ಕಲಬುರಗಿ ಲಘುಭೂಕಂಪನಕ್ಕೆ ಪರಿಹಾರ: ತಾತ್ಕಾಲಿಕ ಟಿನ್ ಶೆಡ್ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಮಂಜೂರು

| Updated By: ganapathi bhat

Updated on: Dec 19, 2021 | 6:38 PM

ಅನೇಕ ಷರತ್ತುಗಳನ್ನು ವಿಧಿಸಿರುವ ಸರ್ಕಾರ ಮೂರು ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಕಾಲಮಿತಿಯೊಳಗೆ ಟಿನ್ ಶೆಡ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಅಂತ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಕಲಬುರಗಿ ಲಘುಭೂಕಂಪನಕ್ಕೆ ಪರಿಹಾರ: ತಾತ್ಕಾಲಿಕ ಟಿನ್ ಶೆಡ್ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಮಂಜೂರು
ಪ್ರಾತಿನಿಧಿಕ ಚಿತ್ರ
Follow us on

ಕಲಬುರಗಿ: ಕಳೆದ ಎರಡ್ಮೂರು ವರ್ಷಗಳಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ನಿರಂತರವಾಗಿ ಲಘು ಭೂಕಂಪನ ಮತ್ತು ಭೂಮಿಯಿಂದ ಬರುತ್ತಿದ್ದ ಭಾರಿ ಸದ್ದು, ಗ್ರಾಮದ ಜನರ ಆತಂಕವನ್ನು ಹೆಚ್ಚಿಸಿತ್ತು. ಹೀಗಾಗಿ ಅನೇಕರು ಗ್ರಾಮವನ್ನು ತೊರೆದು ಬೇರಡೆ ಹೋಗಿದ್ದರು. ಹಗಲು ರಾತ್ರಿಯೆನ್ನದೆ ಬರುತ್ತಿದ್ದ ಭಾರಿ ಸದ್ದಿನಿಂದ ಗ್ರಾಮದ ಜನರು ಕಂಗಾಲಾಗಿದ್ದರು. ಈ ಬಗ್ಗೆ ಟಿವಿ9 ಡಿಜಿಟಲ್​ನಲ್ಲಿ ಸರಣಿ ವರದಿಗಳು ಪ್ರಸಾರಗೊಂಡಿದ್ದವು. ಗ್ರಾಮದ ಜನರಿಗೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು, ಜನರ ನೆಮ್ಮದಿಯನ್ನು ಕಾಪಾಡಬೇಕು ಅನ್ನೋ ವರದಿಗೆ ರಾಜ್ಯ ಸರ್ಕಾರ ಇದೀಗ ಸ್ಪಂದಿಸಿದ್ದು, ಮೂರು ಕೋಟಿ ರೂಪಾಯಿ ಹಣವನ್ನು, ಗ್ರಾಮದಲ್ಲಿ ತಾತ್ಕಾಲಿಕ ಟಿನ್ ಶೆಡ್ ನಿರ್ಮಾಣಕ್ಕೆ ಮಂಜೂರು ಮಾಡಿದೆ.

ಮೂರು ಕೋಟಿ ರೂಪಾಯಿ ಹಣ ಬಿಡುಗಡೆ
ಅನೇಕ ವರ್ಷಗಳಿಂದ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಸದ್ದು ಬರುತ್ತಿತ್ತು. ಆದ್ರೆ ಕಳೆದ ಕೆಲ ತಿಂಗಳಿಂದ ಭೂಮಿಯಿಂದ ಬರೋ ಸದ್ದಿನ ಪ್ರಮಾಣ ಹೆಚ್ಚಾಗಿತ್ತು. ಜೊತೆಗೆ ಮೇಲಿಂದ ಮೇಲೆ ಲಘು ಭೂ ಕಂಪನಗಳು ಉಂಟಾಗುತ್ತಿದ್ದವು. ಹೀಗಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಂದಾಯ ಸಚಿವ ಆರ್ ಅಶೋಕ್, ಕಳೆದ ಆಗಸ್ಟ್ ತಿಂಗಳಲ್ಲಿ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಸಮಯದಲ್ಲಿ ಗ್ರಾಮದ ಜನರು, ತಮಗೆ ತಾತ್ಕಾಲಿಕವಾಗಿ ಟಿನ್ ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅವರಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ಜಿಲ್ಲಾಡಳಿತ ಕೂಡ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದಿತ್ತು. ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಇದೀಗ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೂರು ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯ, ಪ್ರಕೃತಿ ವಿಕೋಪ ಖಾತೆಯಿಂದ ಕಂದಾಯ ಇಲಾಖೆಯ ವಿಪತ್ತು ಪರಿಹಾರ ನಿಧಿ ಖಾತೆಗೆ ಮೂರು ಕೋಟಿ ರೂಪಾಯಿ ಜಮೆ ಮಾಡಿದೆ. ಈ ಹಣವನ್ನು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲು ಕೂಡ ಆದೇಶ ಹೊರಡಿಸಿದೆ.

