ಜಾನುವಾರುಗಳಿಗೆ ಸಿಗದ ಚಿಕಿತ್ಸೆ: ನಿಂತಲ್ಲಿಯೇ ಹಾಳಾಗುತ್ತಿರುವ ತುರ್ತು ಪಶು ಚಿಕಿತ್ಸಾ ವಾಹನಗಳು
ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ಪ್ರತಿ ತಾಲೂಕಿಗೆ ಒಂದರಂತೆ ತುರ್ತು ಪಶು ಚಿಕಿತ್ಸಾ ವಾಹನಗಳನ್ನು ನೀಡಿತ್ತು. ಆದರೆ ಗುತ್ತಿಗೆ ಪಡೆದ ಏಜೆನ್ಸಿ ಇನ್ನೂ ಕಾರ್ಯನಿರ್ವಹಣೆ ಆರಂಭಿಸದೇ ಇದಿದ್ದಿದ್ದರಿಂದ ನೂರಾರು ಪಶು ಚಿಕಿತ್ಸಾ ಆ್ಯಂಬುಲೆನ್ಸ್ಗಳು ತುಕ್ಕುಹಿಡಿಯುತ್ತಿವೆ.
ಕಲಬುರಗಿ, ಜುಲೈ 16: ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆದರೆ ಯೋಜನೆಗಳು ಸರಿಯಾಗಿ ಕಾರ್ಯರೂಪಕ್ಕೆ ಬಾರದೇ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ವ್ಯರ್ಥವಾಗುತ್ತದೆ. ಪಶು ಸಂಗೋಪನಾ ಇಲಾಖೆಯ (Animal Husbandry Department) ಯೋಜನೆಯೊಂದು ಸರ್ಕಾರದ ನಿರ್ಲಕ್ಷ್ಯದಿಂದ ಹಳ್ಳ ಹಿಡದಿದೆ. ಹೌದು, ರಾಜ್ಯದಲ್ಲಿ ಜನರಿಗೆ ತೊಂದರೆಯಾದರೆ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲು 108 ಆ್ಯಂಬುಲೆನ್ಸ್ ವ್ಯವಸ್ಥೆಯಿದೆ. ಇದೇ ಮಾದರಿಯಲ್ಲಿ ಜಾನುವಾರುಗಳಿಗೆ ಖಾಯಿಲೆ ಬಂದರೆ, ಅವು ಇದ್ದಲ್ಲಿಯೇ ಹೋಗಿ ಚಿಕಿತ್ಸೆ ನೀಡಬೇಕು. ಆ ಮೂಲಕ ಜಾನುವಾರುಗಳಿಗೆ ಮತ್ತು ಅವುಗಳನ್ನು ಸಾಕಿರುವ ರೈತರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಹಿಂದಿನ ಬಿಜೆಪಿ (BJP) ಸರ್ಕಾರ ಪ್ರತಿ ತಾಲೂಕಿಗೆ ಒಂದರಂತೆ ತುರ್ತು ಪಶು ಚಿಕಿತ್ಸಾ ವಾಹನಗಳನ್ನು (Emergency Veterinary Vehicle) ನೀಡಿತ್ತು. ಆದರೆ ಗುತ್ತಿಗೆ ಪಡೆದ ಏಜೆನ್ಸಿ ಇನ್ನು ತನ್ನ ಕಾರ್ಯನಿರ್ವಹಣೆ ಆರಂಭಿಸದೇ ಇದಿದ್ದಿದ್ದರಿಂದ, ನಿಂತಲ್ಲಿಯೇ ನೂರಾರು ಪಶು ಚಿಕಿತ್ಸಾ ಆ್ಯಂಬುಲೆನ್ಸ್ಗಳು ಹಾಳಾಗಿ ಹೋಗುತ್ತಿವೆ.
