PSI Recruitment Scam: ಕಿಂಗ್​ಪಿನ್​ ರುದ್ರಗೌಡಗೆ ಸಿಐಡಿ ಗ್ರಿಲ್​, ಆರೋಪಿ ಮಂಜುನಾಥ ನಾಪತ್ತೆ, ಪ್ರಿಯಾಂಕ್ ಖರ್ಗೆ ವಿಚಾರಣೆ ಸಾಧ್ಯತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 25, 2022 | 8:34 AM

ಕರ್ನಾಟಕ ರಾಜಕಾರಣದಲ್ಲಿ ಪ್ರಸ್ತುತ ಬಿಸಿಬಿಸಿ ಚರ್ಚೆಯ ವಿಷಯವಾಗಿರುವ 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ.

PSI Recruitment Scam: ಕಿಂಗ್​ಪಿನ್​ ರುದ್ರಗೌಡಗೆ ಸಿಐಡಿ ಗ್ರಿಲ್​, ಆರೋಪಿ ಮಂಜುನಾಥ ನಾಪತ್ತೆ, ಪ್ರಿಯಾಂಕ್ ಖರ್ಗೆ ವಿಚಾರಣೆ ಸಾಧ್ಯತೆ
ಶಾಸಕ ಪ್ರಿಯಾಂಕ್ ಖರ್ಗೆ
Follow us on

ಕಲಬುರ್ಗಿ: ಕರ್ನಾಟಕ ರಾಜಕಾರಣದಲ್ಲಿ ಪ್ರಸ್ತುತ ಬಿಸಿಬಿಸಿ ಚರ್ಚೆಯ ವಿಷಯವಾಗಿರುವ 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರನ್ನು ಸಿಐಡಿ ಇಂದು (ಏಪ್ರಿಲ್ 25) ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿ ಡಿವೈಎಸ್​ಪಿ ನರಸಿಂಹಮೂರ್ತಿ ಎದುರು ಪ್ರಿಯಾಂಕ್​ ಖರ್ಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಪಿಎಸ್​ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿದ್ದ ಖರ್ಗೆ, ಅಕ್ರಮದ ಬಗ್ಗೆ ತಮ್ಮಲ್ಲಿ ಸಾಕ್ಷ್ಯವಿದೆ ಎಂದಿದ್ದರು. ಸಾಕ್ಷ್ಯಾಧಾರ, ದಾಖಲೆ ಒದಗಿಸುವಂತೆ ಸಿಐಡಿ ನೊಟೀಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಖರ್ಗೆ ಅವರು ಸಿಐಡಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಅಕ್ರಮದ ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ನನ್ನು ಸಿಐಡಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಪಿಎಸ್​ಐ ಪರೀಕ್ಷೆಯೂ ಸೇರಿದಂತೆ ರಾಜ್ಯದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದರೂ ರುದ್ರಗೌಡ ಪಾಟೀಲ್ ಗ್ಯಾಂಗ್​ ಡೀಲ್ ಮಾಡುತ್ತಿತ್ತು. ನೇಮಕಾತಿ ವಿಭಾಗದಿಂದ ಹಿಡಿದು ಕೊಠಡಿ ಮೇಲ್ವಿಚಾರಕರವರೆಗೂ ವಿವಿಧ ಹಂತಗಳಲ್ಲಿ ವ್ಯವಸ್ಥಿತವಾಗಿ ಡೀಲ್ ಕುದುರಿಸುತ್ತಿದ್ದ ಈ ಆರೋಪಿಗಳ ಕೃಪೆಯಿಂದ ನೂರಾರು ಜನರು ಸರ್ಕಾರಿ ನೌಕರರಾಗಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಜನರ ವಿರುದ್ಧ ಸರ್ಕಾರ ಮುಂದಿನ ದಿನಗಳಲ್ಲಿ ಹೇಗೆ ಕ್ರಮ ಜರುಗಿಸಲಿದೆ ಎಂಬ ಬಗ್ಗೆ ಯಾರೂ ಪ್ರತಿಕ್ರಿಯಿಸುತ್ತಿಲ್ಲ.

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಮತ್ತೋರ್ವ ಪ್ರಮುಖ ಆರೋಪಿ ಮಂಜುನಾಥ ಮೇಳಕುಂದಿ 15 ದಿನಗಳಿಂದ ನಾಪತ್ತೆಯಾಗಿದ್ದಾರೆ. ಕಲಬುರಗಿ ನೀರಾವರಿ ಇಲಾಖೆಯಲ್ಲಿ ಜೆಇ ಆಗಿರುವ ಆರೋಪಿಯು ಸ್ವತಃ ತಾನು ಕೂಡಾ ಅಕ್ರಮವಾಗಿ ನೌಕರಿ ಪಡೆದಿದ್ದಾನೆ. ತನ್ನ ಕುಟುಂಬದ ಹಲವರಿಗೂ ಅಕ್ರಮವಾಗಿ ನೌಕರಿ ಸಿಗುವಂತೆ ಮಾಡಿರುವುದಲ್ಲದೆ, ಜಿಲ್ಲೆಯ ಹಲವರಿಂದ ಹಣ ಪಡೆದು ಪರೀಕ್ಷಾ ಅಕ್ರಮ ಮೂಲಕ ನೌಕರಿ ಕೊಡಿಸಿದ್ದಾನೆ. ವೀರೇಶ್ ಎನ್ನುವ ಅಭ್ಯರ್ಥಿಯಿಂದ ₹ 35 ಲಕ್ಷ ಹಣ ಪಡೆದು, ಈತ ಪರೀಕ್ಷಾ ಅಕ್ರಮ ನಡೆಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಕಳೆದ ವಾರ ಮಂಜುನಾಥ ಮೇಳಕುಂದಿ ಮನೆ ಮೇಲೆ ದಾಳಿ ನಡೆಸಿದ್ದ ಸಿಐಡಿ ಅಧಿಕಾರಿಗಳಿಗೆ ಅಲ್ಲಿ ಪಿಡಬ್ಲೂಡಿ ಪರೀಕ್ಷೆ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಲ್ ಟಿಕೆಟ್​ಗಳು ಮತ್ತು ಒಎಂಆರ್ ಸೀಟ್ ಸಿಕ್ಕಿತ್ತು. ಮಂಜುನಾಥ ಮೇಳಕುಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ: PSI Recruitment: ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!

ಇದನ್ನೂ ಓದಿ: PSI Recruitment Scam: ಇಷ್ಟು ದಿನ ಪ್ರಿಯಾಂಕ್ ಸಾಕ್ಷ್ಯ ಏಕೆ ಕೊಡಲಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