ಕೋರ್ಟ್ ಆದೇಶದ ನಂತರವೂ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಅನುಮತಿ ನೀಡದ ಪಿಸಿಬಿ: ಯತ್ನಾಳ್ ಧರಣಿ
ನ್ಯಾಯಾಲಯದ ಆದೇಶದ ನಂತರವೂ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಅನುಮತಿ ನೀಡದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬೆಂಗಳೂರು, ಆಗಸ್ಟ್ 28: ನ್ಯಾಯಾಲಯದ ಆದೇಶದ ನಂತರವೂ ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಒಡೆತನದ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (PCB) ಮುಂದಾಗಿಲ್ಲ. ಇದರಿಂದ ಬೆಂಗಳೂರಿನ (Bengaluru) ಎಂ.ಜಿ.ರಸ್ತೆಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಧರಣಿ ನಡೆಸಿದರು. ಧರಣಿ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಭೇಟಿ ನೀಡಿದರು.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಇದೆ. ಈ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆ ಮಾಡಲಾಗುತ್ತದೆ. ಎಥೆನಾಲ್ ಉತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಲೈಸೆನ್ಸ್ ನವೀಕರಣ ಆಗಿಲ್ಲ ಎಂದು ಮಂಡಳಿ ಕಾರ್ಖಾನೆಯನ್ನು ಮುಚ್ಚಿಸಿತ್ತು.
ಮಂಡಳಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ಕೆಲ ದಿನಗಳ ಹಿಂದೆ ನ್ಯಾಯಾಲಯ ಕಾರ್ಖಾನೆ ಪುನಾರಂಭಿಸಲು ಆದೇಶ ನೀಡಿತ್ತು. ಆದೇಶವನ್ನು ಪಾಲಿಸದೇ ಮಂಡಳಿ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದೆ. ಆದರೆ, ನ್ಯಾಯಾಲಯದ ಆದೇಶದಂತೆ ಕಾರ್ಖಾನೆ ಪುನಾರಂಭಿಸಲು ಅನುಮತಿ ನೀಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಡರಾತ್ರಿ ಮಂಡಳಿ ಕಚೇರಿಯಲ್ಲಿ ಧರಣಿ ನಡೆಸಿದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕದಲ್ಲಿ ಚಿಂಚೋಳಿ ಹಿಂದುಳಿದ ತಾಲೂಕು. ಚಿಂಚೋಳಿ ಹೆಚ್ಚು ದಲಿತರು ಇರುವ ಮತ ಕ್ಷೇತ್ರ. ಇಲ್ಲಿ 15 ವರ್ಷದ ಹಿಂದೆ ಪಿ.ಚಿಂದಂಬರಂ ಅವರು ಸಕ್ಕರೆ ಕಾರ್ಖಾನೆ ತೆರಯಲು ಮುಂದಾಗಿದ್ದರು. ಅದೊಂದು ದೊಡ್ಡ ಹಗರಣ, ಸಿಬಿಐ ತನಿಖೆಗೆ ಹೋಯಿತು. ಹರಾಜಿಗೆ 11 ಸಲ ಟೆಂಡರ್ ಕರೆದರೂ ಯಾರು ಮುಂದಾಗಿರಲಿಲ್ಲ. ನಮ್ಮ ರೈತರು ವಿನಂತಿಸಿದ್ದಕ್ಕೆ 38 ಕೋಟಿ ಟೆಂಡರ್ ಮಾಡಿ, ಎಥೆನಾಲ್ ತಯಾರು ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಈ ಕಾಯ್ದೆಯಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಪಟ್ಟಿರುವುದು ಹಿಂದೂಗಳು: ಸಿಎಂಗೆ ತಿರುಗೇಟು ಕೊಟ್ಟ ಶಾಸಕ ಯತ್ನಾಳ್
ಆಗ ತುಂಬಾ ತೊಂದರೆ ನೀಡಿದ್ದರು. ಕೊನೆಗೆ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ. ಷರತ್ತು ಸರಿ ಇದೆ, ಅವರಿಗೆ ಅನುಮತಿ ಕೊಡಿ ಎಂದಿದೆ. ಸರ್ಕಾರಕ್ಕೆ ಛೀಮಾರಿ ಹಾಕಿ ನ್ಯಾಯಾಲಯ ಆದೇಶ ಮಾಡಿದೆ. ಆದರೂ ಕೂಡ ಕಾರ್ಖಾನೆ ಬಾಗಿಲು ತೆರಯಲು ಅನುಮತಿ ನೀಡುತ್ತಿಲ್ಲ. ನಾನು ಮಂಗಳವಾರ ಮಧ್ಯಾಹ್ನ 1.30ಕ್ಕೆ ಕಚೇರಿಗೆ ಬಂದು ಕುಳಿತಿದ್ದೇನೆ. ರಾತ್ರಿಯಾದರೂ ಇಲ್ಲೇ ಕುಳಿತಿದ್ದೇನೆ. ಮಂಡಳಿಯವರು ನಾಟಕ ಮಾಡುತ್ತಿದ್ದಾರೆ, ಇಲ್ಲಿ ದೊಡ್ಡ ಅವ್ಯವಹಾರ ನಡೆಯುತ್ತಿದೆ. ಕೆಪಿಆರ್ ಗ್ರೂಪ್ ತಮಿಳುನಾಡಿನವರಿಗೆ ಅನುಮತಿ ಕೊಡುತ್ತಾರೆ. ಅವರು ಕೋಟಿ ಗಟ್ಟಲೆ ಲಂಚ ಕೊಡುತ್ತಾರೆ. ಆದರೆ, ನಮಗೆ ಇಸಿ ಕೊಡಲು ಸತಾಯಿಸುತ್ತಿದ್ದಾರೆ. ಇಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.
ಕೈಗಾರಿಕಾ ಉದ್ಯಮಿಗಳು ಓಡಾಡಿ ಓಡಾಡಿ ಸುಸ್ತಾಗಿ ಹೋಗಿದ್ದಾರೆ. ಹೀಗಾಗಿ ನಾನು ಧರಣಿ ಕುಳಿತಿದ್ದೇನೆ. ಲುಲು ಮಾಲ್ಗೆ 850 ಕೋಟಿ ಬಂಡವಾಳ ಹಾಕಿದ್ದಾರೆ. ಲುಲುಮಾಲ್ಗೆ ಅನುಮತಿ ಕೊಟ್ಟಿದ್ದಾರೆ, ನನಗೆ ಯಾಕಿಲ್ಲ? ನಾನೂ ಕೂಡ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿದ್ದೇನೆ. ಅತಿ ಹಿಂದುಳಿದ ಜಿಲ್ಲೆಯಲ್ಲಿ ನಾನು ಕಾರ್ಖಾನೆ ಮಾಡಿದ್ದೇನೆ. ಸರ್ಕಾರ ಹೆಚ್ಚೊ? ಹೈಕೋರ್ಟ್ ಹೆಚ್ಚೊ? ಕೆಲವು ಕಾರ್ಖಾನೆಗಳಿಗೆ ಅಕ್ರಮವಾಗಿ ಲೈಸೆನ್ಸ್ ಕೊಟ್ಟಿದ್ದಾರೆ. ಇಲ್ಲಿ ದೊಡ್ಡ ಅಕ್ರಮ ನಡೆಯುತ್ತಿದೆ. ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ. ನನಗೆ ಎಲ್ಲ ಶಾಸಕರು ಬೆಂಬಲ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 am, Wed, 28 August 24