Karnataka Border Row: ವಿವಾದಿತ ಮಹಾರಾಷ್ಟ್ರ- ಕರ್ನಾಟಕ ಗಡಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ; ಉದ್ಧವ್ ಠಾಕ್ರೆ ಆಗ್ರಹ
ಕರ್ನಾಟಕದ ಗಡಿ ಪ್ರದೇಶದಲ್ಲಿ ಮರಾಠಿ ಮಾತನಾಡುವ ಜನರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಗಡಿ ವಿವಾದ ಬಗೆಹರಿಯುವವರೆಗೆ ಈ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
ಮುಂಬೈ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ವಿವಾದ (Karnataka- Maharashtra Border Dispute) ಸದ್ಯಕ್ಕಂತೂ ಬಗೆಹರಿಯುವ ಸಾಧ್ಯತೆಯಿಲ್ಲ. ಈ ಬಗ್ಗೆ ಮತ್ತೊಮ್ಮೆ ಕಿಡಿ ಹೊತ್ತಿಸಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ವಿವಾದಿತ ಗಡಿಯ ಬೆಳಗಾವಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಎಂದು ಒತ್ತಾಯಿಸಿದ್ದಾರೆ. ಅವರ ಈ ಹೇಳಿಕೆ ಹೈಡ್ರಾಮಾಕ್ಕೆ ಕಾರಣವಾಯಿತು. ವಿಧಾನ ಪರಿಷತ್ತನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಕರ್ನಾಟಕದ ಗಡಿ ಪ್ರದೇಶದಲ್ಲಿ ಮರಾಠಿ ಮಾತನಾಡುವ ಜನರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಗಡಿ ವಿವಾದ ಬಗೆಹರಿಯುವವರೆಗೆ ಈ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
“ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಡಿ ವಿವಾದದಲ್ಲಿ ಆಕ್ರಮಣಕಾರಿಯಾಗಿದ್ದರೂ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೌನವಾಗಿದ್ದಾರೆ” ಎಂದು ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಸಿಎಂಗೆ ಚಾಟಿ ಬೀಸಿದ್ದಾರೆ. “ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ತೀರ್ಮಾನಿಸುವವರೆಗೆ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ಇದನ್ನು ವಿಧಾನಸಭೆಯಲ್ಲಿ ಅಂಗೀಕರಿಸುವ ಪ್ರಸ್ತಾವನೆಯಲ್ಲಿ ಸೇರಿಸಬೇಕು” ಎಂದು ಅವರು ಹೇಳಿದ್ದಾರೆ.
“ನಮಗೆ ಕರ್ನಾಟಕದ ಒಂದು ಇಂಚು ಭೂಮಿಯೂ ಬೇಡ. ಆದರೆ ನಮ್ಮ ಭೂಮಿ ನಮಗೆ ಬೇಕು. ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲು ನಾವು ಕೇಂದ್ರಕ್ಕೆ ಬೇಡಿಕೆಯನ್ನು ಕಳುಹಿಸಬೇಕು” ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸದನವನ್ನು ಒತ್ತಾಯಿಸಿದ್ದಾರೆ. ಈ ನಿರ್ಣಯವನ್ನು ಇಂದೇ ಅಂಗೀಕರಿಸಿ ಮತ್ತು ಅದನ್ನು ಕೇಂದ್ರಕ್ಕೆ ಕಳುಹಿಸಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ; ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ
ಈ ಹೋರಾಟ ಸುಮಾರು 56 ವರ್ಷಗಳಿಂದ ನಡೆಯುತ್ತಿದೆ. ಪ್ರಾದೇಶಿಕ ಭಾಷೆಗಳನ್ನಾಧರಿಸಿ ರಾಜ್ಯಗಳು ರಚನೆಯಾದ ಕಾಲದಿಂದಲೂ ಗಡಿಯಲ್ಲಿ ಮರಾಠಿ ಭಾಷೆ ಬೇರೂರಿದೆ. ಹಲವು ವರ್ಷಗಳಿಂದ ಅಲ್ಲಿ ವಾಸಿಸುವ ನಾಗರಿಕರು ಮರಾಠಿ ಭಾಷೆಯನ್ನು ಮಾತನಾಡುತ್ತಾರೆ. ಈ ಹೋರಾಟ ರಾಜಕೀಯವಲ್ಲ ಎಂದು ಠಾಕ್ರೆ ಹೇಳಿದ್ದಾರೆ.
Nagpur: While Karnataka CM is aggressive on border row, CM Shinde is silent. Until the SC decides Belagavi, Karwar, and Nippani should be declared as a union territory. This should be added in the proposal that is to be passed in the Assembly: Uddhav Thackeray pic.twitter.com/AkxfExSKE7
— ANI (@ANI) December 26, 2022
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ನಿರ್ಣಯವನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಹೇಳಿದ್ದಾರೆ. “ಯಾವುದೇ ಪರಿಸ್ಥಿತಿಯಲ್ಲಿ, ನಾವು ಗಡಿ ಪ್ರದೇಶಗಳಲ್ಲಿ ವಾಸಿಸುವ ನಮ್ಮ ಜನರನ್ನು ಒಂಟಿಯಾಗಲು ಬಿಡುವುದಿಲ್ಲ. ನಾವು ಪ್ರತಿ ಇಂಚು ಭೂಮಿಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡುತ್ತೇವೆ. ಗಡಿಯಲ್ಲಿ ವಾಸಿಸುವವರಿಗೆ ಆಗಿರುವ ಅನ್ಯಾಯದ ವಿರುದ್ಧ ನಾವು ಹೋರಾಡುತ್ತೇವೆ ಎಂದು ಅವರು ಸದನವನ್ನು ಉದ್ದೇಶಿಸಿ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ 2 ನಕ್ಸಲರನ್ನು ಎನ್‌ಕೌಂಟರ್ ಮಾಡಿದ ಭದ್ರತಾ ಪಡೆ
ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ಪ್ರತಿಪಕ್ಷ ನಾಯಕರು ಆಡಳಿತಾರೂಢ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಷಯದ ಬಗ್ಗೆ ರಾಜ್ಯ ವಿಧಾನಸಭೆಯು ಗದ್ದಲವನ್ನು ಕಂಡದ್ದು ಇದು ಸತತ ಎರಡನೇ ವಾರವಾಗಿದೆ. ಕಳೆದ ವಾರ, ಚಳಿಗಾಲದ ವಿಧಾನಸಭೆ ಅಧಿವೇಶನ ಪ್ರಾರಂಭವಾದಾಗ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡರಲ್ಲೂ ಗಡಿ ಪ್ರದೇಶದ ಬಳಿ ಬೃಹತ್ ಮೆರವಣಿಗೆಯನ್ನು ನಡೆಸಲಾಯಿತು. ಬಿಗಿ ಭದ್ರತೆಯ ನಡುವೆ ಹಲವಾರು ಜನರನ್ನು ಬಂಧಿಸಲಾಯಿತು.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಈಗಾಗಲೇ ನಿರ್ಣಯವನ್ನು ಅಂಗೀಕರಿಸಿದ್ದು, ಶಿಂಧೆ-ಫಡ್ನವೀಸ್ ಸರ್ಕಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಊಹಾಪೋಹಗಳು ಎದ್ದಿವೆ.