ಶಕ್ತಿ ಯೋಜನೆಯೇ ಬಂಡವಾಳ, ಮಹಿಳೆಯರೇ ಟಾರ್ಗೆಟ್: ಕಳ್ಳಿಯರ ಗ್ಯಾಂಗ್ ಭೇದಿಸಿದ ಖಾಕಿ
ಕಲಬುರಗಿಯಲ್ಲಿ ಶಕ್ತಿ ಯೋಜನೆ ದುರ್ಬಳಕೆ ಮಾಡಿಕೊಂಡು ಪ್ರಯಾಣಿಕರ ಆಭರಣ ಕದಿಯುತ್ತಿದ್ದ ಮೂವರು ಕಳ್ಳಿಯರ ಗ್ಯಾಂಗ್ನ ಪೊಲೀಸರು ಬಂಧಿಸಿದ್ದಾರೆ. ಬಸ್ ನಿಲ್ದಾಣ ಮತ್ತು ಬಸ್ಸುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ನೆಕ್ಲೇಸ್, ಉಂಗುರ, ಮಾಂಗಲ್ಯ ಸರಗಳನ್ನು ಇವರು ಕದಿಯುತ್ತಿದ್ದರು. ಬಂಧಿತರಿಂದ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕಲಬುರಗಿ, ಡಿಸೆಂಬರ್ 25: ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸಾರಿಗೆಯೆ ಸಾಮಾನ್ಯ ಬಸ್ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ಶಕ್ತಿ ಯೋಜನೆಯಡಿ ಕಲ್ಪಿಸಿದೆ. ಆದ್ರೆ ಇದೇ ಫ್ರೀ ಬಸ್ ಸ್ಕೀಂನ ಬಂಡವಾಳ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಆಭರಣಗಳನ್ನು ಕದಿಯುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಒಂದನ್ನು ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ನಗರದ ಮಾಂಗರವಾಡಿ ಬಡಾವಣೆಯ ನಿವಾಸಿಗಳಾದ ಚಿಮನ್ ಕಾಂಬಳೆ, ಶಕೀಲಾಬಾಯಿ ಉಪಾಧ್ಯಾ ಮತ್ತು ಮಾಧುರಿ ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳತನವನ್ನೇ ಇವರು ವೃತ್ತಿ ಮಾಡಿಕೊಂಡಿದ್ದು, ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನ ಇದಕ್ಕಾಗಿ ಇವರು ಬಂಡವಾಳ ಮಾಡಿಕೊಂಡಿದ್ದರು. ಕಲಬುರಗಿ ನಗರದಿಂದ ಜಿಲ್ಲೆಯ ಸೇಡಂ, ಶಹಾಬಾದ್ ಸೇರಿ ಹಲವೆಡೆ ಉಚಿತ ಪ್ರಯಾಣ ಮಾಡಿ ಕಳ್ಳತನ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ಬಸ್ನಲ್ಲಿದ್ದ 55 ಲಕ್ಷ ಕಳವು; ಸಿನೆಮಾ ಸ್ಟೈಲ್ನಲ್ಲಿ ಆರೋಪಿ ಅರೆಸ್ಟ್
ಬಸ್ ನಿಲ್ದಾಣಗಳಲ್ಲಿ ಓಡಾಡಿಕೊಂಡು ಚಿನ್ನಾಭರಣ ಧರಿಸಿದ್ದ ಮಹಿಳಾ ಪ್ರಯಾಣಿಕರನ್ನ ಮೊದಲು ಈ ಗ್ಯಾಂಗ್ ಗಮನಿಸುತ್ತಿತ್ತು. ಆ ಬಳಿಕ ಮಹಿಳಾ ಪ್ರಯಾಣಿಕರು ಬಸ್ ಹತ್ತುವ ವೇಳೆ ಎಂಟ್ರಿ ಕೊಡ್ತಿದ್ದ ಇವರು, ಅವರನ್ನು ಸುತ್ತುವರಿಯುತ್ತಿದ್ದರು. ಗಮನ ಬೆರೆಡೆ ಸೆಳೆದು ಚಿನ್ನದ ನೆಕ್ಲೇಸ್, ಪದಕ, ಉಂಗುರ, ಕಿವಿ ಓಲೆ, ಮಾಂಗಲ್ಯ ಸರಗಳನ್ನು ಕ್ಷಣಾರ್ಧದಲ್ಲಿ ಕಟ್ ಮಾಡಿ ಯಾರಿಗೂ ಅನುಮಾನ ಬಾರದಂತೆ ಎಸ್ಕೇಪ್ ಆಗುತ್ತಿದ್ದರು ಎನ್ನಲಾಗಿದೆ. ಹಲವು ತಿಂಗಳಿಂದ ಮಹಿಳಾ ಪ್ರಯಾಣಿಕರ ನಿದ್ದೆಗೆಡಿಸಿದ್ದ ಈ ಮೂವರು ಸರಗಳ್ಳಿಯರನ್ನು ಕೊನೆಗೂ ಖಾಕಿ ಹೆಡೆಮುರಿ ಕಟ್ಟಿದೆ.
ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದ ಆರೋಪಿಗಳ ಚಲನವಲನಗಳನ್ನು ಆಧರಿಸಿ ಪೊಲೀಸರು ಗ್ಯಾಂಗ್ ಭೇದಿಸಿದ್ದಾರೆ. ಇವರ ವಿರುದ್ಧ ಸೇಡಂ ಹಾಗೂ ಶಹಾಬಾದ್ ಠಾಣೆಯಲ್ಲಿ ಒಟ್ಟು ಮೂರು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಬಂಧಿತರಿಂದ ಬರೋಬ್ಬರಿ 14 ಲಕ್ಷ ಮೌಲ್ಯದ 110 ಗ್ರಾಂ ಚಿನ್ನದ ಆಭರಣಗಳು, ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



