ಇನ್ಮುಂದೆ ಖಾಸಗಿ ರಸ್ತೆಗಳು ಸಾರ್ವಜನಿಕ ಆಸ್ತಿ! ವಿಪಕ್ಷಗಳ ವಿರೋಧದ ನಡುವೆಯೂ ಮಹತ್ವದ ಮಸೂದೆಗೆ ವಿಧಾನಸಭೆ ಅನುಮೋದನೆ

ರಾಜ್ಯ ಸರ್ಕಾರ ಹೊಸದೊಂದು ಕಾನೂನು ತರುತ್ತಿದೆ. ಇದರ ಅನ್ವಯ ಪಟ್ಟಣ ಪ್ರದೇಶದಲ್ಲಿ ಖಾಸಗಿ ರಸ್ತೆಯೂ ಸರ್ಕಾರದ್ದೇ ಎಂದೇ ಪರಿಗಣಿಸಲಾಗುತ್ತದೆ. ಆದರೆ, ವಿಪಕ್ಷಗಳು ಇದನ್ನು ವಿರೋಧಿಸುತ್ತಾ ಇವೆ. ಇದೆಲ್ಲದರ ನಡುವೆ ಮಸೂದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಅಷ್ಟಕ್ಕೂ ವಿಪಕ್ಷಗಳ ವಿರೋಧ ಏಕೆ? ಇಲ್ಲಿದೆ ಮಾಹಿತಿ.

ಇನ್ಮುಂದೆ ಖಾಸಗಿ ರಸ್ತೆಗಳು ಸಾರ್ವಜನಿಕ ಆಸ್ತಿ! ವಿಪಕ್ಷಗಳ ವಿರೋಧದ ನಡುವೆಯೂ ಮಹತ್ವದ ಮಸೂದೆಗೆ ವಿಧಾನಸಭೆ ಅನುಮೋದನೆ
ಕರ್ನಾಟಕ ವಿಧಾನಸಭೆ ಅಧಿವೇಶನ ಕಲಾಪ
Image Credit source: tv9
Edited By:

Updated on: Aug 21, 2026 | 7:04 AM

ಮುಖ್ಯಾಂಶಗಳು

  • ಇನ್ಮುಂದೆ ನಗರ, ಪಟ್ಟಣ ಪ್ರದೇಶಗಳ ಖಾಸಗಿ ರಸ್ತೆಗಳು ಸಾರ್ವಜನಿಕ ಆಸ್ತಿ
  • ಮಾಲೀಕರಿಗೆ ಹಣಕಾಸಿನ ಪರಿಹಾರ ಸಿಗಲ್ಲ
  • ವಿಪಕ್ಷಗಳಿಂದ ತೀವ್ರ ವಿರೋಧ

ಬೆಂಗಳೂರು, ಆಗಸ್ಟ್ 21: ಖಾಸಗಿ ಲೇಔಟ್​ಗಳಲ್ಲಿ ಹಾಳಾದ ರಸ್ತೆ, ಮೂಲಭೂತ ಸೌಕರ್ಯಗಳ ಕೊರತೆ, ಹದಗೆಟ್ಟ ಚರಂಡಿಗಳು, ಜನ ಪರದಾಡ್ತಿದ್ರೂ ಸ್ಥಳೀಯ ಸಂಸ್ಥೆಗಳು ದುರಸ್ತಿ ಮಾಡ್ತಿಲ್ಲ ಎಂಬ ಚಿಂತೆ ಬೇಡ. ಯಾಕೆಂದರೆ ನಗರ ಮತ್ತು ಪಟ್ಟಣಗಳಲ್ಲಿ ಖಾಸಗಿ ರಸ್ತೆಗಳ ಚಿತ್ರಣವೇ ಸಂಪೂರ್ಣವಾಗಿ ಬದಲಾಯಿಸುವಂತಹ ವಿಧೇಯಕವೊಂದು ವಿಧಾನಸಭೆಯಲ್ಲಿ (Assembly Session) ಗುರುವಾರ ಪಾಸ್ ಆಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಮಂಡಿಸಿದ ‘ಕರ್ನಾಟಕ ಪುರಸಭೆಗಳ (ತಿದ್ದುಪಡಿ) ವಿಧೇಯಕ 2026’ ಮತ್ತು ‘ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2026’ಕ್ಕೆ ವಿರೋಧ ಪಕ್ಷಗಳ ಭಾರಿ ಗದ್ದಲ ಮತ್ತು ಪ್ರತಿಭಟನೆಯ ನಡುವೆಯೇ ಸದನದಲ್ಲಿ ಅನುಮೋದನೆ ಸಿಕ್ಕಿದೆ.

ನೂತನ ಮಸೂದೆಯಲ್ಲೇನಿದೆ?

