PSI Recruitment Scam: ಪಿಎಸ್‌ಐ ನೇಮಕಾತಿ ಹಗರಣ; ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Karnataka PSI Recruitment Scam: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದ ಗ್ಯಾಂಗ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಲಾಗಿದೆ.
ಕಲಬುರ್ಗಿ: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು (Anticipatory Bail) ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಪ್ರಕರಣದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಏ. 29ಕ್ಕೆ ಮುಂದೂಡಿದೆ. ನಿರೀಕ್ಷಣಾ ಜಾಮೀನು ಕೋರಿ ಕಲಬುರಗಿ ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಐವರು ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಪಿ.ಎಸ್.ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ (Karnataka PSI Recruitment Scam) ಆರೋಪಿಯಾಗಿರುವ ದಿವ್ಯಾ ಹಾಗರಗಿ ಮತ್ತು ತಂಡದವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದ್ದರು. ದಿವ್ಯಾ ಹಾಗರಗಿ, ಕಾಶಿನಾಥ್, ಮಂಜುನಾಥ ಮೇಳಕುಂದಿ, ಅರ್ಚನಾ ಹೊನಗೇರಿ, ಸುನಂದಾ ಅವರ ಜಾಮೀನಿಗೆ ಸಿಐಡಿ ತಕರಾರು ಮಾಡಿತ್ತು. ಇದು ಸಂಘಟಿತ ಅಪರಾಧವಾಗಿದ್ದು, ಜಾಮೀನು ಕೊಟ್ಟರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇದೆ. ಹೀಗಾಗಿ ಈ ಐವರಿಗೆ ನಿರೀಕ್ಷಣಾ ಜಾಮೀನು ನೀಡಬೇಡಿ ಎಂದು ಕಲಬುರಗಿಯ ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿತ್ತು.
ಕಳೆದ 18 ದಿನಗಳಿಂದ ನಾಪತ್ತೆಯಾಗಿರೋ ಗ್ಯಾಂಗ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಲಾಗಿದೆ. ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿಯಾಗಿರುವ ದಿವ್ಯಾ ಹಾಗರಗಿ ಪಿಎಸ್‌ಐ ಪರೀಕ್ಷಾ ಅಕ್ರಮ ನಡೆದಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಒಡತಿಯಾಗಿದ್ದಾರೆ. ಕೋರ್ಟ್ನಿಂದ ಅರೆಸ್ಟ್ ವಾರಂಟ್ ಜಾರಿ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸಿದ್ದ ಅವರು 18 ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ದಿವ್ಯಾ ಹಾಗರಗಿ ಸೇರಿದಂತೆ 6 ಆರೋಪಿಗಳಿಗೆ ವಾರಂಟ್ ಜಾರಿ ಮಾಡಲಾಗಿದೆ. ಇದೀಗ ತಾವೇ ಪೊಲೀಸರಿಗೆ ಶರಣಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವಾರದೊಳಗೆ ಸಿಐಡಿ ಮುಂದೆ ಹಾಜರಾಗುವಂತೆ ಆರೋಪಿಗಳಿಗೆ ಕಲಬುರಗಿಯ 3ನೇ JMFC ಕೋರ್ಟ್ ಸೂಚನೆ ನೀಡಿದೆ.
545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ರೇಟ್ ಫಿಕ್ಸ್ ಮಾಡಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ. ಈ ಪ್ರಕರಣದ ಕಿಂಗ್ಪಿನ್ ರುದ್ರಗೌಡ ಪಾಟೀಲ್ನಿಂದ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದರು. ತಮಗೆ ಬೇಕಾದವರು, ತಮ್ಮ ಜಾತಿಯವರಿಗೆ ಕಡಿಮೆ ಹಣ ಫಿಕ್ಸ್ ಮಾಡಿದ್ದರು. ಗನ್ಮ್ಯಾನ್ ಹಯ್ಯಾಳಿ ದೇಸಾಯಿರಿಂದ ಕೇವಲ 30 ಲಕ್ಷ ಪಡೆದಿದ್ದರು. ಶಾಸಕರ ಬಳಿ ಕೆಲಸ ಮಾಡುತ್ತಿದ್ದರಿಂದ ಕಡಿಮೆ ಹಣ ಫಿಕ್ಸ್ ಮಾಡಲಾಗಿತ್ತು. ತಮ್ಮದೇ ಜಾತಿಯ ಕೆಲ ಅಭ್ಯರ್ಥಿಗಳಿಗೆ ಕೂಡಾ ಕಡಿಮೆ ಹಣ ಪಡೆದಿದ್ದರು. ಗರಿಷ್ಠ 60 ಲಕ್ಷವರೆಗೆ ಡೀಲ್ ಮಾಡಿಕೊಂಡಿರುವ ಆರೋಪಿಗಳು ಅಭ್ಯರ್ಥಿಗಳಿಂದ ನೇರವಾಗಿ ಹಣ ಪಡೆದಿದ್ದರು. ಈ ಅಕ್ರಮದಲ್ಲಿ ಸಿಲುಕಬಾರದು ಎಂದು ಬ್ಯಾಂಕ್ ವಹಿವಾಟಿನ ಬದಲಾಗಿ ನೇರವಾಗಿ ಹಣ ಪಡೆದಿದ್ದರು.
545 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಈವರೆಗೆ 7 ಅಭ್ಯರ್ಥಿಗಳು ಸೇರಿದಂತೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತರ ಹೇಳಿದ ಆರೋಪಿಗಳಿಗಾಗಿ ಸಿಐಡಿ ಶೋಧ ನಡೆಸಿದೆ. ಲಾಡ್ಜ್ಗಳಲ್ಲಿ ಕುಳಿತು ಉತ್ತರ ಹೇಳುತ್ತಿದ್ದ ವಿಷಯ ತಜ್ಞರು ಅಕ್ರಮದಲ್ಲಿ ಕೋಚಿಂಗ್ ಕೇಂದ್ರ ನಡೆಸುವವರು ಇರುವ ಶಂಕೆ ವ್ಯಕ್ತವಾಗಿದೆ. ಬಂಧಿತ ಕಿಂಗ್ಪಿನ್ಗಳಿಂದ ಸಿಐಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೊಂದು ದಿವ್ಯ ಕೊಡುಗೆ! ’6 ವರ್ಷ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 ಪಿಎಸ್ಐಗಳು ಆಯ್ಕೆಯಾಗಿದ್ದಾರೆ ಮಹಾಸ್ವಾಮಿ!’