ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಮೃತ ಮಹೋತ್ಸವ; ಸಿಎಂ ಕಲಬುರಗಿಗೆ ಪ್ರಯಾಣ
ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಮೃತ ಮಹೋತ್ಸವ ಮತ್ತು ಸಂವಿಧಾನದ ಅನುಚ್ಛೇದ 371 (ಜೆ) ತಿದ್ದುಪಡಿಗೊಂಡು ಅನುಷ್ಠಾನಗೊಂಡಿರುವ ದಶಮಾನೋತ್ಸವ ಆಚರಿಸಲಾಗುತ್ತಿದೆ.
ಕಲಬುರಗಿ ಸೆ.17: ಇಂದು (ಸೆ.17) ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ (Kalyana Karnataka Vimochana Divas) ಅಮೃತ ಮಹೋತ್ಸವ ಮತ್ತು ಸಂವಿಧಾನದ ಅನುಚ್ಛೇದ 371 (ಜೆ) ತಿದ್ದುಪಡಿಗೊಂಡು ಅನುಷ್ಠಾನಗೊಂಡಿರುವ ದಶಮಾನೋತ್ಸವ ಆಚರಿಸಲಾಗುತ್ತಿದೆ. ಈ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರವಿವಾರ ಕಲಬುರಗಿಗೆ ಆಗಮಿಸಲಿದ್ದಾರೆ. ಹೈದರಾಬಾದ್ನಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ 8.30ಕ್ಕೆ ಕಲಬುರಗಿಗೆ (Kalaburagi) ಆಗಮಿಸಲಿರುವ ಅವರು, ನಂತರ ನಗರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲೆ ಗೌರವ ನಮನ ಸಲ್ಲಿಸುವರು.
ಅಲ್ಲಿಂದ ನೇರವಾಗಿ ಪೊಲೀಸ್ ಪೆರೇಡ್ ಮೈದಾನಕ್ಕೆ ತೆರಳಿ ಜಿಲ್ಲಾಡಳಿತ ಆಯೋಜಿಸಿರುವ ವಿಮೋಚನಾ ದಿನಾಚರಣೆಯ ಮುಖ್ಯ ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಇದೇ ಸಮಾರಂಭದಲ್ಲಿ ಮುಖ್ಯಮಂತ್ರಿಗಳು, ಹೆಲ್ತ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಹೈಕೋರ್ಟ್ ಸಮೀಪದ ಶಾಸಕ ಎಂ.ವೈ. ಪಾಟೀಲ್ ಪುತ್ರ ಡಾ. ಸಂಜು ಪಾಟೀಲ್, ಅಂಬಿಕಾ ನಿರ್ಮಿಸಿರುವ ಶಾಂತಾ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಲಬುರಗಿ ವಿಮಾನನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಇದನ್ನೂ ಓದಿ: ಸಂವಿಧಾನದ 371 ಜೆ ವಿಧಿಯಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ
ಇನ್ನು ಇಂದು ಕಲಬುರಗಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾತೋರಾತ್ರಿ ಕಲಬುರಗಿ-ಅಫಜಲಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ವೃತ್ತ ನಿರ್ಮಿಸಲಾಗಿದೆ. ಕಲಬುರಗಿ ಪಾಲಿಕೆಯ ಅನುಮತಿ ಪಡೆಯದೆ ಸಿದ್ದರಾಮಯ್ಯ ಬೆಂಬಲಿಗರು ದಿಢೀರ್ ವೃತ್ತ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