ಕಲಬುರಗಿಯಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ಗೆ ಮರುಜೀವ: ಏನಿದು ಯೋಜನೆ? ಇಲ್ಲಿದೆ ಡಿಟೇಲ್ಸ್
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ್ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಚಾಲನೆ ನೀಡಿದರು.
ಕಲಬುರಗಿ: ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ಆದರೆ ಇಂದಿನ ಬಹುತೇಕ ಮಕ್ಕಳಲ್ಲಿ ಶಿಸ್ತು ಕಡಿಮೆಯಾಗಿದೆ. ಮಕ್ಕಳ ಮನಸ್ಸು, ಅಧ್ಯನಯಕ್ಕಿಂತ ಅನಾವಶ್ಯಕ ವಿಷಯದ ಮೇಲೆ ಹೆಚ್ಚಾಗಿ ಕೇಂದ್ರಿತವಾಗುತ್ತಿದೆ. ಹೀಗಾಗಿ ಮಕ್ಕಳೇ, ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಉದಾಹರಣೆಗಳಿವೆ. ಆದರೆ ಇದನ್ನು ತಡೆದು ಮಕ್ಕಳಲ್ಲಿ ಶಿಶ್ತು, ಆದರ್ಶ, ನೈತಿಕತೆ, ಕಾನೂನು ಅರಿವು ಮೂಡಿಸಲು ವಿದ್ಯಾರ್ಥಿ ಪೊಲೀಸ್ ಕೆಡೆಟ್ (Student police cadet) ಗೆ ಮರುಜೀವ ಪಡೆದುಕೊಂಡಿದೆ. ಇದೀಗ ಅನೇಕ ಕಡೆ ವಿದ್ಯಾರ್ಥಿ ಪೊಲೀಸ್ ಕೆಡೆಟ್ಗೆ ಇಂದು ಚಾಲನೆ ನೀಡಲಾಗಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ್ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಚಾಲನೆ ನೀಡಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಸಹಕಾರಿಯಾಗಲಿದೆ. ಮಕ್ಕಳಲ್ಲಿ ಶಿಸ್ತು ಮೂಡಿದ್ರೆ ಅವರು ಉತ್ತಮ ಪ್ರಜೆಗಳಾಗಿ ರೂಪಗೊಳ್ಳುತ್ತಾರೆ ಎಂದು ಇಶಾ ಪಂತ್ ಅಭಿಪ್ರಾಯ ಪಟ್ಟರು. ಡಿವೈಎಸ್ಪಿಗಳಾದ ಜೆ.ಎಚ್ ಇನಾಂದಾರ್, ಚಿಕ್ಕಮಠ ಸೇರಿದಂತೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಿಲ್ಲೆಯ ಮೂವತ್ನಾಲ್ಕು ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯಾ ಪೊಲೀಸ್ ಠಾಣೆಯ ಇನ್ಸೆಪಕ್ಟರ್, ಶಿಕ್ಷಣಾಧಿಕಾರಿಗಳು, ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆಗೆ ಚಾಲನೆ ನೀಡಿದ್ದಾರೆ.
ಏನಿದು ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆ
ಈಗಾಗಲೇ ಕಾಲೇಜು ಹಂತದಲ್ಲಿ ಎನ್ಸಿಸಿ, ಎನ್ಎಸ್ಎಸ್, ಶಾಲಾ ಹಂತದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸೇರಿದಂತೆ ಅನೇಕ ಕಾರ್ಯಕ್ರಮಗಳು ಇವೆ. ಇವೆಲ್ಲವು ಕೂಡಾ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಾಜಿಕ ಕಾಳಜಿಯನ್ನು ಬೆಳೆಸುವ ಉದ್ದೇಶದಿಂದಲೇ ಇರುವಂತವು. ಇವುಗಳಲ್ಲಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕೂಡ ಒಂದು. ಇದರಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಮಾಡಿಕೊಂಡ ಶಾಲೆಯ ಎಂಟು ಮತ್ತು ಒಂಬತ್ತನೆ ತರಗತಿ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ಪೊಲೀಸ್ ಕೆಡೆಟ್ ಅಂತ ಪರಿಗಣಿಸಿ, ಅವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ, ಪೊಲೀಸ್ ಸಿಬ್ಬಂದಿಯಿಂದ ತರಬೇತಿಯನ್ನು ನೀಡಲಾಗುತ್ತದೆ.