ಬಹುತೇಕರಿಗೆ ಟಿನ್ ಶೆಡ್ ಭಾಗ್ಯ
ಇನ್ನು ನಿರಂತರವಾಗಿ ಲಘು ಭೂಕಂಪನ ಮತ್ತು ಭೂಮಿಯಿಂದ ಸದ್ದು ಬರುತ್ತಿದ್ದರಿಂದ ಗ್ರಾಮದ ಜನರು ತಮ್ಮ ಮನೆಯಲ್ಲಿ ಇರಲು ಭಯ ಪಟ್ಟಿದ್ದರು. ಕಲ್ಲಿನಿಂದ ನಿರ್ಮಾಣವಾಗಿರುವ ಮನೆಗಳಲ್ಲಿ ಇರಲು ತಮಗೆ ಜೀವ ಭಯವಿದೆ ಅಂತ ಹೇಳಿದ್ದರು. ಆಗ ಜಿಲ್ಲಾಡಳಿತ ಗ್ರಾಮದಲ್ಲಿರುವ ಮನೆಗಳ ಸರ್ವೆ ಕಾರ್ಯ ಮಾಡಿತ್ತು. ಗ್ರಾಮದಲ್ಲಿ 1047 ಮನೆಗಳಿದ್ದು, ಅವುಗಳ ಪೈಕಿ 853 ಮನೆಗಳ ಅಪಾಯದ ಹಂತದಲ್ಲಿ ಇರೋದು ಮತ್ತು ಮನೆಗಳ ಮುಂದೆ ಟಿನ್ ಶೆಡ್ ನಿರ್ಮಾಣಕ್ಕೆ ಜಾಗ ಇರುವದರ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ಇದೀಗ ಮನೆ ಅಕ್ಕಪಕ್ಕ ಖಾಲಿ ನಿವೇಶನಗಳಲ್ಲಿ 10×10 ಅಳತೆಯಲ್ಲಿ, ಒಂದೊಂದು ಟಿನ್ ಶೆಡ್ ಗೆ 23,500 ರೂಪಾಯಿ ವೆಚ್ಚದಲ್ಲಿ ಟಿನ್ ಶೆಡ್ ನಿರ್ಮಾಣಕ್ಕೆ ಸರ್ಕಾರ ಮೂರು ಕೋಟಿ ರೂಪಾಯಿ ಹಣವನ್ನು ಮಂಜೂರು ಮಾಡಿದೆ. ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಕೆ. ಶಶಿಕುಮಾರ್ ಅವರು ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.

