ಕಲಬುರಗಿ ತೊಗರಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿಯುವ ಆತಂಕ
ಕಲಬುರಗಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತವಾಗಿ ಭಾರಿ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಕೃಷಿ ಜಮೀನಿನಲ್ಲಿ ನೀರು ನಿಂತು ತೊಗರಿ ಬೆಳೆ ಕೊಳೆಯಲು ಪ್ರಾರಂಭವಾಗಿದೆ. ಮತ್ತೊಂದೆಡೆ ತೊಗರಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ.
ಕಲಬುರಗಿ: ಕರ್ನಾಟಕದ ತೊಗರಿ ಕಣಜ ಎಂದು ಖ್ಯಾತಿ ಕಲಬುರಗಿ ಜಿಲ್ಲೆ ಖ್ಯಾತಿ ಪಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ರಾಜ್ಯವಲ್ಲದೇ ದೇಶದ ಅನೇಕ ಕಡೆ ಭಾರಿ ಬೇಡಿಕೆ ಇದೆ. ಈ ಭಾಗದಲ್ಲಿ ಬೆಳೆಯುವ ತೊಗರಿಗೆ ಭೌಗೋಳಿಕ ಸ್ಥಾನಮಾನ ಕೂಡಾ ಸಿಕ್ಕಿದೆ. ಆದರೆ ಕಲಬುರಗಿ ಜಿಲ್ಲೆಯ ತೊಗರಿ ಬೆಳೆಗಾರರು ಈ ಬಾರಿ ಪ್ರವಾಹ, ನಿರಂತರ ಮಳೆಯಿಂದ ಕಂಗಾಲಾಗಿ ಹೋಗಿದ್ದಾರೆ. ನಿರಂತರ ಮಳೆಯಿಂದ ತೊಗರಿ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಬೇರುಗಳು ಕೊಳೆಯುತ್ತಿವೆ. ಹೀಗಾಗಿ ಈ ಬಾರಿ ಗಣನೀಯವಾಗಿ ತೊಗರಿ ಉತ್ಫಾದನೆ ಕುಸಿಯುವ ಆತಂಕ ಎದುರಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿ, ರಾಜ್ಯ ಸೇರಿದಂತೆ ಅನೇಕ ರಾಜ್ಯಗಳಿಗೆ ಹೋಗುತ್ತದೆ. ಕಲಬುರಗಿ ತೊಗರಿಯಲ್ಲಿ ಪ್ರೋಟಿನ್ ಹೆಚ್ಚಾಗಿರುವುದರಿಂದ, ಈ ಭಾಗದ ತೊಗರಿಗೆ ಉತ್ತಮ ಬೇಡಿಕೆಯಿದೆ. ಕಲಬುರಗಿ ಜಿಲ್ಲೆಯಲ್ಲಿರುವ ಕೃಷಿ ಭೂಪ್ರದೇಶದ ವಿಸ್ತೀರ್ಣದ ಪೈಕಿ ಶೇಕಡಾ ತೊಂಬತ್ತರಷ್ಟು ತೊಗರಿಯನ್ನು ಬೆಳೆಯಲಾಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ತೊಗರಿ ಬೆಳೆಯಲಾಗಿದೆ. ಮುಂಗಾರು ಮಳೆ ಚೆನ್ನಾಗಿ ಬಿದ್ದಿದ್ದರಿಂದ ತೊಗರಿ ಬೆಳೆ ಚೆನ್ನಾಗಿ ಬಂದಿತ್ತು. ಇದು ತೊಗರಿ ಬೆಳೆಗಾರರ ಮಂದಹಾಸವನ್ನು ಹೆಚ್ಚಿಸಿತ್ತು. ಆದರೆ ಇದೇ ತೊಗರಿ ಬೆಳೆಗಾರರು ಇದೀಗ ಆತಂಕಕ್ಕೊಳಗಾಗಿದ್ದಾರೆ. ಹೌದು ತೊಗರಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆ.