ನಗರ ಅಥವಾ ಪಟ್ಟಣ ವ್ಯಾಪ್ತಿಯಲ್ಲಿರುವ ಖಾಸಗಿ ರಸ್ತೆಗಳು ಮತ್ತು ಚರಂಡಿಗಳು ತೀರಾ ಹದಗೆಟ್ಟು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆ ತರುತ್ತಿದ್ದರೆ, ಅಂತಹ ರಸ್ತೆಗಳನ್ನು ಮುನ್ಸಿಪಲ್ ಕಮಿಷನರ್‌ಗಳು ಅಥವಾ ಅಧಿಕಾರಿಗಳು ನೇರವಾಗಿ ತಮ್ಮ ಸುಪರ್ದಿಗೆ ಪಡೆಯಬಹುದು. ಈ ಹಿಂದೆ ಖಾಸಗಿ ಲೇಔಟ್‌ಗಳು ಅಥವಾ ಜಾಗಗಳಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಕಾನೂನಾತ್ಮಕವಾಗಿ ಅವಕಾಶವಿರಲಿಲ್ಲ. ಇನ್ನು ಮುಂದೆ ಸರ್ಕಾರವೇ ಇವುಗಳನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಿ, ತಾನೇ ಅಭಿವೃದ್ಧಿಪಡಿಸಬಹುದಾಗಿದೆ.

ರಸ್ತೆಗಳು ಕಳಪೆ ಸ್ಥಿತಿಯಲ್ಲಿದ್ದಾಗ ಅಧಿಕಾರಿಗಳು ತಾವಾಗಿಯೇ ಖಾಸಗಿ ರಸ್ತೆಗಳನ್ನು ವಶಕ್ಕೆ ಪಡೆದು, ಪ್ರಕ್ರಿಯೆ ಆರಂಭಿಸಬಹುದು. ಅಥವಾ ಆ ಖಾಸಗಿ ರಸ್ತೆಯ ಸೈಟು ಮಾಲೀಕರು ತಮ್ಮ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸುವಂತೆ ನಗರಸಭೆ ಅಥವಾ ಪಾಲಿಕೆಗೆ ಮನವಿ ಸಲ್ಲಿಸಬಹುದು. ಇದರಿಂದ ಅಭಿವೃದ್ಧಿಯಾಗದ ಅಥವಾ ನಿರ್ವಹಣೆಯಿಲ್ಲದೆ ಸೊರಗಿರುವ ಅನೇಕ ಖಾಸಗಿ ಬಡಾವಣೆಗಳ ನಿವಾಸಿಗಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಆದರೆ ಮೂಲ ಭೂಮಾಲೀಕರಿಗೆ ಪರಿಹಾರ ಸಿಗಲ್ಲ.

ಭೂಮಾಲೀಕರಿಗೆ ಸಿಗಲ್ಲ ಯಾವುದೇ ಪರಿಹಾರ

  • ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಿದ ನಂತರ ಮೂಲ ಮಾಲೀಕರಿಗೆ ಯಾವುದೇ ರೀತಿಯ ಹಣಕಾಸಿನ ಪರಿಹಾರ ಸಿಗಲ್ಲ
  • ಆ ಜಾಗಕ್ಕೆ ಬದಲಾಗಿ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ ಅಥವಾ TDR ಪಡೆಯಲು ಆಗಲ್ಲ.
  • ಒಂದು ಬಾರಿ ಖಾಸಗಿ ರಸ್ತೆ ಸಾರ್ವಜನಿಕ ರಸ್ತೆಯಾಗಿ ಘೋಷಣೆಯಾದರೆ  ಅದರ ನಿರ್ವಹಣೆಯ ಹೊಣೆ ಸ್ಥಳೀಯ ಸಂಸ್ಥೆಗೆ ಸೇರುತ್ತದೆ.

ಹೊಸ ನಿಯಮಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ

ಹೊಸ ನಿಯಮಗಳಿಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಜನರ ಖಾಸಗಿ ಆಸ್ತಿಯನ್ನು ಯಾವುದೇ ಪರಿಹಾರ ನೀಡದೆ ಸರ್ಕಾರ ವಶಪಡಿಸಿಕೊಳ್ಳುವುದು ಕಾನೂನುಬಾಹಿರ. ಇದು ಮಾಲೀಕರ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದೆ. ಇದರೊಂದಿಗೆ, ಅಧಿಕಾರಿಗಳು ತಮಗೆ ಬೇಕಾದ ಖಾಸಗಿ ಲೇಔಟ್‌ಗಳು ಅಥವಾ ಟೆಕ್ ಪಾರ್ಕ್‌ಗಳ ರಸ್ತೆಗಳನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಖಾಸಗಿ ರಸ್ತೆಗಳ ನಿರ್ವಹಣೆಯ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದ ಈ ತಿದ್ದುಪಡಿ, ಮುಂದಿನ ದಿನಗಳಲ್ಲಿ ‘ಸಾರ್ವಜನಿಕ ಹಿತಾಸಕ್ತಿ ವರ್ಸಸ್ ಖಾಸಗಿ ಆಸ್ತಿ ಹಕ್ಕು’ ಎಂಬ ಹೊಸ ಕಾನೂನು ಮತ್ತು ರಾಜಕೀಯ ಚರ್ಚೆಗೂ ವೇದಿಕೆಯಾಗುವ ಸಾಧ್ಯತೆ ಇದೆ ಎಂದು ವಿಪಕ್ಷಗಳು ವಾದಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us