ಕಲಬುರಗಿ, ಸೆ.10: ಇಡೀ ರಾಜ್ಯವನ್ನ ಅಕ್ಷರಶಃ ಬೆಚ್ಚಿಬಿಳಿಸಿರುವ ಕಲಬುರಗಿ(Kalaburagi)ಯ ಹನಿಟ್ರ್ಯಾಪ್ ಪ್ರಕರಣದ ಎಲ್ಲಾ ಆರೋಪಿಗಳನ್ನ ಕೊನೆಗೂ ಖಾಕಿ ಹೆಡೆಮುರಿ ಕಟ್ಟಿದೆ. ಕೇಸ್ನಲ್ಲಿ ಎ1 ಆರೋಪಿ ಆಗಿರುವ ಪ್ರಭು ಹಿರೇಮಠ ಮತ್ತು ರಾಜು ಲೇಂಗಟಿಯನ್ನ ಮಾತ್ರ ಬಂಧಿಸಿ ಸೈಲೆಂಟ್ ಆಗಿತ್ತು. ಹೀಗಾಗಿ ಪೊಲೀಸರ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಉಳಿದ ಆರೋಪಿಗಳು ಪ್ರಭಾವಿಗಳಾದ ಹಿನ್ನಲೆ ಬಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಆದ್ರೆ, ನಿನ್ನೆ(ಸೆ.09) ರಾತೋರಾತ್ರಿ ಪ್ರಕರಣದ ಉಳಿದೆಲ್ಲ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಹೌದು, ರಾತ್ರಿ ಸೈಬರ್ ಕ್ರೈಂ ಠಾಣೆ ಪೊಲೀಸರು ದಲಿತಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಮಂಜುನಾಥ ಭಂಡಾರಿ, ಶ್ರೀಕಾಂತ್ ರೆಡ್ಡಿ, ಉದಯಕುಮಾರ್ ಖಣಗೆ, ಅರವಿಂದ ಕಮಲಾಪುರ ಸೇರಿದಂತೆ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನ ಬಂಧಿಸಿ ಸೆನ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಬಳಿಕ ಆರೋಪಿಗಳನ್ನ ವೈದ್ಯಕೀಯ ತಪಾಸಣೆ ನಡೆಸಿ ಸೆಪ್ಟೆಂಬರ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಯೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್‌ಡಿ ಹೇಳಿದ್ದಾರೆ.
ಇದನ್ನೂ ಓದಿ:ಕಲಬುರಗಿ ಹನಿಟ್ರ್ಯಾಪ್ ಪ್ರಕರಣ: ತಪ್ಪೊಪ್ಪಿಕೊಂಡ ವಿಡಿಯೋ ಬಿಡುಗಡೆ ಮಾಡಿದ ಆರೋಪಿ
ಇನ್ನು ತನಿಖೆ ವೇಳೆ ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದ್ದು, ಮೊಬೈಲ್‌ಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ತನಿಖೆ ಬಳಿಕವಷ್ಟೇ ಬಂಧಿತ ಆರೋಪಿಗಳ ಪಾತ್ರ ಏನು ಎನ್ನುವುದು ತಿಳಿಯಲಿದೆಯೆಂದು ಕಮಿಷನರ್ ಹೇಳಿದರು. ಹನಿಟ್ರ್ಯಾಪ್ ಗ್ಯಾಂಗ್‌ನ ಕೃತ್ಯಕ್ಕೆ ಯಾರಾದರೂ ಅನ್ಯಾಯಕ್ಕೊಳಗಾದರೆ ಅಂತವರು ಧೈರ್ಯದಿಂದ ದೂರು ನೀಡಲಿ. ಅವರ ಹೆಸರು ಗೌಪ್ಯವಾಗಿಡುವುದರ ಜೊತೆಗೆ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಲಾಗುವುದೆಂದು ಹೇಳಿದ್ದಾರೆ.