ಭಾರಿ ಮಳೆಯಿಂದ ಕೊಳೆಯುತ್ತಿರುವ ತೊಗರಿ ಬೆಳೆ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತವಾಗಿ ಭಾರಿ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಕೃಷಿ ಜಮೀನಿನಲ್ಲಿ ನೀರು ನಿಂತು ತೊಗರಿ ಬೆಳೆ ಕೊಳೆಯಲು ಪ್ರಾರಂಭವಾಗಿದೆ. ಮತ್ತೊಂದೆಡೆ ತೊಗರಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ. ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳವರಗೆ ಕಲಬುರಗಿ ಜಿಲ್ಲೆಯಲ್ಲಿ 582 ಮಿಲಿ ಮೀಟರ್ ಮಳೆಯಗಾಬೇಕು. ಆದre 698 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲೂ ಜಿಲ್ಲೆಯ ಕಾಳಗಿ, ಚಿತ್ತಾಪುರ, ಚಿಂಚೋಳಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿ ರೈತರನ್ನು ಕಂಗಾಲು ಮಾಡಿದೆ. ನಿರಂತರವಾಗಿ ಮಳೆಯಾಗುತ್ತಿರುವದರಿಂದ ನೀರು ಭೂಮಿಯಲ್ಲಿಯೇ ನಿಲ್ಲುತ್ತಿದೆ. ಅದರಲ್ಲೂ ತಗ್ಗು ಪ್ರದೇಶದಲ್ಲಿರುವ ಕೃಷಿ ಭೂಮಿಯಲ್ಲಿ ನೀರು ಹರಿದು ಹೋಗುತ್ತಿಲ್ಲ. ತೊಗರಿ ಹೊಲದಲ್ಲಿ ನೀರು ನಿಂತು ತೊಗರಿ ಬೇರುಗಳು ಹಾಳಾಗಿ ಹೋಗುತ್ತಿವೆ. ಇದೇ ಮುಂದುವರೆದರೆ ತೊಗರಿ ಬೆಳೆಯಲ್ಲಿ ಕಾಯಿಗಳು ಬಿಡುವುದಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.
ಹಳದಿ ಬಣ್ಣಕ್ಕೆ ತಿರಗುತ್ತಿರುವ ತೊಗರಿ ಗಿಡಗಳು ಇನ್ನು ಜಿಲ್ಲೆಯಲ್ಲಿ ನಿರಂತವಾಗಿ ಮಳೆಯ ಪರಿಣಾಮ ತೊಗರಿ ಗಿಡಗಳಲ್ಲಿನ ಎಲೆಗಳು ಹಳದಿ ಬಣ್ಣಕ್ಕೆ ತಿರಗುತ್ತಿವೆ. ಕೆಲವಡೆ ಬೇರುಗಳು ಕೊಳೆತು ತೊಗರಿ ಗಿಡಗಳು ಒಣಗಿದರೆ, ಇನ್ನು ಕೆಲವಡೇ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಹೂ ಕಾಯಿ ಆಗುವ ಮುನ್ನವೇ ಹಳದಿ ಬಣ್ಣಕ್ಕೆ ತಿರುಗಿದರೆ, ಮುಂದೆ ಅವುಗಳಿಂದ ಫಲ ಬರೋದಿಲ್ಲಾ ಅನ್ನೋದು ರೈತರ ಅನುಭವದ ಮಾತಾಗಿದೆ. ಇನ್ನು ಅಕ್ಟೋಂಬರ್ ತಿಂಗಳಲ್ಲಿ ತೊಗರಿ ಗಿಡಗಳಲ್ಲಿ ಹೂಗಳು ಆಗಬೇಕಿತ್ತು. ಆದ್ರೆ ಗಿಡಗಳಲ್ಲಿ ಸತ್ವ ಕಡಿಮೆಯಾಗಿರುವದರಿಂದ ಹೂ ಗಳು ಕೂಡಾ ಬಿಡುತ್ತಿಲ್ಲಾ. ಹೀಗಾಗಿ ಕೆಲವಡೇ ಬೆಳೆ ಚೆನ್ನಾಗಿದ್ದರು ಕೂಡಾ ಕಾಯಿ ಆಗೋದು ಅನುಮಾನವಾಗಿದೆ.
ತೊಗರಿ ಉತ್ಫಾದನೆ ಕುಸಿಯುವ ಆತಂಕ ಕಲಬುರಗಿ ಜಿಲ್ಲೆಯಲ್ಲಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ತೊಗರಿ ಬೆಳದಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ 7 ಸಾವಿರ ರೂಪಾಯಿ ಬೆಲೆಯಿದೆ. ಇನ್ನೊಂದು ತಿಂಗಳಾದರೆ ತೊಗರಿಯಲ್ಲಿ ಕಾಯಿಗಳು ಆಗುತ್ತಿದ್ದವು. ಆದರೆ ನಿರಂತರ ಮಳೆಯಿಂದ ತೊಗರಿ ಗಿಡಗಳಲ್ಲಿ ಹೂಗಳು ಕೂಡಾ ಕಾಣುತ್ತಿಲ್ಲ. ಇಷ್ಟು ದಿನಕ್ಕೆ ತೊಗರಿ ಗಿಡಗಳಲ್ಲಿ ಹೂಗಳು ಆಗಬೇಕಿತ್ತು. ಆದರೆ ಬೇರುಗಳು ಕೊಳೆಯುತ್ತಿರುವ ಪರಿಣಾಮ ಹೂಗಳು ಸಹ ಅರಳುತ್ತಿಲ್ಲ. ಹೀಗಾಗಿ ತೊಗರಿ ಬೆಳೆ ಬರುವದೇ ಅನುಮಾನ ಅಂತಿದ್ದಾರೆ ರೈತರು. ಪ್ರತಿವರ್ಷ ಕಲಬುರಗಿ ಜಿಲ್ಲೆಯೊಂದರಲ್ಲಿಯೇ ಸರಿಸುಮಾರು 30 ಲಕ್ಷ ಕ್ವಿಂಟಲ್ಗೂ ಹೆಚ್ಚು ತೊಗರಿಯನ್ನು ಬೆಳೆಯಲಾಗುತ್ತಿತ್ತು. ಆದರೆ ಸದ್ಯ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚು ಬಿತ್ತನೆಯಾಗಿದ್ದ ತೊಗರಿ ಹಾಳಾಗಿ ಹೋಗಿದೆ. ಕೆಲವೆಡೇ ಬೆಳೆಯಿದ್ದರೂ ಹೂ ಬಿಟ್ಟಿಲ್ಲ. ಹೀಗಾಗಿ 30 ಲಕ್ಷ ಕ್ವಿಂಟಲ್ ದಿಂದ 20 ಲಕ್ಷ ಕ್ವಿಂಟಲ್ ಗೆ ಕುಸಿಯುವ ಆತಂಕವಿದೆ.
