ಕುಕ್ಕರ್, ಸೀರೆ ಅಲ್ಲ; ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ರಿಯಾಯಿತಿ ಆರೋಗ್ಯ ಕಾರ್ಡ್ನ ಆಮಿಷ!
ಈ ರಿಯಾಯಿತಿ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಅಭ್ಯರ್ಥಿ ಅಲೀಮ್ ಪಟೇಲ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ‘ನಾನು ಜನ ಸೇವಕ. ಜನರಿಗಾಗಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಮತಕ್ಕಾಗಿ ಆಮಿಷ ನೀಡಿಲ್ಲ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿಯೇ ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ದೇಶದ ವಿವಿಧ ಚುನಾವಣೆಗಳಲ್ಲಿ ಮತದಾರರ ಮನಗೆಲ್ಲಲು ಅನೇಕರು, ಸೀರೆ, ಕುಕ್ಕರ್, ಹಣದ ಆಮಿಷ ಒಡ್ಡಿದ ಸುದ್ದಿಗಳನ್ನು ಈಗಾಗಲೇ ಓದಿದ್ದೇವೆ. ಆದರೆ ಇದು ಅದಕ್ಕಿಂತ ವಿಭಿನ್ನ ಆಮಿಷ, ವಿಭಿನ್ನ ಸುದ್ದಿ. ಅಭ್ಯರ್ಥಿಯೋರ್ವರು ಮತದಾರರಿಗೆ ತಮ್ಮ ಆಸ್ಪತ್ರೆಯಲ್ಲಿ ಬಾರಿ ಡಿಸ್ಕೌಂಟ್ ಘೋಷಿಸಿ ಸುದ್ದಿಯಲ್ಲಿದ್ದಾರೆ. ಕಲಬುರಗಿ ನಗರದ ವಾರ್ಡ್ ನಂಬರ್ 42 ರ ಜೆಡಿಎಸ್ ಅಭ್ಯರ್ಥಿಯಾಗಿರುವ ಅಲೀಮ್ ಪಟೇಲ್ ಎಂಬುವವರು ಮತದಾರರಿಗೆ ಹೆಲ್ತ್ ಕಾರ್ಡ್ಗಳನ್ನು ನೀಡುತ್ತಿದ್ದಾರೆ. ಮಾಜಿ ಪಾಲಿಕೆ ಸದಸ್ಯರಾಗಿರುವ ಅಲೀಮ್ ಪಟೇಲ್, ಕಲಬುರಗಿ ನಗರದ ವಾರ್ಡ್ ನಂಬರ್ 42 ರಿಂದ ಈ ಬಾರಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಲ್ಲಿದ್ದ ಅಲೀಮ್ ಪಟೇಲ್ ಈ ಬಾರಿ ಜೆಡಿಎಸ್ ಗೆ ಜಿಗಿದು, ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯ ಪ್ರಚಾರಕ್ಕೆ ಹೋದಲ್ಲಿ ಹೆಲ್ತ್ ಕಾರ್ಡ್ನಲ್ಲಿ ಮತದಾರರ ಹೆಸರು ಬರೆದು, ಪ್ರತಿಯೊಂದು ಕುಟುಂಬಕ್ಕೆ ಹೆಲ್ತ್ ಕಾರ್ಡ್ಗಳನ್ನು ನೀಡುತ್ತಿದ್ದಾರೆ. ಈ ಕಾರ್ಡನ್ನು ತಗೆದುಕೊಂಡು ಹೋದರೆ ಆಸ್ಪತ್ರೆಯಲ್ಲಿ ನಿಮಗೆ ಡಿಸ್ಕೌಂಟ್ ಸಿಗುತ್ತದೆ ಎನ್ನುತ್ತ ತಮಗೆ ಮತ ಹಾಕುವಂತೆ ಅಭ್ಯರ್ಥಿ ಅಲೀಮ್ ಪಟೇಲ್ ಮತ್ತು ಅವರ ಬೆಂಬಲಿಗರು ಪ್ರಚಾರ ನಡೆಸಿದ್ದಾರೆ. ವಾರ್ಡ್ ನಂಬರ್ 42 ರಲ್ಲಿ ಬರುವ ಮತದಾರರಿಗೆ ಹೆಲ್ತ್ ಕಾರ್ಡ್ ಹೆಸರಲ್ಲಿ ಹತ್ತಾರು ಸವಲತ್ತುಗಳನ್ನು ನೀಡಿದ್ದಾರೆ. ಅಲೀಂ ಪಟೇಲ್, ತಮ್ಮದೇ ಆದ ಕ್ಯೂಪಿ ಆಸ್ಪತ್ರೆ ಹೊಂದಿದ್ದು, ಆಸ್ಪತ್ರೆಯ ಹೆಸರಲ್ಲಿ ಹೆಲ್ತ್ ಕಾರ್ಡ್ ನೀಡಿದ್ದಾರೆ. ಹೆಲ್ತ್ ಕಾರ್ಡ್ನಲ್ಲಿ ವೋಟ್ ಪಾರ್ ಜೆಡಿಎಸ್ – ಅಲೀಮ್ ಪಟೇಲ್ ಅಂತ ಹಾಕಿಸಿದ್ದಾರೆ. ಇನ್ನು