ಕಲಬುರಗಿ ಪಾಲಿಕೆ ಚುನಾವಣೆ ಹಿನ್ನೆಲೆ; ಎಐಎಂಐಎಂ ಅಭ್ಯರ್ಥಿಗಳ ಪರ ಅಸಾದುದ್ದೀನ್ ಓವೈಸಿ ಪ್ರಚಾರ
Kalaburagi: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ನಗರದ ಮುಸ್ಲಿಂ ಚೌಕ್ ಸೇರಿದಂತೆ ಅನೇಕ ಕಡೆ ಪ್ರಚಾರ ನಡೆಸಿದ್ದಾರೆ. ಪಾದಯಾತ್ರೆ ಮೂಲಕ ಸಂಚರಿಸಿ ಓವೈಸಿ ಮತಯಾಚಿಸಿದ್ದಾರೆ.
ಕಲಬುರಗಿ: ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪರವಾಗಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಚಾರ ನಡೆಸಿದ್ದಾರೆ. ನಗರದ ಮುಸ್ಲಿಂ ಚೌಕ್ ಸೇರಿದಂತೆ ಅನೇಕ ಕಡೆ ಪ್ರಚಾರ ನಡೆಸಿದ್ದಾರೆ. ಪಾದಯಾತ್ರೆ ಮೂಲಕ ಸಂಚರಿಸಿ ಓವೈಸಿ ಮತಯಾಚಿಸಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಕಲಬುರಗಿ ಕೂಡ ಒಂದು. ಕಲಬುರಗಿಯಲ್ಲಿ ನಾಲ್ಕು ಮೆಡಿಕಲ್ ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಕಲ್ಯಾಣ ಕರ್ನಾಟಕದ ಕೇಂದ್ರ ಕಚೇರಿಗಳು ಇವೆ. ಇಂತಹ ಕಲಬುರಗಿ ನಗರದಲ್ಲಿಗ ಮಹಾನಗರ ಪಾಲಿಕೆಯ ಚುನಾವಣೆ ನಡೆಯುತ್ತಿದ್ದು, ಪಾಲಿಕೆಯ ಗದ್ದುಗೆ ಹಿಡಿಯಲು ವಿವಿಧ ರಾಜಕೀಯ ಪಕ್ಷಗಳು ಹತ್ತಾರು ರೀತಿಯ ಕಸರತ್ತು ಪ್ರಾರಂಭಿಸಿವೆ. ಕಾಂಗ್ರೆಸ್, ಬಿಜೆಪಿ ಜೊತೆಗೆ ಈಗ ಓವೈಸಿ ಕೂಡ ತಮ್ಮ ಪಕ್ಷದ ಮೂಲಕ ಸ್ಪರ್ದೆಗೆ ಇಳಿದಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮಗೆ ಸ್ಪಷ್ಟ ಬಹುಮತ ಈ ಬಾರಿ ಸಿಗುತ್ತದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಎರಡು ಪಕ್ಷಗಳಿಗೆ ಅನ್ಯ ಪಕ್ಷಗಳು ಕೂಡಾ ಟಕ್ಕರ್ ನೀಡುತ್ತಿವೆ. ಕಲಬುರಗಿ ಪಾಲಿಕೆಯ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್, ಎಐಎಂಐಎಂ, ಆಮ್ ಆದ್ಮಿ ಪಕ್ಷಗಳು ಕೂಡಾ ತಮ್ಮ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಜೆಡಿಎಸ್ 47 ವಾರ್ಡ್ಗಳಲ್ಲಿ ತನ್ನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ, ಇತ್ತ ಆಮ್ ಆದ್ಮಿ ಮತ್ತು ಎಐಎಂಐಎಂ ಪಕ್ಷಗಳು ಕೂಡಾ ತಮ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಯ ಓಟಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಏಕೆಂದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಇರುವ ಅನೇಕರು ಜೆಡಿಎಸ್ ಸೇರಿದಂತೆ ಬೇರೆ ಬೇರೆ ಪಕ್ಷಗಳಿಗೆ ಜಿಗಿದು, ಸ್ಪರ್ಧಿಸುತ್ತಿದ್ದಾರೆ. ಕೆಲವರು ಬಂಡಾಯ ಅಭ್ಯರ್ಥಿಗಳಾಗಿದ್ದು, ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ಅನೇಕ ಅಭ್ಯರ್ಥಿಗಳಿಗೆ ಜೆಡಿಎಸ್ ಸೇರಿದಂತೆ ಅನ್ಯ ಪಕ್ಷದವರು ತೀವ್ರ ಸ್ಪರ್ಧೆಯನ್ನು ನೀಡುತ್ತಿದ್ದಾರೆ.