ಬಿಡುಗಡೆಯಾದ ಅನುದಾನಕ್ಕೆ ಷರತ್ತುಗಳು ಅನ್ವಯ
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಿರುವ ಸರ್ಕಾರ, ಕೆಲ ಷರತ್ತುಗಳನ್ನು ಕೂಡಾ ವಿಧಿಸಿದೆ:
1. ಬಿಡುಗಡೆಯಾದ ಅನುದಾನದಲ್ಲಿ ನಮೂದಿಸಲಾದ ವೆಚ್ಚದ ಮಿತಿಯೊಳಗೆ ಗಡಿಕೇಶ್ವರ ಗ್ರಾಮದಲ್ಲಿ, ಮನೆಗಳ ಅಕ್ಕಪಕ್ಕದಲ್ಲಿಯ ಖಾಲಿ ಜಾಗದಲ್ಲಿ ಟಿನ್ ಶೆಡ್ ನಿರ್ಮಿಸಬೇಕು
2. ಬಿಡುಗಡೆ ಮಾಡಿದ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ಬಳಸತಕ್ಕದ್ದು
3. ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡದೆ, ಶೀಘ್ರವಾಗಿ ಟಿನ್ ಶೆಡ್ ಗಳನ್ನು ನಿರ್ಮಿಸುವುದು
4. ಅನುದಾನದ ವೆಚ್ಚಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಗಳು ಸೂಕ್ತ ಲೆಕ್ಕ ಪತ್ರಗಳನ್ನು ಇಡಬೇಕು. ಹಣ ಬಳಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸಬೇಕು
5. ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಜಿಲ್ಲಾಧಿಕಾರಿಯವರನ್ನೇ ನೇರವಾಗಿ ಜವಬ್ದಾರರನ್ನಾಗಿ ಮಾಡಲಾಗುವದು

ಹೀಗೆ ಅನೇಕ ಷರತ್ತುಗಳನ್ನು ವಿಧಿಸಿರುವ ಸರ್ಕಾರ ಮೂರು ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಕಾಲಮಿತಿಯೊಳಗೆ ಟಿನ್ ಶೆಡ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಅಂತ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಗ್ರಾಮದಲ್ಲಿ ಟಿನ್ ಶೆಡ್ ನಿರ್ಮಾಣಕ್ಕೆ ಸರ್ಕಾರ ಮೂರು ಕೋಟಿ ರೂಪಾಯಿ ನೀಡಿರುವದು ಸ್ವಾಗತಾರ್ಹವಾಗಿದೆ. ಕೂಡಲೇ ಜಿಲ್ಲಾಡಳಿತ ಟಿನ್ ಶೆಡ್ ಗಳನ್ನು ನಿರ್ಮಾಣ ಮಾಡಿಕೊಡಬೇಕು. ಭ್ರಷ್ಟಾಚಾರವಾಗದಂತೆ ನೋಡಿಕೊಳ್ಳಬೇಕು. ಜೊತೆಗೆ ಗ್ರಾಮದಲ್ಲಿ ಎಲ್ಲರಿಗೂ ಟಿನ್ ಶೆಡ್ ನಿರ್ಮಾಣ ಮಾಡಿಕೊಡಬೇಕು ಎಂದು ಗಡಿಕೇಶ್ವರ ಗ್ರಾಮಸ್ಥ ನಾಗರಾಜ್ ಎಂಬವರು ಹೇಳಿದ್ದಾರೆ.

ಗಡಿಕೇಶ್ವರ ಗ್ರಾಮದಲ್ಲಿ ಟಿನ್ ಶೆಡ್ ನಿರ್ಮಾಣ ಮಾಡಿಕೊಡಲು ಹಣ ಬಿಡುಗಡೆ ಮಾಡಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರ ಇದೀಗ ಮೂರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಆದಷ್ಟು ಬೇಗನೆ ಟಿನ್ ಶೆಡ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹೇಳಿದ್ದಾರೆ.

ವಿಶೇಷ ವರದಿ: ಸಂಜಯ್ ಚಿಕ್ಕಮಠ, ಟಿವಿ ಕಲಬುರಗಿ

ಇದನ್ನೂ ಓದಿ: ಅಪರೂಪ: ಕರುವನ್ನು ಮಗುವಂತೆ ತೊಟ್ಟಿಲಲ್ಲಿಟ್ಟು ತೊಟ್ಟಿಲು ಶಾಸ್ತ್ರ ಮಾಡಿದ ಕಲಬುರಗಿ ಮಹಿಳಾ ಪಿಎಸ್ಐ ಕುಟುಂಬ

ಇದನ್ನೂ ಓದಿ: ಕಲಬುರಗಿ: ವರ್ಗಾವಣೆಗೊಂಡ ಶಿಕ್ಷಕನ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಗಳಗಳನೆ ಅತ್ತ ವಿದ್ಯಾರ್ಥಿನಿಯರು