ಕಲಬುರಗಿ: ಬಾಡಿಗೆ ಶಿಕ್ಷಕಿ ನೇಮಿಸಿ ಮಕ್ಕಳಿಗೆ ಪಾಠ ಮಾಡಿಸುತ್ತಿದ್ದ ಆರೋಪದ ಮೇಲೆ ಶಿಕ್ಷಕ ಮಹೇಂದ್ರ ಕೊಲ್ಲೂರ್ ನನ್ನ ಅಮಾನತ್ತು ಮಾಡಿ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸಿದ್ದವೀರಯ್ಯ ಆದೇಶ ಹೊರಡಿಸಿದ್ದಾರೆ(Teacher Suspend). ಚಿತ್ತಾಪುರ ತಾಲೂಕಿನ ಭಾಲಿ ನಾಯಕ್ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಂದ್ರ ಕೊಲ್ಲೂರ್, ಕಳೆದ ಆರು ತಿಂಗಳಿನಿಂದ ತನ್ನ ಬದಲಿಗೆ ಸಾವಿತ್ರಿ ಎಂಬ ಯುವತಿಗೆ ಬಾಡಿಗೆ ನೀಡಿ ಶಿಕ್ಷಕಿಯಾಗಿ ನೇಮಕ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡುತ್ತಿದ್ದಂತೆ ಈ ಬಗ್ಗೆ ತನಿಖೆ ನಡೆಸಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಮಕ್ಕಳ ಭವಿಷ್ಯ ನಿರ್ಧಾರವಾಗೋದು ಶಿಕ್ಷಕರ ಮೇಲೆ. ಆದ್ರೆ ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನೇಕ ಶಿಕ್ಷಕರು ಸರಿಯಾಗಿ ಶಾಲೆೆಗ ಹೋಗ್ತಿಲ್ಲಾ. ಇನ್ನು ಕೆಲವು ಶಿಕ್ಷಕರು ಬಾಡಿಗೆ ಶಿಕ್ಷಕರನ್ನು ನಿಯೋಜನೆ ಮಾಡಿ, ತಾವು ಮನೆಯಲ್ಲಿ ಇರ್ತಿದ್ದಾರೆ. ಐದಾರು ಸಾವಿರ ಹಣ ನೀಡಿ, ಕೆಲವರನ್ನು ಮಕ್ಕಳಿಗೆ ಪಾಠ ಮಾಡಲು ನಿಯೋಜನೆ ಮಾಡಿ, ತಾವು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹದೊಂದು ಘಟನೆ ಇದೀಗ ಕಲಬುರಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಶಿಕ್ಷಕ ಮಹೇಂದ್ರ ಕೊಲ್ಲೂರ್ ಪ್ರತಿನಿತ್ಯ ಶಾಲೆಗೆ ಬಂದು ಇವರು ಪಾಠ ಮಾಡಿದ್ದರೆ ಯಾವುದೇ ಸಮಸ್ಯೆ ಇರ್ತಿರಲಿಲ್ಲಾ. ಆದ್ರೆ ಇವರು ಶಾಲೆಗೆ ಬರೋದು ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರವಂತೆ. ಉಳಿದ ದಿನ ಮಕ್ಕಳಿಗೆ ಪಾಠ ಮಾಡಲು ಇವರು ಬಾಡಿಗೆ ಶಿಕ್ಷಕಿಯನ್ನು ನಿಯೋಜನೆ ಮಾಡಿರೋ ಆರೋಪ ಇವರ ಮೇಲೆ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಲಿನಾಯಕ್ ತಾಂಡಾದಲ್ಲಿ ಒಂದರಿಂದ ಐದನೇ ತರಗತಿವರಗೆ ಕಿರಿಯ ಪ್ರಾಥಮಿಕ ಶಾಲೆಯಿದ್ದು, ಶಾಲೆಗೆ ಪ್ರವೇಶ ಪಡೆದಿರೋ ಮಕ್ಕಳ ಸಂಖ್ಯೆ ಕೇವಲ ಹದಿನೆಂಟು. ಹದಿನೆಂಟು ಮಕ್ಕಳಿಗೆ ಇಬ್ಬರು ಶಿಕ್ಷಕರು ಇದ್ದಾರೆ. ಇನ್ನು ಮಕ್ಕಳಿಗೆ ಇಲ್ಲಿ ಪಾಠ ಮಾಡಬೇಕಾಗಿದ್ದ ಮಹೇಂದ್ರ ಕೊಲ್ಲುರ ಅನ್ನೋ ಶಿಕ್ಷಕ, ಕಳೆದ ಐದಾರು ತಿಂಗಳಿಂದ ಶಾಲೆಗೆ ಸರಿಯಾಗಿ ಬರ್ತಿರಲಿಲ್ಲವಂತೆ.
