Kalaburagi: ಲಾಡ್ಲೆ ಮಶಾಕ್​ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಕೋರ್ಟ್ ಸಮ್ಮತಿ

ಸಾಕಷ್ಟು ವಿವಾದ ಸೃಷ್ಟಿಸಿದ್ದ ಕಲಬುರಗಿ ಜಿಲ್ಲೆಯ ಆಳಂದ ಬಳಿಯ ಲಾಡ್ಲೆ ಮಶಾಕ್​ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಕಲಬುರಗಿ ವಕ್ಫ್​ ಟ್ರಿಬ್ಯುನಲ್​ ಕೋರ್ಟ್ ಅನುಮತಿ ನೀಡಿದೆ.

Kalaburagi: ಲಾಡ್ಲೆ ಮಶಾಕ್​ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಕೋರ್ಟ್ ಸಮ್ಮತಿ
ಲಾಡ್ಲೆ ಮಶಾಕ್ ದರ್ಗಾ (ಎಡಚಿತ್ರ) ಶಿವಲಿಂಗ ಮೂಜೆ (ಬಲಚಿತ್ರ)
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 14, 2023 | 9:19 AM

ಕಲಬುರಗಿ: ಸಾಕಷ್ಟು ವಿವಾದ ಸೃಷ್ಟಿಸಿದ್ದ ಜಿಲ್ಲೆಯ ಆಳಂದ ಬಳಿಯ ಲಾಡ್ಲೆ ಮಶಾಕ್​ ದರ್ಗಾದಲ್ಲಿರುವ (Ladle mashak dargah) ರಾಘವ ಚೈತನ್ಯ ಶಿವಲಿಂಗ (Shiva Ling) ಪೂಜೆಗೆ ಕಲಬುರಗಿ ವಕ್ಫ್​ ಟ್ರಿಬ್ಯುನಲ್​ ಕೋರ್ಟ್ ಅನುಮತಿ ನೀಡಿದೆ. ನ್ಯಾಯಾಲಯ ಹಿಂದು ಮತ್ತು ಮುಸ್ಲಿಂರಿಗೂ ಪೂಜೆಗೆ ಅವಕಾಶ ನೀಡಿದೆ. ಪೂಜೆಗೆಂದು ಪ್ರತ್ಯೇಕ ಸಮಯ ನೀಡಿದೆ.

ಶಿವರಾತ್ರಿ ಹಬ್ಬದಂದೇ ಉರಸ್ ಇರುವ ಹಿನ್ನಲೆ ಬೆಳಗ್ಗೆ 8 ಗಂಟೆಯಿಂದ 2 ಗಂಟೆಯವರೆಗೆ ಮುಸ್ಲಿಂರಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2 ರಿಂದ ಸಂಜೆ 6 ವರೆಗೆ ಹಿಂದುಗಳಿಗೆ ಶಿವನ ಪೂಜೆಗೆ ಅವಕಾಶ ನೀಡಿದೆ. ಅಲ್ಲದೇ ಪೂಜೆಗೆ 15 ಜನ ಹಿಂದುಗಳು ಮಾತ್ರೆ ತೆರಳಿ ಪೂಜೆ ನೆರವೇರಿಸುವಂತೆ ಆದೇಶ ಹೊರಡಿಸಿದೆ.

