
ಕಲಬುರಗಿ, ಜುಲೈ 10: ವಸತಿ ಶಾಲೆಗೆ ದಾಖಲಿಸಿದ್ದಕ್ಕೆ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ (Sedam) ತಾಲೂಕಿನ ಮುಧೋಳದಲ್ಲಿ ನಡೆದಿದೆ. ಕಲಬುರಗಿ ತಾಲೂಕಿನ ಪಾಣೆಗಾಂವ್ ಗ್ರಾಮದ ನಾರಾಯಣ ರಾಠೋಡ್ (13) ಮೃತ ದುರ್ದೈವಿ. ವಸತಿ ಶಾಲೆಗೆ ಸೇರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬಾಲಕ ನಾರಾಯಣ ರಾಠೋಡ್ ಹೇಳಿದ್ದನು. ಈ ವೇಳೆ ಪೋಷಕರು ನಾರಾಯಣ ರಾಥೋಡ್ನನ್ನು ಮನವೊಲಿಸಿ ಮುಧೋಳದ ಇಂದಿರಾ ಗಾಂಧಿ ವಸತಿ ಶಾಲೆಗೆ ದಾಖಲು ಮಾಡಿದ್ದರು. ಗುರುವಾರ (ಜು.10) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿ ನಾರಾಯಣ ತಾಯಿಯನ್ನು ಬಿಟ್ಟಿರಲಾರದೆ ಆತ್ನಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು, ನಾರಾಯಣ 15 ದಿನಗಳ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದನು ಎಂದು ತಿಳಿದು ಬಂದಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೊಪ್ಪಳ: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವೀಣ್ ಕುಮಾರ್ (18), ಸಾಣಾಪುರದ ಅಂಜಲಿ (18) ಮೃತರು. ಪ್ರೀತಿಗೆ ಕುಟುಂಬಸ್ಥರು ಅಡ್ಡಿಪಡಿಸುತ್ತಾರೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಅಂಜಲಿ ಮತ್ತು ಪ್ರವೀಣ್ ಕುಮಾರ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.
ಪ್ರವೀಣ್ ಮತ್ತು ಅಂಜಲಿ ಎರಡು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದರು. ಆಗ ಪೋಷಕರು ಮದುವೆ ಮಾಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ವಾಪಸ್ ಬಂದಿದ್ದರು. ಆದರೆ, ಮನೆಯವರು ಏನಾದರು ಮಾಡುತ್ತಾರೆ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದಾವಣಗೆರೆ: ರೈಲಿಗೆ ತಲೆಕೊಟ್ಟು ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಹರ ಬಳಿ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಬಳಿ ನಡೆದಿದೆ. ಗಂಗನರಸಿ ಗ್ರಾಮದ ಸುವರ್ಣಮ್ಮ (65), ಗೌರಮ್ಮ(45) ಮೃತ ದುರ್ದೈವಿಗಳು. ಸ್ಥಳಕ್ಕೆ ದಾವಣಗೆರೆ ರೈಲ್ವೆ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮೊರಾರ್ಜಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸಾವು: ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಆದೇಶ
ಬೆಂಗಳೂರು: ಆರ್.ವಿ.ಕಾಲೇಜು ಹಿಂಭಾಗ ಇರುವ ರಾಜಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ವ್ಯಕ್ತಿ ಮೂರು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೊಳೆತ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅನುಮಾನಾಸ್ಪದ ಸಾವು ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.