
ಕಲಬುರಗಿ, ಜನವರಿ 16: ಸಿಬ್ಬಂದಿ ಬಳಿ ತಹಶೀಲ್ದಾರ್ ಅವರೇ ಹಣಕ್ಕಾಗಿ ಬೇಡಿಕೆ ಇಟ್ಟು ಕಿರುಕುಳ ನೀಡಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದ್ದು, ಜೇವರ್ಗಿ ತಹಶೀಲ್ದಾರ್ ಮತ್ತು ಸಿಬ್ಬಂದಿ ನಡುವಿನ ಆಡಿಯೋ ವೈರಲ್ ಆಗಿದೆ. ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಓಪನ್ ಮೀಟಿಂಗ್ನಲ್ಲೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗಿದ್ದು, ಕಿರುಕುಳದಿಂದ ಬೇಸತ್ತ ಸಿಬ್ಬಂದಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರನ್ನೂ ನೀಡಿರುವ ಪ್ರಸಂಗ ನಡೆದಿದೆ.
ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತೀರಿ, ಹಾಗಾಗಿ ನನಗೂ ಹಣ ನೀಡಿ ಎಂದು ತಹಶೀಲ್ದಾರ್ ಮಲ್ಲಣ್ಣ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ ಎಂದು ದೂರಲಾಗಿದೆ. ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು RI ಜವಾಬ್ದಾರಿಯೇ ಬೇಡ, ನನ್ನನು ಕಚೇರಿ ಕೆಲಸಕ್ಕೆ ಹಾಕಿ, ನನಗೆ ಹಣ ನೀಡಲು ಆಗಲ್ಲ ಎಂದ ಸಿಬ್ಬಂದಿ ಅಲವತ್ತುಕೊಂಡಿದ್ದಾರೆ. ಸರ್ಕಾರಿ ಜಯಂತಿಗಳು, ಶಾಸಕರು ಹೇಳುವ ಕೆಲಸಗಳಿಗೆಲ್ಲ ನಾವು ಹಣ ಕೊಡಬೇಕು. ನಾವು ದುಡ್ಡನ್ನು ಎಲ್ಲಿಂದ ಕೊಡೋದು? ಎಂದು ತಹಶೀಲ್ದಾರ್ ಮಲ್ಲಣ್ಣಗೆ ಸಿಬ್ಬಂದಿ ಪ್ರಶ್ನೆ ಹಾಕಿದ್ದರೂ ಎಲ್ಲಾ ಇಲಾಖೆಯವರು ಹಣ ಕೊಡ್ತಾರೆ ನೀವು ಕೊಡಿ ಎಂದು ಮಲ್ಲಣ್ಣ ಹೇಳಿದ್ದಾರೆ. ಇಲ್ಲವಾದರೆ ನಿಮ್ಮ ವಿರುದ್ಧ ತನಿಖೆಗೆ ಆದೇಶಿಸುವೆ ಎಂದು ಬೆದರಿಕೆಯನ್ನೂ ಹಾಕಿರೋದಾಗಿ ಸಿಬ್ಬಂದಿ ದೂರಿದ್ದಾರೆ.
ಇದನ್ನೂ ಓದಿ: ಶೂಟ್ ಮಾಡಿಕೊಂಡು ಪತಿ ಆತ್ಮಹತ್ಯೆ; ನನ್ನ ಗಂಡ ಸೈಕೋ ಎಂದ ಪತ್ನಿ, ಆಗಿದ್ದೇನು?
ಇನ್ನು ತಮ್ಮ ಮೇಲೆ ಕೇಲಿಬಂದಿರುವ ಆರೋಪಗಳ ಕುರಿತು ಜೇವರ್ಗಿ ತಹಶೀಲ್ದಾರ ಮಲ್ಲಣ್ಣ ಯಲಗೋಡ್ ಪ್ರತಿಕ್ರಿಯಿಸಿದ್ದಾರೆ. 6 ತಿಂಗಳ ಹಿಂದೆ ಕನ್ನಡಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಈ ಬಗ್ಗೆ ನಾನು ಸಿಬ್ಬಂದಿ ಜೊತೆ ಸಭೆಯಲ್ಲಿ ಚರ್ಚಿಸಿದ್ದೇನೆಯೇ ಹೊರತು, ಯಾವ ಸಿಬ್ಬಂದಿ ಬಳಿಯೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಶರಣು ಎಂಬ ವಿಎಯನ್ನು 6 ತಿಂಗಳ ಹಿಂದೆ ಅಮಾನತು ಮಾಡಿದ್ದು, ಆತನೇ ಇದನ್ನೆಲ್ಲ ಮಾಡಿ ಎಲ್ಲ ಕಡೆ ದೂರು ಕೊಟ್ಟಿದ್ದಾನೆ. ನಾನು ಹಣ ಕೇಳಿದ್ರೆ ಎಲ್ಲ ಸಿಬ್ಬಂದಿ ಸೇರಿ ದೂರು ಕೊಡಬಹುದಾಗಿತ್ತು. ಈ ಹಿಂದಿನ ತಹಶೀಲ್ದಾರ್ ಅವರಿಗೂ ಆತ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅದೇ ರೀತಿ ನನಗೂ ಸಹ ಬ್ಲ್ಯಾಕ್‌ಮೇಲ್ ಮಾಡಲು ಬಂದಿದ್ದಾನೆ. ಆದರೆ ಆತನ ಬೆದರಿಕೆಗೆ ನಾನು ಹೆದರಿಲ್ಲ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:11 pm, Fri, 16 January 26