ಕಳೆದ ವರ್ಷ ಶಿವರಾತ್ರಿಯಂದು ರಣರಂಗವಾಗಿದ್ದ ಲಾಡ್ಲೆ ಮಶಾಕ್ ದರ್ಗಾ

ಕಳೆದ ವರ್ಷ ಶಿವರಾತ್ರಿ ಹಬ್ಬದಂದು ಜಿಲ್ಲಾಡಳಿತದ ಆದೇಶದ ಮೇಲೆ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಮೂಡ್, ಕಡಗಂಚಿ ಮಠದ ಸ್ವಾಮೀಜಿ ಸೇರಿದಂತೆ 10 ಜನರು, ದರ್ಗಾದಲ್ಲಿರುವ ಲಿಂಗಕ್ಕೆ ಪೂಜೆಗೆ ಹೋಗುತ್ತಿದ್ದರು. ಈ ವೇಳೆ ಮತ್ತೊಂದು ಮುಸ್ಲಿಂ ಜನರು, ದಿಡೀರನೆ ಕಲ್ಲು ತೂರಾಟ ನಡೆಸಿದರು. ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಕಲಬುರಗಿ ಜಿಲ್ಲಾಧಿಕಾರಿ ಕಾರು, ಶಾಸಕ ಸುಭಾಷ್ ಗುತ್ತೇದಾರ್ ಅವರ ಕಾರು ಸೇರಿದಂತೆ ಅನೇಕ ಕಾರಿನ ಗಾಜುಗಳು ಪುಡಿಪುಡಿಯಾಗಿದ್ದವು. ಕೆಲ ಪೊಲೀಸ್ ಸಿಬ್ಬಂದಿ, ಹಾಗೇ ಮಾಧ್ಯಮದವರಿಗೆ ಕೂಡ ಘಟನೆಯಲ್ಲಿ ಗಾಯಗಳಾಗಿದ್ದವು.

ಏನಿದು ವಿವಾದ?

ಆಳಂದ ಪಟ್ಟಣದಲ್ಲಿ ಸುಪ್ರಸಿದ್ದ ಸೂಪಿ ಸಂತ ಲಾಡ್ಲೆ ಮಶಾಕ್ ದರ್ಗಾವಿದೆ. 14 ನೇ ಶತಮಾನದಲ್ಲಿಯೇ ತನ್ನ ತತ್ವ ವಿಚಾರಗಳಿಂದ ಲಾಡ್ಲೆ ಮಶಾಕ್ ಸುಪ್ರಸಿದ್ದಿಯನ್ನು ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ, 15ನೇ ಶತಮಾನದಲ್ಲಿ ಆಗಿಹೋಗಿರುವ ಸಂತ, ಶಿವಾಜಿ ಮಹಾರಾಜರ ಗುರು, ಸಮರ್ಥ ರಾಮದಾಸರ ರಾಘವ ಚೈತನ್ಯರ ಸಮಾಧಿಯಿದೆ. ಸಮಾಧಿ ಮೇಲೆ ಶಿವಲಿಂಗವಿದೆ. ದರ್ಗಾಕ್ಕೆ ಹೋಗುತ್ತಿದ್ದ ಅನೇಕ ಹಿಂದೂ ಭಕ್ತರು, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗಕ್ಕೆ ನಮಸ್ಕರಿಸಿ, ಪೂಜೆ ಮಾಡಿ ಬರುತ್ತಿದ್ದರು. ಜೊತೆಗೆ ಜೋಶಿ ಅನ್ನೋ ಕುಟುಂಬದವರು ಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದರು. ಇತ್ತೀಚಿನವರೆಗೆ ಅಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದೂ ಮುಸ್ಲಿಂ ನಡುವೆ ಸಾಮರಸ್ಯ ಕೂಡ ಇತ್ತು.

ಆದರೆ ಕಳೆದ ವರ್ಷ ಶಿವಲಿಂಗದ ಮೇಲೆ ಅನ್ಯ ಕೋಮಿನ ಕೆಲವರು ಮಲಮೂತ್ರ ವಿಸರ್ಜನೆ ಮಾಡಿದ್ದರು. ಇದು ಹಿಂದೂ ಧರ್ಮಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿದ್ದನ್ನು, ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್, 2021ರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗಕ್ಕೆ ರಕ್ಷಣೆ ನೀಡಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದ್ದರು. ಇದು ಮತ್ತೊಂದು ಕೋಮಿನ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು.

ಹೀಗಾಗಿ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧವೇ ಅವಹೇಳನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಕಳೆದ ವರ್ಷ ನವಂಬರ್ ತಿಂಗಳಲ್ಲಿ, ಆಳಂದದಲ್ಲಿ ಬೃಹತ್ ಪ್ರತಿಭಟನೆ ಕೂಡ ಹಿಂದೂಪರ ಸಂಘಟನೆಗಳ ಮುಖಂಡರು ನಡೆಸಿದ್ದರು. ಆಗ ಶಿವರಾತ್ರಿ ದಿನವೇ, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗವನ್ನು ಶುಚಿ ಗೊಳಿಸಿ, ಅಲ್ಲಿ ಪೂಜೆ ಮಾಡೋದಾಗಿ ಹೇಳಿದ್ದರು.

