Kalaburagi police: ಪೊಲೀಸರ ವಿರುದ್ಧ ಸಾರ್ವಜನಿಕ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಸುರಿಮಳೆ; ಖಡಕ್ ಸೂಚನೆ ಕೊಟ್ಟ ಎಡಿಜಿಪಿ ಅಲೋಕ್ ಕುಮಾರ್
ADGP Alok Kumar : ಎಡಿಜಿಪಿ ಅಲೋಕ್ ಕುಮಾರ್ ಅವರು ಸಾರ್ವಜನಿಕರ ನೋವನ್ನು ಆಲಿಸುವ ಕೆಲಸ ಮಾಡಿದ್ದಾರೆ. ಪೊಲೀಸರಿಂದ ನ್ಯಾಯ ಸಿಗದೇ ಇದ್ದಾಗ ಯಾರಿಗೆ ದೂರು ನೀಡಬೇಕು ಅಂತ ತಿಳಿಯದೆ ಅನೇಕರು ಅನ್ಯಾಯವಾದರು ಕೂಡಾ ಸುಮ್ಮನಿದ್ದರು. ಈ ರೀತಿಯ ಸಭೆಗಳನ್ನು ಮೇಲಾಧಿಕಾರಿಗಳು ಆಗಾಗ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
ಕಲಬುರಗಿ: ಸಾರ್ವಜನಿಕರು ತಮಗೆ ಅನ್ಯಾಯವಾದಾಗ ಪೊಲೀಸರ ಮೊರೆ ಹೋಗಿ, ಠಾಣೆಗೆ ದೂರು ನೀಡುತ್ತಾರೆ. ತಮಗೆ ನ್ಯಾಯ ದೊರಕಿಸಿ ಕೊಡಿ ಅಂತ ಪೊಲೀಸರಿಗೆ ಮನವಿ ಮಾಡುತ್ತಾರೆ. ಆದರೆ ಇಂದು ಕಲಬುರಗಿಯಲ್ಲಿ ಪೊಲೀಸರ ವಿರುದ್ದವೇ, ಪೊಲೀಸರ ಮುಂದೆಯೇ ಅವರ ಮೇಲಾಧಿಕಾರಿಗಳಿಗೆ ಜನರು ದೂರು ನೀಡಿದರು. ಪೊಲೀಸರಿಂದಲೇ ತಮಗೆ (Kalaburagi police) ಅನ್ಯಾಯವಾಗುತ್ತಿದೆ. ದಯವಿಟ್ಟು ನ್ಯಾಯ ಕೊಡಿಸಿ ಅಂತ ಮನವಿ ಮಾಡಿದ್ರು.
ಪೊಲೀಸರ ವಿರುದ್ದ ಸಾರ್ವಜನಿಕರ ದೂರು ಕಲಬುರಗಿ ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಇಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ಸಾರ್ವಜನಿಕ ಅಹವಾಲು ಸಭೆ ನಡೆಸಿದರು. ಸಭೆಯ ಬಗ್ಗೆ ಮಾಹಿತಿ ಪಡೆದಿದ್ದ ನೂರಾರು ಜನರು ತಮ್ಮ ಅರ್ಜಿಗಳನ್ನು ಹಿಡಿದು ಅಹವಾಲು ಸಭೆಗೆ ಆಗಮಿಸಿದ್ದರು. ಆರಂಭದಿಂದ ಕೂಡಾ ಸಾರ್ವಜನಿಕರು ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ನೀಡಿದ ದೂರುಗಳು ಸ್ಥಳೀಯ ಪೊಲೀಸರ ವಿರುದ್ಧವೇ ಇದ್ದವು. ಹೌದು ಪೊಲೀಸರಿಗೆ ದೂರು ನೀಡಿದರು ಕೂಡಾ ಯಾವುದೇ ಆರೋಪಿಗಳನ್ನು ಪತ್ತೆ ಮಾಡುತ್ತಿಲ್ಲಾ. ಪೊಲೀಸರಿಂದಲೇ ತಮಗೆ ಅನ್ಯಾಯವಾಗುತ್ತಿದೆ ಅಂತ ದೂರು ನೀಡಿದರು. ಕೆಲವರು, ದೂರು ಕೊಟ್ಟವರಿಗೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಆರೋಪಿಗಳ ಜೊತೆ ಪೊಲೀಸರೇ ಶಾಮೀಲಾಗಿದ್ದಾರೆ. ನ್ಯಾಯ ದೊರಕಿಸಿ ಕೊಡಬೇಕಾದ ಖಾಕಿಯೇ ಬೇಲಿ ಎದ್ದು ಹೊಲ ಮೇಯ್ತಿದೆ ಅಂತ ಪೊಲೀಸರ ವಿರುದ್ದ ಇನ್ನು ಅನೇಕರು ದೂರು ನೀಡಿದರು.
