ಕಲಬುರಗಿಯಲ್ಲಿ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ: ಕಣ್ಣಿದ್ದು ಕುರುಡರಾದ ಪೊಲೀಸರು, ಅಧಿಕಾರಿಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 27, 2022 | 3:06 PM

ಕಲಬುರಗಿಯಲ್ಲಿ ಕಾನೂನು ಬಾಹಿರವಾಗಿ ಗೃಹಬಳಕೆಯ ಸಿಲಿಂಡರ್​ಗಳನ್ನು ವಾಣಿಜ್ಯ ಬಳಕೆಗೆ ಬಳಸಲಾಗುತ್ತಿದ್ದು, ಕೆಲವು ಆಟೋ ಚಾಲಕರು ಪುಡಿಗಾಸು ಉಳಿಸಲು ದಿನನಿತ್ಯ ಸಂಚರಿಸುವ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಕಲಬುರಗಿಯಲ್ಲಿ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ: ಕಣ್ಣಿದ್ದು ಕುರುಡರಾದ ಪೊಲೀಸರು, ಅಧಿಕಾರಿಗಳು
ಕಲಬುರಗಿ
Follow us on

ಕಲಬುರಗಿ: ನಗರದಲ್ಲಿ ಆಟೋ ಸೇರಿದಂತೆ ಇನ್ನಿತರ ವಾಹನಗಳಿಗೆ ಅಡುಗೆ ಸಿಲಿಂಡರ್​ಗಳನ್ನು ರಿಫಿಲ್ಲಿಂಗ್ ಮಾಡುವ ದೊಡ್ಡ ದಂಧೆ ನಡೆಯುತ್ತಿದೆ. ಸರ್ಕಾರ ಗೃಹ ಬಳಕೆಯ ಸಿಲಿಂಡರ್​ಗಳನ್ನು ವಾಣಿಜ್ಯ ಬಳಕೆಗೆ ಬಳಸುವುದಕ್ಕೆ ಅವಕಾಶ ನೀಡಿಲ್ಲ. ಆದರೂ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಬಳಸಲಾಗುತ್ತಿದೆ. ಆಟೋ ಮತ್ತು ಇನ್ನಿತರ ವಾಹನಗಳಿಗೆ ಬಳಸುವ ಗ್ಯಾಸ್​ ​ಕಡಿಮೆ ಧಹನಶಕ್ತಿ ಇರುತ್ತದೆ. ಆದರೆ ಅಡುಗೆ ಸಿಲಿಂಡರ್​ ಹೆಚ್ಚಿನ ಧಹನಶಕ್ತಿಯನ್ನು ಹೊಂದಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರು ವಾಹನಗಳು ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅನೇಕ ಬಾರಿ ಅಡುಗೆ ಸಿಲಿಂಡರ್​ಗಳನ್ನು ವಾಹನಗಳಿಗೆ ರಿಫಿಲ್ಲಿಂಗ್ ಮಾಡುವಾಗ ಸ್ಟೋಟಗೊಂಡು ಸಾವನ್ನಪ್ಪಿರುವ ಉದಾಹರಣೆಗಳಿವೆ.

ಈಗಾಗಲೇ ನಗರದಲ್ಲಿ ಐವತ್ತಕ್ಕೂ ಹೆಚ್ಚು ಕಡೆ ಅಕ್ರಮವಾಗಿ ಇಂತಹದೊಂದು ದಂಧೆಯನ್ನು ಮಾಡಲಾಗುತ್ತಿದೆಯಂತೆ. ಕಲಬುರಗಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಆಟೋಗಳು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುತ್ತವೆ. ಇವುಗಳಲ್ಲಿ ಹೆಚ್ಚಿನ ಆಟೋಗಳು ಗ್ಯಾಸ್​ನ್ನು ಬಳಕೆ ಮಾಡುತ್ತದೆ. ಬಹುತೇಕ ಆಟೋ ಚಾಲಕರು, ಗ್ಯಾಸ್ ಸ್ಟೇಷನ್​ಗೆ ಹೋಗಿ ಗ್ಯಾಸ್​ನ್ನು ಭರ್ತಿ ಮಾಡುತ್ತಿಲ್ಲ. ಬದಲಾಗಿ ಅಡುಗೆ ಸಿಲಿಂಡರ್​ಗಳನ್ನು ಆಟೋಗಳಿಗೆ ಭರ್ತಿ ಮಾಡುತ್ತಿದ್ದಾರೆ. ಇದರಿಂದ ಆಟೋ ಚಾಲಕರಿಗೆ ಸ್ವಲ್ಪ ಹಣ ಉಳಿತಾಯವಾಗುತ್ತದೆಯಂತೆ. ಸದ್ಯ ಎಲ್.ಪಿ.ಜಿ ಸ್ಟೇಷನ್​ಗಳಲ್ಲಿ ಪ್ರತಿ ಲೀಟರ್ ಗ್ಯಾಸ್​ನ ಬೆಲೆ 64 ರೂಪಾಯಿ ಇದೆಯಂತೆ.

