಕೊಡಲ್ಲ ಎನ್ನುವ ಗಾದೆ ಮಾತು ಅಕ್ಷರಶಃ ಈ ಇಲಾಖೆಗೆ ಅನ್ವಯಿಸುತ್ತದೆ. ಹೌದು, ಅಂಗವಿಕಲರಿಗೆ ತ್ರೀಚಕ್ರ ಬೈಕ್‌ಗಳನ್ನ ನೀಡುವುದಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಬೈಕ್‌ಗಳನ್ನ ಸರಬರಾಜು ಮಾಡಿದೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಫಲಾನುಭವಿಗಳಿಗೆ ವಿತರಣೆಯಾಗದೇ ನೂರಾರು ಬೈಕ್‌ಗಳು ನಿಂತಲ್ಲಿಯೇ ತುಕ್ಕು ಹಿಡಿಯುವ ಸ್ಥಿತಿಗೆ ಬಂದಿದೆ. ಅಲ್ಲದೇ ಹಣ ಪಡೆದು ತಮಗೆ ಬೇಕಾದವರಿಗೆ ಬೈಕ್ ನೀಡಲಾಗುತ್ತಿದೆ ಎಂದ ಆರೋಪ ಕೇಳಿ ಬಂದಿದೆ.

ಅಧಿಕಾರಿಗಳ ನಿರ್ಲಕ್ಷ್ಯ; ಅಂಗವಿಕಲರಿಗೆ ವಿತರಣೆಯಾಗದೇ ತುಕ್ಕು ಹಿಡಿತಿವೆ 180 ಬೈಕ್​​ಗಳು!
ಅಂಗವಿಕಲರಿಗೆ ವಿತರಣೆಯಾಗದೇ ತುಕ್ಕು ಹಿಡಿತಿವೆ 180 ಬೈಕ್​​ಗಳು
Follow us on

ಕಲಬುರಗಿ, ಆ.09: ಕಳೆದ ಬಾರಿ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯಾದ್ಯಂತ ಅಂಗವಿಕಲರಿಗೆ 4 ಸಾವಿರ ಬೈಕ್‌ಗಳನ್ನ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಕಲಬುರಗಿ(Kalaburagi) ಜಿಲ್ಲೆಗೆ 4 ಸಾವಿರ ಬೈಕ್‌ಗಳ ಪೈಕಿ 180 ಬೈಕ್‌ಗಳು ಸರಬರಾಜು ಆಗಿ ಏಳು ತಿಂಗಳು ಕಳೆದಿವೆ. ಆದರೆ, ಈ ಏಳು ತಿಂಗಳಿನಿಂದ ಬೈಕ್‌ಗಳು ಫಲಾನುಭವಿಗಳಿಗೆ ನೀಡದೇ ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ಮಾಡಿದೆ.

