ಬೆಂಗಳೂರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರ ನಿದ್ದೆಗೆಡಿಸಿದೆ. ಮತ್ತೊಂದೆಡೆ ಕಳೆದ ಎರಡು ತಿಂಗಳ ಹಿಂದಷ್ಟೆ ಕೆಂಪು ಸುಂದರಿ ಟೊಮ್ಯಟೋ ಗ್ರಾಹಕರ ಕಣ್ಣು ಕೆಂಪಾಗಿಸಿತ್ತು. ಈಗ ಈರುಳ್ಳಿ ಬೆಲೆ ಗಗನಕ್ಕೆ ಜಿಗಿದಿದೆ. ಬೆಂಗಳೂರು ನಗರದಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆಜಿಗೆ 80 ರಿಂದ 90 ರೂಪಾಯಿಗೆ ತಲುಪಿದೆ. ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಗಳಿವೆ. ಇನ್ನು ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣ ಸಂಬಂಧ ಕೊಲೆ ಖಂಡಿಸಿ ಇಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ಬಂದ್ಗೆ ವಿವಿಧ ದಲಿತಪರ, ಪ್ರಗತಿಪರ ಸಂಘಟನೆಗಳು ಕರೆಕೊಟ್ಟಿವೆ. ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಬಂದ್ಗೆ ಕರೆ ನೀಡಿದ್ದಾರೆ. ಅ.23ರಂದು ಸಚಿವ ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ನಡೆದಿತ್ತು. ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಮಂಡ್ಯ: ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಲು ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಮಂಡ್ಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ‘ಬರ, ಕುಡಿಯುವ ನೀರು, ವಿದ್ಯುತ್, ಆಸ್ಪತ್ರೆ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇನೆ. ಒಂದುವೇಳೆ ಸಮಸ್ಯೆ ಎದುರಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವೆ ಎಂದರು.
ಮಂಡ್ಯ: ಒಬ್ಬನೇ ಒಬ್ಬ ಶಾಸಕನೂ ನಮ್ಮ ಪಾರ್ಟಿ ಬಿಟ್ಟು ಹೋಗಲ್ಲ ಎಂದು ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಅವರು ಸರ್ಕಾರ ಬೀಳಿಸುವ ಕನಸು ಕಾಣ್ತಿದ್ದಾರೆ, ಸರ್ಕಾರ ಬಂದು 4 ತಿಂಗಳಾಯ್ತು, ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಹೇಳಿ ಎಂದರು.
ಬೆಂಗಳೂರು: ಮಹಿಳೆ ಮೇಲೆ ನಟ ದರ್ಶನ್ ಮನೆಯ ನಾಯಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನಟ ದರ್ಶನ್ ಮನೆ ಬಳಿ ಖಾಲಿ ಸೈಟ್ನಲ್ಲಿ ಕಾರು ನಿಲ್ಲಿಸಿದ್ದೆ, ಯಾಕೆ ಇಲ್ಲಿ ಕಾರು ಪಾರ್ಕ್ ಮಾಡಿದ್ದೀರಿ ಎಂದು ನಟ ದರ್ಶನ್ ಹುಡುಗರು ನನಗೆ ಕೇಳಿದರು, ನನಗೆ ಗೊತ್ತಿಲ್ಲ, ಇನ್ನೊಮ್ಮೆ ನಾನು ಕಾರು ಪಾರ್ಕ್ ಮಾಡಲ್ಲ ಅಂದೆ, ದರ್ಶನ್ ಹುಡುಗರು ವಾಗ್ವಾದ ಮಾಡುವಾಗಲೇ ನಾಯಿ ದಾಳಿ ಮಾಡಿತು. ನಾಯಿ ದಾಳಿಯಿಂದ ನನಗೆ ಗಾಯವಾದರೂ ಸಹಾಯಕ್ಕೆ ಬರಲಿಲ್ಲ. ಅವರು ಮಾನವೀಯತೆ ದೃಷ್ಟಿಯಿಂದಲೂ ನನಗೆ ಸಹಾಯ ಮಾಡಲಿಲ್ಲ ಎಂದು ಟಿವಿ9ಗೆ ದೂರುದಾರೆ ಅಮಿತಾ ಜಿಂದಾಲ್ ಹೇಳಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಅಕ್ರಮ ಹಿನ್ನಲೆ ದೂರು ಕೊಟ್ಟಿದ್ದೇನೆ ಎಂದು ಶಾಸಕ ನರೇಂದ್ರಸ್ವಾಮಿ ಹೇಳಿದರು. ‘ಅಕ್ರಮದ ಬಗ್ಗೆ ದೂರು ನೀಡಿದ್ದರೂ ಇನ್ನೂ ತನಿಖೆ ಪ್ರಾರಂಭವಾಗಿಲ್ಲ. ಅಕ್ರಮದ ಬಗ್ಗೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸುವಂತೆ ಸಿಎಂಗೆ ಮನವಿ ಸಲ್ಲಿಸಲಾಗಿದೆ ಎಂದರು.
