ಎತ್ತಿನ ಬಂಡಿ, ಎತ್ತುಗಳಿಗೂ ಬಂತು ರೇಡಿಯಂ; ಕಲಬುರಗಿ ಸಂಚಾರಿ ಪೊಲೀಸರಿಂದ ಮಹತ್ವದ ಕಾರ್ಯ

ಎತ್ತಿನ ಬಂಡಿ, ಎತ್ತುಗಳಿಗೂ ಬಂತು ರೇಡಿಯಂ; ಕಲಬುರಗಿ ಸಂಚಾರಿ ಪೊಲೀಸರಿಂದ ಮಹತ್ವದ ಕಾರ್ಯ
ಅಪಘಾತ ತಡೆಯಲು ರೇಡಿಯಂ ರಿಫ್ಲೆಕ್ಟರ್​ ಬಳಕೆ

ರಾತ್ರಿ ಸಮಯದಲ್ಲಿ ಸಂಚರಿಸುತ್ತಿದ್ದ ಎತ್ತಿನ ಬಂಡಿಗಳು ಮತ್ತು ಬೀದಿ ಬದಿ ಜಾನುವಾರುಗಳಿಗೆ ರೇಡಿಯಂ ಅಂಟಿಸಲಾಗುತ್ತಿದೆ. ಆ ಮೂಲಕ ಅಪಘಾತಗಳನ್ನು ತಡೆಯುವ ಕೆಲಸವನ್ನು ನಮ್ಮ ಸಂಚಾರಿ ಪೊಲೀಸರು ಮಾಡುತ್ತಿದ್ದಾರೆ.

TV9kannada Web Team

| Edited By: preethi shettigar

Jan 28, 2022 | 11:28 AM

ಕಲಬುರಗಿ: ಅಪಘಾತಗಳನ್ನು ಕಡಿಮೆ ಮಾಡಲು ಅನೇಕ ರೀತಿಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಅದರಲ್ಲೂ ರೇಡಿಯಂ ಬಳಕೆ ಎಲ್ಲ ಕಡೆ ಮಾಡಲಾಗುತ್ತಿದೆ. ರಸ್ತೆ ಪಕ್ಕದಲ್ಲಿರುವ ಫಲಕಗಳ ಮೇಲೆ, ವಾಹನಗಳ ಮೇಲೆ ರೇಡಿಯಂ ಅನ್ನು ಅಂಟಿಸಲಾಗಿರುತ್ತದೆ. ಇದರ ಉದ್ದೇಶ, ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ರಸ್ತೆ ಫಲಕಗಳು ಕಾಣಬೇಕು. ವಾಹನಗಳು ಕಾಣಬೇಕು. ರಸ್ತೆಯ ತಿರುವುಗಳು ಗೊತ್ತಾಗಬೇಕು. ಆ ಮೂಲಕ ಅಪಘಾತಗಳನ್ನು ತಡೆಯಬೇಕು ಎನ್ನುವ ಉದ್ದೇಶವಿದೆ. ಆದರೆ ರಾತ್ರಿ(Night) ಸಮಯದಲ್ಲಿ ರಸ್ತೆಯಲ್ಲಿ ರೈತರು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ(Highway) ತಮ್ಮ ಎತ್ತಿನ ಬಂಡಿ ತಗೆದುಕೊಂಡು ಹೋಗಲು ಪಡಬಾರದ ಕಷ್ಟ ಪಡಬೇಕಾಗಿತ್ತು. ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಿತ್ತು. ವಾಹನ ಸವಾರರಿಗೆ ಎತ್ತಿನ ಬಂಡಿ ಕಾಣದೇ ಇರುತ್ತಿದ್ದರಿಂದ ಅಪಘಾತಗಳು ಹೆಚ್ಚಾಗಿದ್ದವು. ಅನೇಕ ಜಾನುವಾರುಗಳು, ರೈತರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದರು. ಅದರಲ್ಲೂ ರಸ್ತೆಯಲ್ಲಿಯೇ ಹೆಚ್ಚು ಇರುವ ಬಿದಿ ದನಗಳು ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದವು. ಆದರೆ ಇದೀಗ ಕಲಬುರಗಿ ಸಂಚಾರಿ ಪೊಲೀಸರು(Traffic Police) ರೈತರ ಆತಂಕವನ್ನು ದೂರ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಎತ್ತಿನ ಬಂಡಿ, ಎತ್ತುಗಳಿಗೆ ರೇಡಿಯಂ