ಪೊಲೀಸ್ ವ್ಯಾನ್ ಹತ್ತುವ ಮುನ್ನ ಮಾತನಾಡಿದ ಆರೋಪಿ ಹಣಮಂತ ಯಳಸಂಗಿ, ‘ನಮ್ಮನ್ನ ಪೊಲೀಸರು ಅರೆಸ್ಟ್ ಮಾಡಿಲ್ಲ. ಸಚಿವ ಪ್ರಿಯಾಂಕ್ ಖರ್ಗೆಯವರ ಹೆಸರಿಗೆ ಕಳಂಕ ಬರಬಾರದೆಂದು ನಾವೇ ಖುದ್ದಾಗಿ ಪೊಲೀಸರಿಗೆ ಶರಣಾಗಿದೆವೆಂದು ಹೇಳಿದ್ದಾರೆ. ನಾವು ಸಂವಿಧಾನ ಮತ್ತು ಕಾನೂನು ಪಾಲನೆ ಮಾಡುವರಿದ್ದು, ಕುತಂತ್ರದಿಂದ ನಮ್ಮೆಲೆ ಸುಳ್ಳು ಕೆಸ್ ದಾಖಲಿಸಲಾಗಿದ್ದು, ಕುತಂತ್ರಿಗಳ ಹೊಟ್ಟೆ ತಣ್ಣಗಿರಲೆಂದು ಹಣಮಂತ ಯಳಸಂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಕಲಬುರಗಿಯ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು!
ಹನಿಟ್ರ್ಯಾಪ್ ಪ್ರಕರಣವನ್ನ ತನಿಖೆ ನಡೆಸಲು ಸ್ಟೇಷನ್ ಬಜಾರ್ ಠಾಣೆಯಿಂದ ಸೆನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದೆ. ಅಷ್ಟಕ್ಕೂ ಬಂಧಿತ ಎ1 ಆರೋಪಿ ಪ್ರಭು ಹಿರೇಮಠ್ ಹನಿಟ್ರ್ಯಾಪ್‌ನಿಂದ ಬಂದ ಹಣವನ್ನ ಹಣಮಂತ ಯಳಸಂಗಿಯವರಿಗೆ ನೀಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿರೋ ಬಗ್ಗೆ ಪೊಲೀಸರು ಇಂಚಿಂಚು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಇನ್ನು ರೇಪ್ ಮತ್ತು ಹನಿಟ್ರ್ಯಾಪ್ ಪ್ರಕರಣವನ್ನ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಹಾಗೂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ‘ಸಚಿವ ಪ್ರಿಯಾಂಕ್ ಖರ್ಗೆ ಈ ಪ್ರಕರಣದಲ್ಲಿ ಯಾಕೆ ಮಾತನಾಡುತ್ತಿಲ್ಲವೆಂದು ಕಿಡಿಕಾರಿದ್ದಾರೆ. ಹನಿಟ್ರ್ಯಾಪ್ ಪ್ರಕರಣ ಬಹುದೊಡ್ಡದಾಗಿದ್ದು, ಜಿಲ್ಲೆಯ ಜನ ಭಯಭೀತರಾಗಿದ್ದಾರೆಂದು ಹೇಳಿದರು. ಹನಿಟ್ರ್ಯಾಪ್ ಹಗರಣದಲ್ಲಿ ಮಹಾರಾಷ್ಟ್ರ ಅಲ್ಲದೆ ಬೇರೆ ಬೇರೆ ರಾಜ್ಯದವರು ಇದ್ದು, ಪ್ರಕರಣದಲ್ಲಿ ಸ್ಟೇಷನ್ ಬಜಾರ್ ಠಾಣೆ ಸಿಪಿಐ ಶಕೀಲ್ ಅಂಗಡಿ ಸಹ ಭಾಗಿಯಾಗಿದ್ದು, ಸೂಕ್ತ ತನಿಖೆಗಾಗಿ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಧ್ಯ ರೇಪ್ ಆ್ಯಂಡ್ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಎಂಟು ಜನ ಆರೋಪಿಗಳ ಬಂಧನವಾಗಿದ್ದು, ಆರೋಪಿಗಳನ್ನ ಪುನಃ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಲು ಖಾಕಿಪಡೆ ಸಿದ್ದತೆ ಮಾಡಿಕೊಂಡಿದೆ. ಒಟ್ಟಿನಲ್ಲಿ ಹನಿಟ್ರ್ಯಾಪ್ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