ಮುಸ್ಲಿಂರಿಗೆ ಮಣೆ ಹಾಕಿದ ಬಿಜೆಪಿ ಕಲಬುರಗಿ ಪಾಲಿಕೆಯ ಚುನಾವಣೆಯಲ್ಲಿ ಮೊದಲ ಬಾರಿಗೆ ಎಲ್ಲಾ 55 ವಾರ್ಡ್ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಹಾಕಿದೆ. ಈ ಬಾರಿ ವಿಶೇಷವೆಂದರೆ, ಬಿಜೆಪಿ ಪಕ್ಷ ಮುಸ್ಲಿಂ ಅಭ್ಯರ್ಥಿಗಳಿಗ ಮಣೆ ಹಾಕಿರುವುದು. ಹೌದು ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಹೆಚ್ಚಿನ ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. ಅಲ್ಲಿ ಬಿಜೆಪಿ ಗೆಲ್ಲಲೇಬೇಕು ಎನ್ನುವ ಉದ್ದೇಶದಿಂದ ಮುಸ್ಲಿಂ ಸಮಾಜದವರಿಗೆ ಮಣೆ ಹಾಕಿದೆ. ಹೀಗಾಗಿ ಪಾಲಿಕೆಯ 55 ವಾರ್ಡ್ಗಳ ಪೈಕಿ ಬರೋಬ್ಬರಿ 11 ಮುಸ್ಲಿಂ ಅಭ್ಯರ್ಥಿಗಳಿಗೆ ತನ್ನ ಟಿಕೆಟ್ ನೀಡಿದೆ. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಜಾತಿ ಆಧಾರದ ಮೇಲೆಯೇ ಟಿಕೆಟ್ ನೀಡಿವೆ. ಯಾವ ವಾರ್ಡ್ನಲ್ಲಿ ಯಾವ ಸಮುದಾಯವರು ಹೆಚ್ಚಾಗಿದ್ದಾರೆ ಎನ್ನುವುದನ್ನು ತಿಳಿದುಕೊಂಡು, ಅದೇ ಸಮುದಾಯದವರಿಗೆ ಟಿಕೆಟ್ ನೀಡಿವೆ. ಈ ಆಧಾರದಲ್ಲಿ ನೋಡಿದರೆ ಎಐಎಂಐಎಂ ಪಕ್ಷ ಕೂಡ ತನ್ನ ಸಾಮರ್ಥ್ಯ ತೋರಲು ಶತಪ್ರಯತ್ನ ತೋರುತ್ತಿರುವುದು ಉಚಿತವಾಗಿದೆ.
ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ; ಅಧಿಕಾರದ ಗದ್ದುಗೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅನ್ಯ ಪಕ್ಷಗಳ ಸವಾಲು
ಕಲಬುರಗಿ: ಪರಿಸರ ಪ್ರಿಯ ಗಣಪನ ಮೂರ್ತಿ ರಚನೆ; ರಾಸಾಯನಿಕ ಬಣ್ಣ ಬಳಕೆಗೆ ಬ್ರೇಕ್
Published On - 10:02 pm, Wed, 25 August 21