ಕಲಬುರಗಿ: ಕೆಟ್ಟು ನಿಂತಿದ್ದ ವಾಹನ ದುರಸ್ತಿ ವೇಳೆ ಟ್ಯಾಂಕರ್ ಡಿಕ್ಕಿ: ಮೂವರು ಸಾವು
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಇವಣಿ ಗ್ರಾಮದ ಬಳಿ ಕೆಟ್ಟು ನಿಂತಿದ್ದ ವಾಹನ ದುರಸ್ತಿ ವೇಳೆ ಟ್ಯಾಂಕರ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವಂತಹ ದುರ್ಘಟನೆ ನಡೆದಿದೆ. ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಾಡಲಗಿ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಹತ್ತನೆ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಕಲಬುರಗಿ, ನವೆಂಬರ್ 30: ಕೆಟ್ಟು ನಿಂತಿದ್ದ ವಾಹನ ದುರಸ್ತಿ ವೇಳೆ ಟ್ಯಾಂಕರ್ ಡಿಕ್ಕಿ (accident) ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಇವಣಿ ಗ್ರಾಮದ ಬಳಿ ನಡೆದಿದೆ. ಹೈದರಾಬಾದ್, ಬೀದರ್ ಮೂಲದ ಪ್ರಶಾಂತ್, ವಿಠ್ಠಲ್, ಮಂಗ್ಲಿ ಮೃತರು. ಕಲಬುರಗಿಯಿಂದ ಸೇಡಂ ಮಾರ್ಗವಾಗಿ ಹೈದರಾಬಾದ್ಗೆ ತೆರಳುತ್ತಿದ್ದು, ಇವಣಿ ಗ್ರಾಮದ ಬಳಿ ವಾಹನ ಕೆಟ್ಟು ನಿಂತಿದ್ದರಿಂದ ರಸ್ತೆ ಬದಿ ನಿಲ್ಲಿಸಿ ದುರಸ್ತಿ ಮಾಡಲಾಗುತ್ತಿದ್ದು, ಈ ವೇಳೆ ಹಿಂದಿನಿಂದ ಬಂದ ಸಿಮೆಂಟ್ ಟ್ಯಾಂಕರ್ ಹರಿದು ಮೂವರು ಮೃತಪಟ್ಟಿದ್ದಾರೆ. ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಮುಳುಗಿ ಹತ್ತನೆ ತರಗತಿ ವಿದ್ಯಾರ್ಥಿ ಸಾವು
ಕಾರವಾರ: ಕೆರೆಯಲ್ಲಿ ಮುಳುಗಿ ಹತ್ತನೆ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಾಡಲಗಿ ಗ್ರಾಮದಲ್ಲಿ ನಡೆದಿದೆ. ಬನವಾಸಿಯ ಸಮೀಪದ ಮಧುರವಳ್ಳಿ ಗ್ರಾಮದ ರಾಮ್ ಕುಮಾರ ಮೃತ ವಿದ್ಯಾರ್ಥಿ. ಸಂಜೆ 4 ಗಂಟೆಗೆ ನಾಲ್ಕು ಜನ ಸ್ನೇಹಿತರು ಕೆರೆಯಲ್ಲಿ ಆಡಲು ಹೋದಾಗ ಘಟನೆ ಸಂಭವಿಸಿದೆ. ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಲಾಯರ್ ಮೇಲೆ ಪೋಲಿಸರಿಂದ ಹಲ್ಲೆ ಆರೋಪ
ಚಿಕ್ಕಮಗಳೂರು: ಲಾಯರ್ ಮೇಲೆ ಪೋಲಿಸರಿಂದ ಹಲ್ಲೆ ಗಂಭೀರ ಆರೋಪ ಕೇಳಿಬಂದಿದೆ. ವಕೀಲ ಎನ್.ಟಿ.ಪ್ರೀತಮ್ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರಿಂದ ಹಲ್ಲೆ ಆರೋಪ ಮಾಡಿದ್ದಾರೆ. ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದ ವಕೀಲ ಪ್ರೀತಮ್ಗೆ ದಂಡ ಪಾವತಿಸುವುದಾಗಿ ಹೇಳಿದರೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಬೈಕ್ ಕೀ ತೆಗೆದುಕೊಂಡ ಪೊಲೀಸರನ್ನು ಪ್ರಶ್ನಿಸಿದ್ದ ವಕೀಲ ಪ್ರೀತಮ್, ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ತುಮಕೂರು: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು
ಬೆನ್ನು, ಕೈ, ಎದೆ ಭಾಗಕ್ಕೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಬೂಟ್ಗಾಲಿನಿಂದ ಒದ್ದು, ಹಾಕಿ ಸ್ಟಿಕ್ನಿಂದ ಬೆನ್ನಿಗೆ ಥಳಿಸಿರುವುದಾಗಿ ಆರೋಪಿಸಿದ್ದಾರೆ. ಸದ್ಯ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಪ್ರೀತಮ್ ದಾಖಲು ಮಾಡಲಾಗಿದೆ.
ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿ: ಸವಾರ ಸಾವು
ಬಾಗಲಕೋಟೆ: ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಬಾಗಲಕೋಟೆ-ಬೆಳಗಾವಿ ರಸ್ತೆಯ ಸಂಶಿ ಕ್ರಾಸ್ ಬಳಿ ನಡೆದಿದೆ. ಪಾಂಡು ಅನವಾಲ(31)ಮೃತ ವ್ಯಕ್ತಿ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.