ಹಾಳಾಗುತ್ತಿರುವ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು
ರಾಜ್ಯ ಪಶು ಸಂಗೋಪನಾ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 2023 ರ ಮಾರ್ಚ್ನಲ್ಲಿ ತುರ್ತು ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸಲಾಗಿತ್ತು. ರಾಜ್ಯದಲ್ಲಿ 108 ಮಾದರಿಯಲ್ಲಿ, ಜಾನುವಾರುಗಳಿಗೆ ಗಂಭೀರ ಖಾಯಿಲೆ ಬಂದರೆ ಅವುಗಳು ಇದ್ದಲ್ಲಿಯೇ ಹೋಗಿ ಚಿಕಿತ್ಸೆ ನೀಡಬೇಕು ಅನ್ನೋ ಉದ್ದೇಶದಿಂದ ಹಿಂದಿನ ಬಿಜೆಪಿ ಈ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು. ಜಾನುವಾರುಗಳನ್ನು ಪಶು ಚಿಕಿತ್ಸಾ ಕೇಂದ್ರಕ್ಕೆ ತರಲು ಕಷ್ಟಪಡುವ ರೈತರಿಗೆ ನೆರವಾಗುವ ಉದ್ದೇಶ ಕೂಡಾ ಸರ್ಕಾರದ ಈ ಯೋಜನೆಯ ಹಿಂದಿತ್ತು. ಅದಕ್ಕಾಗಿ ರಾಜ್ಯದ ಪ್ರತಿಯೊಂದು ತಾಲೂಕಿಗೆ ಒಂದೊಂದರಂತೆ 290 ತುರ್ತು ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸಿ ನೀಡಲಾಗಿತ್ತು.
ಕಳೆದ ಮಾರ್ಚ್ನಲ್ಲಿ ರಾಜ್ಯಾದ್ಯಂತ ಈ ಪಶು ಚಿಕಿತ್ಸಾ ವಾಹನಗಳಿಗೆ ಸರ್ಕಾರ ಚಾಲನೆ ನೀಡಿತ್ತು. ಆದರೆ ಚಾಲನೆ ನೀಡಿ ನಾಲ್ಕು ತಿಂಗಳಾದರು ಕೂಡಾ ಒಂದೇ ಒಂದು ತುರ್ತು ಪಶು ಚಿಕಿತ್ಸಾ ವಾಹನಗಳು ರಸ್ತೆಗಿಳದಿಲ್ಲ. ಕಲಬುರಗಿ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿಯೇ ನಿಂತಲ್ಲಿಯೇ ನಿಂತಿವೆ. ಕೋಟ್ಯಂತರ ರೂಪಾಯಿ ಹಣ ಖರ್ಚಾದರೂ ಅವುಗಳ ಬಳಕೆ ಇಲ್ಲದಂತಾಗಿದ್ದು, ನಿಂತಲ್ಲಿಯೇ ತುಕ್ಕು ಹಿಡಿದು ಹಾಳಾಗುತ್ತಿವೆ.
ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್: ಮಹಿಳೆಯರಿಂದ ತುಂಬಿದ ದೇವಸ್ಥಾನಗಳು; ಸಿದ್ದು ಕೊಂಡಾಡಿದ ಮಹಿಳೆ
ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದ್ದ ಸರ್ಕಾರ
ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳ ನಿರ್ವಹಣೆಯನ್ನು ಹಿಂದಿನ ಸರ್ಕಾರ ಮಹರಾಷ್ಟ್ರ ಮೂಲದ ಎಜುಸ್ಪಾರ್ಕ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಅನ್ನೋ ಕಂಪನಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ಕಂಪನಿಯೇ, ವಾಹನಗಳಿಗೆ ಓರ್ವ ಚಾಲನಕ ನೇಮಕ, ಒರ್ವ ಪಶು ವೈದ್ಯನ ನೇಮಕ ಮಾಡಬೇಕು. ಪಶು ಸಂಗೋಪನಾ ಇಲಾಖೆಯ ತುರ್ತು ಸಹಾಯವಾಣಿಯಾಗಿರುವ 1962 ಗೆ ಕರೆ ಬಂದರೆ ಆ ಕರೆಗಳ ಆಧಾರದ ಮೇಲೆ ಮಾಹಿತಿ ಪಡೆದು, ತುರ್ತು ಚಿಕಿತ್ಸೆ ಅವಶ್ಯವಿರುವ ಜಾನುವಾರುಗಳು ಇದ್ದಲ್ಲಿಯೇ ಹೋಗಿ ಅವುಗಳಿಗೆ ಚಿಕಿತ್ಸೆ ನೀಡಬೇಕು ಅನ್ನೋ ಕಂಡಿಷನ್ ಮೇಲೆ ಗುತ್ತಿಗೆ ನೀಡಲಾಗಿದೆಯಂತೆ.
