Kalaburagi News: ಜಾಗಿಂಗ್ ಮಾಡೋ ಸೋಗಿನಲ್ಲಿ ಬಂದು ಚಿನ್ನದಂಗಡಿ ಕಳ್ಳತನ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಜಾಗಿಂಗ್ ಮಾಡುವ ರೀತಿಯಲ್ಲಿ ಬಂದು ಬಂಗಾರದ ಅಂಗಡಿ ಕಳ್ಳತನ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಕಲಬುರಗಿ, ಜು.27: ಜಾಗಿಂಗ್ ಮಾಡುವ ರೀತಿಯಲ್ಲಿ ಬಂದು ಬಂಗಾರದ ಅಂಗಡಿ ಕಳ್ಳತನ (Theft)ಮಾಡಿದ ಘಟನೆ ಚಿತ್ತಾಪುರ (Chitapur) ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ನಿನ್ನೆ (ಜು.26) ನಸುಕಿನ ಜಾವ 3.30 ರ ಸಮಯದಲ್ಲಿ ವಾಯು ವಿಹಾರಿಗಳ ಸೋಗಿನಲ್ಲಿ ಬಂದಿದ್ದ ಖದೀಮರು. ಪಟ್ಟಣದ ಸಂತೋಷ್ ಮಾಳಿ ಎಂಬುವವರ ಜ್ಯುವೆಲರ್ ಶಾಪ್ನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
ಮೇಕೆ ಕುರಿ ಕಳ್ಳರ ಹಾವಳಿಯಿಂದ ಹೈರಾಣಾದ ಗ್ರಾಮದ ರೈತರು
ಬೀದರ್: ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬಸೀರಾಪುರ ಗ್ರಾಮಸ್ಥರು ಕಳ್ಳರ ಕಾಟದಿಂದಾಗಿ ಆತಂಕದಲ್ಲಿದ್ದಾರೆ. ತಿಂಗಳಲ್ಲಿ ಏನಿಲ್ಲವೆಂದರು ಐದಾರು ಕುರಿ ಮೇಕೆ ಕಳ್ಳತನವಾಗುತ್ತಿದ್ದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕಷ್ಟಪಟ್ಟು ಸಾಕಿರುವ ಎಲ್ಲಾ ಮೇಕೆಯನ್ನ ಕದ್ದುಕೊಂಡು ಹೋಗಿದ್ದಾರೆ. ಹೀಗೆ ತಿಂಗಳಿಗೆ ಐದಾರು ಸಲ ಕಳ್ಳತನ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ಎಷ್ಟೋ ಸಲ ಮನವಿ ಮಾಡಿದರೂ ಕಳ್ಳತನ ಮಾತ್ರ ಕಡಿಮೆಯಾಗಿಲ್ಲ. ಇನ್ನು ಈ ಬಸೀರಾಪುರ ಗ್ರಾಮದಲ್ಲಿ ಮನೆ ಮನೆಗೂ ಆಡು ಕುರಿಗಳು ಇವೆ. ತಾವು ಸಾಕಿದ ಕುರಿ ಮೇಕೆಯನ್ನ ತಮ್ಮ ಮನೆಯ ಬಾಗಿಲಿನಲ್ಲಿ ಕಟ್ಟಿ ರಾತ್ರಿ ನಿದ್ರೆಗೆ ಜಾರುತ್ತಾರೆ. ಅದೇ ಸಮಯವನ್ನ ಬಂಡಾವಾಳ ಮಾಡಿಕೊಂಡಿರುವ ಕಳ್ಳರ ಗ್ಯಾಂಗ್ ಕುರಿಗಳನ್ನ ಕದ್ದು ಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ.
ಐದು ತಿಂಗಳಲ್ಲಿ 60 ಕ್ಕೂ ಹೆಚ್ಚು ಮೇಕೆಗಳ ಕಳ್ಳತನ
ಕಳ್ಳರ ಕಾಟದಿಂದ ಕಷ್ಟಪಟ್ಟು ಸಾಕಿದ ಬಡ ರೈತರಿಗೆ ಭಾರಿ ನಷ್ಟವಾಗುತ್ತಿದೆ. ಒಂದು ಬೆಳೆದ ಕುರಿ ಏನಿಲ್ಲವೆಂದರೂ 15 ಸಾವಿರ ರೂಪಾಯಿಗೆ ಮಾರಾಟವಾಗುತ್ತದೆ. ಅದನ್ನ ಕದ್ದುಕೊಂಡು ಹೋಗುತ್ತಿರುವುದರಿಂದ ರೈತರಿಗೆ ನಷ್ಟವಾಗುತ್ತಿದ್ದು, ಕಳ್ಳರಿಂದ ನಮ್ಮ ಕುರಿಗಳಿಗೆ ರಕ್ಷಣೆ ಕೊಡಿ ಎಂದು ಗ್ರಾಮಸ್ಥರು ಕೇಳುತ್ತಿದ್ದಾರೆ. ಇನ್ನು ಕಳೆದ ಐದು ತಿಂಗಳಲ್ಲಿ 40 ಕ್ಕೂ ಹೆಚ್ಚು ಮನೆಯ ಮುಂದೆ ಕಟ್ಟಿರುವ 60 ಕ್ಕೂ ಹೆಚ್ಚ ಮೇಕೆಗಳನ್ನ ಕದ್ದುಕೊಂಡು ಹೋಗಿದ್ದಾರೆ. ಇನ್ನೂ ಒಮ್ಮೆ ಗ್ರಾಮದಲ್ಲಿ ಒಂದು ಕುರಿಯನ್ನ ಕಳ್ಳತನ ಮಾಡಿಕೊಂಡು ಹೋಗುವಾಗ ಗ್ರಾಮದ ಜನರು ಕಳ್ಳನನ್ನ ಹಿಡಿಯಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ಆತ ಸಿಕ್ಕಿಲ್ಲ. ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕುರಿ, ಮೇಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಜನರು ಒಬ್ಬಂಟಿಯಾಗಿ ಎಲ್ಲಿಯೂ ಹೋಗದಂತಾ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಕೂಡಲೇ ಜಿಲ್ಲೆಯಲ್ಲಿರುವ ಪೊಲೀಸರು ಎಚ್ಚೆತ್ತುಕೊಂಡು ಕಳ್ಳತನ ಪ್ರಕರಣದಲ್ಲಿ ಬಾಗಿಯಾದವರನ್ನ ಪತ್ತೆ ಹಚ್ಚಿ ಕಳ್ಳತನ ಪ್ರಕರಣಗಳನ್ನ ಕಡಿಮೆ ಮಾಡುವಂತೆ ಜನರು ಮನವಿ ಮಾಡುತ್ತಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