ಕೊಡಗು: ಮಡಿಕೇರಿಯಲ್ಲಿ ಬರ ಕುಸಿತ ಪ್ರಕರಣಕ್ಕೆ ಸಂಬಧಪಟ್ಟಂತೆ ಮಣ್ಣಿನಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಸವ, ಲಿಂಗಪ್ಪ ಹಾಗೂ ಆನಂದ ಮೃತ ವ್ಯಕ್ತಿಗಳು. ಇದೀಗ ಕಾರ್ಮಿಕರ ಸಾವನ್ನು ಜಿಲ್ಲಾಸ್ಪತ್ರೆ ವೈದ್ಯರು ದೃಢೀಕರಿಸಿದ್ದಾರೆ. ಈ ಕುರಿತು ಮಡಿಕೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪುಟ್ಪಾತ್ ಮೇಲೆ ನುಗ್ಗಿದ ಘಟನೆ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯ ಮೆಣಸೆ ಗ್ರಾಮದ ಬಳಿ ನಡೆದಿದೆ. ಇನ್ನು ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 9 ಬೈಕ್ಗಳು ಸಂಪೂರ್ಣ ಜಖಂ ಆಗಿದ್ದು, ಪುಟ್ಪಾತ್ ಮೇಲೆ ನಿಂತಿದ್ದ ಇಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ನವೆಂಬರ್ 3ರಂದು ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಬರ ಅಧ್ಯಯನ ಪ್ರವಾಸ ಮಾಡಲಿದ್ದಾರೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಸಭೆಯ ಬಳಿಕ ಮಾತನಾಡಿದ ಅವರು ‘ಬೆಂಗಳೂರಿನ ಪರಿಸ್ಥಿತಿ ತೋರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದರು.
ಕೊಡಗು: ಜಿಲ್ಲೆಯ ಮಡಿಕೇರಿ ರೆಡ್ಕ್ರಾಸ್ ಸಭಾಂಗಣ ಬಳಿ ಗುಡ್ಡ ಕುಸಿತವಾಗಿದ್ದು, ಮಣ್ಣಿನಡಿ ಸಿಲುಕಿದ್ದ ಮೂವರ ಪೈಕಿ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮತ್ತಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ಎಸ್.ಪಿ ಕೆ.ರಾಮರಾಜನ್ ಮತ್ತು ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಕೆಂಪೇಗೌಡ ಏರ್ಪೋರ್ಟ್ನಲ್ಲಿ 57 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 951.40 ಗ್ರಾಂ ಚಿನ್ನಾಭರಣವನ್ನು ಬ್ಯಾಂಕಾಂಕ್ನಿಂದ ಸಾಗಿಸುತ್ತಿದ್ದ ಪ್ರಯಾಣಿಕನನ್ನ ಬಂಧಿಸಲಾಗಿದ್ದು, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬರ ಅಧ್ಯಯನ ಪ್ರವಾಸದ ಕುರಿತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ನಡೆಯುತ್ತಿದೆ. ಬರ ಅಧ್ಯಯನ ಪ್ರವಾಸದ ಸಭೆಯಲ್ಲಿ ಬಿಜೆಪಿಯ ಹಲವು ಶಾಸಕರು ಭಾಗಿಯಾಗಿದ್ದು, ಸಭೆಗೂ ಮುನ್ನ ಶಾಸಕ ಉದಯ ಗರುಡಾಚಾರ್ ಯಡಿಯೂರಪ್ಪ ಕಾಲು ಮುಟ್ಟಿ ನಮಸ್ಕರಿಸಿ ಘಟನೆ ನಡೆಯಿತು.
