AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ತಾಲೂಕು ಆಫೀಸಿನಲ್ಲಿ ತಮ್ಮದೇ ದಾಖಲಾತಿ ಪತ್ರ ಪಡೆಯಲು ಜನ ಲಂಚದ ಹಣ ನೀಡಬೇಕಂತೆ!

ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಬಾರದು ಅಂತ ಸರ್ಕಾರದ ವತಿಯಿಂದ ಬೋರ್ಡ್ ಹಾಕಿಸಲಾಗಿದೆ. ಆದ್ರೆ ಬೋರ್ಡ್ ಹೊರಗೆ ಇದ್ರೆ, ಕಚೇರಿ ಒಳಗಿನ ಸಿಬ್ಬಂದಿ ಮಾತ್ರ, ಇಂತಿಷ್ಟು ಹಣ ಕೊಟ್ಟರೆ ಮಾತ್ರ ಅರ್ಜಿ ಸ್ವೀಕರಿಸೋದಾಗಿ ಹೇಳ್ತಿದ್ದಾರೆ.

ಕಲಬುರಗಿ ತಾಲೂಕು ಆಫೀಸಿನಲ್ಲಿ ತಮ್ಮದೇ ದಾಖಲಾತಿ ಪತ್ರ ಪಡೆಯಲು ಜನ ಲಂಚದ ಹಣ ನೀಡಬೇಕಂತೆ!
ಕಲಬುರಗಿ ನಾಡಕಚೇರಿಯಲ್ಲಿ ಅಕ್ರಮದ್ದೆ ಕಾರುಬಾರು: ದಾಖಲಾತಿ ಪತ್ರಗಳನ್ನು ನೀಡಲು ಜನರಿಂದ ಹೆಚ್ಚುವರಿ ಹಣ ವಸೂಲಿ!
TV9 Web
| Edited By: |

Updated on:Dec 07, 2022 | 12:50 PM

Share

ಸರ್ಕಾರ ಅನೇಕ ಸೇವೆಗಳನ್ನು ನೀಡುತ್ತದೆ. ಅದಕ್ಕಾಗಿ ನಿಗದಿತ ಶುಲ್ಕವನ್ನು ಜನರಿಂದ ಪಡೆಯುತ್ತದೆ. ಪ್ರತಿಯೊಂದು ಸೇವೆಗೂ ಇಂತಿಷ್ಟು ಹಣ ಅಂತ ನಿಗದಿ ಪಡಿಸಲಾಗಿದೆ. ಆದ್ರೆ ಕಲಬುರಗಿ (Kalaburagi) ನಾಡ ಕಚೇರಿಯ (Taluk office) ಸಿಬ್ಬಂದಿಯಂತೂ ಜನರಿಂದ ಹೆಚ್ಚುವರಿಯಾಗಿ ಹಣ ವಸೂಲಿ (bribe) ಮಾಡುತ್ತಿದ್ದಾರೆ. ನಿಗದಿತ ಶುಲ್ಕಕ್ಕಿಂತ ಇಂತಿಷ್ಟು ಹಣ ಹೆಚ್ಚು ಕೊಡಲೇಬೇಕು ಅಂತ ಜನರಿಗೆ ಹೇಳುತ್ತಿದ್ದಾರೆ. ಹೀಗಾಗಿ ಇದೀಗ ಸಿಬ್ಬಂದಿಯನ್ನು ವಜಾ ಮಾಡಬೇಕು ಅನ್ನೋ ಆಗ್ರಹ ಹೆಚ್ಚಾಗಿದೆ.

ಇದರ ಮಧ್ಯೆ ಬೋರ್ಡ್ ಒಂದನ್ನು ಹಾಕಲಾಗಿದ್ದು, ಇಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಕೇಳಿದ್ರೆ ಈ ಕೆಳಗಿನ ನಂಬರ್ ಗೆ ಕರೆ ಮಾಡಿ ಅಂತ ಬರೆಯಲಾಗಿದೆ. ಆದ್ರೇ ಇದೇ ಕಚೇರಿಯ ಒಳಗೆ ಕೂತಿರುವ ಸಿಬ್ಬಂದಿ ಮಾತ್ರ ಆದೇಶಕ್ಕೂ ನಮಗೂ ಸಂಬಂಧವೇ ಇಲ್ಲಾ ಅಂತ ವರ್ತಿಸುತ್ತಿದ್ದಾರೆ. ಹೌದು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಬೇಕಾದ್ರೆ ಅರ್ಜಿ ಜೊತೆಗೆ 40 ರೂಪಾಯಿ ಸೇವಾ ಶುಲ್ಕವನ್ನೂ ನೀಡಬೇಕು. ಆದ್ರೆ ಈ ಸಿಬ್ಬಂದಿ 50 ರೂಪಾಯಿ ಪಡೆಯುತ್ತಿದ್ದಾರೆ. ಯಾಕೆ ಅಂತ ಪ್ರಶ್ನಿಸಿದ್ರೆ, ಅದು ಕೊಡಲೇಬೇಕು ಅನ್ನೋ ಉತ್ತರ ಹೇಳ್ತಾರೆ. ಹೌದು ಇಂತಹದೊಂದು ದಂದೆ ನಡೆಯುತ್ತಿರುವುದು ಕಲಬುರಗಿ ನಗರದಲ್ಲಿರುವ ನಾಡ ಕಚೇರಿಯಲ್ಲಿ.