ಸಾಮಾನ್ಯವಾಗಿ ವಾಹನಗಳಿಗೆ, ರಸ್ತೆ ಫಲಕಗಳಿಗೆ ರೇಡಿಯಂ ಅಂಟಿಸಲಾಗುತ್ತದೆ. ಆದರೆ ಇದೀಗ ಕಲಬುರಗಿ ನಗರ ಸಂಚಾರಿ ಪೊಲೀಸರು, ಒಂದು ಹೆಜ್ಜೆ ಮುಂದೆ ಹೋಗಿ, ಎತ್ತಿನ ಬಂಡಿಗಳಿಗೆ, ಎತ್ತಿನ ಕೊಂಬುಗಳಿಗೆ ರೇಡಿಯಂ ರಿಪ್ಲೆಕ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದಾರೆ. ಕಲಬುರಗಿ ನಗರ ಮತ್ತು ಕಲಬುರಗಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಯಲ್ಲಿರುವ ಎತ್ತುಗಳಿಗೆ ಮತ್ತು ಎತ್ತಿನ ಬಂಡಿಗಳಿಗೆ ರೇಡಿಯಂ ರಿಪ್ಲೆಕ್ಟರ್ ಅಂಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ತಾವು ರಾತ್ರಿ ಕೆಲಸದ ಸಮಯದಲ್ಲಿ ಓಡಾಡುವಾಗ, ರಸ್ತೆ ಪಕ್ಕದಲ್ಲಿ ಹೋಗುವ ಎತ್ತಿನ ಬಂಡಿಗಳು ಮತ್ತು ಎತ್ತುಗಳಿಗೆ ರೇಡಿಯಂ ಅಂಟಿಸುತ್ತಿದ್ದಾರೆ.  ರಸ್ತೆ ಬದಿಯಿರುವ ಜಾನುವಾರುಗಳಿಗೆ ಕೂಡಾ ರೇಡಿಯಂ ಅಂಟಿಸುವ ಕೆಲಸವನ್ನು ಕಳೆದ ಕೆಲ ದಿನಗಳಿಂದ ಮಾಡುತ್ತಿದ್ದಾರೆ.

ಅಪಘಾತ ತಡೆಯಲು ರೇಡಿಯಂ ರಿಫ್ಲೆಕ್ಟರ್ ಬಳಕೆ

ಸಾಮಾನ್ಯವಾಗಿ ವಾಹನಗಳಿಗೆ ರೇಡಿಯಂ ಅಂಟಿಸಿರಲಾಗುತ್ತದೆ. ಹೀಗಾಗಿ ರಾತ್ರಿ ಸಮಯದಲ್ಲಿ ರಸ್ತೆ ಮೇಲೆ ಹೋಗುವ ವಾಹನಗಳ ಮೇಲೆ ಬೆಳಕು ಬಿದ್ದಾಗ ರೆಡಿಯಂನಿಂದಾಗಿ ವಾಹನಗಳ ಬಗ್ಗೆ ಚಾಲಕರಿಗೆ ಗೊತ್ತಾಗುತ್ತದೆ. ಆದರೆ ರಸ್ತೆ ಪಕ್ಕದಲ್ಲಿ ಹೋಗುತ್ತಿರುವ ಎತ್ತಿನ ಬಂಡಿಗಳು, ಜಾನುವಾರುಗಳು ಸುಲಭವಾಗಿ ಕಣ್ಣಿೀಗೆ ಬೀಳುವುದಿಲ್ಲ. ಅದರಲ್ಲೂ ಎದರು ಬದರು ವಾಹನಗಳು ಬಂದಾಗ ಎರಡು ಕಡೆಯ ಲೈಟ್​ಗಳಿಂದ ಹೆಚ್ಚಿನ ಬೆಳಕು ಪ್ರಜ್ವಲಿಸಿದಾಗ ಎತ್ತಿನ ಬಂಡಿಗಳು, ಜಾನುವಾರುಗಳು ಚಾಲಕರಿಗೆ ಕಾಣುವುದಿಲ್ಲ. ಹೀಗಾಗಿ  ರಸ್ತೆ ಬದಿ ಹೋಗುವ ಎತ್ತಿನ ಬಂಡಿಗಳಿಗೆ ವಾಹನಗಳು ಗುದ್ದಿರುವ ಅನೇಕ ಉದಾಹರಣೆಗಳಿವೆ. ತಮ್ಮ ಕೃಷಿ ಕೆಲಸಗಳನ್ನು ಮುಗಿಸಿಕೊಂಡು ಜಮೀನಿನಿಂದ ಮನೆಗಳಿಗೆ ತಮ್ಮ ಪಾಡಿಗೆ ರೈತರು ಎತ್ತಿನ ಬಂಡಿಗಳನ್ನು ತಗೆದುಕೊಂಡು ಹೋಗುತ್ತಿದ್ದಾಗ, ವಾಹನ ಚಾಲಕರ ಕಣ್ಣಿಗೆ ಬೀಳದೆ ಇರುವುದರಿಂದ ಉಂಟಾಗುವ ಅಪಘಾತದಲ್ಲಿ ಹೆಚ್ಚಿನ ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಜಾನುವಾರುಗಳು ಕೂಡಾ ಜೀವ ಕಳೆದುಕೊಳ್ಳುತ್ತಿದ್ದವು.

ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಅಪಘಾತದಲ್ಲಿ ಜಾನುವಾರುಗಳು ಮತ್ತು ರೈತರು ಅಪಘಾತಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು,  ಅಪಘಾತಗಳನ್ನು ತಪ್ಪಿಸಲು ರೇಡಿಯಂ ಮೊರೆ ಹೋಗಿದ್ದಾರೆ. ಎಲ್ಲಾ ಎತ್ತಿನ ಬಂಡಿಗಳಿಗೆ ಹಿಂದೆ ಮತ್ತು ಮುಂದಿನ ಭಾಗಕ್ಕೆ ರೇಡಿಯಂ ಅಂಟಿಸುತ್ತಿದ್ದಾರೆ.  ಜಾನುವಾರುಗಳ ಕೊಂಬಿಗೆ ಕೂಡಾ ರೇಡಿಯಂ ಅಂಟಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಎತ್ತಿನ ಬಂಡಿಗಳು, ಜಾನುವಾರುಗಳು ಇದ್ದರೆ, ಸುಲಭವಾಗಿ ವಾಹನ ಸವಾರರಿಗೆ ಎತ್ತಿನ ಬಂಡಿಗಳು ಮತ್ತು ಜಾನುವಾರುಗಳು ಇರುವಿಕೆ ಬಗ್ಗೆ ಗೊತ್ತಾಗಲಿದೆ. ಇದರಿಂದ ಅಪಘಾತಗಳ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಿವೆ. ಕಲಬುರಗಿ ಸಂಚಾರಿ ಠಾಣೆಯ ಇನ್ಸೆಪೆಕ್ಟರ್ ಶಾಂತಿನಾಥ್. ಪ್ರತಿ ತಿಂಗಳು ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಐದರಿಂದ ಹತ್ತು ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಎತ್ತಿನ ಬಂಡಿಗಳಿಗೆ, ಜಾನಾವುರಗಳಿಗೆ ರೇಡಿಯಂ ಅಂಟಿಸುತ್ತಿರುವುದರಿಂದ ಅಪಘಾತಗಳು ಕಡಿಮೆಯಾಗಿವೆ ಎಂದು ಸಂಚಾರಿ ಎಸಿಪಿ ಸುಧಾ ಆದಿ ತಿಳಿಸಿದ್ದಾರೆ.