ಕೊಪ್ಪಳ: ಸರ್ಕಾರಿ ಶಾಲೆಗೆ ಭೂಮಿ ನೀಡಿದ ವೃದ್ದೆಗೆ ಈ ಬಾರಿಯ ರಾಜೋತ್ಸವ ಪ್ರಶಸ್ತಿ ಲಭಿಸಿದೆ. ಹೌದು, ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಹುಚ್ಚಮ್ಮ ಚೌದರಿ ಅವರು ಮುೂವತ್ತು ವರ್ಷದ ಹಿಂದೆ ತಮ್ಮೂರಿನ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ದಾನ ನೀಡಿದ್ದರು. ಕೋಟಿ ಕೋಟಿ ಬೆಲೆ ಬಾಳುವ ಭೂಮಿಯನ್ನು ದಾನ ಮಾಡಿದ್ದ ಹುಚ್ಚಮ್ಮಗೆ, ಇದೀಗ ಪ್ರಶಸ್ತಿ ಒಲಿದು ಬಂದಿದೆ. ಇನ್ನು ಪ್ರಶಸ್ತಿಗೆ ಅರ್ಜಿ ಹಾಕಿರದೆ ಇದ್ದರೂ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ ಎಂದು ಪ್ರಶಸ್ತಿ ಪುರಸ್ಕೃತ ಹುಚ್ಚಮ್ಮ ಹೇಳಿದ್ದಾರೆ.
ಬೀದರ್: ಮೇ 01 1985 ರಲ್ಲಿ ಜಿಲ್ಲೆಯ ಮಾಳೆಗಾಂವ ಗ್ರಾಮದಲ್ಲಿ ಜನಿಸಿರುವ ಜಾನಪದ ಕಲಾವಿದೆ ಮಂಗಳಮುಖಿ ನರಸಪ್ಪಾಗೆ ರಾಜೋತ್ಸವ ಪ್ರಶಸ್ತಿ ಒಲಿದಿದೆ. ನಾಲ್ಕು ದಶಕದಿಂದ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡಿರುವ ನರಸಪ್ಪಾ ಅವರು ಭೂತೆರ ಕುಣಿತದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮನೆ ಮಾತಾಗಿದ್ದಾರೆ.
ಬಾಗಲಕೋಟೆ: ಒಂದು ಸಂಸ್ಥೆ ಹಾಗೂ ಬಾಗಲಕೋಟೆ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ರಂಗಭೂಮಿ ಹಿರಿಯ ಕಲಾವಿದ ವಿಶ್ವನಾಥ ವಂಶಾಕೃತಮಠ, ತಯ್ಯಬ್ ಖಾನ್ ಇನಾಮದಾರ, ಕೃಷಿ ಪರಿಸರ ವಿಭಾಗದ ಶಿವರೆಡ್ಡಿ ವಾಸನ್ ಹಾಗೂ ಸ್ನೇಹರಂಗ ಹವ್ಯಾಸಿ ಕಲಾಸಂಸ್ಥೆಗೂ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಬೆಂಗಳೂರು: ಈ ಬಾರಿ ಮಾಧ್ಯಮ ಕ್ಷೇತ್ರದ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ದಿನೇಶ್ ಅಮೀನ್ ಮಟ್ಟು, ಜವರಪ್ಪ, ಮಾಯಾ ಶರ್ಮ ಹಾಗೂ ರಘು ಭಂಡಾರಿ ಅವರಿಗೆ ಪ್ರಶಸ್ತಿ ಲಭಿಸಿದೆ. ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಸಂಪೂರ್ಣ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿ ಗೌಡರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಇನ್ನು ಹೊರನಾಡು/ ಹೊರದೇಶ ಕ್ಷೇತ್ರದಲ್ಲಿ ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ ಹಾಗೂ ಶಶಿಕರಣ್ ಶೆಟ್ಟಿ ಅವರಿಗೆ ದೊರೆತಿದೆ.
ಬೆಂಗಳೂರು: ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರದಿಂದ ಎಸ್ ಸೋಮನಾಥನ್ ಶ್ರೀಧರ್ ಪನಿಕರ್ ಹಾಗೂ ಪ್ರೋ ಗೋಪಾಲನ್ ಜಗದೀಶ್ ಅವರಿಗೆ ದೊರೆತಿದೆ. ನ್ಯಾಯಾಂಗ ಕ್ಷೇತ್ರದಿಂದ ಚಿಕ್ಕಬಳ್ಳಾಪುರದ ವಿ.ಗೋಪಾಲಗೌಡ ಅವರಿಗೆ ಪ್ರಶಸ್ತಿ ಲಭಿಸಿದೆ.
–
ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ರಾಯಚೂರಿನ ರಾಮಪ್ಪ, ಕೋಲಾರದ ಕೆ.ಚಂದ್ರಶೇಖರ್ ಹಾಗೂ ಮಂಡ್ಯದ ಕೆ.ಟಿ ಚಂದು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದರೆ, ಕ್ರೀಡಾ ಕ್ಷೇತ್ರದಿಂದ ಕೋಲಾರದ ಕು. ದಿವ್ಯಾ ಟಿ.ಎಸ್, ಬೆಂಗಳೂರಿನ ಅದಿತಿ ಅಶೋಕ್ ಹಾಗೂ ಧಾರವಾಡದ ಅಶೋಕ್ ಗದಿಗೆಪ್ಪ ಏಣಗಿ ಅವರಿಗೆ ದೊರೆತಿದೆ.