ಶಿವಮಾಲೆ ವ್ರತ ಆರಂಭಿಸಿದ್ದ ಹಿಂದೂಪರ ಕಾರ್ಯಕರ್ತರು

ಈ ಹಿನ್ನೆಲೆ ಹಿಂದೂಪರ ಕಾರ್ಯಕರ್ತರು ಶಿವಮಾಲೆ ವ್ರತ ಆರಂಭಿಸಿದ್ದರು. ಈ ವೃತದ ಉದ್ದೇಶ ಆಳಂದನ ದರ್ಗಾದಲ್ಲಿರುವ ರಾಘವ ಚೈತನ್ಯರ ಸಮಾಧಿ ಸ್ಥಳದ ಮೇಲಿರುವ ಶಿವಲಿಂಗವನ್ನು ಶುಚಿಗೊಳಿಸುವುದು ಮತ್ತು ಪೂಜೆ ಮಾಡುವ ಸಲುವಾಗಿ, ಕಳೆದ ವರ್ಷ ಜನವರಿ 25 ರಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಲಬುರಗಿಯಲ್ಲಿ ಶಿವಮಾಲೆ ವ್ರತವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಾರಂಭಿಸಿದ್ದರು. ಅಂದು ನೂರಾರು ಜನರು ಶಿವಮಾಲೆ ಧರಿಸಿದ್ದರು. ಮಾರ್ಚ್ 1ರಂದು ಶಿವರಾತ್ರಿ ದಿನ, ರಾಘವ ಚೈತನ್ಯರ ಸಮಾಧಿ ಮೇಲಿರುವ ಶಿವಲಿಂಗವನ್ನು ಶುಚಿಗೊಳಿಸಿ, ಪೂಜೆ ಮಾಡಿ, ನಮ್ಮ ವ್ರತವನ್ನು ಮುಗಿಸೋದಾಗಿ ಹೇಳಿದ್ದರು. ಆದರೆ ಮಾರ್ಚ್ 1 ರಂದೆ ಲಾಡ್ಲೇ ಮಶಾಕ್ ದರ್ಗಾದ ಸಂದಲ್ ಕೂಡ ಇರೋದರಿಂದ ಜಿಲ್ಲಾಡಳಿತ ಮತ್ತು ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದರು. ಮಾರ್ಚ್ 1 ರಂದು ಆಳಂದನಲ್ಲಿ ಬೃಹತ್ ಕಾರ್ಯಕ್ರಮ ಮಾಡಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದವು.

ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ಆಹ್ವಾನ ನೀಡಿದ್ದರು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರಗೆ ಮಾರ್ಚ್ 3 2022 ರವರಗೆ ಜಿಲ್ಲೆಗೆ ಪ್ರವೇಶವನ್ನು ನಿರ್ಬಂಧಿಸಿತು. ಶ್ರೀರಾಮ ಸೇನೆ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರಿಗು ಕೂಡ ಆಳಂದ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಇಡೀ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಮಾಡಿತ್ತು. ಮಾ.5ರವರೆಗೆ ಆಳಂದ ತಾಲೂಕಿನಾದ್ಯಂತ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿತ್ತು.

ಆದರೆ ಪೂಜೆಗೆ ಅವಕಾಶ ನೀಡಲೇಬೇಕು ಅಂತ ಆಗ್ರಹಿಸಿದ್ದಾಗ, ಕೇವಲ 10 ಜನರಿಗೆ ಮಾತ್ರ ಪೂಜೆಗೆ ಅವಕಾಶ ನೀಡಲಾಗಿತ್ತು. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ್ ಗುತ್ತೇದಾರ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಕಡಗಂಚಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಮಾಡಲು ಮುಂದಾಗಿದ್ದರು. ಆದರೆ ಹೆಚ್ಚಿನ ಜನರು ಮೆರವಣಿಗೆ ಮೂಲಕ ದರ್ಗಾದ ಬಳಿ ಹೊರಟಿದ್ದರಿಂದ ಮುಸ್ಲಿಂ ಸಮಾಜದವರ ಕಣ್ಣು ಕಂಪಾಗಿ, ಮೆರವಣಿಗೆ ಮೇಲೆ ಕಲ್ಲು ತೂರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 am, Tue, 14 February 23