ಕಲಬುರಗಿ: ಅಳಂದ ಭೂತಾಯಿ ಸಿರಿಧಾನ್ಯಗಳ ರೈತ ಉತ್ಪಾದಕ ಕಂಪನಿ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ
ದೇಶದಲ್ಲಿ ಅನೇಕ ಕಡೆ ಇದೀಗ ರೈತ ಉತ್ಪಾದಕ ಕಂಪನಿಗಳು ಆರಂಭವಾಗಿವೆ. ಇದಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಸಹಾಯ ಮತ್ತು ನೆರವನ್ನು ನೀಡುತ್ತದೆ. ರೈತರು ತಾವು ಬೆಳೆದ ಬೆಳೆಯನ್ನು ಮದ್ಯವರ್ತಿಗಳಿಗೆ ನೀಡದೆ, ತಾವೇ ಅವುಗಳನ್ನು ಸಂಸ್ಕರಣೆ ಮಾಡಿ, ನೇರವಾಗಿ ಅನೇಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಲು ಅವಕಾಶವಿದೆ.
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮ ಇಂದು ಪ್ರಸಾರವಾಗಿದೆ. ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್ ನಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿರುವ ಆಳಂದ ಭೂತಾಯಿ ಸಿರಿಧಾನ್ಯಗಳ ರೈತ ಉತ್ಪಾದಕ ಕಂಪನಿ (Alanda Bhootai Millets Farmer Producer Company)ಯನ್ನು ಪ್ರಸ್ತಾಪಿಸಿ, ತಮ್ಮ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಹೌದು ರೈತ ಉತ್ಫಾದಕ ಕಂಪನಿಗಳು ಮತ್ತು ಸಿರಿಧಾನ್ಯಗಳ ಬಗ್ಗೆ ತಮ್ಮ ಮಾತುಗಳನ್ನು ಹೇಳುತ್ತಿದ್ದ ಪ್ರಧಾನಿ ಮೋದಿ (Narendra Modi), ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ರೈತ ಉತ್ಪಾದಕ ಕಂಪನಿಗಳು, ಸಿರಿಧಾನ್ಯಗಳನ್ನು ಬಳಸಿ ಹೇಗೆ ಅಭಿವೃದ್ದಿಯಾಗಿವೆ ಅನ್ನೋದನ್ನು ಪ್ರಸ್ತಾಪಿಸಿದ್ದಾರೆ.
ಹೌದು, ದೇಶದಲ್ಲಿ ಅನೇಕ ಕಡೆ ಇದೀಗ ರೈತ ಉತ್ಪಾದಕ ಕಂಪನಿಗಳು ಆರಂಭವಾಗಿವೆ. ಇದಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಸಹಾಯ ಮತ್ತು ನೆರವನ್ನು ನೀಡುತ್ತದೆ. ರೈತರು ತಾವು ಬೆಳೆದ ಬೆಳೆಯನ್ನು ಮದ್ಯವರ್ತಿಗಳಿಗೆ ನೀಡದೆ. ತಾವೇ ಅವುಗಳನ್ನು ಸಂಸ್ಕರಣೆ ಮಾಡಿ ನೇರವಾಗಿ ಅನೇಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಲು ಅವಕಾಶವಿದೆ. ಇದೇ ಉದ್ದೇಶದಿಂದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ಆಳಂದ ಭೂತಾಯಿ ಸಿರಿಧಾನ್ಯಗಳ ರೈತ ಉತ್ಪಾದಕ ಕಂಪನಿ ಎರಡು ವರ್ಷದ ಹಿಂದೆ ಆರಂಭವಾಗಿದೆ. ಆರಂಭವಾದ ಎರಡೇ ವರ್ಷಕ್ಕೆ ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ತಡಕಲ್ ಗ್ರಾಮದಲ್ಲಿ ಐನೂರಕ್ಕೂ ಹೆಚ್ಚು ರೈತರು ಸೇರಿಕೊಂಡು ಆಳಂದ ಭೂತಾಯಿ ಸಿರಿಧಾನ್ಯಗಳ ರೈತ ಉತ್ಪಾದಕ ಕಂಪನಿಯನ್ನು ಎರಡು ವರ್ಷದ ಹಿಂದೆ ಆರಂಭಿಸಿದ್ದಾರೆ. ಹೀಗಾಗಿ ತಡಕಲ್ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಕಂಪನಿ, ಸಿರಿಧಾನ್ಯಗಳನ್ನು ಬೆಳೆಯಲು ಬೀಜಗಳನ್ನು ನೀಡುತ್ತದೆ. ನಂತರ ರೈತರು ಬೆಳೆದ ಸಿರಿಧಾನ್ಯಗಳನ್ನು ಕಂಪನಿಯೇ ಖರೀದಿಸುತ್ತದೆ.
