ನಿಮ್ಮ ಅಕ್ಕ ತಂಗಿಯರು ಮಂಚವೇರಿ ಸರ್ಕಾರಿ ನೌಕರಿಗೆ ಹೋಗಿದ್ದಾರಾ? ಪ್ರಿಯಾಂಕ್ ಖರ್ಗೆಗೆ ಕೌಂಟರ್ ಕೊಡಲು ಹೋಗಿ ರಾಜಕುಮಾರ್ ಪಾಟೀಲ್ ಎಡವಟ್ಟು, ಕಾಂಗ್ರೆಸ್ ಆಕ್ರೋಶ
ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕೌಂಟರ್ ಕೊಡೋ ಭರದಲ್ಲಿ ಶಾಸಕ ರಾಜಕುಮಾರ್ ಪಾಟೀಲ್, ನಿಮ್ಮ ಅಕ್ಕ ತಂಗಿಯರು ನೌಕರಿಗೆ ಹೋಗಿದ್ದಾರೆ. ಅವರು ಮಂಚವೇರಿ ಸರ್ಕಾರಿ ನೌಕರಿಗೆ ಹೋಗಿದ್ದಾರಾ ಅಂತ ಕೌಂಟರ್ ನೀಡಿದ್ದರು. ಇದು ಕೈ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕಲಬುರಗಿ: ಚುನಾವಣೆಗಳು ಸಮೀಪಿಸುತ್ತಿದಂತೆ ರಾಜ್ಯದಲ್ಲಿ ನಾಯಕರ ನಡುವಿನ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಶಾಸಕ ಮತ್ತು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ(Priyank Kharge) ಹೇಳಿದ್ದ ವಿವಾದಾತ್ಮಕ ಲಂಚ ಮಂಚದ ಹೇಳಿಕೆ ದೇಶಾದ್ಯಂತ ಹಲ್ ಚಲ್ ಸೃಷ್ಟಿಸಿತ್ತು. ರಾಜ್ಯ ಮಾತ್ರವಲ್ಲಾ, ದೇಹಲಿವರೆಗಿನ ಬಿಜೆಪಿ ನಾಯಕರು, ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿಬಿದಿದ್ದಿದ್ದರು. ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕೌಂಟರ್ ಕೊಡೋ ಭರದಲ್ಲಿ ಶಾಸಕ ರಾಜಕುಮಾರ್ ಪಾಟೀಲ್(Rajkumar Patil), ನಿಮ್ಮ ಅಕ್ಕ ತಂಗಿಯರು ನೌಕರಿಗೆ ಹೋಗಿದ್ದಾರೆ. ಅವರು ಮಂಚವೇರಿ ಸರ್ಕಾರಿ ನೌಕರಿಗೆ ಹೋಗಿದ್ದಾರಾ ಅಂತ ಕೌಂಟರ್ ನೀಡಿದ್ದರು. ಇದು ಕೈ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕ ತೇಲ್ಕೂರ್ ಗೆ ಕರೆ ಮಾಡಿ ಕೈ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಏನಿದು ವಿವಾದ?
ಇದೇ ಆಗಸ್ಟ್ 12 ರಂದು ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಕೈ ಶಾಸಕ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಬೇಕಾದರೇ, ಯುವತಿಯರು ಮಂಚವೇರಬೇಕಾಗಿದೆ, ಯುವಕರು ನೌಕರಿ ಪಡೆಯಬೇಕಾದರೆ ಲಂಚ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಅಂತ ಹೇಳಿದ್ದರು. ಅದಕ್ಕಾಗಿ ಅವರು ರಾಜ್ಯದಲ್ಲಿ ನಡೆದ ಸರಣಿ ಪರೀಕ್ಷಾ ಅಕ್ರಮಗಳನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಸರ್ಕಾರಿ ಹುದ್ದೆಯ ಪರೀಕ್ಷೆ ಕೂಡಾ ಸುಸೂತ್ರವಾಗಿ ನಡೆಯುತ್ತಿಲ್ಲ. ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿದೆ ಅಂತ ಹೇಳಿದ್ದರು.
ಪ್ರಿಯಾಂಕ್ ಖರ್ಗೆ ಅವರ ಲಂಚ ಮಂಚದ ಹೇಳಿಕೆಗೆ ರಾಜ್ಯ ಮತ್ತು ಕೇಂದ್ರದ ಅನೇಕ ಬಿಜೆಪಿ ನಾಯಕರು ತಿರುಗೇಟು ನೀಡಿದ್ದರು. ಶಾಸಕ ಪ್ರಿಯಾಂಕ್ ಖರ್ಗೆ, ರಾಜ್ಯದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅಗೌರವದಿಂದ ಮಾತನಾಡಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದ್ದರು. ವಿವಾದ ದೊಡ್ಡದಾಗುತ್ತಿದ್ದಂತೆ, ನನ್ನ ಉದ್ದೇಶ ಹಾಗಿರಲಿಲ್ಲಾ. ರಾಜ್ಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಹೇಳುವುದಾಗಿತ್ತು, ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ, ತಾನು ಕ್ಷಮೆ ಕೇಳಲು ಸಿದ್ದ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅನಂತರ ಈ ವಿವಾದ ತಣ್ಣಗಾಗಿತ್ತು.
