Assembly Session: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ; ವಿಧಾನಸೌಧದಿಂದ 2 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

| Updated By: Digi Tech Desk

Updated on: Feb 10, 2023 | 8:50 AM

Karnataka Budget Session Today: ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್ ಫೆ. 17ರಂದು ಮಂಡನೆಯಾಗಲಿದ್ದು, ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಫೆ. 24ರವರೆಗೂ ವಿಧಾನಸೌಧ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಭದ್ರತಾ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.

Assembly Session: ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ; ವಿಧಾನಸೌಧದಿಂದ 2 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ವಿಧಾನಸೌಧ
Follow us on

ಬೆಂಗಳೂರು: ಈ ಬಾರಿಯ ವಿಧಾನಸಭೆಯ 15ನೇ ಮತ್ತು ಕೊನೆಯ ವಿಧಾನಮಂಡಲ ಅಧಿವೇಶನ (Karnataka Assembly Session) ಇಂದು ಆರಂಭವಾಗುತ್ತಿದೆ. ಫೆಬ್ರುವರಿ 17ರಂದು ಬಜೆಟ್ ಮಂಡನೆಯಾಗಲಿದ್ದು (Karnataka Budget Session), 24ರವರೆಗೂ ಅಧಿವೇಶನ ನಡೆಯಲು ನಿಗದಿಯಾಗಿದೆ. ಇಂದು ಮೊದಲ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ವಿಧಾನಸಭೆಯಲ್ಲಿ ಜಂಟಿ ಅಧಿವೇಶನ (Join Session) ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನ ಆರಂಭದ ಮೊದಲ ವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯ ನಡೆಯಲಿದೆ. ಆ ಬಳಿಕ ಬಜೆಟ್ ಮಂಡನೆ, ಹಾಗು ನಂತರ 4 ದಿನಗಳ ಕಾಲ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.

ಕೊನೆಯ ಅಧಿವೇಶನವೆಂದು ಯಾರೂ ಗೈರಾಗದೇ ತಪ್ಪದೇ ಹಾಜರಾಗಿ ಶಿಸ್ತು ತೋರಬೇಕೆಂದು ಸ್ಪೀಕರ್ ವಿಶ್ವೇಶ ಹೆಗಡೆ ಕಾಗೇರಿ ನಿನ್ನೆ ಎಲ್ಲಾ ಸದಸ್ಯರಿಗೂ ಮನವಿ ಮಾಡಿದ್ದಾರೆ. ಕಡ್ಡಾಯವಾಗಿ ಸದನಕ್ಕೆ ಹಾಜರಾಗಿ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕೆಂದು ಅಪ್ಪಣೆ ಹೊರಡಿಸಿದ್ದಾರೆ.

ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ

ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಧಾನಸೌಧದಿಂದ 2 ಕಿಮೀ ಸುತ್ತಲಿನ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಈ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ, ಸಭೆಗಳನ್ನು ಆಯೋಜಿಸುವಂತಿಲ್ಲ. ಯಾವುದೇ ಪ್ರತಿಕೃತಿಗಳ ದಹನ ಮಾಡುವುದಾಗಲೀ, ಪ್ರದರ್ಶನ ಮಾಡುವುದಾಗಲೀ ನಿಷೇಧ ಇದೆ ಎಂದು ಬೆಂಗಳೂರುನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Karnataka Budget 2023: ಕರ್ನಾಟಕ ಬಜೆಟ್ ಯಾವಾಗ? ಈ ಬಾರಿಯ ಬಜೆಟ್ ವಿಶೇಷತೆ ಏನು, ಯಾಕೆ ಮಹತ್ವದ್ದು?

ಈ ಅಧಿವೇಶನ ನೀರಸ?

ಈ ಬಾರಿಯ ಬಜೆಟ್ ಈಗಿನ ಸರ್ಕಾರದ ಕೊನೆಯ ಬಜೆಟ್. ಫೆಬ್ರುವರಿ 17ರಂದು ಬಜೆಟ್ ಮಂಡನೆಯಾದರೆ, 20ರಿಂದ 24ರವರೆಗೂ ಬಜೆಟ್ ಮೇಲೆ ಚರ್ಚೆ ನಡೆಯಲಿದೆ. ಆದರೆ, ವಿವಿಧ ಕಾರಣಗಳಿಂದ ಬಜೆಟ್ ಮೇಲೆ ಸದಸ್ಯರಿಗೆ ಆಸಕ್ತಿ ಕಡಿಮೆ ಇದೆ ಎನ್ನುವಂತಹ ಮಾತು ಕೇಳಿಬರುತ್ತಿದೆ. ಈ ಬಜೆಟ್ ಮುಗಿದ ಬಳಿಕ ಕೆಲ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಬಜೆಟ್​ನಲ್ಲಿ ಜನಪ್ರಿಯ ಯೋಜನೆಗಳನ್ನು ಸಿಎಂ ಬೊಮ್ಮಾಯಿ ಘೋಷಿಸಿ ಅನುದಾನ ಬಿಡುಗಡೆ ಮಾಡಿದರೂ ನೀತಿ ಸಂಹಿತೆ ಕಾರಣಕ್ಕೆ ಅದನ್ನು ಖರ್ಚು ಮಾಡಲು ಆಗುವುದಿಲ್ಲ. ಇದರಿಂದ ಆಡಳಿತ ಪಕ್ಷದ ಸದಸ್ಯರು ಬಜೆಟ್​ನಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿಲ್ಲ.

ಇನ್ನು, ಆಡಳಿತ ಪಕ್ಷವನ್ನು ಹುರಿದುಮುಕ್ಕಲು ಕಾಯುತ್ತಿರುವ ವಿಪಕ್ಷಗಳೂ ಹತಾಶಗೊಂಡಿವೆ. ಬಜೆಟ್ ಅಧಿವೇಶನದ ಮೊದಲ ವಾರವು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯಕ್ಕೆ ಸೀಮಿತವಾದರೆ ಬಜೆಟ್ ಮೇಲೆ ಸಿಗುವ ಕಾಲಾವಕಾಶ ಕಡಿಮೆ ಇದೆ. ಹೀಗಾಗಿ, ವಿಪಕ್ಷಗಳ ಸದಸ್ಯರೂ ಹೆಚ್ಚು ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ.

ಬಿಬಿಎಂಪಿ ಚುನಾವಣೆಗಳು ಮುಂಬರಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್​ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಭರ್ಜರಿ ಕೊಡುಗೆಗಳ ಘೋಷಣೆ ಆಗಬಹುದು.

Published On - 7:52 am, Fri, 10 February 23