ಕಲಬುರಗಿ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ರೈಲು-ಪ್ಲ್ಯಾಟ್ಪಾರ್ಮ್ ನಡುವೆ ಸಿಲುಕಿದ ವ್ಯಕ್ತಿ!
ಚಲಿಸುತ್ತಿದ್ದ ರೈಲು ಹತ್ತಲು ಹೋದ ವ್ಯಕ್ತಿಯೊಬ್ಬರು ರೈಲು ಮತ್ತು ಪ್ಲ್ಯಾಟ್ಫಾರ್ಮ್ ನಡುವೆ ಸಿಲುಕಿ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯು ಚಿತ್ತಾಪುರ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕಲಬುರಗಿ: ಚಲಿಸುತ್ತಿದ್ದ ರೈಲು ಹತ್ತಲು ಹೋದ ವ್ಯಕ್ತಿಯೊಬ್ಬರು ರೈಲು ಮತ್ತು ಪ್ಲ್ಯಾಟ್ಫಾರ್ಮ್ ನಡುವೆ ಸಿಲುಕಿ ಗಾಯಗೊಂಡ ಘಟನೆ ಜಿಲ್ಲೆಯು ಚಿತ್ತಾಪುರ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ (Chittapur town railway station) ನಡೆದಿದೆ. ಕಲಗುರ್ತಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಗುಂಡಪ್ಪ (44) ಗಾಯಗೊಂಡ ವ್ಯಕ್ತಿ. ಘಟನೆಯಲ್ಲಿ ಗುಂಡಪ್ಪ ಅವರ ಕಾಲು ಮತ್ತು ಬಲಭಾಗದ ಸೊಂಟಕ್ಕೆ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ಯಾಸೆಂಜರ್ ರೈಲು ಚಿತ್ತಾಪುರದಿಂದ ಹೈದರಾಬಾದ್ಗೆ ಸಂಚಾರ ಆರಂಭಿಸಿತ್ತು. ಈ ವೇಳೆ ಹತ್ತಲು ಹೋದ ಗುಂಡಪ್ಪ ಕಾಲು ಜಾರಿ ರೈಲು ಮತ್ತು ಪ್ಲ್ಯಾಟ್ಫಾರ್ಮ್ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಆರ್ಪಿಎಫ್ ಸಿಬ್ಬಂದಿ ಗುಂಡಪ್ಪ ಅವರನ್ನು ಮೇಲೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಗುಂಡಪ್ಪ ಅವರನ್ನು ಚಿತ್ತಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಘಟನೆ ಸಂಬಂಧ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Uttar Pradesh: ಗೂಡ್ಸ್ ರೈಲು ಮೈ ಮೇಲೆ ಹರಿದರೂ ಪವಾಡವೆಂಬಂತೆ ಬದುಕಿ ಬಂದ ಮಹಿಳೆ
ವರ್ಷದ ಆರಂಭದಲ್ಲಿ ಕಲಬುರಗಿ ರೈಲು ನಿಲ್ದಾಣದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ವಿಡಿಯೋ ಕೂಡ ವೈರಲ್ ಆಗಿತ್ತು. ಯುವತಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸುತ್ತಿದ್ದಳು. ಈ ವೇಳೆ ಸಾಧ್ಯವಾಗದಿದ್ದಾಗ ಭದ್ರತಾ ಸಿಬ್ಬಂದಿ ಆಕೆಯನ್ನು ರೈಲಿಗೆ ಹತ್ತುವುದನ್ನು ತಡೆದು ಪಕ್ಕಕ್ಕೆ ಕೊಂಡೊಯ್ದರು. ಇದೇ ಹೊತ್ತಿಗೆ ಸಿಬ್ಬಂದಿ ಹಿಂಬದಿ ಮೂಲಕ ಸುಮಾರು 50 ವರ್ಷದ ಮಹಿಳೆಯೊಬ್ಬರು ಅದೇ ರೈಲಿಗೆ ಹತ್ತಲು ಮುಂದಾಗಿ ಕಾಲು ಜಾರಿ ಬಿದ್ದಿದ್ದರು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮತ್ತು ಕಾರ್ಮಿಕರೊಬ್ಬರು ಮಹಿಳೆ ಹಳಿಗೆ ಬೀಳದಂತೆ ಎಳೆದು ರಕ್ಷಣೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