ಕಲಬುರಗಿ, ನವೆಂಬರ್ 17: ಹೌದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಒಡೆತನದ ಸಕ್ಕರೆ ಕಾರ್ಖಾನೆ (Sugar Factory) ಬಂದ್ ಆದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಸೇಡಂ ತಾಲೂಕಿನ ಕಬ್ಬು ಬೆಳಗಾರರು ಆತಂಕಕ್ಕೆ ಒಳಗಾಗಿದ್ದರು. ಆದರೆ, ರೈತರ ನೆರವಿಗೆ ಕಲಬುರಗಿ (Kalaburagi) ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್ ಧಾವಿಸಿದ್ದಾರೆ.
ಚಿಂಚೋಳಿ, ಸೇಡಂ ತಾಲೂಕಿನ ರೈತರು ಒಟ್ಟು ಮೂರು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬನ್ನು ಸರ್ವೆ ಮಾಡಿಸಿದ್ದಾರೆ. ಬಳಿಕ, ಕಾರ್ಖಾನೆ ಜೊತೆ ಒಪ್ಪಂದ ಮಾಡಿಸಿದ್ದಾರೆ. ನಂತರ, ಎರಡೂ ತಾಲೂಕಿನ ರೈತರ ಕಬ್ಬನ್ನು ಸಮೀಪದ ಕೆಪಿಆರ್ ಸಕ್ಕರೆ ಕಾರ್ಖಾನೆ ಹಾಗೂ ಬೀದರ್ನ ಕಿಸಾನ್ ಸಕ್ಕರೆ ಕಾರ್ಖಾನೆಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರ ಮತ್ತು ಬಿಜೆಪಿ ಮಧ್ಯೆ ಗುದ್ದಾಟ ಮುಂದುವರಿದ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಕಾರ್ಖಾನೆ ಪುನರಾರಂಭಕ್ಕೆ ಅನುಮತಿ ಸಿಗುತ್ತಿಲ್ಲ. ಹೀಗಾಗಿ, ರೈತರು ಆತಂಕ್ಕೆ ಒಳಗಿದ್ದರು. ಆದರೆ, ಜಿಲ್ಲಾಧಿಕಾರಿಯ ಜಾಣ್ಮೆ ನಡೆಯಿಂದ ರೈತರ ಸಮಸ್ಯೆ ಬಗೆ ಹರಿದಿದೆ. ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್ ಕಾರ್ಯಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕೋರ್ಟ್ ಆದೇಶದ ನಂತರವೂ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಅನುಮತಿ ನೀಡದ ಪಿಸಿಬಿ: ಯತ್ನಾಳ್ ಧರಣಿ
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಇದೆ. ಈ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆ ಮಾಡಲಾಗುತ್ತದೆ. ಎಥೆನಾಲ್ ಉತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಲೈಸೆನ್ಸ್ ನವೀಕರಣ ಆಗಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯನ್ನು ಮುಚ್ಚಿಸಿತ್ತು.
ಮಂಡಳಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ಕೆಲ ದಿನಗಳ ಹಿಂದೆ ನ್ಯಾಯಾಲಯ ಕಾರ್ಖಾನೆ ಪುನಾರಂಭಿಸಲು ಆದೇಶ ನೀಡಿತ್ತು. ಆದೇಶವನ್ನು ಪಾಲಿಸದೇ ಮಂಡಳಿ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿತ್ತು. ಆದರೆ, ನ್ಯಾಯಾಲಯದ ಆದೇಶದಂತೆ ಕಾರ್ಖಾನೆ ಪುನಾರಂಭಿಸಲು ಅನುಮತಿ ನೀಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದರು. ಆದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಾತ್ರ ಕಾರ್ಖಾನೆ ಪುನಾರಂಭಕ್ಕೆ ಇನ್ನೂ ಅನುಮತಿ ನೀಡಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Sun, 17 November 24