ಫಲಾನುಭವಿಗಳಿಂದ ಕಮಿಷನ್ ಪಡೆದು ಬೈಕ್‌ಗಳ ವಿತರಣೆ ಆರೋಪ

ಇಲಾಖೆ ಆವರಣದಲ್ಲಿ 180 ಬೈಕ್‌ಗಳನ್ನ ನಿಲ್ಲಿಸಲಾಗಿದ್ದು, ಬಿಸಿಲು, ಮಳೆಗೆ ಬೈಕ್‌ನ ಕಲರ್ ಶೇಡ್ ಆಗಿದ್ದಲ್ಲದೇ ಬಹುತೇಕ ಬೈಕ್‌ಗಳು ನಿಂತಲ್ಲೆ ತುಕ್ಕು ಹಿಡಿದು ಹೋಗಿವೆ.‌ ಅಲ್ಲದೇ ಕೆಲವೊಂದು ಬೈಕ್‌ಗಳ ಟೈರ್ ಗಾಳಿ ಸಹ ಇಳಿದು ಅಧೋಗತಿಗೆ ತಲುಪಿವೆ. ಇನ್ನು ಇಷ್ಟು ದಿನ ಬೈಕ್ ವಿತರಣೆ ಆಗದಿರೋದಕ್ಕೆ ಅಧಿಕಾರಿಗಳ ಕಳ್ಳಾಟವೇ ಕಾರಣ ಎನ್ನುವ ಆರೋಪ ಕೇಳಿಬಂದಿದೆ.  ಸರ್ಕಾರದಿಂದ ಶೇಕಡಾ 75 ರಷ್ಟು ದೈಹಿಕ ನ್ಯೂನತೆ ಇರುವವರಿಗೆ ಉಚಿತವಾಗಿ ಬೈಕ್‌ಗಳನ್ನ ನೀಡಲಾಗುತ್ತದೆ. ಆದರೆ, ಅಧಿಕಾರಿಗಳು ಫಲಾನುಭವಿಗಳಿಂದ 10 ರಿಂದ 20 ಸಾವಿರ ರೂಪಾಯಿ ಕಮಿಷನ್ ಪಡೆದು ಬೈಕ್‌ಗಳನ್ನ ಕೊಡಲಾಗುತ್ತಿದೆ ಎಂದು ಫಲಾನುಭವಿಗಳು ಆರೋಪಿಸುತ್ತಿದ್ದಾರೆ‌. ಹೀಗಾಗೇ ಇಷ್ಟು ದಿನ ತಡವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಬಾಲಕನನ್ನ ಕೂಡಿಹಾಕಿ ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ; ಐವರು ವಶಕ್ಕೆ

ಕಲಬುರಗಿ ಜಿಲ್ಲೆಗೆ ಸರ್ಕಾರದಿಂದ 180 ಬೈಕ್‌ಗಳು ಮಂಜೂರಾದರೆ, 476 ಅರ್ಜಿಗಳು ಸಲ್ಲಿಕೆಯಾಗಿವೆ. 2024 ರ ಫೆಬ್ರವರಿ ತಿಂಗಳಲ್ಲಿ ಬೈಕ್ ವಿತರಣೆ ಮಾಡಬೇಕಿತ್ತು. ಆದರೆ, ಅದಾದ ಬಳಿಕ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ನೆನಗುದಿಗೆ ಬಿದ್ದಿತ್ತು. ಕೊನೆಯಪಕ್ಷ ಲೋಕಸಭಾ ಚುನಾವಣೆ ಬಳಿಕವಾದರೂ ಬೈಕ್ ಸಿಗುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯ್ತಿದ್ದ ಅಂಗವಿಕಲರಿಗೆ ಮತ್ತೆ ನಿರಾಸೆಯಾಗಿದೆ. ಈ ಬಗ್ಗೆ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಸಾಜೀದ್ ಹುಸೇನ್ ಅವರನ್ನ ಕೇಳಿದರೆ, ‘ಫಲಾನುಭವಿಗಳಿಗೆ ಬೈಕ್ ವಿತರಣೆ ಮಾಡುವ ವಿಚಾರದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ.‌ ನಿಯಮದಂತೆ ಫಲಾನುಭವಿಗಳ ಹೆಸರಲ್ಲಿ ಈಗಾಗಲೇ ಬೈಕ್ ವಿತರಣೆ ಮಾಡಲಾಗಿದೆ. ಆಗಷ್ಟ್ 15 ರಂದು ಸ್ವಾತಂತ್ರೋತ್ಸವ ದಿನದಂದು ಆಯ್ಕೆಯಾದ 180 ಫಲಾನುಭವಿಗಳಿಗೆ ಬೈಕ್ ವಿತರಣೆ ಮಾಡಲಾಗುವುದೆಂದು ಹೇಳಿದ್ದಾರೆ.

ಅದೆನೇ ಇರಲಿ ಸರ್ಕಾರದಿಂದ ಅಂಗವಿಕಲರಿಗೆ ಬೈಕ್ ಮಂಜೂರಾಗಿ ಏಳೆಂಟು ತಿಂಗಳು ಕಳೆದರೂ ಸಹ ಕಲಬುರಗಿ ಜಿಲ್ಲಾ ಅಂಗವಿಕಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಂತಲ್ಲೆ 180 ಬೈಕ್ ದುಸ್ಥಿಗೆ ತಲುಪಿದ್ದು ದುರಂತವೇ ಸರಿ. ಇನ್ನಾದರೂ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿ ಎನ್ನೊದು ನಮ್ಮ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