PSI Recruitment Scam: ಇಷ್ಟು ದಿನ ಪ್ರಿಯಾಂಕ್ ಸಾಕ್ಷ್ಯ ಏಕೆ ಕೊಡಲಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ

ಕಾಂಗ್ರೆಸ್ ನಾಯಕ ಪ್ರಿಯಾಂಕ್​ ಖರ್ಗೆ ಇಷ್ಟು ದಿನ ಸಾಕ್ಷ್ಯವನ್ನು ತಮ್ಮ ಬಳಿ ಇರಿಸಿಕೊಂಡಿದ್ದು ಏಕೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

PSI Recruitment Scam: ಇಷ್ಟು ದಿನ ಪ್ರಿಯಾಂಕ್ ಸಾಕ್ಷ್ಯ ಏಕೆ ಕೊಡಲಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 23, 2022 | 2:17 PM

ಬೆಂಗಳೂರು: ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್ ಖರ್ಗೆ ಶನಿವಾರ ಆಡಿಯೊ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಇಷ್ಟು ದಿನ ಸಾಕ್ಷ್ಯವನ್ನು ತಮ್ಮ ಬಳಿ ಇರಿಸಿಕೊಂಡಿದ್ದು ಏಕೆ’ ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳ ಹಿಂದೆ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದರೂ ಆಡಿಯೊ ಬಿಡುಗಡೆ ಮಾಡಿರಲಿಲ್ಲ. ತಮ್ಮ ಆಪ್ತರ ಬಂಧನವಾಗುತ್ತಿದ್ದಂತೆ ಆಡಿಯೊ ಬಿಡುಗಡೆ ಮಾಡಿದ್ದಾರೆ. ಈ ಮೊದಲೇ ಏಕೆ ಆಡಿಯೊ ರಿಲೀಸ್ ಮಾಡಿರಲಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸವಾಲು ಹಾಕಿದರು.

ತಮ್ಮ ಆಪ್ತರು ಸಿಕ್ಕಿ ಬೀಳುವುದಿಲ್ಲ ಎಂಬ ಹುಸಿ ನಂಬಿಕೆ ಅವರಿಗೆ ಇರಬಹುದು. ಈಗಲಾದರೂ ಸಿಐಡಿಗೆ ಪ್ರಿಯಾಂಕ್ ಸಾಕ್ಷ್ಯಗಳನ್ನು ನೀಡಲಿ. ಈ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಕ್ಕೆ ಸಹಕರಿಸಲಿ. ಆರೋಪಿಗಳು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ ಎಂದು ಆರಗ ಜ್ಞಾನೇಂದ್ರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕೆ ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿ, ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ, ತನಿಖೆಗೆ ಆದೇಶ ನೀಡಿದ್ದೆ. ಆ ನಂತರ ಮಾನ್ಯ ಖರ್ಗೆಯವರು ಈ ಕುರಿತು ಒಂದು ಪತ್ರಿಕಾಗೋಷ್ಠಿ ಸಹ ನಡೆಸಿದ್ದರು. ಆದರೆ ಅಂದು ಆಡಿಯೊ ರೆಕಾರ್ಡ್ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ಅವರ ಆಪ್ತರು ಬಂಧನವಾಗುತ್ತಿದ್ದಂತೆ ಮಾಹಿತಿ ಹೊರಹಾಕಿದ್ದಾರೆ ಎಂದು ದೂರಿದರು.

ಅಕ್ರಮದಲ್ಲಿ ಒಳಗಾಗಿದವರು, ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ. ಕಾಂಗ್ರೆಸ್ ನಾಯಕರು ತನಿಖೆಗೆ ಸಹಕರಿಸಬೇಕು. ಯಾವುದೇ ರೀತಿಯ ರಾಜಕೀಯ ಲಾಭ ಅಪೇಕ್ಷೆ ಮಾಡದೆ, ಅಕ್ರಮ ಎಸಗಿದವರನ್ನು ಕಾನೂನಿನ ಬಲೆಗೆ ತರಲು ಮುಂದಾಗಬೇಕು ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಪ್ರಿಯಾಂಕ್ ಬಿಡುಗಡೆ ಮಾಡಿದ ಆಡಿಯೊದಲ್ಲಿ ಬಾಂಬ್ ಇಲ್ಲ: ಸಿಎಂ ಬೊಮ್ಮಾಯಿ

ದಾವಣಗೆರೆ: ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ ಆಡಿಯೊದಲ್ಲಿ ಬಾಂಬ್ ಎಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು. ಆರೋಪಿಗಳು ಏನು ಮಾತನಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣದಲ್ಲಿ ತನಿಖೆ ನಡೆಸಲು ಸಿಐಡಿಗೆ ಮುಕ್ತ ಅವಕಾಶವಿದೆ. ಯಾರು ಭಾಗಿಯಾಗಿದ್ದಾರೆಂಬ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ತನಿಖೆ ವೇಳೆ ಯಾವುದೇ ಪಕ್ಷದವರಾದರು ನಿರ್ದಾಕ್ಷಿಣ್ಯವಾದ ಕ್ರಮ ತೆಗೆದುಕೊಳ್ಳಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಅಕ್ರಮವೆಸಗಲು ಸಹಕಾರ ನೀಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.

ಬೆಂಗಳೂರಿನ ಶಾಲೆಯಲ್ಲಿ ಹುಸಿಬಾಂಬ್ ಇರಿಸಿರುವ ಕುರಿತು ಬಂದ ಕರೆಯು ಪಾಕಿಸ್ತಾನ ಅಥವಾ ಸಿರಿಯಾದಿಂದ ಬಂದಿದೆ ಎಂಬ ಗೊಂದಲ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೆಯೂ ಇಂಥ ಕರೆ, ಇಮೇಲ್​ಗಳು ಬಂದಿದ್ದವು. ಅವುಗಳ ಇಮೇಲ್ ಇದ್ದರೆ ಯಾವ ದೇಶದಿಂದ ಬಂದಿವೆ ಎಂದು ಸುಲಭವಾಗಿ ಪತ್ತೆ ಹಚ್ಚಬಹುದಿತ್ತು. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಗಂಭೀರವಾದ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಳಿಸಿದ ಸಿಐಡಿ; ಒಎಂಆರ್​ ಶೀಟ್​​ಗಳನ್ನು ಎಫ್​ಎಸ್​ಎಲ್​ಗೆ ಕಳಿಸಲು ಸಿದ್ಧತೆ

ಇದನ್ನೂ ಓದಿ: PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ: ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ ಆಡಿಯೋದಲ್ಲಿ ಏನಿದೆ?

Published On - 1:58 pm, Sat, 23 April 22