ಮತ್ತೊಂದು ದಿವ್ಯ ಕೊಡುಗೆ! ’6 ವರ್ಷ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 ಪಿಎಸ್​ಐಗಳು ಆಯ್ಕೆಯಾಗಿದ್ದಾರೆ ಮಹಾಸ್ವಾಮಿ!’

ಮತ್ತೊಂದು ದಿವ್ಯ ಕೊಡುಗೆ! ’6 ವರ್ಷ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 ಪಿಎಸ್​ಐಗಳು ಆಯ್ಕೆಯಾಗಿದ್ದಾರೆ ಮಹಾಸ್ವಾಮಿ!’
’6 ವರ್ಷದ ಹಿಂದೆಯೇ ದಿವ್ಯ ಹಾಗರಗಿ ಮೂಲಕ 16 ಮಂದಿ ಪಿಎಸ್​ಐಗಳು ಆಯ್ಕೆಯಾಗಿದ್ದಾರೆ ಮಹಾಸ್ವಾಮಿ!’

ಹಾಲಿ PSI ನೇಮಕಾತಿ ಅಕ್ರಮದ ಸಮ್ಮುಖದಲ್ಲಿ... 2016-17ರ ಬ್ಯಾಚ್ ನೇಮಕಾತಿಯಲ್ಲೂ ಅಕ್ರಮವೆಸಗಿರುವ ಆರೋಪ ಇದಾಗಿದೆ. ಹಳೆಯ ಪ್ರಕರಣದಲ್ಲಿ ಇದೇ ದಿವ್ಯಾ ಹಾಗರಗಿ ಮತ್ತು R.D. ಪಾಟೀಲ್​ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿಗೆ ಪತ್ರ ಬರೆದಿರುವ ಯಾದಗಿರಿಯ ಶ್ರೀನಿವಾಸ್ ಕಟ್ಟಿ ಎಬುವವರು 16 ಅಭ್ಯರ್ಥಿಗಳು ಹಣ ಕಟ್ಟಿ‌ ನೇಮಕವಾಗಿದ್ದಾರೆಂದು ನೇರವಾಗಿ ಆರೋಪಿಸಿದ್ದಾರೆ. ಆ 16 PSIಗಳ ಹೆಸರು, ಮೊಬೈಲ್ ಸಂಖ್ಯೆ ಸಮೇತ ದೂರಿನ ಪತ್ರ ಸಲ್ಲಿಸಿದ್ದಾರೆ.

