ಮಿನಿ ಟ್ರ್ಯಾಕ್ಟರ್ ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾವು
ಮಿನಿ ಟ್ರ್ಯಾಕ್ಟರ್ ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಮೋಘಾ.ಕೆ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ಮಿನಿ ಟ್ರ್ಯಾಕ್ಟರ್ (mini-tractor) ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಮೋಘಾ.ಕೆ ಗ್ರಾಮದಲ್ಲಿ ನಡೆದಿದೆ. ವಿನೋದ್ ಜಮಾದಾರ್(10), ಪ್ರಕಾಶ್ ಬನಸೂಡೆ(32) ಮೃತರು. ಇಂದು ಬೆಳಗ್ಗೆ ಜೋಳ ಬಿತ್ತನೆ ಮಾಡಲು ಟ್ರ್ಯಾಕ್ಟರ್ನಲ್ಲಿ ಹೊಲಕ್ಕೆ ಹೋಗುತ್ತಿದ್ದಾಗ ದಿಬ್ಬದ ಮೇಲಿಂದ ಟ್ರ್ಯಾಕ್ಟರ್ ಪಲ್ಟಿಯಾಗಿ ಘಟನೆ ಸಂಭವಿಸಿದೆ. ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಶಿಕ್ಷಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನಮಸಾಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಳೇಕಲ್ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಸಪ್ಪ ಹಿರೇಹಾಳ ಮೃತರು. ಮೂಲತಃ ಬೊಮ್ಮನಾಳ ಗ್ರಾಮದವರು. ನಿಲೋಗಲ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ಕ್ರಿಕೇಟ್ ಬೆಟ್ಟಿಂಗ್ ಮೇಲೆ ದಾಳಿ ಇಬ್ಬರು ಬಂಧನ: 2.12 ಲಕ್ಷ ಹಣ ವಶಕ್ಕೆ
ಬಳ್ಳಾರಿ: ಕ್ರಿಕೇಟ್ ಬೆಟ್ಟಿಂಗ್ ಮೇಲೆ ಪೊಲೀಸರು ದಾಳಿ ಇಬ್ಬರನ್ನು ಬಂಧಿಸಿದ್ದು, 2.12 ಲಕ್ಷ ಹಣ, TV, ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಬಳ್ಳಾರಿಯ ಹನುಮಾನ್ ನಗರದ ಟೀ ಶಾಪ್‌ಯೊಂದರಲ್ಲಿ ಬೆಟ್ಟಿಂಗ್ ವೇಳೆ ದಾಳಿ ಮಾಡಲಾಗಿದೆ. ಬಾಪೂಜಿ ಬಡವಾಣೆಯ ಆರ್, ಮಂಜುನಾಥ್ (35) ಹಾಗೂ ವಿಶಾಲ್ ನಗರದ ಆರ್ ಯುವರಾಜ್(24) ಬಂಧಿತ ಆರೋಪಿಗಳು. ಭಾರತ-ದಕ್ಷಿಣ ಆಫ್ರಿಕಾ ಟಿ 20. ವಿಶ್ವ ಕಪ್ ಮ್ಯಾಚ್‌ಗೆ ಬಂಧಿತ ಆರೋಪಿಗಳು ಬೆಟ್ಟಿಂಗ್ ನಡೆಸುತ್ತಿದ್ದರು. ಬಳ್ಳಾರಿ ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
‘ಅನ್ನಭಾಗ್ಯ’ ಅಕ್ಕಿಗೆ ಕನ್ನ ಆರೋಪದಡಿ ಪುರಸಭಾ ಸದಸ್ಯ ಬಂಧನ
