ಲಾಡ್ಲೇ ಮಶಾಕ್ ದರ್ಗಾ; ಬಿಗಿ ಬಂದೋಬಸ್ತ್, ಘರ್ಷಣೆ ಭೀತಿಯಿಂದ ಮನೆ ಖಾಲಿ ಮಾಡಿದ ಮುಸ್ಲಿಂ ಕುಟುಂಬಗಳು

ದರ್ಗಾದಲ್ಲಿ ಪೂಜೆ ಸಲ್ಲಿಸಲು ಹಿಂದೂ, ಮುಸ್ಲಿಮರಿಗೆ ಕೋರ್ಟ್ ಅವಕಾಶ ನೀಡಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಉರುಸ್ ಆಚರಿಸಲು ಅವಕಾಶ ನೀಡಿದ್ದು, ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಶಿವಲಿಂಗ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.

Follow us
Ganapathi Sharma
|

Updated on:Feb 18, 2023 | 11:04 AM

ಕಲಬುರಗಿ: ಆಳಂದ ತಾಲೂಕಿನ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ (Ladle Mashak Dargah) ಶಿವಲಿಂಗಕ್ಕೆ ಇಂದು ಪೂಜೆ ಸಲ್ಲಿಸುವ ಕಾರಣ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದಾಗ್ಯೂ ಕಳೆದ ವರ್ಷದ ಸಂಭವಿಸಿದ್ದ ಘರ್ಷಣೆಯ ಆತಂಕದಿಂದ ಇನ್ನೂ ಹೊರಬರದ ಅನೇಕ ಮುಸ್ಲಿಂ ಕುಟುಂಬಗಳು (Muslim Families) ಮನೆಗೆ ಬೀಗ ಹಾಕಿ ಬೇರೆಡೆ ತೆರಳಿವೆ. ಕಳೆದ ವರ್ಷ ಘರ್ಷಣೆ ಬಳಿಕ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಹೀಗಾಗಿ ಈ ವರ್ಷ ಭೀತಿಯಿಂದ ಅನೇಕ ಕುಟುಂಬಗಳು ಮನೆಗೆ ಬೀಗ ಹಾಕಿ ತೆರಳಿವೆ. ಈ ಮಧ್ಯೆ, ದರ್ಗಾದ ಸುತ್ತಮುತ್ತ ಪ್ರತಿಯೊಂದು ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದು, ತಪಾಸಣೆಯನ್ನೂ ಬಿಗಿಗೊಳಿಸಿದ್ದಾರೆ. ಭದ್ರತೆಗೆ 1,400 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಆಳಂದ ಪಟ್ಟಣ ವ್ಯಾಪ್ತಿಯಲ್ಲಿ ಚೆಕ್​ ಪೋಸ್ಟ್​​ಗಳನ್ನು ತೆರೆಯಲಾಗಿದೆ. ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾಹಿತಿ ನೀಡಿದ್ದಾರೆ.

ದರ್ಗಾದಲ್ಲಿ ಪೂಜೆ ಸಲ್ಲಿಸಲು ಹಿಂದೂ, ಮುಸ್ಲಿಮರಿಗೆ ಕೋರ್ಟ್ ಅವಕಾಶ ನೀಡಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಉರುಸ್ ಆಚರಿಸಲು ಅವಕಾಶ ನೀಡಿದ್ದು, ಮುಸ್ಲಿಂ ಸಮುದಾಯದ 15 ಜನರಿಗೆ ಉರುಸ್​ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಶಿವಲಿಂಗ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಹಿಂದೂ ಸಮುದಾಯದ 15 ಜನ ಪೂಜೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಉರುಸ್ ಆರಂಭ

ಈ ಮಧ್ಯೆ, ದರ್ಗಾದಲ್ಲಿ ಉರುಸ್ ಆರಂಭವಾಗಿದ್ದು, ಮುಸ್ಲಿಂ ಸಮುದಾಯದ ಜನರು ದರ್ಗಾ ಪ್ರವೇಶಿಸಿದ್ದಾರೆ. ದರ್ಗಾದ ಎರಡನೇ ಗೇಟ್ ಮೂಲಕ ಮುಸ್ಲಿಂ ಸಮುದಾಯದ ಜನರು ಒಳ ಪ್ರವೇಶಿಸಿದ್ದಾರೆ. ಪೊಲಿಸ್ ಸಿಬ್ಬಂದಿ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿ ಒಳಗೆ ಬಿಟ್ಟಿದ್ದಾರೆ. ಪರವಾನಗಿ ಪಡೆದ ಹದಿನೈದು ಜನರಿಗೆ ಮಾತ್ರ ದರ್ಗಾದೊಳಗೆ ಹೋಗಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಇಂದು ಪೂಜೆ, ಆಳಂದ ಪಟ್ಟಣದಲ್ಲಿ ನಿಷೇದಾಜ್ಞೆ ಜಾರಿ

ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅವಕಾಶ ನೀಡಿದ್ದ ವಕ್ಫ್ ಟ್ರಿಬ್ಯುನಲ್ ಆದೇಶವನ್ನು ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿತ್ತು. ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಹದಿನೈದು ಜನರಿಗೆ ಅವಕಾಶ ನೀಡಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ದರ್ಗಾ ಕಮೀಟಿ, ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ಆಲಿಸಿದ ಹೈಕೋರ್ಟ್​ ನ್ಯಾಯಮೂರ್ತಿ ಜೆ.ಎಂ.ಖಾಜಿ, ಶಿವಲಿಂಗ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.

ಕಳೆದ ವರ್ಷ ಸಂಭವಿಸಿತ್ತು ಭಾರೀ ಘರ್ಷಣೆ

ಕಳೆದ ವರ್ಷ ಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾ ರಣರಂಗಣವಾಗಿ ಮಾರ್ಪಟ್ಟಿತ್ತು. ಕಳೆದ ವರ್ಷ ಶಿವರಾತ್ರಿ ಹಬ್ಬದಂದು ಜಿಲ್ಲಾಡಳಿತದ ಆದೇಶದ ಮೇಲೆ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಮೂಡ್, ಕಡಗಂಚಿ ಮಠದ ಸ್ವಾಮೀಜಿ ಸೇರಿದಂತೆ 10 ಜನರು, ದರ್ಗಾದಲ್ಲಿರುವ ಲಿಂಗಕ್ಕೆ ಪೂಜೆಗೆ ಹೋಗುತ್ತಿದ್ದರು. ಈ ವೇಳೆ ಮುಸ್ಲಿಂ ಜನರು ಏಕಾಏಕಿ ಕಲ್ಲು ತೂರಾಟ ನಡೆಸಿದರು. ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಕಲಬುರಗಿ ಜಿಲ್ಲಾಧಿಕಾರಿ ಕಾರು, ಶಾಸಕ ಸುಭಾಷ್ ಗುತ್ತೇದಾರ್ ಅವರ ಕಾರು ಸೇರಿದಂತೆ ಅನೇಕ ಕಾರಿನ ಗಾಜುಗಳು ಪುಡಿಪುಡಿಯಾಗಿದ್ದವು. ಕೆಲ ಪೊಲೀಸ್ ಸಿಬ್ಬಂದಿ, ಹಾಗೇ ಮಾಧ್ಯಮದವರಿಗೆ ಕೂಡ ಘಟನೆಯಲ್ಲಿ ಗಾಯಗಳಾಗಿದ್ದವು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 am, Sat, 18 February 23