ಆದರೆ ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿವರಗೆ ತನ್ನ ಸೇವೆಯನ್ನು ಆರಂಭಿಸಿಲ್ಲ. ಇನ್ನು ಸರ್ಕಾರಕ್ಕೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕೂಡಾ ನೀಡಿದ್ದಾರಂತೆ. ಆದರೆ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆದಿದೆ. ಯಾವ ಕಾರಣಕ್ಕಾಗಿ ಏಜೇನ್ಸಿ ಇನ್ನು ಕೆಲಸ ಆರಂಭಿಸಿಲ್ಲಾ ಅನ್ನೋದು ಗೊತ್ತಿಲ್ಲಾ ಎಂದು ಕಲಬುರಗಿ ಜಿಲ್ಲಾ ಪಶು ಸಂಗೋಪನಾ ಇಲಾಕೆಯ ಉಪನಿರ್ದೇಶಕ ಸಿರಾಜ್ ಆವಟಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಜಾನುವಾರುಗಳು ಮತ್ತು ಕುರಿ ಮೃತಪಟ್ಟರೆ ಹತ್ತು ಸಾವಿರ ಕೊಡುವುದಾಗಿ ಹೇಳಿದ್ದಾರೆ. ಆದರೆ ಅವುಗಳು ಸತ್ತ ಮೇಲೆ ಹಣ ಕೊಡುವ ಬದಲು ಇದ್ದಾಗಲೇ ಅವುಗಳಿಗೆ ಚಿಕಿತ್ಸೆ ಸಿಗುವಂತಾಗಬೇಕು. ಕೂಡಲೇ ತುರ್ತು ಪಶು ಚಿಕಿತ್ಸಾ ವಾಹನಗಳು ಬಳಕೆಗೆ ಬರಲಿ. ಆ ಮೂಲಕ ಸೂಕ್ತ ಸಮಯದಲ್ಲಿ ಚಿಕಿತ್ಸೆ ಇಲ್ಲದೇ ಸಾಯುತ್ತಿರುವ ಜಾನುವಾರುಗಳ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಅಂತ ರೈತ ಆದಿನಾಥ್ ಹೀರಾ ಆಗ್ರಹಿಸಿದ್ದಾರೆ.
ಸರ್ಕಾರ ಈ ಯೋಜನೆಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದೆ. ರಾಜ್ಯದ ಎಲ್ಲಾ ತಾಲೂಕಿಗೆ ಈಗಾಗಲೇ ತುರ್ತು ಪಶು ಚಿಕಿತ್ಸಾ ವಾಹನಗಳನ್ನು ನೀಡಲಾಗಿದೆ. ಆದರೆ ಗುತ್ತಿಗೆ ಪಡೆದ ಸಂಸ್ಥೆ ಕೆಲಸ ಆರಂಭಿಸದೇ ಇದ್ದಿದ್ದರಿಂದ, ಯೋಜನೆ ಹಳ್ಳ ಹಿಡದಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು, ಯೋಜನೆ ಜಾರಿಗೊಳಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Sun, 16 July 23