TV9kannada Web Team

| Edited By: sadhu srinath

Apr 26, 2022 | 8:03 PM

ಬೆಂಗಳೂರು: ಪೊಲೀಸ್​ ಸಬ್​ ಇನ್ಸ್​ ಪೆಕ್ಟರ್​ (ಪಿಎಸ್​ಐ -PSI) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಿರುವ ಆರೋಪ ಹೊತ್ತು ಸದ್ಯಕ್ಕೆ ಪರಾರಿಯಾಗಿರುವ ದಿವ್ಯಾ ಹಾಗರಗಿ ಭಾನಗಡಿಗಳಿಗೆ ಕೊನೆ ಮೊದಲು ಇಲ್ಲವೆಂಬಂತಾಗಿದೆ. ಬೇಸಿಗೆಯ ಕಾವಿನಲ್ಲಿ ಒಂದೊಂದಾಗಿ ಹುತ್ತದಿಂದ ಹೊರಬರುವ ಹಾವುಗಳಂತೆ ‘ದಿವ್ಯಾ’ ಕೊಡುಗೆಗಳು ಹೊರಬೀಳುತ್ತಿವೆ. ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಯಾದಗಿರಿಯ ಶ್ರೀನಿವಾಸ ಕಟ್ಟಿ ಎಂಬುವವರು ಇದು ಮತ್ತೊಂದು ‘ದಿವ್ಯ’ ಕೊಡುಗೆ! ಆರು ವರ್ಷದ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 ಮಂದಿ ಪಿಎಸ್​ಐಗಳು ಆಯ್ಕೆಯಾಗಿದ್ದಾರೆ ಮಹಾಸ್ವಾಮಿ! ಅವರೆಲ್ಲರೂ ದುಡ್ಡು ಕೊಟ್ಟು ಆಯ್ಕಾಯಾಗಿದ್ದಾರೆ ಸ್ವಲ್ಪ ವಿಚಾರಿಸಿ ನೋಡಿ ಎಂದು ಆ ಹದಿನಾರೂ ಮಂದಿಯ ಹೆಸರುಗಳು ಮತ್ತು ಅವರ ಮೊಬೈಲ್ ನಂಬರುಗಳನ್ನು ಲಗತ್ತಿಸಿ, ಸಿಎಂಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ನಿಸ್ಪೃಹ ಐಪಿಎಸ್ ಅಧಿಕಾರಿ ಅಜಯ್​ ಕುಮಾರ್ ಸಿಂಗ್ ಸಾಹೇಬರು ಜಾರಿಗೆ ತಂದಿದ್ದ ಜೀರೋ ಪ್ರೂಫ್​​ ಪಿಎಸ್​ಐ ನೇಮಕಾತಿ ಭ್ರಷ್ಟರ ಮಧ್ಯೆ ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತಾಗಿದೆ. ಇಡೀ ದೇಶಕ್ಕೆ ಮಾದರಿಯಾಗಿರುವ ಪಿಎಸ್​ಐ ನೇಮಕಾತಿ ವ್ಯವಸ್ಥೆಯನ್ನೇ ಅಣಕಿಸುವಂತೆ ರಂಗೋಲಿ ಕೆಳಗೆ ನುಗ್ಗಿರುವ ನುಂಗುಬಾಕರು ಈಗಿನದಲ್ಲ; ಈ ಹಿಂದಿನಿಂದಲೂ ಅಕ್ರಮಗಳ ಸರಮಾಲೆಯನ್ನೇ ಪೋಣಿಸಿಕೊಂಡು ಬಂದಿದ್ದಾರೆ.

ಹಾಲಿ ಪ್ರಕರಣದ ಪರಾರಿ ಆರೋಪಿ ದಿವ್ಯಾ ಹಾಗರಗಿಯೇ ಹಿಂದಿನ ಬ್ಯಾಚ್​ನಲ್ಲೂ ಅಕ್ರಮ ವೆಸಗಿದ್ದಾರೆ ಎಂದು ದೂರುದಾರ ಶ್ರೀನಿವಾಸ ಕಟ್ಟಿ ಆರೋಪಿಸಿದ್ದಾರೆ. ಒಂದಷ್ಟು ಪ್ರೂಫ್​ ಸಮೇತ ಮತ್ತೊಂದು ಭ್ರಷ್ಟ ಪ್ರಕರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಂಗಳದಲ್ಲಿ ಎಸೆದಿದ್ದಾರೆ. ಯಾರೋ, ಏನೋ? ದೂರಿನಲ್ಲಿ ಹುರುಳು ಇದೆಯೋ, ಇಲ್ಲವೋ? ಅಷ್ಟಕ್ಕೂ ಪ್ರಕರಣ ಹಳೆಯದ್ದಾಗಿದ್ದು, ಅಂದು ಆಯ್ಕೆಯಾಗಿರುವ ಅಭ್ಯರ್ಥಿಗಳು ಕೆರಿಯರ್​ ರೆಕಾರ್ಡ್​ನಲ್ಲಿ ನಾಲ್ಕು ವರ್ಷಗಳ ಸೇವಾವಧಿ ದಾಖಲಾಗಿದೆ ಎಂದು ಸಿಎಂ ಬೊಮ್ಮಾಯಿ ಅವರು ಪ್ರಕರಣ ಕೈಬಿಡುತ್ತಾರೋ, ಅಥವಾ ಕೆಚ್ಚೆದೆಯಿಂದ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ, ಅನ್ಯಾಯಕ್ಕೊಳಗಾಗಿರುವ ಆಗಿನ ನೈಜ ಪ್ರತಿಭೆಗಳಿಗೆ ನ್ಯಾಯ ಒದಗಿಸುತ್ತಾರೋ ಕಾದು ನೊಡಬೇಕಿದೆ.