ಇದನ್ನೂ ಓದಿ: Mann Ki Baat: ಮನ್ ಕೀ ಬಾತ್ನಲ್ಲಿ ಕರ್ನಾಟಕದವರ ಬಗ್ಗೆ ಮೋದಿ ಪ್ರಸ್ತಾಪಿಸಿದ್ದು ಇವು
ತಡಕಲ್ ಗ್ರಾಮದಲ್ಲಿಯೇ ಪುಟ್ಟ ಶೆಡ್ನಲ್ಲಿ ಸಂಸ್ಕರಣಾ ಯಂತ್ರಗಳನ್ನು ಇಟ್ಟುಕೊಂಡು ಅಲ್ಲಿಯೇ ಅವುಗಳನ್ನು ಸಂಸ್ಕರಣೆ ಮಾಡುತ್ತಾರೆ ಹೀಗೆ ಸಂಸ್ಕರಣೆ ಮಾಡಿದ ಸಾಮಾ, ಬರಗು, ನವಣೆ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ಪಾಕೇಟ್ ಮಾಡಿ ಮಾರಾಟ ಮಾಡುತ್ತಾರೆ. ರಾಜ್ಯದ ಬೆಳಗಾವಿ, ರಾಯಚೂರು ಸೇರಿದಂತೆ ಅನೇಕ ಅಂಗಡಿಗಳಿಗೆ, ಹೈದ್ರಾಬಾದ್ನಲ್ಲಿರುವ ಕೆಲ ಅಂಗಡಿಗಳಿಗೆ, ಕಂಪನಿಗಳಿಗೆ ಅವುಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ಸಿರಿಧಾನ್ಯಗಳಿಂದ ಬಿಸ್ಕಿಟ್ ಸೇರಿದಂತೆ ಕೆಲ ಪದಾರ್ಥಗಳನ್ನು ಸಿದ್ದಗೊಳಿಸಿ ಮಾರಾಟ ಮಾಡುವ ಕೆಲಸವನ್ನು ಕೂಡಾ ಕಂಪನಿ ಮಾಡುತ್ತಿದೆ.
ಇನ್ನು ಸದ್ಯ ನೂರು ಎಕರೆ ಪ್ರದೇಶದಲ್ಲಿ 600ಕ್ಕೂ ಹೆಚ್ಚು ರೈತರು ವಿವಿಧ ರೀತಿಯ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷ 500 ಕ್ವಿಂಟಲ್ನಷ್ಟು ಸಿರಿಧಾನ್ಯಗಳನ್ನು ರೈತರು ಬೆಳೆದಿದ್ದರು. ಅವುಗಳನ್ನೆಲ್ಲಾ ಆಳಂದ ಭೂತಾಯಿ ರೈತ ಉತ್ಪಾದಕ ಕಂಪನಿಯಿಂದಲೇ ಖರೀದಿಸಿ, ನಂತರ ಮಾರಾಟ ಮಾಡಲಾಗಿತ್ತು. ಆದರೆ ಈ ಬಾರಿ ಅತಿವೃಷ್ಟಿಯಿಂದ ಹೆಚ್ಚಿನ ಬೆಳೆ ಹಾಳಾಗಿ ಹೋಗಿದ್ದು, ಅಲ್ಲಲ್ಲಿ ಕೆಲ ರೈತರು ಸಿರಿಧಾನ್ಯಗಳನ್ನು ಬೆಳೆದು ಕಂಪನಿಗೆ ಮಾರಾಟ ಮಾಡಿದ್ದಾರೆ.
ಇದನ್ನೂ ಓದಿ: Mann Ki Baat: 100ನೇ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಲೊಗೊ, ಜಿಂಗಲ್ ಆಹ್ವಾನ; ಒಟ್ಟು 1.11 ಲಕ್ಷ ಬಹುಮಾನ
ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸುವದರ ಜೊತೆಗೆ ಅವರು ಬೆಳೆದ ಸಿರಿಧಾನ್ಯಗಳನ್ನು ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡುವ ಯೋಜನೆಯನ್ನು ಆಳಂದ ಭೂತಾಯಿ ಸಿರಿಧಾನ್ಯ ರೈತ ಉತ್ಫಾದಕ ಕಂಪನಿ ಹೊಂದಿದೆ. ವಿಶೇಷವೆಂದರೆ ಈ ಕಂಪನಿಯ ಎಲ್ಲಾ ಜವಾಬ್ದಾರಿಗಳನ್ನು ನಿವರ್ಹಿಸುವದು ಕೂಡಾ ರೈತರೇ.
ನನ್ನ ಸ್ವಂತ ಗ್ರಾಮವಾದ ತಡಕಲ್ನಲ್ಲಿ ರೈತರು ಸಿರಿಧಾನ್ಯಗಳನ್ನು ಬೆಳೆದು, ತಾವೇ ರೈತ ಉತ್ಫಾದಕ ಕಂಪನಿ ಆರಂಭಿಸಿ, ಸುಸ್ಥಿರ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಅವರು ನಮ್ಮ ಪುಟ್ಟ ಗ್ರಾಮದ ರೈತರ ಕಾರ್ಯವನ್ನು ಮೆಚ್ಚಿದ್ದು ಹೆಚ್ಚಿನ ಖುಷಿ ತಂದಿದೆ. ಜೊತೆಗೆ ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಅಂತಿದ್ದಾರೆ ಆಳಂದ ಶಾಸಕ ಸುಭಾಷ್ ಗುತ್ತೆದಾರ್.
ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