ಬೆಂಗಳೂರು: ಸಾಹಿತ್ಯ ಕ್ಷೇತ್ರದ 8 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಚಾಮರಾಜನಗರದ ಪ‌್ರೊ. ಸಿ.ನಾಗಣ್ಣ, ಹಾಸನದ
ಸುಬ್ಬು ಹೊಲೆಯಾರ್, ಹಾವೇರಿಯ ಸತೀಶ್ ಕುಲಕರ್ಣಿ, ಕೋಲಾರದ ಲಕ್ಷ್ಮಿಪತಿ, ವಿಜಯಪುರದ ಪರಪ್ಪ ಗುರುಪಾದಪ್ಪ ಸಿದ್ದಾಪುರ, ಬೆಂಗಳೂರಿನ ಡಾ.ಕೆ.ಷರೀಫಾ, ಕೋಲಾರದ ಲಕ್ಷ್ಮಿಪತಿ ಹಾಗೂ ಬೆಂಗಳೂತರಿನ ಡಾ.ಕೆ.ಷರೀಫಾ ಅವರಿಗೆ ಪ್ರಶಸ್ತಿ ದೊರೆತಿದೆ.
ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರಿಗೆ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಡಾ.ಸಿ. ರಾಮಚಂದ್ರ ಹಾಗೂ ದಕ್ಷಿಣ ಕನ್ನಡದ ಡಾ.ಪ್ರಶಾಂತ್ ಅವರಿಗೆ ದೊರೆತಿದೆ.
ಬೆಂಗಳೂರು: ಈ ಬಾರಿ ಆಡಳಿತ ಕ್ಷೇತ್ರದ ಓರ್ವ ವ್ಯಕ್ತಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಹೌದು, ತುಮಕೂರಿನ ಬಲರಾಮ್ ಎಂಬುವವರಿಗೆ ನೀಡಲಾಗಿದ್ದು, ಪ್ರಶಸ್ತಿ ವಿಜೇತರಿಗೆ 5 ಲಕ್ಷ ನಗದು, 25 ಗ್ರಾಂ ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿ ನೀಡಲಾಗುತ್ತದೆ.
ಬೆಂಗಳೂರು: ಈ ಬಾರಿ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಇವರಿಗೆ 5 ಲಕ್ಷ ನಗದು, 25 ಗ್ರಾಂ ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಬೆಂಗಳೂರು: ಈ ಬಾರಿ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿತ್ತು. ಅದರಂತೆ ಇದೀಗ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಬೆಂಗಳೂರು: ಯಕ್ಷಗಾನ ಮತ್ತು ಬಯಲಾಟ ಕ್ಷೇತ್ರದ ನಾಲ್ವರಿಗೆ ರಾಜ್ಯೊತ್ಸವ ಪ್ರಶಸ್ತಿ ಲಭಿಸಿದೆ. ಅರ್ಗೋಡು ಮೋಹನದಾಸ ಶೆಣೈ, ಕೆ.ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ ಹಾಗೂ ದಳವಾಯಿ ಸಿದ್ದಪ್ಪ ಅವರಿಗೆ ಲಭಿಸಿದೆ.
ಬೆಂಗಳೂರು: ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರದ ನಾಲ್ವರಿಗೆ ರಾಜ್ಯೊತ್ಸವ ಪ್ರಶಸ್ತಿ ನೀಡಲಾಗಿದೆ. ಟಿ.ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಮಾರ್ಥಾ ಜಾಕಿಮೋವಿಚ್ ಮತ್ತು ಪಿ.ಗೌರಯ್ಯ ಅವರಿಗೆ ಪ್ರಶಸ್ತಿ ಲಭಿಸಿದೆ.
ಬೆಂಗಳೂರು: ಸಂಗೀತ ಕ್ಷೇತ್ರದ 4 ಸಾಧಕರಿಗೆ ರಾಜ್ಯೊತ್ಸವ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ‘ಡಾ.ನಯನ ಎಸ್.ಮೋರೆ, ಲೀಲಾ ಎಂ ಕೊಡ್ಲಿ, ಶಬ್ಬೀರ್ ಅಹಮದ್, ಡಾ.ಎಸ್ ಬಾಳೇಶ ಭಜಂತ್ರಿ ಅವರಿಗೆ ಪ್ರಶಸ್ತಿ ದೊರೆತಿದೆ.
