ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಮೊದಲು ಒಪ್ಪಿ, ನಂತರ ಮಾತು ಬದಲಿಸಿದರು: ಬಸವರಾಜ ಬೊಮ್ಮಾಯಿ
‘ಇದೀಗ ದೇಶದ ವಿವಿಧೆಡೆಯ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಲೋಕಸಭೆ ಚುನಾವಣೆ ಬಂದಾಗ ಈ ಎಲ್ಲ ರಾಜ್ಯಗಳಿಗೂ ಮತ್ತೇಕೆ ಚುನಾವಣೆ ನಡೆಸಬೇಕು’ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.
ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ‘ಒಂದು ದೇಶ, ಒಂದು ಚುನಾವಣೆ’ (ಒನ್ ನೇಷನ್, ಒನ್ ಎಲೆಕ್ಷನ್) ವಿಚಾರ ಭಾರೀ ಸದ್ದು ಮಾಡಿತು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು. ಸ್ಪೀಕರ್ ವಿರುದ್ಧ ವಿರೋಧಪಕ್ಷಗಳ ನಾಯಕರು ಹರಿಹಾಯ್ದ, ಸದಸ್ಯರೊಬ್ಬರು ಷರ್ಟ್ ಬಿಚ್ಚಿ ಒಂದು ವಾರದ ಅವಧಿಗೆ ಅಮಾನತು ಆದ ಬೆಳವಣಿಗೆಗೂ ಸದನ ಇಂದು ಸಾಕ್ಷಿಯಾಯಿತು.
‘ಒನ್ ನೇಷನ್, ಒನ್ ಎಲೆಕ್ಷನ್ ಎನ್ನುವುದು ರಾಷ್ಟ್ರಮಟ್ಟದ ವಿಚಾರ. ಅದನ್ನು ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಚರ್ಚಿಸಲು ಮುಂದಾಗಿದೆ. ಮಾರ್ಚ್ 31ರವರೆಗೆ ಅಧಿವೇಶನ ಕರೆದಿರುವದು ಒಳ್ಳೆಯ ಬೆಳವಣಿಗೆ. ರಾಜ್ಯ ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವೆಲ್ಲವುಗಳ ಬಗ್ಗೆ ಹಗಲಿರುಳು ಚರ್ಚಿಸೋಣ. ಅದು ಬಿಟ್ಟು ಒನ್ ನೇಷನ್, ಒನ್ ಎಲೆಕ್ಷನ್ ಬಗ್ಗೆ ನಾವೇಕೆ ಚರ್ಚಿಸಬೇಕು’ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
‘ಸಂಸತ್ತು ಮತ್ತು ವಿಧಾನಸಭೆಗಳಿಗೆ ಒಂದೇ ಸಲಕ್ಕೆ ಚುನಾವಣೆ ನಡೆಯುವ ನಿಯಮ ಜಾರಿಯಾಗಬೇಕಾದರೆ, ಸಂವಿಧಾನದ ತಿದ್ದುಪಡಿ ಅನಿವಾರ್ಯ. ಇದೀಗ ದೇಶದ ವಿವಿಧೆಡೆಯ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಲೋಕಸಭೆ ಚುನಾವಣೆ ಬಂದಾಗ ಈ ಎಲ್ಲ ರಾಜ್ಯಗಳಿಗೂ ಮತ್ತೇಕೆ ಚುನಾವಣೆ ನಡೆಸಬೇಕು’ ಎಂದು ಅವರು ಪ್ರಶ್ನಿಸಿದರು.
‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸುವ ಪ್ರಸ್ತಾವವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಹೀಗಿರುವಾಗ ಮತ್ತೆಮತ್ತೆ ಇಂಥ ವಿಚಾರಗಳನ್ನು ಏಕೆ ಚರ್ಚಿಸಬೇಕು’ ಎಂದು ಕೇಳಿದರು.
ಆಗ ಒಪ್ಪಿ, ಈಗ ಮಾತುಬದಲಿಸಿದರು: ಬೊಮ್ಮಾಯಿ
ವಿರೋಧ ಪಕ್ಷಗಳ ಆಕ್ಷೇಪದ ಬಗ್ಗೆ ಪ್ರಸ್ತಾಪಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಧಿವೇಶನದಲ್ಲಿ ಯಾವೆಲ್ಲಾ ವಿಚಾರಗಳನ್ನು ಚರ್ಚಿಸಬೇಕು ಎಂಬ ಬಗ್ಗೆ ಮೊದಲೇ ನಿರ್ಧಾರವಾಗಿತ್ತು. ಚರ್ಚಿಸುವ ವಿಷಯಗಳ ಬಗ್ಗೆ ಪ್ರತಿಪಕ್ಷಗಳೂ ಒಪ್ಪಿಕೊಂಡಿದ್ದವು. ಆದರೆ ಇಂದು ಚರ್ಚೆ ಆರಂಭವಾದಾಗ ಮಾತ್ರ ಗಲಾಟೆ ಆರಂಭಿಸಿದರು ಎಂದು ಆಕ್ಷೇಪಿಸಿದರು.
ಪ್ರತಿಪಕ್ಷಗಳ ಸದಸ್ಯರು ಕಾರಣವೇ ಇಲ್ಲದೆ ಸ್ಪೀಕರ್ ವಿರುದ್ಧ ಧರಣಿ ನಡೆಸಿದರು. ವಿನಾಕಾರಣ ಎಲ್ಲ ಸದಸ್ಯರ ಸಮಯ ವ್ಯರ್ಥ ಮಾಡಿದ್ದಾರೆ. ಒನ್ ನೇಷನ್, ಒನ್ ಎಲೆಕ್ಷನ್ ವಿಚಾರವನ್ನು 2013ರಲ್ಲಿ, ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸ್ವಾಗತಿಸಿದ್ದರು. ಆದರೆ ಪ್ರತಿಬಾರಿ ಅವರು ತಮ್ಮ ನಿಲುವು ಬದಲಿಸುತ್ತಿದ್ದಾರೆ ಎಂದು ಬೊಮ್ಮಾಯಿ ದೂರಿದರು.
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಎಷ್ಟು ಬಾರಿ ಸದನದಲ್ಲಿ ಕಾವೇರಿದ ಮಾತುಕತೆಗಳು ನಡೆದಿಲ್ಲ. ಹಾಗಂತ ನಾವೂ ಬಟ್ಟೆ ಬಿಚ್ಚಿದ್ವಾ? ಪ್ರತಿಬಾರಿಯೂ ಪ್ರತಿಪಕ್ಷಗಳು ಹೀಗೆಯೇ ವರ್ತಿಸುತ್ತಿವೆ ಎಂದು ಬೊಮ್ಮಾಯಿ ಖಾರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಒಂದು ವಾರಗಳ ಕಾಲ ಅಮಾನತು