ಇನ್ನು ಪ್ರತಿ ಕಿಲೋ  ಗ್ಯಾಸ್​ನ್ನು ನೂರರಿಂದ ನೂರಾ ಐದು ರೂಪಾಯಿ ಕೊಟ್ಟು ಆಟೋ ಚಾಲಕರು ಅಕ್ರಮವಾಗಿ ರಿಫಿಲ್ಲಿಂಗ್ ಮಾಡಿಸಿಕೊಳ್ಳುತ್ತಿದ್ದಾರಂತೆ. ಇನ್ನು ಒಂದು ಕಿಲೋ ಸಿಲಿಂಡರ್, 1.79 ಲಿಟರ್ ಗ್ಯಾಸ್​ಗೆ ಸಮವಾಗಿರುತ್ತದೆ. ಅಂದರೆ ಆಟೋ ಚಾಲಕರಿಗೆ ಗ್ಯಾಸ್ ಸ್ಟೇಷಸ್​ನಲ್ಲಿ ಗ್ಯಾಸ್ ಬರ್ತಿ ಮಾಡಿಸಿಕೊಳ್ಳುವುದಕ್ಕಿಂತ ತುಸು ಕಡಿಮೆ ದರದಲ್ಲಿ ಅಡುಗೆ ಸಿಲಿಂಡರ್ ಗ್ಯಾಸ್ ಸಿಗುತ್ತದೆಯಂತೆ. ಹೀಗಾಗಿ ಹೆಚ್ಚಿನ ಆಟೋ ಚಾಲಕರು ಅಡುಗೆ ಸಿಲಿಂಡರ್ ಗ್ಯಾಸ್ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಅನೇಕ ಅಕ್ರಮ ದಂಧೆಕೋರರು, ಗ್ಯಾಸ್ ಪೂರೈಕೆದಾರರ ಜೊತೆ ಸಂಬಂಧ ಹೊಂದಿದ್ದು, ಜನರಿಗೆ ಪೂರೈಕೆ ಮಾಡುವ ಸಿಲಿಂಡರ್​ಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಆಟೋ ಚಾಲಕರಿಗೆ ನೀಡುತ್ತಿದ್ದಾರೆ. ಇನ್ನು ಇಂತಹದೊಂದು ದಂಧೆಯ ಬಗ್ಗೆ ಕಲಬುರಗಿ ಪೊಲೀಸರಿಗೆ, ಆಹಾರ ಇಲಾಖೆಯವರಿಗೆ ಮಾಹಿತಿ ಇದೆಯಂತೆ. ಆದರೆ ಪೊಲೀಸರು ಮತ್ತು ಆಹಾರ ಇಲಾಖೆಯವರು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಅಕ್ರಮ ದಂಧೆ ಅವ್ಯಾಹುತವಾಗಿ ನಡೆಯುತ್ತಿದೆ.

ಇದನ್ನೂ ಓದಿ:ಅನಿವಾರ್ಯತೆ ಕಲಿಸದ ಬದುಕಿನ ಪಾಠ: ಕಲಬುರಗಿ ಯುವಕನಿಗೆ ಕಾಲುಗಳೇ ಕೈಗಳು, ರಾಹುಲ್​ನಿಂದ ಬಂತು ಅಪರೂಪದ ಗಿಫ್ಟ್

ಒಟ್ಟಿನಲ್ಲಿ ಪ್ರಯಾಣಿಕರ ಜೊತೆ ಚೆಲ್ಲಾಟಾವಾಡುತ್ತಿರುವ ಆಟೋ ಚಾಲಕರು ಮತ್ತು ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿರುವ ದಂಧೆಕೋರರ ವಿರುದ್ದ ಪೊಲೀಸರು ಮತ್ತು ಆಹಾರ ಇಲಾಖೆಯವರು ಕಠಿನ ಕ್ರಮ ಕೈಗೊಳ್ಳುವ ಮೂಲಕ ಅಕ್ರಮ ದಂಧೆಗೆ ಕಡಿವಾಣ ಹಾಕಿ, ಜನರ ಪ್ರಾಣವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ.

ವರದಿ: ಸಂಜಯ್,ಟಿವಿ9 ಕಲಬುರಗಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