ಬೆಂಗಳೂರು: ರಂಗಭೂಮಿ ಕ್ಷೇತ್ರದ ಆರು ಕಲಾವಿದರಿಗೆ ರಾಜ್ಯೊತ್ಸವ ಪ್ರಶಸ್ತಿ ನೀಡಲಾಗಿದ್ದು, ಎ.ಜಿ. ಚಿದಂಬರ ರಾವ್ ಜಂಬೆ
ಪಿ. ಗಂಗಾಧರ ಸ್ವಾಮಿ, ಹೆಚ್.ಬಿ.ಸರೋಜಮ್ಮ, ತಯ್ಯಬಖಾನ್ ಎಂ.ಇನಾಮದಾರ, ಡಾ.ವಿಶ್ವನಾಥ್ ವಂಶಾಕೃತ ಮಠ ಹಾಗೂ
ಪಿ.ತಿಪ್ಪೇಸ್ವಾಮಿ ಅವರಿಗೆ ನೀಡಲು ನಿರ್ಧರಿಸಿದೆ.
ಬೆಂಗಳೂರು: ಚಲನಚಿತ್ರ ಕ್ಷೇತ್ರದಲ್ಲಿ ಇಬ್ಬರಿಗೆ ರಾಜ್ಯೊತ್ಸವ ಪ್ರಶಸ್ತಿ ಪ್ರಕಟವಾಗಿದೆ. ಡಿಂಗ್ರಿ ನಾಗರಾಜ್ ಮತ್ತು ಬಿ.ಜನಾರ್ಧನ್ (ಬ್ಯಾಂಕ್ ಜನಾರ್ಧನ್) ಅವರಿಗೆ ಪ್ರಶಸ್ತಿ ದೊರೆತಿದೆ.
ಬೆಂಗಳೂರು: ಸಮಾಜಸೇವೆ ಕ್ಷೇತ್ರದಲ್ಲಿ 5 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ಕೆ.ರೂಪಾ ನಾಯಕ್, ನಿಜಗುಣಾನಂದ ಸ್ವಾಮೀಜಿ ಹಾಗೂ ಜಿ.ನಾಗರಾಜುಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಿದೆ.
ಬೆಂಗಳೂರು: ಈ ಬಾರಿ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸರ್ಕಾರ ನಿರ್ಧಾರ ಮಾಡಿತ್ತು. ಅದರಂತೆ 10 ಸಂಘ ಸಂಸ್ಥೆಗಳು ಸೇರಿ 68 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆಯಲಿದೆ. ಜಾನಪದ ಕ್ಷೇತ್ರದಲ್ಲಿ 9 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ‘ಹುಸೇನಾಬಿ ಬುಡೆನ್ ಸಾಬ್ ಸಿದ್ಧಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಚೌಡಮ್ಮ, ಹೆಚ್.ಕೆ.ಕಾರಮಂಚಪ್ಪ, ವಿಭೂತಿ ಗುಂಡಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಬೆಳಗಾವಿ: ಡಿಕೆ ಶಿವಕುಮಾರ್ ಆದಷ್ಟು ಬೇಗನೆ ಮಾಜಿ ಮಂತ್ರಿ ಆಗುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ ‘ಕೆಲವೊಬ್ಬರು ಕೆಲಸ ಇಲ್ಲದಕ್ಕೆ ಇಂತಹ ಉಸಾಬರಿ ಮಾಡುತ್ತಿರುತ್ತಾರೆ ಎನ್ನುವ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ‘ಮೈ ತುಂಬಾ ಕೆಲಸ ಇದ್ದಾಗ ಯಾವುದೂ ನೆನಪು ಆಗುವುದಿಲ್ಲ. ಕೆಲಸ ಇಲ್ಲದ ಸಮಯದಲ್ಲಿ ಇಂತಹ ವಿಚಾರಗಳು ಬರುತ್ತಿರುತ್ತವೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲು ಹೋಗಲ್ಲ ಎಂದರು.