ವಿದ್ಯಾರ್ಥಿ ಪೊಲೀಸ್ ಕೆಡೆಟ್ ಉದ್ದೇಶ
ವಿದ್ಯಾರ್ಥಿ ಮತ್ತು ಪೊಲೀಸ್ ಕೆಡೆಟ್ ಉದ್ದೇಶ ಸ್ವಸ್ಥ ಸಮಾಜದ ನಿರ್ಮಾಣ. ವಿದ್ಯಾರ್ಥಿ ಹಂತದಲ್ಲಿಯೇ ಕಾನೂನಿನ ಅರಿವು ಮೂಡಿಸುವದರಿಂದ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡುವದೇ ಇದರ ಉದ್ದೇಶವಾಗಿದ್ದು, ಅದಕ್ಕಾಗಿ ಅನೇಕ ರೀತಿಯ ತರಬೇತಿಯನ್ನು ಯೋಜನೆ ಮೂಲಕ ನೀಡಲಾಗುತ್ತದೆ. ಪ್ರತಿ ಶನಿವಾರ, ಎರಡರಿಂದ ಮೂರು ಗಂಟೆಗಳ ಕಾಲ ಶಾಲೆಯಲ್ಲಿಯೇ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳು, ಶಿಸ್ತು, ಕಾನೂನು ಪಾಲನೆ, ಮಾದಕ ವಸ್ತುಗಳ ಬಗ್ಗೆ ಜಾಗೃತಿ, ಸಾಮಾಜಿಕ ಜವಾಬ್ಧಾರಿ, ಮೊಬೈಲ್ ಬಳಕೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುತ್ತಾರೆ. ಇನ್ನೊಂದಡೆ ಪೊಲೀಸ್ ಸಿಬ್ಬಂದಿ, ಪರೇಡ್ ಮಾಡುವುದು, ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡುವದು ಸೇರಿದಂತೆ ಅನೇಕ ವಿಷಯಗಳನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ತರಬೇತು ನೀಡುವ ಕೆಲಸವನ್ನು ಮಾಡುತ್ತಾರೆ.
ಪರೇಡ್ನಿಂದ ಮಕ್ಕಳಲ್ಲಿ ಶಿಸ್ತು ಹೆಚ್ಚಾಗುತ್ತದೆ. ಹೀಗಾಗಿ ವಿದ್ಯಾರ್ಥಿ ಪೊಲೀಸ್ ಕೆಡೆಟ್ಗಳಿಗೆ ಕೂಡಾ ಪರೇಡ್ ಮಾಡಿಸಲಾಗುತ್ತದೆ. ಇನ್ನು ವಿದ್ಯಾರ್ಥಿ ಪೊಲೀಸ್ ಕೆಡೆಟ್ಗಳಿಗೆ ಪೊಲೀಸ್ ಠಾಣೆಗಳಿಗೆ ಕರೆದುಕೊಂಡು ಹೋಗಿ, ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಾರೆ ಅನ್ನೋ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೆಲವು ಬಂದೋಬಸ್ತ್ ಜಾಗಕ್ಕೆ ಹೋಗಿ ಕೂಡ ಅವರಿಗೆ ಪ್ರಾಯೋಗಿಕ ಮಾಹಿತಿಯನ್ನು ನೀಡಲಾಗುತ್ತದೆ. ಪೊಲೀಸರು ಮತ್ತು ಜನರ ನಡುವಿನ ಸಂಬಂಧವನ್ನು ಸುಧಾರಿಸುವ ಕೆಲಸವನ್ನು ಈ ಯೋಜನೆ ಮೂಲಕ ಮಾಡುಲಾಗುತ್ತದೆ. ಇನ್ನು ಹತ್ತು ವಾರಗಳ ಕಾಲ ತರಬೇತಿ ಪಡೆದ ಕೆಡೆಟ್ಗಳಿಗೆ ಪೊಲೀಸ್ ಸಮವಸ್ತ್ರವನ್ನು ನೀಡಲಾಗುತ್ತದೆ.
ಯೋಜನೆ ಹಿನ್ನೆಲೆ
2010 ರಲ್ಲಿಯೇ ಭಾರತ ಸರ್ಕಾರ ಇಂತಹದೊಂದು ಯೋಜನೆಯನ್ನು ಕೇರಳದಲ್ಲಿ ಜಾರಿಗೊಳಿಸಿತ್ತು. ಆದರೆ ನಮ್ಮ ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು 2015 ರಲ್ಲಿ. ಆದರೆ ಅಂದು ಕೆಲವೇ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿತ್ತು. ಇನ್ನು ಕೋವಿಡ್ ಬಂದ ಮೇಲೆ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಇಶಾ ಪಂತ್ ಅವರು ಹೆಚ್ಚಿನ ಮುತವರ್ಜಿ ವಹಿಸಿ, ಇದೀಗ ಜಿಲ್ಲೆಯಲ್ಲಿ ಈ ಯೋಜನೆಯನ್ನು ಮತ್ತೆ ಆರಂಭಿಸಿದ್ದಾರೆ. ಅಪ್ರಾಪ್ತ ಬಾಲಕಿ ಮೇಲೆ ಅಪ್ರಪ್ತ ಬಾಲಕನೇ ಅತ್ಯಾಚಾರ ಮಾಡಿದ ಘಟನೆ, ಅನೇಕ ಅಪ್ರಾಪ್ತ ಬಾಲಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನ್ನು ಮನಗಂಡ ಎಸ್ಪಿ ಇಶಾ ಪಂತ್, ಅವರು ಮಕ್ಕಳಲ್ಲಿ ಶಿಸ್ತು ಮತ್ತು ಕಾನೂನು ಅರಿವು ಮೂಡಿಸಬೇಕು ಅನ್ನೋ ಉದ್ದೇಶದಿಂದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆಗೆ ಇಂದು ಚಾಲನೆ ನೀಡಿದ್ದಾರೆ.
ವರದಿ: ಸಂಜಯ್ ಚಿಕ್ಕಮಠ, ಟಿವಿ 9, ಕಲಬುರಗಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:32 pm, Sat, 26 November 22