ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮ, 2 ತಿಂಗಳಲ್ಲಿ 200 ರೋಡ್ ಶೋ, 4 ದಿಕ್ಕಲ್ಲೂ ರಥಯಾತ್ರೆ
ಬಿಜೆಪಿ ರಥಯಾತ್ರೆ ಮಾಡಲು ಮುಂದಾಗಿದ್ದು ರಾಜ್ಯದ ನಾಲ್ಕು ಭಾಗಗಳಲ್ಲಿ ವಿಜಯ ಸಂಕಲ್ಪ ರಥಯಾತ್ರೆ ನಡೆಸಲಿದೆ.
ಬೆಂಗಳೂರು: ರಾಜ್ಯದಲ್ಲಿ ಯಾತ್ರೆಗಳದ್ದೇ ಸದ್ದು ಕೇಳುತ್ತಿದೆ. ಕಾಂಗ್ರೆಸ್ (Congress) ಬಸ್ ಯಾತ್ರೆ ಮತ್ತು ಜೆಡಿಎಸ್ (JDS) ಪಂಚರತ್ನ ಯಾತ್ರೆ ಮೂಲಕ ಭಾರಿ ಸದ್ದು ಮಾಡಿವೆ. ಈಗ ಬಿಜೆಪಿ (BJP) ಕೂಡ ರಥಯಾತ್ರೆ ಮಾಡಲು ಮುಂದಾಗಿದ್ದು ರಾಜ್ಯದ ನಾಲ್ಕು ಭಾಗಗಳಲ್ಲಿ ವಿಜಯ ಸಂಕಲ್ಪ ರಥಯಾತ್ರೆ ನಡೆಸಲಿದೆ. ಒಟ್ಟು 4 ತಂಡಗಳಿಂದ ರಥಯಾತ್ರೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel), ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yadiyurappa) ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ.
ಈ ರಥ ಯಾತ್ರೆಯ ಕೆಲವು ಕಡೆ ರಾಷ್ಟ್ರೀಯ ನಾಯಕರು ಮತ್ತು ಕೇಂದ್ರ ಸಚಿವರು ಭಾಗಿಯಾಗುವ ಸಾಧ್ಯತೆ ಇದೆ. ಫೆಬ್ರವರಿ 26 ರಿಂದ ಆರಂಭವಾಗಿ ಮಾರ್ಚ್ 23 ರಂದು ಅಂತ್ಯವಾಗು ಸಾಧ್ಯತೆ ಇದೆ. ಬೆಂಗಳೂರಿನ ಕೆಂಪೇಗೌಡ ಪ್ರತಿಮೆ, ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟ, ಬೆಳಗಾವಿಯ ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮತ್ತು ಬೀದರ್ನ ಬಸವ ಕಲ್ಯಾಣದ ಅನುಭವದ ಮಂಟಪದಿಂದ ರಥಯಾತ್ರೆ ಆರಂಭವಾಗಲಿದೆ.
ನಾಲ್ಕು ಭಾಗಗಳಿಂದ ಶುರುವಾದ ರಥಯಾತ್ರೆ ಬೃಹತ್ ಸಮಾವೇಶದ ಮೂಲಕ ದಾವಣಗೆರೆಯಲ್ಲಿ ಅಂತ್ಯವಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಂದ 200 ರೋಡ್ ಶೋ ನಡೆಯಲಿದೆ. ಬಿಜೆಪಿಯ ಎಲ್ಲ ಮೋರ್ಚಾಗಳಿಂದ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ.
ದಾವಣಗೆರೆಯಲ್ಲಿ ಕೇಸರಿ ಮಹಾಸಂಗಮ
ದಾವಣಗೆರೆಯಲ್ಲಿ ಕೇಸರಿ ಮಹಾಸಂಗಮ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಮಾರ್ಚ್ ಮೂರನೇ ವಾರದಲ್ಲಿ ಸಮಾವೇಶ ನಡೆಯಲಿದೆ. ರಾಜ್ಯದ ನಾಲ್ಕು ಭಾಗಗಳಿಂದ ಬಂದು ರಥಯಾತ್ರೆ ದಾವಣಗೆರೆಯಲ್ಲಿ ಕೊನೆಯಾಗಲಿದೆ.