ಪ್ರಿಯಾಂಕ್ ಖರ್ಗೆಗೆ ಶಾಸಕ ರಾಜಕುಮಾರ್ ಪಾಟೀಲ್ ಎದುರೇಟು
ಇನ್ನು ಕಲಬುರಗಿಯಲ್ಲಿ ಇದೇ ಆಗಸ್ಟ್ 16 ರಂದು ಸುದ್ದಿಗೋಷ್ಟಿ ನಡೆಸಿದ್ದ ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ್ದ ಲಂಚ ಮಂಚದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನಿಮ್ಮ ಮನೆಯ ಅನೇಕ ಅಕ್ಕ ತಂಗಿಯರು ಸರ್ಕಾರಿ ನೌಕರಿಗೆ ಹೋಗಿದ್ದಾರೆ. ಅವರು ಮಂಚವೇರಿ ಹೋಗಿದ್ದಾರಾ? ಅಂತ ಪ್ರಶ್ನಿಸಿದ್ದರು. ಜೊತೆಗೆ ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಬಾರದು ಅಂತ ಹೇಳಿದ್ದರು. ಇದು ಕಲಬುರಗಿ ಕೈ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಕುಮಾರ್ ಪಾಟೀಲ್ ವಿರುದ್ದ ಕೈ ಕಾರ್ಯಕರ್ತರ ಆಕ್ರೋಶ
ಶಾಸಕ ರಾಜಕುಮಾರ್ ಪಾಟೀಲ್, ನೀಡಿದ್ದ ಹೇಳಿಕೆಗೆ ಕಲಬುರಗಿ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಾಸಕ ರಾಜಕುಮಾರ್ ಪಾಟೀಲ್ ಗೆ ಕರೆ ಮಾಡಿ ಮಾತನಾಡಿರುವ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಾನಂದ್, ಹಾಗೂ ಕೈ ನಾಯಕರಾದ ಈರಣ್ಣ ಝಳಕಿ, ಶಾಸಕ ತೇಲ್ಕೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಕುಟುಂಬದ ಬಗ್ಗೆ ನೀವು ವೈಯಕ್ತಿಕವಾಗಿ ಮಾತನಾಡಿದ್ದು ಸರಿಯಲ್ಲ. ಪ್ರಿಯಾಂಕ್ ಖರ್ಗೆ ಅವರು ಯಾವುದೇ ಸಾಕ್ಷಿಯಿಲ್ಲದೇ ಮಾತನಾಡುವುದಿಲ್ಲ. ನೀವು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ. ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ತನಗೆ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಗೌರವವಿದೆ. ತಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಹಾಗೇನಾದ್ರು ಮಾತನಾಡಿದ್ದರೆ ತಾನು ಪರಿಶೀಲನೆ ನಡೆಸುತ್ತೇನೆ ಅಂತ ಹೇಳಿದ್ದಾರೆ.
ಕಲಬುರಗಿಯಲ್ಲಿ ಲಂಚ ಮಂಚದ ಹೇಳಿಕೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗೆ ಕಾರಣವಾಗುತ್ತಿದೆ. ನೀವು ಕ್ಷಮೆ ಕೇಳಬೇಕು ಅಂತ ಕೈ ನಾಯಕರು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಗೆ ಆಗ್ರಹಿಸಿದ್ದರೆ, ಇತ್ತ ಬಿಜೆಪಿ ನಾಯಕರು, ಲಂಚ ಮಂಚದ ಹೇಳಿಕೆ ನೀಡಿದ್ದ ಪ್ರಿಯಾಂಕ್ ಖರ್ಗೆ ಬಹಿರಂಗ ಕ್ಷಮೆ ಕೇಳಬೇಕು ಅಂತ ಆಗ್ರಹಿಸುತ್ತಿದ್ದಾರೆ. ಸದ್ಯ ಈ ಮಾತಿನ ಚಕಮಕಿ ನಿಲ್ಲುವ ಯಾವುದೇ ಲಕ್ಷಣಗಳು ಕೂಡಾ ಕಾಣುತ್ತಿಲ್ಲ.
Published On - 4:41 pm, Wed, 17 August 22