ಮೈಸೂರು: ‘ಅನ್ನಭಾಗ್ಯ’ ಅಕ್ಕಿಗೆ ಕನ್ನ ಆರೋಪದಡಿ ಪುರಸಭಾ ಸದಸ್ಯ ಸೇರಿದಂತೆ 7 ಜನರ ಬಂಧನ ಮಾಡಲಾಗಿದೆ. ಜಿಲ್ಲೆಯ ಟಿ.ನರಸೀಪುರ ಪುರಸಭೆ ಬಿಜೆಪಿ ಸದಸ್ಯ ಎಸ್.ಕೆ.ಕಿರಣ್ನ್ನು ಸೆರೆ ಹಿಡಿಯಲಾಗಿದೆ. ಸುಮಾರು 20 ಲಕ್ಷ ಮೌಲ್ಯದ ‘ಅನ್ನಭಾಗ್ಯ’ ಯೋಜನೆ ಅಕ್ಕಿ ಪತ್ತೆಯಾಗಿದೆ. ಪುರಸಭೆ ಸದಸ್ಯ ಕಿರಣ್ಗೆ ಸೇರಿದ ಗೋದಾಮಿನಲ್ಲಿ ರಾಶಿ ರಾಶಿ ಮೂಟೆ ಪತ್ತೆಯಾಗಿದ್ದು, ಕಾಳಸಂತೆಯಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಮಾರುತ್ತಿದ್ದ ಆರೋಪ ಕೇಳಿಬಂದಿದೆ. ಮೈಸೂರು ಎಸ್ಪಿ ಚೇತನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿ, ಪುರಸಭೆ ಬಿಜೆಪಿ ಸದಸ್ಯ ಕಿರಣ್, ತಂದೆ ಸೇರಿದಂತೆ 7 ಜನರ ಬಂಧನ ಮಾಡಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್, ಆಹಾರ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿದರು. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
ನೆಲಮಂಗಲ: ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಇದೀಗ ಸಾವನ್ನಪ್ಪಿದ್ದಾರೆ. ಅ.12 ರಂದು ಬೈಕ್ ಮೂಲಕ ಬರುತ್ತಿದ್ದ ಬೆಂಗಳೂರು ಉತ್ತರ ತಾಲೂಕಿನ ದೊಡ್ಡಕುಕ್ಕನಹಳ್ಳಿ ನಿವಾಸಿ ನರಸಿಂಹ ಮೂರ್ತಿ (55) ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೇಸರಘಟ್ಟದ ದೇವೇಗೌಡನಗರದ ಬಳಿ ಬರುತ್ತಿದ್ದಾಗ ಹಳೇ ಆಲದಮರ ಬಿದ್ದಿದೆ. ಘಟನೆಯಲ್ಲಿ ನರಸಿಂಹ ಮೂರ್ತಿಯವರ ತಲೆ, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗ ಅವರು ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ.
ಕಾಮಗಾರಿ ಸೂಚನಾ ಫಲಕಕ್ಕೆ ಬೈಕ್ ಡಿಕ್ಕಿ, ಇಬ್ಬರು ಸಾವು
ಬೆಂಗಳೂರು: ಮದ್ಯ ಸೇವಿಸಿ ಬೈಕ್ ಚಾಲನೆ ಮಾಡಿ ಸೆಲ್ಫ್ ಆಕ್ಸಿಡೆಂಟ್ಗೆ ಯುವಕರಿಬ್ಬರು ಬಲಿಯಾಗಿರುವಂತಹ ಘಟನೆ ನಿನ್ನೆ ತಡರಾತ್ರಿ 11:45 ರ ಸಮಯದಲ್ಲಿ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ. ದೇವರಾಜು(22 ) ಹಾಗೂ ಜಗದೀಶ್(22) ಸಾವನಪ್ಪಿರುವ ಯುವಕರು. ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಜಗದೀಶ್, ಈ ವೇಳೆ ಸೂಚನಾ ಫಲಕ ಬೋರ್ಡ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಕೆಸಿ ಜನರಲ್ ಆಸ್ಪತ್ರೆ ಗೆ ಸೇರಿಸುವ ಮಾರ್ಗ ಮಧ್ಯ ಜಗದೀಶ್ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ದೇವರಾಜ್ ನನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತನಾಗಿದ್ದಾನೆ. ರಾಜಾಜಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:45 pm, Mon, 31 October 22