ಮಕ್ಕಳಿಗೆ ಪಾಠ ಮಾಡಲು ಭಾಲಿನಾಯಕ್ ತಾಂಡಾದ ಸಮೀಪವಿರೋ ತಾಂಡಾದ ಸಾವಿತ್ರಿ ಅನ್ನೋ ಯುವತಿಯನ್ನು ನಿಯೋಜನೆ ಮಾಡಿದ್ದರಂತೆ. ಸಾವಿತ್ರಿ ಅನ್ನೋ ಯುವತಿಯೇ, ಮಹೇಂದ್ರ ಕೆಲಸವನ್ನು ಮಾಡೋದು, ಮಕ್ಕಳಿಗೆ ಪಾಠ ಮಾಡೋದನ್ನು ಮಾಡ್ತಿದ್ದಳಂತೆ. ಇದರ ಬಗ್ಗೆ ಕೆಲವರು ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ನಿನ್ನೆ ಚಿತ್ತಾಪುರ ಬಿಇಓ ಅವರು ಶಾಲೆಗೆ ಹೋಗಿ ವಿಚಾರಿಸಿದ್ದಾರೆ.
ನಾನು ಯಾವುದೇ ಬಾಡಿಗೆ ಶಿಕ್ಷಕಿಯನ್ನು ನಿಯೋಜನೆ ಮಾಡಿಲ್ಲ. ನಾನೇ ಬಂದು ಪಾಠ ಮಾಡ್ತೇನೆ, ನಾನು ಶಾಲೆಗೆ ಬಾರದೇ ಇದ್ರೆ ರಜೆ ಹಾಕ್ತೀನಿ, ಬೇಕಾದ್ರೆ ನನ್ನ ಹಾಜರಿ ಪುಸ್ತಕ ನೋಡಿ ಅಂತ ಶಿಕ್ಷಕ ಮಹೇಂದ್ರ ಪುಸ್ತಕ ತೋರಿಸಿದ್ದಾರೆ.
ಇನ್ನು ಮಹೇಂದ್ರ ಕೊಲ್ಲೂರ್ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರಂತೆ. ಭಾಲಿನಾಯಕ್ ತಾಂಡಾದಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರಂತೆ. ಆದ್ರೆ ಅವರಿಗೆ ಕೈಕಾಲು ನೋವು ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಇದ್ದವಂತೆ. ಹೀಗಾಗಿ ಯುವತಿಯೋರ್ವಳಿಗೆ ಪಾಠ ಮಾಡುವ ಜವಾಬ್ದಾರಿ ನೀಡಿ, ಅವಳಿಗೆ ಪ್ರತಿ ತಿಂಗಳು ಆರು ಸಾವಿರ ಹಣ ನೀಡ್ತಿದ್ದರಂತೆ. ಶಿಕ್ಷಕ ಮಹೇಂದ್ರ್ ಕುಮಾರ್ ಕೂಡಾ ನಾನು ಬಾಡಿಗೆ ಶಿಕ್ಷಕಿಯನ್ನು ನಿಯೋಜನೆ ಮಾಡಿಲ್ಲಾ ಅಂತ ಹೇಳ್ತಿದ್ದಾರೆ. ಇನ್ನು ಶಾಲೆಯ ಮುಖ್ಯಶಿಕ್ಷಕ ಅಯ್ಯಪ್ಪ ಕೂಡಾ, ಮಹೇಂದ್ರ್ ಕುಮಾರ್ ಪ್ರತಿನಿತ್ಯ ಶಾಲೆಗೆ ಬರ್ತಾರೆ ಅಂತ ಹೇಳ್ತಿದ್ದಾರೆ.
ಇನ್ನು ಗ್ರಾಮದ ಜನರು ಕೂಡಾ ಶಿಕ್ಷಕರು ಸರಿಯಾಗಿ ಇದ್ದಾರೆ ಅಂತ ಹೇಳ್ತಿದ್ದಾರೆ. ಇನ್ನು ಮಕ್ಕಳಿಗೆ ಕಳೆದ ಕೆಲ ತಿಂಗಳಿಂದ ಪಾಠ ಮಾಡಿದ್ದ ಸಾವಿತ್ರಿ ಅನ್ನೋ ಯುವತಿ ಕೂಡಾ, ನಾನು ಹಣಕ್ಕಾಗಿ ಕೆಲಸ ಮಾಡಿಲ್ಲ. ಆದ್ರೆ ಸ್ವಯಂಪ್ರೇರಣೆಯಿಂದ ಪಾಠ ಮಾಡುತ್ತಿದ್ದೆ. ಹಣ ನೀಡಿ ನನ್ನ ನಿಯೋಜನೆ ಮಾಡಿಲ್ಲ. ಎಸ್ ಡಿ ಎಂ ಸಿ ಅಧ್ಯಕ್ಷಕರು, ನಾನು ಬಂದು ಹೋಗಲು ಆಟೋ ಚಾರ್ಜ್ ಕೊಡ್ತೇನೆ ಅಂತ ಹೇಳ್ತಿದ್ದರು. ನಾನು ಕಳೆದ ಹದಿನೈದು ದಿನಗಳಿಂದ ಬಂದು ಆಗಾಗ ಮಕ್ಕಳಿಗೆ ಪಾಠ ಮಾಡಿದ್ದೇನೆ ಅಂತ ಹೇಳ್ತಿದ್ದಾಳೆ. ಇನ್ನು ಪ್ರಕರಣ ಬಗ್ಗೆ ಮಾಹಿತಿ ಪಡೆದಿರೋ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆರೋಪ ಹೊಂದಿರುವ ಶಿಕ್ಷಕ ಮಹೇಂದ್ರ್, ಮುಖ್ಯ ಶಿಕ್ಷಕ ಸೇರಿದಂತೆ ಸಿಆರ್ ಸಿ, ಬಿ ಆರ್ ಸಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರು.
ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