ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ (Rudragowda Patil) ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆಗೆ ತಡೆ ನೀಡಿ ಹೈಕೋರ್ಟ್ನ ಕಲಬುರಗಿ ಪೀಠದ ಮಂಗಳವಾರ ಆದೇಶ ನೀಡಿದೆ. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿ ಮತ್ತು ರಾಜ್ಯದ ವಿವಿಧಡೆ ಪಾಟೀಲ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ಮಧ್ಯೆ, ಕಲಬುರಗಿ ನಗರದ ಅಶೋಕ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಪಾಟೀಲ್ಗೆ ಜಾಮೀನು ಮಂಜೂರು ಮಾಡಲಾಗಿದೆ.
ಸಿಐಡಿ ಅಧಿಕಾರಿಗಳಿಗೆ ತಳ್ಳಿ ಓಡಿಹೋಗಿದ್ದ ಆರೋಪದ ಮೇಲೆ ರುದ್ರಗೌಡ ಪಾಟೀಲ್ ಅನ್ನು ಬಂಧಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ರುದ್ರಗೌಡ ಪಾಟೀಲ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿದ್ದರು. ಸೋಮವಾರವಷ್ಟೇ ಅಫಜಲಪುರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆ ಪ್ರಚಾರದ ಸಮಯದಲ್ಲಿಯೇ ಜಾಮೀನು ದೊರೆತಿರುವುದು ಮತ್ತು ಪ್ರಕರಣಗಳ ವಿಚಾರಣೆಗೆ ತಡೆ ದೊರೆತಿರುವುದರಿಂದ ರುದ್ರಗೌಡ ಪಾಟೀಲ್ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ನ್ಯಾಯಾಲಯದ ಅನುಮತಿ ಪಡೆದು ಸೋಮವಾರ ಜೈಲಿನಿಂದಲೇ ಪೊಲೀಸ್ ಭದ್ರತೆಯಲ್ಲಿ ತೆರಳಿ ಅಫಜಲಪುರ ತಹಶಿಲ್ದಾರ ಕಚೇರಿಯಲ್ಲಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನರು ಹಾಜರಾಗಿದ್ದರು.
ಇದನ್ನೂ ಓದಿ: ಚುನಾವಣೆ ಅಖಾಡಕ್ಕಿಳಿದ PSI ಅಕ್ರಮ ಪ್ರಮುಖ ಆರೋಪಿ: ಪೊಲೀಸ್ ಭದ್ರತೆಯಲ್ಲಿಯೇ ಆಗಮಿಸಿ ನಾಮಪತ್ರ ಸಲ್ಲಿಸಿದ ರುದ್ರಗೌಡ ಪಾಟೀಲ್
ರುದ್ರಗೌಡ ಪಾಟೀಲ್ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದರು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳುವ ಮೂಲಕ ಆಗಾಗ ಸುದ್ದಿಯಲ್ಲಿದ್ದರು. ಅಲ್ಲದೆ ಕ್ಷೇತ್ರದ ತುಂಬೆಲ್ಲಾ ಓಡಾಡಿಕೊಂಡು ತಮ್ಮ ಸಮುದಾಯ ಸೇರಿದಂತೆ ಕ್ಷೇತ್ರದಲ್ಲಿ ಯುವ ಪಡೆ ಕಟ್ಟಿಕೊಂಡು ಚುನಾವಣೆಗೆ ಅಖಾಡ ಸಿದ್ದಮಾಡಿಕೊಂಡಿದ್ದರು. ಈ ಸಮಯದಲ್ಲಿಯೇ ಪಿಎಸ್ಐ ಕೇಸ್ ಉರುಳು ರುದ್ರಗೌಡ್ ಪಾಟೀಲ್ಗೆ ಸುತ್ತಿಕೊಂಡಿತ್ತು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಹೆಸರು ಕೇಳಿಬಂದಿದ್ದದರಿಂದ, ಸಿಐಡಿ ಅಧಿಕಾರಿಗಳು ರುದ್ರಗೌಡ್ರನ್ನು ಬಂಧಿಸಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