ಇನ್ನು ಕಲಬುರಗಿ ಸಂಚಾರಿ ಪೊಲೀಸರು ರೈತರ ಎತ್ತಿನ ಬಂಡಿಗಳಿಗೆ, ಜಾನುವಾರುಗಳಿಗೆ ರೇಡಿಯಂ ಅಂಟಿಸುತ್ತಿರುವುದಕ್ಕೆ ರೈತರಿಂದ ಯಾವುದೇ ಹಣ ಪಡೆಯುತ್ತಿಲ್ಲ. ಬದಲಾಗಿ ಉಚಿತವಾಗಿ ಎತ್ತಿನ ಬಂಡಿಗಳಿಗೆ, ಜಾನುವಾರುಗಳಿಗೆ ರೇಡಿಯಂ ಅಂಟಿಸುತ್ತಿದ್ದಾರೆ. ಸರ್ಕಾರದಿಂದ ಇಲಾಖೆಗೆ ರೇಡಿಯಂ ಬಂಡಲ್​ಗಳು ಬಂದಿದ್ದು. ಈ ಮೊದಲು ಫಲಕಗಳು ಸೇರಿದಂತೆ ಅನೇಕ ಕಡೆ ಹೆಚ್ಚಾಗಿ ರೇಡಿಯಂ ಬಳಕೆಯನ್ನು ಮಾಡಿಕೊಳ್ಳುತ್ತಿದ್ದ ಪೊಲೀಸರು, ಇದೀಗ ಎತ್ತಿನ ಬಂಡಿಗಳಿಗೆ, ಜಾನುವಾರುಗಳಿಗೆ ರೇಡಿಯಂ ಅಂಟಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ರಾತ್ರಿ ಸಮಯದಲ್ಲಿ ಸಂಚರಿಸುತ್ತಿದ್ದ ಎತ್ತಿನ ಬಂಡಿಗಳು ಮತ್ತು ಬೀದಿ ಬದಿ ಜಾನುವಾರುಗಳಿಗೆ ರೇಡಿಯಂ ಅಂಟಿಸಲಾಗುತ್ತಿದೆ. ಆ ಮೂಲಕ ಅಪಘಾತಗಳನ್ನು ತಡೆಯುವ ಕೆಲಸವನ್ನು ನಮ್ಮ ಸಂಚಾರಿ ಪೊಲೀಸರು ಮಾಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ವಾಹನ ಚಾಲಕರಿಗೆ ಎತ್ತಿನ ಬಂಡಿಗಳು, ಜಾನುವಾರುಗಳು ಕಾಣದೇ ಇದ್ದಿದ್ದರಿಂದ ಹೆಚ್ಚು ಅಪಘಾತಗಳು ಉಂಟಾಗುತ್ತಿದ್ದವು. ಆದರೆ ರೇಡಿಯಂ ಅಂಟಿಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕಲಬುರಗಿ ನಗರ ಡಿಸಿಪಿ ಅಡ್ಡೂರು ಶ್ರೀನಿವಾಸಲು ಹೇಳಿದ್ದಾರೆ.

ನಾವು ಪ್ರತಿ ದಿನ ರಾತ್ರಿ ನಮ್ಮ ಜಮೀನಿನಿಂದ ಮನೆಗೆ ಎತ್ತಿನ ಬಂಡಿಯಲ್ಲಿ ತೆರಳುತ್ತೇವೆ. ಮೊದಲು ಜೀವ ಭಯದಲ್ಲಿಯೇ ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದವು. ನಮ್ಮ ಎತ್ತಿನ ಬಂಡಿ, ವಾಹನ ಚಾಲಕರಿಗೆ ಗೊತ್ತಾಗುತ್ತಿರಲಿಲ್ಲ. ಆದರೆ ಇದೀಗ ಕಲಬುರಗಿ ಪೊಲೀಸರು ರೇಡಿಯಂ ಅಂಟಿಸಿರುವುದರಿಂದ ವಾಹನ ಚಾಲಕರಿಗೆ ಎತ್ತಿನ ಬಂಡಿ ಹೋಗುತ್ತಿರುವುದು ಗೊತ್ತಾಗುತ್ತಿದೆ. ಇದರಿಂದ ನಾವು ಕೂಡ ನಿರಾಳವಾಗಿ ರಸ್ತೆ ಬದಿ ಹೋಗಲಿಕ್ಕೆ ಸಾಧ್ಯವಾಗಿದೆ ಎಂದು ರೈತ ಕಲ್ಲಪ್ಪ ಹೇಳಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ:

Bullock Cart Race: ಎತ್ತಿನ ಬಂಡಿ ಓಟಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್; ಮಹಾರಾಷ್ಟ್ರದಲ್ಲಿ ಮತ್ತೆ ಆರಂಭವಾಗಲಿದೆ ಸ್ಪರ್ಧೆ

ತಮಿಳುನಾಡು ಪೊಲೀಸರಿಂದ ರಸ್ತೆ ಮಾರ್ಗ ವ್ಯವಸ್ಥೆಯಾಗಿತ್ತು, ಆದರೆ ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್​​ನಲ್ಲಿ​​ ಪ್ರಯಾಣ

Follow us on

Related Stories

Most Read Stories

Click on your DTH Provider to Add TV9 Kannada