ಹೌದು ಕಲಬುರಗಿ ನಗರದಲ್ಲಿರುವ ನಾಡ ಕಚೇರಿಯಲ್ಲಿ ಸರ್ಕಾರದಿಂದ ಸಿಗುವ ಆದಾಯ, ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ಸೇರಿದಂತೆ, ಸರ್ಕಾರಿ ಸೇವೆಯನ್ನು ಪಡೆಯಲು ಜನರು ಅರ್ಜಿ ಹಾಕಲು ನಾಡ ಕಚೇರಿಗೆ ಹೋದ್ರೆ, ನಾಡ ಕಚೇರಿಯಲ್ಲಿರುವ ಕಂಪ್ಯೂಟರ್ ಆಪರೇಟರ್ ಗಳು, ಇನ್ನಿತರ ಸಿಬ್ಬಂದಿ ಪ್ರತಿಯೊಂದು ಅರ್ಜಿಗೂ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಪ್ರತಿಯೊಂದು ಅರ್ಜಿಗೆ ಹತ್ತರಿಂದ ನೂರು ರೂಪಾಯಿವರಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಬಾರದು ಅಂತ ಸರ್ಕಾರದ ವತಿಯಿಂದ ಬೋರ್ಡ್ ಹಾಕಿಸಲಾಗಿದೆ. ಆದ್ರೆ ಬೋರ್ಡ್ ಹೊರಗೆ ಇದ್ರೆ, ಕಚೇರಿ ಒಳಗಿನ ಸಿಬ್ಬಂದಿ ಮಾತ್ರ, ಇಂತಿಷ್ಟು ಹಣ ಕೊಟ್ಟರೆ ಮಾತ್ರ ಅರ್ಜಿ ಸ್ವೀಕರಿಸೋದಾಗಿ ಹೇಳ್ತಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದ್ರು ಕೂಡಾ ಯಾವುದೇ ಪ್ರಯೋಜನವಾಗಿಲ್ಲವಂತೆ. ಹೆಚ್ಚುವರಿ ಹಣ ಕೇಳುತ್ತಿರುವ ಸಿಬ್ಬಂದಿ ವಿರುದ್ದ ದೂರು ನೀಡಿದ್ದರೂ ಕೂಡಾ ಅವರ ವಿರುದ್ದ ಯಾವುದೇ ಕ್ರಮವಾಗುತ್ತಿಲ್ಲವಂತೆ.

ಇನ್ನು ಕಳೆದ ಎಂಟತ್ತು ವರ್ಷಗಳಿಂದ ಈ ಸಿಬ್ಬಂದಿ ಒಂದೇ ಕಡೆ ಬಿಡಾರ ಹೂಡಿದ್ದು, ರಾಜಕೀಯವಾಗಿ ಹೆಚ್ಚು ಪ್ರಾಬಲ್ಯ ಹೊಂದಿದ್ದಾರಂತೆ. ಮೇಲಾಧಿಕಾರಿಗಳು ಯಾರಾದ್ರು ಅವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾದರೆ ಜನಪ್ರತಿನಿಧಿಗಳಿಂದ ಪೋನ್ ಮಾಡಿಸಿ, ಯಾವುದೇ ಕ್ರಮವಾಗದಂತೆ ನೋಡಿಕೊಳ್ಳುತ್ತಾರಂತೆ. ಅನೇಕ ಸಲ ನಾಡ ಕಚೇರಿಯಲ್ಲಿ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲು ಮೇಲಾಧಿಕಾರಿಗಳು ಮುಂದಾಗಿದ್ದಾರೆ. ಆದರೆ ಸಿಬ್ಬಂದಿ ರಾಜಕೀಯ ಒತ್ತಡ ತಂದು, ಅದು ರದ್ದಾಗುವಂತೆ ನೋಡುತ್ತಾರಂತೆ.

ನಾಡ ಕಚೇರಿಯಲ್ಲಿನ ಸಿಬ್ಬಂದಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ದೂರಿನ ಆಧಾರದ ಮೇಲೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಸಿಬ್ಬಂದಿ ಹೆಚ್ಚುವರಿ ಹಣ ಕೇಳಿದ್ರೆ ಮೇಲಾಧಿಕಾರಿಗಳಿಗೆ ದೂರು ನೀಡಬೇಕು. ಅಂದಾಗ ಅವರ ವಿರುದ್ದ ಕ್ರಮ ಕೈಗೊಳ್ಳಲು ಅನಕೂಲವಾಗುತ್ತದೆ ಎನ್ನುತ್ತಾರೆ ಪ್ರಕಾಶ್ ಕುದರೆ, ಕಲಬುರಗಿ ತಹಶಿಲ್ದಾರ್.

ಕಳೆದ ಕೆಲ ವರ್ಷಗಳಿಂದ ಒಂದೇ ಕಡೆ ಬಿಡಾರ ಹೂಡಿರುವ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾವಣೆ ಮಾಡೋದರ ಜೊತೆಗೆ, ಹೆಚ್ಚುವರಿ ಹಣ ವಸೂಲಿ ಮಾಡೋ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕು ಅಂದಾಗ ಮಾತ್ರ ಇಂತಹದೊಂದು ಅಡ್ಡದಂದೆಗೆ ಬ್ರೇಕ್ ಹಾಕಿದಂತಾಗುತ್ತದೆ. (ವರದಿ: ಸಂಜಯ್, ಟಿವಿ 9, ಕಲಬುರಗಿ)

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Wed, 7 December 22