ಕಲಬುರಗಿ ನಗರದ ವಿವಿಧ ಠಾಣೆಗಳು ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿರುವ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿ ವಿರುದ್ದವೇ ಇದ್ದಿದ್ದು ವಿಶೇಷವಾಗಿತ್ತು. ಹೌದು ಜನರು ತಮ್ಮ ದೂರುಗಳನ್ನು ತಗೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದರು ಕೂಡಾ, ಪೊಲೀಸರು ಆರೋಪಿಗಳನ್ನು ಪತ್ತೆ ಮಾಡದೇ ಇರುವುದು ಸೇರಿದಂತೆ ಅನೇಕ ದೂರುಗಳನ್ನು ಸ್ವತಃ ಪೊಲೀಸರ ಮುಂದೆಯೇ ನಿಂತುಕೊಂಡು, ಅಲೋಕ್ ಕುಮಾರ್ ಅವರಿಗೆ ದೂರು ನೀಡಿದ್ರು. ದೂರನ್ನು ಸ್ವೀಕರಿಸಿದ ಎಡಿಜಿಪಿ ಅಲೋಕ್ ಕುಮಾರ್ ಪರಿಹಾರದ ಭರವಸೆ ನೀಡಿದರು. ಒಂದೆಡೆ ಅನೇಕರು ತಮ್ಮ ವೈಯಕ್ತಿಕ ವಿಚಾರದಲ್ಲಿ ಆಗಿರೋ ಅನ್ಯಾಯದ ಬಗ್ಗೆ ದೂರು ನೀಡಿದ್ರೆ, ಇನ್ನು ಅನೇಕರು ಕಲಬುರಗಿ ಜಿಲ್ಲೆಯಲ್ಲಿರುವ ಗಾಂಜಾ ಸಾಗಾಟ, ಮತ್ತು ಗಾಂಜಾ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದರು ಕೂಡಾ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರೋದರ ಬಗ್ಗೆ ಎಡಿಜಿಪಿ ಗಮನಕ್ಕೆ ತಂದರು.
ಸರಿಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ನೂರಾರು ಸಾರ್ವಜನಿಕರು ತಮ್ಮ ನೋವನ್ನು ಎಡಿಜಿಪಿ ಅಲೋಕ್ ಕುಮಾರ್ ಮುಂದೆ ಹೇಳಿದರು. ಅನೇಕ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಬಗೆಹರಿಸಬೇಕು ಅಂತ ಅಲೋಕ್ ಕುಮಾರ್, ಸ್ಥಳದಲ್ಲಿಯೇ ಇದ್ದ ಪೊಲೀಸ್ ರಿಗೆ ಸೂಚನೆ ನೀಡಿದರು. ಕೆಲ ಪ್ರಕರಣಗಳ ಬಗ್ಗೆ ಒಂದು ತಿಂಗಳ ಸಮಯಾವಕಾಶ ನೀಡುತ್ತೇನೆ. ಅದರೊಳಗಾಗಿ ಸಮಸ್ಯೆ ಬಗೆಹರಿಸಬೇಕು. ಆರೋಪಿಗಳನ್ನು ಪತ್ತೆ ಮಾಡಬೇಕು. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಬೇಕು ಅಂತ ಕಟ್ಟುನಿಟ್ಟಿನ ಸೂಚನೆ ನೀಡಿದ್ರು. ಇನ್ನು ಮೇಲಾಧಿಕಾರಿಗಳ ಮುಂದೆಯೇ, ತಮ್ಮ ವಿರುದ್ದ ಸಾರ್ವಜನಿಕರು ದೂರು ನೀಡುತ್ತಿದ್ದಿದನ್ನು ನೋಡಿದ ಕೆಲ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮುಜಗರ ಕೂಡಾ ಆಯ್ತು.
ಅಲೋಕ್ ಕುಮಾರ್ ಈ ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ಎಸ್ಪಿಯಾಗಿ, ಐಜಿಪಿಯಾಗಿ ಕೆಲಸ ನಿರ್ವಹಿಸಿದ್ದು, ಜಿಲ್ಲೆಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಜಿಲ್ಲೆಯ ಜನರ ಬಗ್ಗೆ ಜಿಲ್ಲೆಯ ಕ್ರೈಮ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವ ಅಲೋಕ್ ಕುಮಾರ್, ಇಂದು ಕಲಬುರಗಿ ನಗರದಲ್ಲಿ ಸಾರ್ವಜನಿಕರ ದೂರನ್ನು ಆಲಿಸಿ, ಅವುಗಳನ್ನು ಬಗೆಹರಿಸುವ ಕೆಲಸ ಮಾಡಿದ್ರು. ಅಲೋಕ್ ಕುಮಾರ್ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ಕೂಡಾ ವ್ಯಕ್ತಪಡಿಸಿದ್ರು.
ಎಡಿಜಿಪಿ ಅಲೋಕ್ ಕುಮಾರ್ ಅವರು ಸಾರ್ವಜನಿಕರ ನೋವನ್ನು ಆಲಿಸುವ ಕೆಲಸ ಮಾಡಿದ್ದಾರೆ. ಪೊಲೀಸರಿಂದ ನ್ಯಾಯ ಸಿಗದೇ ಇದ್ದಾಗ ಯಾರಿಗೆ ದೂರು ನೀಡಬೇಕು ಅಂತ ತಿಳಿಯದೆ ಅನೇಕರು ಅನ್ಯಾಯವಾದರು ಕೂಡಾ ಸುಮ್ಮನಿದ್ದರು. ಈ ರೀತಿಯ ಸಭೆಗಳನ್ನು ಮೇಲಾಧಿಕಾರಿಗಳು ಆಗಾಗ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
ವರದಿ -ಸಂಜಯ್ ಚಿಕ್ಕಮಠ