ಕಳೆದ ಎರಡು ವರ್ಷಗಳಿಂದ ಕಲಬುರಗಿ ಜಿಲ್ಲೆಯ ರೈತರು ಪ್ರವಾಹ ಮತ್ತು ಹೆಚ್ಚಿನ ಮಳೆಯಿಂದ ತೊಂದರೆಗೆ ಸಿಲುಕುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತೊಗರಿಗೆ ಉತ್ತಮ ಬೆಲೆಯಿದ್ದರೂ ಕೂಡ ತೊಗರಿ ಉತ್ಪಾದನೆ ಕುಸಿತವಾಗಿರೋದು ತೊಗರಿ ಬೆಳೆಗಾರರಿಗೆ ಹಲ್ಲಿದ್ದರೂ ಕಡಲೆಯಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಅನೇಕ ಕಡೆ ತೊಗರಿ ಬೆಳೆ ಹಾಳಾಗಿದೆ. ಸದ್ಯ ರೈತರು ತೊಗರಿ ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಮೇಲ್ನೋಟಕ್ಕೆ ಒಂದು ಲಕ್ಷ ಹೆಕ್ಟೇರ್ ನಲ್ಲಿ ಬೆಳೆದಿದ್ದ ತೊಗರಿ ಹಾಳಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಮ್ಮ ಸಿಬ್ಬಂದಿ ಸರ್ವೇ ನಡೆಸುತ್ತಿದ್ದು, ಸರ್ವೇ ನಂತರ ನಿಖವಾಗಿ ಎಷ್ಟು ಹೆಕ್ಟೇರ್ ನಲ್ಲಿ ಬೆಳದಿದ್ದ ತೊಗರಿ ಹಾಳಾಗಿದೆ ಎಂಬುದು ಗೊತ್ತಾಗಲಿದೆ ಎಂದು ಕಲಬುರಗಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರ ಸೂಗೂರ್ ಮಾಹಿತಿ ನೀಡಿದರು.
ನಿರಂತರವಾಗಿ ಮಳೆಯಾಗುತ್ತಿರುವದರಿಂದ ತೊಗರಿ ಬೆಳೆ ಹಾಳಾಗುತ್ತಿದೆ. ಜಮೀನಿನಲ್ಲಿ ನೀರು ನಿಲ್ಲುತ್ತಿರುವದರಿಂದ ಬೆಳೆ ಕೊಳೆಯುತ್ತಿದೆ. ಕೆಲವಡೆ ಹಳದಿ ಬಣ್ಣಕ್ಕೆ ಎಲೆಗಳು ತಿರುಗಿವೆ. ಸಾವಿರಾರು ರೂಪಾಯಿ ಸಾಲ ಮಾಡಿ ಬೆಳದಿದ್ದ ಬೆಳೆ ಹಾಳಾಗಿ ಹೋಗುತ್ತಿದೆ. ಹೀಗಾಗಿ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ರಂಗಪ್ಪ ಎಂಬ ರೈತರು ಟಿವಿ9 ಡಿಜಿಟಲ್ಗೆ ಮನವಿ ಮಾಡಿದರು.
ವರದಿ- ಸಂಜಯ್ ಚಿಕ್ಕಮಠ ಟಿವಿ9 ಕಲಬುರಗಿ
ಇದನ್ನೂ ಓದಿ:
ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಲಘು ಭೂಕಂಪ, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.4ರಷ್ಟು ದಾಖಲು
Published On - 6:57 pm, Sun, 10 October 21