ನಾಳೆ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ ಎಂದು ಬೆಳಗಾವಿ ನಗರದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು. ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮ ಆಚರಣೆ ಮಾಡ್ತಿದ್ದೇವೆ. ರಾಜ್ಯೋತ್ಸವ ಮೆರವಣಿಗೆಗೆ ಸಚಿವ ಸತೀಶ್ ಚಾಲನೆ ಕೊಡಲಿದ್ದಾರೆ. 100 ರೂಪಕ ವಾಹನಗಳು ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ. ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ 5 ಲಕ್ಷ ಜನ ಭಾಗಿಯಾಗ್ತಾರೆ. ನಾಳೆ ಬೆಳಗ್ಗೆ 10.30ಕ್ಕೆ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ಕೊಡಲಾಗುತ್ತೆ. ಹಳದಿ, ಕೆಂಪುಬಣ್ಣದ ಗಾಳಿಪಟ ಉತ್ಸವ ಜಿಲ್ಲೆಯಾದ್ಯಂತ ನಡೆಯಲಿದೆ. MES ಕರಾಳ ದಿನಾಚರಣೆಗೆ ಅನುಮತಿ ಕೊಟ್ಟಿಲ್ಲ, ಕೊಡುವುದಿಲ್ಲ ಎಂದರು.
ಸಿಎಂ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯನೇ ಸಿಎಂ ಆಗಿರ್ತಾರೆ. ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಆಪ್ತ ಸಚಿವ ಜಮೀರ್ ಅಹ್ಮದ್ ಖಾನ್. ಆಪರೇಷನ್ ಕಮಲ ಅಸಾಧ್ಯ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಗಲು ಕನಸು ಕಾಣ್ತಿದ್ದಾರೆ. 56 ಜನ ಎಂಎಲ್ಎಗಳನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡೋದು ಸಾಧ್ಯನಾ? ರಮೇಶ್ ಜಾರಕಿಹೊಳಿ ಅವರನ್ನೇ ಕೇಳಿ ಆಪರೇಷನ್ ಎಷ್ಟು ಕಷ್ಟ ಅಂತ. ಸಮ್ಮಿಶ್ರ ಸರ್ಕಾರದಲ್ಲಿ 17 ಜನರನ್ನು ಕರೆದುಕೊಂಡು ಹೋಗಲು ಎಷ್ಟು ಎಷ್ಟು ಸರ್ಕಸ್ ಮಾಡಿದ್ದಾರೆ. ರಮೇಶ್ ಹೈಕಮಾಂಡ್ ಬಳಿ ಬೇಳೆ ಬೇಯಿಸಿಕೊಳ್ಳಲು ಹಿಂಗೆ ಮಾತಾಡ್ತಿದ್ದಾರೆ. ರಮೇಶ್ ಬಿಜೆಪಿಲೀ ಇರೋ ಶಾಸಕರನ್ನು ಉಳಿಸಿಕೊಳ್ಳಲಿ. ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲು ಒಂದೇ ಕಾಲಿನಲ್ಲಿ ನಿಂತಿದ್ದಾರೆ ಎಂದರು.
ಬೆಂಗಳೂರಿನ ಕೂಡ್ಲುಗೇಟ್ ಬಳಿ ಚಿರತೆ ಕಾಣಿಸಿಕೊಂಡ ವಿಚಾರ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಕ್ರಮ ವಹಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಚಿರತೆ ಸೆರೆ ಹಿಡಿಯಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿದ್ದಾರೆ. ಡ್ರೋನ್ ಮೂಲಕ ಕಾರ್ಯಾಚರಣೆ ಮಾಡಲಾಗುತ್ತಿದೆ. ಥರ್ಮಲ್ ಕ್ಯಾಮರಾ ಮೂಲಕ ಸೆರೆ ಹಿಡಿಯುವ ಕೆಲಸ ಆಗ್ತಿದೆ. ಚಿರತೆ ಪ್ರತ್ಯಕ್ಷ ಹಿನ್ನೆಲೆ ಆ ಭಾಗದ ಜನ ಎಚ್ಚರಿಕೆಯಿಂದ ಇರಬೇಕು. ಆತಂಕ, ಭಯ ಬೇಡ ಆದರೆ ಎಚ್ಚರಿಕೆ ಇರಲಿ. ಈ ಚಿರತೆ ಎಲ್ಲಿಂದ ಬಂದಿದ್ದು ಎಂಬ ನಿಖರ ಮಾಹಿತಿ ಇಲ್ಲ ಎಂದರು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಆರೋಗ್ಯವಾಗಿದ್ದ ನಾಲ್ಕು ಹಸುಗಳು ಪಶು ಆಹಾರ ಸೇವಿಸಿ ಮೃತಪಟ್ಟಿವೆ. ರೈತ ಜಯಕೃಷ್ಣನಿಗೆ ಸೇರಿದ ಸುಮಾರು 3ಲಕ್ಷ ಮೌಲ್ಯದ ಹಸುಗಳು ಮೃತಪಟ್ಟಿವೆ. ಹಸುಗಳು