ಮತದಾರರಿಗೆ ತಮ್ಮ ಆಸ್ಪತ್ರೆಯಲ್ಲಿ ಓಪಿಡಿಗೆ ಶೇಕಡಾ ಐವತ್ತರಷ್ಟು ರಿಯಾಯಿತಿ, ಐಪಿಡಿಗೆ ಶೇಕಡಾ ಇಪ್ಪತ್ತರಿಂದ ಮೂವತ್ತರಷ್ಟು ರಿಯಾಯತಿ, ಮಾತ್ರೆ ಖರೀದಿಸಿದರೆ, ಶೇಕಡಾ ಹತ್ತರಷ್ಟು ರಿಯಾಯತಿ, ಲ್ಯಾಬ್ ನಲ್ಲಿ ಕೂಡಾ ಶೇಕಡಾ ಹತ್ತರಷ್ಟು ರಿಯಾಯಿತಿ ನೀಡುವದಾಗಿ ತಿಳಿಸಲಾಗಿದೆ. ಇನ್ನು ಈ ಹೆಲ್ತ್ ಕಾರ್ಡ್ ಅವಧಿ ಐದು ವರ್ಷಗಳು ಅಂತ ಬರೆಯಲಾಗಿದೆ. ಇನ್ನು ಸ್ವತ ತಾವೇ ಈ ರೀತಿಯಾಗಿ ಕಾರ್ಡ್ ಗಳನ್ನು ನೀಡಿಲ್ಲ, ಬದಲಿಗೆ ಡಾ. ಮುಜುಬುದ್ದೀನ್ ಪಟೇಲ್ ಎಂಬವವರು ಈ ಆರೋಗ್ಯ ಕಾರ್ಡಿನ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ ಎನ್ನುತ್ತಾರೆ ಅಲೀಮ್ ಪಟೇಲ್.
ತೀವ್ರ ಚರ್ಚೆಗೆ ಕಾರಣವಾದ ಡಿಸ್ಕೌಂಟ್ ಆಫರ್ ಅಲೀಮ್ ಪಟೇಲ್ ತಮ್ಮ ಆಸ್ಪತ್ರೆಯಲ್ಲಿ ಬಾರಿ ಡಿಸ್ಕೌಂಟ್ ನೀಡಿರುವದು ನಗರದಲ್ಲಿ ತೀರ್ವ ಚರ್ಚೆಗೆ ಕಾರಣವಾಗಿದೆ. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಇಂತಹದೊಂದು ಆಮಿಷ ನೀಡಿ ಮತ ಕೇಳುತ್ತಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಜಿಲ್ಲಾಧಿಕಾರಿಗೆ ದೂರನ್ನು ಕೂಡಾ ನೀಡಿದ್ದಾರೆ. ಈ ರಿಯಾಯಿತಿ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಅಭ್ಯರ್ಥಿ ಅಲೀಮ್ ಪಟೇಲ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ‘ನಾನು ಜನ ಸೇವಕ. ಜನರಿಗಾಗಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಮತಕ್ಕಾಗಿ ಆಮಿಷ ನೀಡಿಲ್ಲ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಈಕುರಿತು ಕಲಬುರಗಿ ಜಿಲ್ಲಾಧಿಕಾರಿ ವಿ. ವಿ ಜೋತ್ಸ್ನಾ, ‘ಮತದಾರರಿಗೆ ಆಮಿಷಗಳನ್ನೊಡ್ಡುವುದು ತಪ್ಪು. ಯಾರು ಕೂಡಾ ಈ ರೀತಿಯಾಗಿ ಮಾಡಬಾರದು. ಜೆಡಿಎಸ್ ಅಭ್ಯರ್ಥಿ ಆಸ್ಪತ್ರೆಯಲ್ಲಿ ಮತದಾರರಿಗೆ ಡಿಸ್ಕೌಂಟ್ ಘೋಷಣೆ ಮಾಡಿ, ಹೆಲ್ತ್ ಕಾರ್ಡ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ವಿಶೇಷ ವರದಿ: ಸಂಜಯ್ ಚಿಕ್ಕಮಠ
ಇದನ್ನೂ ಓದಿ:
ಕಲಬುರಗಿ ಪಾಲಿಕೆ ಚುನಾವಣೆ ಹಿನ್ನೆಲೆ; ಎಐಎಂಐಎಂ ಅಭ್ಯರ್ಥಿಗಳ ಪರ ಅಸಾದುದ್ದೀನ್ ಓವೈಸಿ ಪ್ರಚಾರ
ಕಲಬುರಗಿಯಲ್ಲಿ ತಯಾರಾಗುತ್ತಿವೆ ಗೋಮಯ ರಾಖಿಗಳು; ಪರಿಸರದ ಕಾಳಜಿಯಲ್ಲಿ ಮತ್ತೊಂದು ಮೈಲಿಗಲ್ಲು
(Kalaburagi Muncipal Elections 2021 JDS candidate gives dicount offer health card to voters)