ಯಾದಗಿರಿಯ ಶ್ರೀನಿವಾಸ್ ಕಟ್ಟಿ ದೂರಿನ ಸಾರ ಹೀಗಿದೆ: 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದ ಸಮ್ಮುಖದಲ್ಲಿ 2016-17ರ ಬ್ಯಾಚ್ ನೇಮಕಾತಿಯಲ್ಲೂ ಅಕ್ರಮವೆಸಗಿರುವ ಆರೋಪ ಇದಾಗಿದೆ. ಹಳೆಯ ಪ್ರಕರಣದಲ್ಲಿ ಇದೇ ದಿವ್ಯಾ ಹಾಗರಗಿ ಮತ್ತು R.D. ಪಾಟೀಲ್​ ಅವರು ಅಕ್ರಮವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿಗೆ ಪತ್ರ ಬರೆದಿರುವ ಯಾದಗಿರಿಯ ಶ್ರೀನಿವಾಸ್ ಕಟ್ಟಿ ಅವರು 16 ಅಭ್ಯರ್ಥಿಗಳು ಹಣ ಕಟ್ಟಿ‌ ನೇಮಕವಾಗಿದ್ದಾರೆಂದು ನೇರವಾಗಿ ಆರೋಪ ಮಾಡಿದ್ದಾರೆ. ಆ 16 PSIಗಳ ಹೆಸರು, ಮೊಬೈಲ್ ಸಂಖ್ಯೆ ಸಮೇತ ದೂರಿನ ಪತ್ರ ಸಲ್ಲಿಸಿದ್ದಾರೆ.

2016-17 ಪಿಎಸ್ಐ ಬ್ಯಾಚ್ ನಲ್ಲಿಯೂ ಬ್ಲೂಟೂತ್ ಡಿವೈಸ್ ಮತ್ತು ಪತ್ರಿಕೆ ಸೋರಿಕೆ ಮಾಡಿ ಅಕ್ರಮ ಮಾಡಿದ್ದಾರೆ. ಆಯ್ಕೆ ಡೀಲ್ ಗೆ 16 ಅಭ್ಯರ್ಥಿಗಳು ತಲಾ 40 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಸ್ವತಃ ನೊಂದ ಅಭ್ಯರ್ಥಿಯೆಂದು ಕರೆದುಕೊಂಡಿರುವ ಯಾದಗಿರಿಯ ಶ್ರೀನಿವಾಸ ಕಟ್ಟಿಯಿಂದ ಸಿಎಂಗೆ ದೂರು ಸಲ್ಲಿಸಲಾಗಿದೆಯಂತೆ. 16 ಜನರ ವಿರುದ್ಧ ತನಿಖೆ ನಡೆಸಿ, ಹಾಲಿ ಕರ್ತವ್ಯದಿಂದ ವಜಾಗೊಳಿಸುವಂತೆ ಸಿಎಂಗೆ ಅವರು ಅಲವತ್ತುಕೊಂಡಿದ್ದಾರೆ. ಈ 16 ಸೆಲೆಕ್ಟೆಡ್​ ಕ್ಯಾಂಡಿಡೇಟ್​ ಗಳ ಪೈಕಿ ಕೆಲವರು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ಗಳಾಗಿ ಯಾದಗಿರಿಯ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಈಗಾಗಲೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರಂತೆ.

ಆದರೆ ಗಮನಿಸಿ.. ದೂರು ನೀಡಿರುವ ಶ್ರೀನಿವಾಸ್ ಯಾರು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಸಿಎಂ ಬೊಮ್ಮಾಯಿಗೆ ನೀಡಿರುವ ದೂರಿನ ಪ್ರತಿಯಂತೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಪತ್ರ ನಿಜಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ತಲುಪಿದೆಯಾ ಎಂಬುದೂ ಅಧಿಕೃತವಾಗಿ ದೃಢಪಟ್ಟಿಲ್ಲ.

Follow us on

Related Stories

Most Read Stories

Click on your DTH Provider to Add TV9 Kannada