ಸಧ್ರಡವಾಗಿ ಬೆಳೆಯಲು ಕುಟುಂಬಸ್ಥರು ಪಶು ಆಹಾರ ನೀಡಿದ್ದರು. ಪಶು ಆಹಾರ ಸೇವಿಸಿದ್ದ ಕೂಡಲೇ ತೀವೃ ಅಸ್ವಸ್ಥವಾದ ನಾಲ್ಕು ಹಸುಗಳು ಅಸ್ವಸ್ಥವಾದ ಕೆಲವೇ ಹೊತ್ತಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿವೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜನತಾ ದರ್ಶನದಲ್ಲಿ ಅಧಿಕಾರಿಗಳ ಎಡವಟ್ಟು. ಸರಿಯಾಗಿ ವ್ಯವಸ್ಥೆ ಕಲ್ಪಿಸಿಲ್ಲ ಅಂತಾ ಕುಣಿಗಲ್ ತಹಶೀಲ್ದಾರ್ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಪರಮೇಶ್ವರ್ ಗರಂ ಆದರು. ಕೃಷಿ ಅಧಿಕಾರಿಗಳಿಗೆ ಜಾಡಿಸಿದರು. ಕೃಷಿ ಇಲಾಖೆಯಲ್ಲಿ ಪ್ರತಿ ಎಕರೆಗೂ ಇನ್ಶೂರೆನ್ಸ್ ಕಟ್ಟಿಸಬೇಕು ರೈತರಿಗೆ ಮಾಹಿತಿ ಇಲ್ಲ. ರೈತರಿಗೆ ಮಾಹಿತಿ ಇಲ್ಲ ನೀವೆನು ಮಾಡ್ತಿದ್ದಿರಿ ಎಂದು ಜಂಟಿ ಕೃಷಿ ನಿರ್ದೆಶಕನಿಗೆ ಪರಮೇಶ್ವರ್ ತರಾಟೆಗೆ ತೆಗೆದುಕೊಂಡರು. ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಡಿಸಿ ಶ್ರೀನಿವಾಸ್ ಗೆ ಸೂಚನೆ ನೀಡಿದರು. ಕುಣಿಗಲ್ ತಹಶೀಲ್ದಾರ್ ವಿಶ್ವನಾಥ್ ಹಾಗೂ ಕೃಷಿ ಇಲಾಖೆ ಅಧಿಕಾರಿ ರಂಗನಾಥ್ ಮೇಲೆ ಪರಮೇಶ್ವರ್ ಗರಂ ಆದರು.
ಸರ್ಕಾರ ಪತನ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಜಾರಕಿಹೊಳಿ ಮಾತಿಗೆಲ್ಲ ಉತ್ತರ ಕೊಡುತ್ತಾ ಕೂರಲು ಆಗುವುದಿಲ್ಲ ಎಂದದು ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸರ್ಕಾರ ಸ್ಥಿರತೆಯಿಂದ ಕೂಡಿದೆ. ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬಿದ್ದು ಹೋಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ನಿನ್ನೆ ಸುದ್ದಿಗೋಷ್ಠಿಯಲ್ಲಿ ಬಳಸಿದ ಪದಗಳ ಬಗ್ಗೆ ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಡ್ಯಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಹಿನ್ನೆಲೆ ಸಿಎಂಗೆ ವ್ಯಂಗ್ಯವಾಗಿ ಮಂಡ್ಯ ಜಿಲ್ಲಾ ಬಿಜೆಪಿ ಸ್ವಾಗತ ಕೋರಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಜಿಲ್ಲಾ ಘಟಕ ವ್ಯಂಗ್ಯವಾಡಿದೆ. ತಮಿಳುನಾಡಿಗೆ ನೀರು ಬಿಟ್ಟು ಮಂಡ್ಯಕ್ಕೆ ಆಗಮಿಸ್ತಿರುವ ಸಿಎಂಗೆ ಸ್ವಾಗತ. ರೈತರ ಪಂಪ್ ಸೆಟ್ಗಳಿಗೆ ಸರಿಯಾಗಿ ಕರೆಂಟ್ ನೀಡದೆ, ರೈತರ ಬಾಳನ್ನು ಕತ್ತಲೆ ಮಾಡಿ ಜಿಲ್ಲೆಗೆ ಆಗಮಿಸ್ತಿರುವ ಸಿಎಂಗೆ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಂಡ್ಯ ಜಿಲ್ಲಾ ಬಿಜೆಪಿ ಪೋಸ್ಟ್ ಹಾಕಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯ ಬಾರ್ ಒಂದರ ಬಳಿ ವೃದ್ದನ ಮೇಲೆ ನಾಯಿಗಳು ಅಟ್ಯಾಕ್ ಮಾಡಿದ್ದು ಅಪರಿಚಿತ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮದ್ಯಪಾನ ಮಾಡಿ ರಸ್ತೆಯಲ್ಲೆ ಬಿದ್ದಿದ್ದ ಅಪರಿಚಿತ ವೃದ್ದನ ಮೇಲೆ ನಾಯಿಗಳು ದಾಳಿ ಮಾಡಿವೆ. ಮೃತ ವೃದ್ದನ ಗುರುತು ಹಾಗೂ ವಿಳಾಸ ಪತ್ತೆ ಮುಂದಾಗಿರುವ ಪೊಲೀಸರು.
