ಬೆಂಗಳೂರು, ಸೆಪ್ಟೆಂಬರ್ 22: ತಿರುಪತಿ ಲಡ್ಡು ಪ್ರಸಾದ (Tirupati Laddu Prasad) ಬಳಸದಂತೆ ಕರ್ನಾಟಕ ಅರ್ಚಕರು ನಿರ್ಧರಿಸಿದ್ದಾರೆ. ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಇಲ್ಲ ಎಂಬ ಸ್ಪಷ್ಟತೆ ಸಿಗಬೇಕು. ಅಲ್ಲಿಯವರೆಗೂ ಲಾಡು ಪ್ರಸಾದ ಬಳಸದೆ ಇರಲು ಅಖಿಲ ಕರ್ನಾಟಕ ಅರ್ಚಕರ ಸಂಘ ತೀರ್ಮಾನಿಸಿದೆ.
ರಾಜ್ಯದ ಎ ಹಾಗೂ ಬಿ ದೇಗುಲಗಳಲ್ಲಿ ನಡೆಯುವ ಕಲ್ಯಾಣೋತ್ಸವಗಳಲ್ಲಿ, ಮದುವೆ, ಗೃಹಪ್ರವೇಶ ಮತ್ತು ಉಪನಯನ ಕಾರ್ಯಕ್ರಮಗಳಲ್ಲಿ ತಿರುಪತಿ ಲಡ್ಡು ಪ್ರಸಾದ ಬಳಕೆ ಮಾಡಲಾಗುತ್ತಿತ್ತು. ಆದರೆ, ಇದೀಗ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಲಡ್ಡು ಪ್ರಸಾದವನ್ನು ಸಂಪೂರ್ಣವಾಗಿ ಬಳಸದಂತೆ ಅಖಿಲ ಕರ್ನಾಟಕ ಅರ್ಚಕರ ಸಂಘ ನಿರ್ಧರಿಸಿದೆ.
ರಾಜ್ಯದಲ್ಲಿ ಉತ್ಪಾದನೆ ಮತ್ತು ಮಾರಾಟ ಆಗುತ್ತಿರುವ ತುಪ್ಪವನ್ನು ತಪಾಸಣೆ ಮಾಡುವಂತೆ ನಮ್ಮ ಆಹಾರ ಸುರಕ್ಷತಾ ಆಯುಕ್ತರಿಗೆ ಹೇಳಿದ್ದೇನೆ. ಈಗಾಗಲೇ ತುಪ್ಪದ ಮಾದರಿ ಸಂಗ್ರಹ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ತುಪ್ಪ ಆಮದು ಆಗುತ್ತದೆ. ಪ್ರಸಾದದ ಪರಿಶೀಲನೆ ನಾವು ಮಾಡುತ್ತಿಲ್ಲ. ಬೇರೆ ಪದಾರ್ಥಗಳಲ್ಲಿ ಕಲಬೆರಕೆ ಆಗುವ ಸಾಧ್ಯತೆ ಕಡಿಮೆ ಇದೆ. ಆದರೆ ಆಂಧ್ರ ಮುಖ್ಯಮಂತ್ರಿ ತುಪ್ಪದಲ್ಲಿ ಬೇರೆ ಬೇರೆ ಕೊಬ್ಬಿನಂಶ ಇತ್ತು ಅಂತ ಹೇಳಿರುವುದು ಆತಂಕಕಾರಿಯಾದ ವಿಚಾರ. ಒಬ್ಬ ಸಿಎಂ ಹೇಳಿದ ಮೇಲೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡ ಪವನ್ ಕಲ್ಯಾಣ್
ದೇವರ ಬಗ್ಗೆ ಶ್ರದ್ಧೆ ಇರುವವರಿಗೆ ಈ ವಿಚಾರ ಬಹಳ ಆಘಾತಕಾರಿಯಾಗಿದೆ. ಹೀಗಾಗಿ ಪರಿಶೀಲನೆ ಮಾಡಿ ಅಂತ ಹೇಳಿದ್ದೇವೆ. ವರದಿಯಲ್ಲಿ ಏನು ಬರುತ್ತೆ ಎಂದು ತಿಳಿದುಕೊಳ್ಳೋಣ. ಯಾಕೆಂದರೆ ಜನರಿಗೆ ಈ ವಿಚಾರದಲ್ಲಿ ಬಹಳ ಗೊಂದಲ ಶುರುವಾಗಿದೆ. ತಿರುಪತಿ ಲಡ್ಡು ಪ್ರಸಾದದಲ್ಲಿ ಈ ರೀತಿ ಇದೆ ಅಂತ ಆದಾಗ ಯಾರನ್ನು ನಂಬಬೇಕು ಎಂಬ ಪ್ರಶ್ನೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಪ್ರಸಾದವನ್ನು ಸ್ವೀಕರಿಸದೆ ಇರುವಂತ ಪರಿಸ್ಥಿತಿ ಬರಬಾರದೆಂದು ಪರಿಶೀಲನೆ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Sun, 22 September 24