AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ರಾಜ್ಯೋತ್ಸವ ಭಾಷಣದಲ್ಲೇ ಕೇಂದ್ರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದಲ್ಲಿ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯವಿದೆ ಎಂದು ಅವರು ಆರೋಪಿಸಿ, ರಾಜ್ಯದ ಸಂಸದರು ಲೋಕಸಭೆಯಲ್ಲಿ ಧ್ವನಿಯೆತ್ತಬೇಕು ಎಂದು ಆಗ್ರಹಿಸಿದ್ದಾರೆ. ಕನ್ನಡಿಗರ ವಿರುದ್ಧ ಅವಹೇಳನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವ ಭಾಷಣದಲ್ಲೇ ಕೇಂದ್ರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
ಶಾಂತಮೂರ್ತಿ
| Edited By: |

Updated on:Nov 01, 2024 | 11:28 AM

Share

ಬೆಂಗಳೂರು, ನವೆಂಬರ್ 1: ಕರ್ನಾಟಕಕ್ಕೆ 15ನೇ ಹಣಕಾಸಿನ ಆಯೋಗದಲ್ಲಿ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಿಲ್ಲ. ಕೇಂದ್ರದ ಅನುದಾನದ ವಿಚಾರದಲ್ಲಿ ಕರ್ನಾಟಕಕ್ಕೆ ತಾರತಮ್ಯ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಇದನ್ನೇ ವೇದಿಕೆಯನ್ನಾಗಿ ಬಳಸಿಕೊಂಡರು.

ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದೆ. ಆದರೂ ನಾವು ಶಾಲಾ ಕಾಲೇಜು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ವಾರಕ್ಕೆ 6 ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ದಿನ 57 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡುತ್ತಿದ್ದೇವೆ ಎಂದರು. ಸಾಯಿ ಅನ್ನಪೂರ್ಣ ಟ್ರಸ್ಟ್ ವಾರದಲ್ಲಿ 3ದಿನ ರಾಗಿ ಮಾಲ್ಟ್ ನೀಡುತ್ತಿದೆ. ಅಪೌಷ್ಟಿಕತೆ ದೂರ ಮಾಡಲು ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ. ಅಪೌಷ್ಟಿಕತೆ ದೂರ ಮಾಡಲು ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಸಂಸದರು ಲೋಕಸಭೆಯಲ್ಲಿ ಧ್ವನಿಯೆತ್ತಲಿ: ಸಿಎಂ

ನಾವು ರಾಜ್ಯಕ್ಕೆ ನ್ಯಾಯಯುತವಾಗಿ ತೆರಿಗೆ ಪಾಲು ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳುವ ಯತ್ನ ಮಾಡಬೇಕಾಗಿದೆ. ರಾಜ್ಯದಿಂದ ಆಯ್ಕೆಯಾದ ಎಂಪಿಗಳು ಲೋಕಸಭೆಯಲ್ಲಿ ಧ್ವನಿ ಎತ್ತಬೇಕಿದೆ. ರಾಜ್ಯಸಭಾ ಸದಸ್ಯರೂ ತೆರಿಗೆ ಪಾಲು ಕೊಡಿ ಎಂದು ಕೇಳಬೇಕು. ಆ ರೀತಿಯ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

Kannada Rajyotsava: CM Siddaramaiah speech details in Kannada here

15ನೇ ಹಣಕಾಸು ಆಯೋಗದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಯಿತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಾಲಾ ಮಕ್ಕಳಿಗೆ ಯೋಜನೆಗಳನ್ನು ರೂಪಿಸಿದ್ದಾರೆ. ವಾರದಲ್ಲಿ ಆರು ದಿನ ಮೊಟ್ಟೆ ಕೊಡುತ್ತೇವೆ. ಚಿಕ್ಕಿ,‌ ಬಾಳೆ ಹಣ್ಣು ಕೊಡುತ್ತಿದ್ದೇವೆ. ದಿನ 57 ಲಕ್ಷ ಮಕ್ಕಳಿಗೆ ಮೊಟ್ಟೆ ಕೊಡುತ್ತಿದ್ದೇವೆ. ನಮ್ಮ ದೇಶದಲ್ಲಿ ಬಡತನ ಇದೆ, ಬಡವರ ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ಹೀಗಾಗಿ ಗುಣಮಟ್ಟದ ಆಹಾರ ಸಿಗಬೇಕು ಎಂದು ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದರು.

ಕನ್ನಡದ ಬಗ್ಗೆ ಅಭಿಮಾನವಿರಲಿ: ಸಿದ್ದರಾಮಯ್ಯ

Kannada Rajyotsava: CM Siddaramaiah speech details in Kannada here

ಕನ್ನಡ ದೀವಿಗೆ ಬಿಡುಗಡೆ ಮಾಡಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಕ್ಕಳಿಗಾಗಿ ದೀವಿಗೆ ಬಿಡುಗಡೆ ಮಾಡಿದ್ದೇವೆ. ಎಲ್ಲರೂ ಕೂಡ ಕನ್ನಡ ಭಾಷೆ ಮಾತನಾಡಬೇಕು. ಭಾಷೆ ಕುರಿತು ದುರಾಭಿಮಾನ ಇರಬಾರದು, ಅಭಿಮಾನ ಇರಬೇಕು. ಕನ್ನಡ ಮಾತನಾಡಲು ಬರದೇ ಇರುವವರ ಬಳಿ ಬೇರೆ ಭಾಷೆ ಮಾತನಾಡಬಾರದು. ಕನ್ನಡವನ್ನೇ ಅವರಿಗೆ ಕಲಿಸಬೇಕು ಎಂದು ಸಿಎಂ ಹೇಳಿದರು.

ಕನ್ನಡಿಗರ ಅವಹೇಳನ ನಾಡದ್ರೋಹದ ಕೆಲಸ: ಸಿಎಂ

ಸಾಮಾಜಿಕ ಮಾಧ್ಯಮದಲ್ಲಿ ಕನ್ನಡ ಮತ್ತು ಕನ್ನಡಿಗರ ಅವಹೇಳನ ಮಾಡುವುದು, ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಕನ್ನಡಿಗರ ಅವಹೇಳನ ಮಾಡುವವರ ವಿರುದ್ಧ ಸರ್ಕಾರದಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇವತ್ತು ಕನ್ನಡಿಗರಾಗುತ್ತೇವೆ ಎಂದು ಶಪಥ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:26 am, Fri, 1 November 24