ಭಾರತೀಯ ಜನತಾ ಪಕ್ಷದ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಬಿಜೆಪಿಯ ಪ್ರತಿಯೊಬ್ಬ ನಾಯಕರೂ ನಮ್ಮ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರಿಗೆ ನಮ್ಮ ಪಕ್ಷದ ಮೇಲೆ ಹೆಚ್ಚು ಆಸಕ್ತಿ ಇದ್ದಂತೆ ಕಾಣ್ತಿದೆ. ಅವರೆಲ್ಲರೂ ನಮ್ಮ ಪಕ್ಷಕ್ಕೆ ಬರ್ತಾರೇನೋ. ಅದಕ್ಕಾಗಿ ನಮ್ಮ ಪಕ್ಷದ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಿದ್ದಾರೇನೋ? ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದರು.
ಬೆಳ್ಳಂಬೆಳಗ್ಗೆ ಚಿನ್ನದ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಉಡುಪಿ, ಕಾರ್ಕಳ, ಕುಂದಾಪುರ, ಪಡುಬಿದ್ರಿ, ಬ್ರಹ್ಮಾವರ, ಪುತ್ತೂರು ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಏಕಕಾಲದಲ್ಲಿ ಅನೇಕ ಮಳಿಗೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕೋಲಾರದಲ್ಲಿ ಶ್ವೇತ ಬಣದ ನಾಗರಹಾವು(ಬಿಳಿ ನಾಗರಹಾವು) ಪತ್ತೆಯಾಗಿದೆ. ಕೋಲಾರದ ಮುನೇಶ್ವರ ನಗರದ ರವೀಂದ್ರ ಮನೆಯಲ್ಲಿ 6 ಅಡಿ ಉದ್ಧದ ಶ್ವೇತ ಬಣ್ಣದ ನಾಗರಹಾವು ಕಾಣಿಸಿಕೊಂಡಿತ್ತು. ಅಪರೂಪದ ಬಿಳಿನಾಗರ ಹಾವನ್ನು ನೋಡಲು ಜನ ಮುಗಿಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರುಗರಕ್ಷಕ ರವಿ ನಾಗರವನ್ನು ಸುರಕ್ಷಿತವಾಗಿ ರಕ್ಷಿಸಿ, ಕೋಲಾರದ ಅಂತರಗಂಗೆ ಅರಣ್ಯಪ್ರದೇಶದಲ್ಲಿ ಬಿಟ್ಟಿದ್ದಾರೆ.
ಮಂಡ್ಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಮಂಡ್ಯ ನಗರದ ಖಾಸಗಿ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಯುತ್ತಿರುವ ಪತ್ರಕರ್ತರ ಅಂತರ್ ಜಿಲ್ಲಾ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪರಿಚಿತ ವಾಹನ-ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಯುಟ್ಯೂಬರ್ ಮೃತಪಟ್ಟಿದ್ದಾರೆ. ಬೆಂಗಳೂರು ಕಡೆಯಿಂದ ತುಮಕೂರು ಕಡೆ ಹೋಗುತ್ತಿದ್ದ ಸ್ವಿಫ್ಟ್ ಕಾರಿನಲ್ಲಿದ್ದ ಯುಟ್ಯೂಬರ್ ವೆಂಕಟೇಶ್(43) ಪ್ರಾಣ ಕಳೆದುಕೊಂಡಿದ್ದಾರೆ. ಸಂಚಾರಿ ಪೊಲೀಸರಿಂದ ಅಪರಿಚಿತ ವಾಹನಕ್ಕೆ ಶೋಧ ನಡೆಯುತ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಕನ್ನಡ & ಸಂಸ್ಕೃತಿ ಇಲಾಖೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಶಿವರಾಜ ತಂಗಡಗಿ ಅವರು ಈ ಬಾರಿ 68 ಸಾಧಕರು, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಿದ್ದಾರೆ.
Published On - 8:05 am, Tue, 31 October 23