ಭಟ್ಕಳ ಸರ್ಕಾರಿ ಆಸ್ಪತ್ರೆ ಈಗ ಕೊವಿಡ್ ಸೆಂಟರ್; ಬಿಸಿಎಂ ಹಾಸ್ಟೆಲ್‌ಗೆ ಕೊರೊನಾ ರಹಿತ 21 ರೋಗಿಗಳ ವರ್ಗಾವಣೆ
ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆ ಹಾಗೂ ಕೊರೊನಾ ರಹಿತರಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ. ಅಲ್ಲದೇ, ಉಳಿದ ಜಿಲ್ಲೆಗಳಲ್ಲಿ ಕಾಣಿಸುತ್ತಿರುವ ಆಕ್ಸಿಜನ್ ಕೊರತೆ ಭಟ್ಕಳದಲ್ಲಿ ಎದುರಾಗದಿರಲಿ ಎಂಬ ಕಾರಣಕ್ಕೆ ಆಕ್ಸಿಜನ್ ಸಿದ್ಧತೆಗಳನ್ನು ಕೂಡಾ ಮಾಡಿಕೊಳ್ಳಲಾಗಿದೆ.

ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಭಟ್ಕಳ ಸರ್ಕಾರಿ ಆಸ್ಪತ್ರೆಯನ್ನು ಮತ್ತೊಮ್ಮೆ ಕೊವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿದ್ದ 21 ಕೊರೊನಾ ರಹಿತ ರೋಗಿಗಳನ್ನು ಪಕ್ಕದ ಬಿಸಿಎಂ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಭಟ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ 13 ಕೊವಿಡ್ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ ಒಟ್ಟು 19 ಮಂದಿ ಸಾವನ್ನಪ್ಪಿದ್ದಾರೆ.
ಉಳಿದ ಸೋಂಕಿತರನ್ನು ಹೋಂ ಕ್ವಾರೆಂಟೈನ್‌ಗೆ ಒಳಪಡಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ರೂಪಿಸಲಾಗಿದೆ. ಈ ಕಾರಣದಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಯನ್ನು ಮತ್ತೊಮ್ಮೆ ಕೊವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ರೂಪಿಸಲಾಗಿದೆ. ಇನ್ನು ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆ ಹಾಗೂ ಕೊರೊನಾ ರಹಿತರಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ. ಅಲ್ಲದೇ, ಉಳಿದ ಜಿಲ್ಲೆಗಳಲ್ಲಿ ಕಾಣಿಸುತ್ತಿರುವ ಆಕ್ಸಿಜನ್ ಕೊರತೆ ಭಟ್ಕಳದಲ್ಲಿ ಎದುರಾಗದಿರಲಿ ಎಂಬ ಕಾರಣಕ್ಕೆ ಆಕ್ಸಿಜನ್ ಸಿದ್ಧತೆಗಳನ್ನು ಕೂಡಾ ಮಾಡಿಕೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಶಾಸಕ ಸುನೀಲ್ ನಾಯ್ಕ್, ಕೊವಿಡ್ ಬಗ್ಗೆ ತಾಲೂಕಿನ ಜನರು ಭಯಪಡುವ ಅಗತ್ಯ ಇಲ್ಲ. ತಾಲೂಕಿನಲ್ಲಿ ವೈದ್ಯಕೀಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಭಟ್ಕಳದಲ್ಲಿ ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುತ್ತಿದ್ದಂತೇ, ಬೆಂಗಳೂರಿನಲ್ಲಿ ಬೆಡ್ ಸಿಗದ ವ್ಯಕ್ತಿಯೋರ್ವರು ಭಟ್ಕಳಕ್ಕೆ ಬಂದು ಕೊರೊನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ರಹಿತ ರೋಗಿಗಳಿಗೆ ನೀಡಲಾಗಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಸದ್ಯ 30 ಬೆಡ್‌ಗಳನ್ನು ಹಾಕಲಾಗಿದ್ದು, ಅಲ್ಲಿ ಇನ್ನೂ ಹೆಚ್ಚಿನ ರೋಗಿಗಳನ್ನು ದಾಖಲಿಸಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಶಸ್ತ್ರಚಿಕಿತ್ಸೆ, ಹೆರಿಗೆ, ಹೊರರೋಗಿ ತಪಾಸಣೆ ಮತ್ತು ಚಿಕಿತ್ಸೆಗಳನ್ನು ಯಥಾ ಪ್ರಕಾರ ಮುಂದುವರೆಸಲಾಗುತ್ತಿದ್ದು, ದಿನದ 24 ಗಂಟೆಯೂ ಸಾರ್ವಜನಿಕರಿಗೆ ವೈದ್ಯರ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಹೇಳಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಚಿಕಿತ್ಸೆಗಾಗಿ ಭಟ್ಕಳದಲ್ಲಿ ಉತ್ತಮ ಕ್ರಮ ಕೈಗೊಳ್ಳಲಾಗಿದ್ದು, ಕೊರೊನಾ ಸೋಂಕಿತರಿಗೆ ಹಾಗೂ ಕೊರೊನಾ ರಹಿತರಿಗೆ ಚಿಕಿತ್ಸೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ:
ಕೊರೊನಾ ಲಸಿಕೆ ಫಾರ್ಮುಲಾ ಬೇರೆ ದೇಶಗಳಿಗೆ ನೀಡುವುದು ಅಂದರೆ ಅಡುಗೆಯ ರೆಸಿಪಿ ಹಂಚಿಕೊಂಡಂತಲ್ಲ ಎಂದ ಬಿಲ್ ಗೇಟ್ಸ್
ಕೊರೊನಾ ಸೋಂಕು: ಮಂಗಳೂರಿನಲ್ಲಿ 27 ವರ್ಷದ ಗರ್ಭಿಣಿ ವೈದ್ಯೆ ಬಲಿ; ಮುಳಬಾಗಿಲಿನಲ್ಲಿ ಸ್ಟುಡಿಯೋ ಮಾಲೀಕ-ಪತ್ನಿ ಸಾವು
(Kannada News Bhatkal Government Hospital is now a Covid hospital and 21 non covid patients shifted to BCM Hostel)
Published On - 5:16 pm, Wed, 28 April 21