ಹಳೆ ಪ್ರೇಮಿಯೊಂದಿಗೆ ವಾಸವಾಗಿದ್ದಕ್ಕೆ ಪತ್ನಿಯ ಪ್ರಿಯಕರನನ್ನು ಕೊಲೆಗೈದ ಪತಿ
ದಂಪತಿ ಎರಡು ವರ್ಷ ಸಂಸಾರ ಮಾಡಿದ್ದರು. ಆದರೆ ಸಂಸಾರ ಯಾಕೋ ಸರಿಹೋಗಿಲ್ಲ ಎಂದು ಪತ್ನಿ ಪತಿಯನ್ನು ಬಿಟ್ಟು ಒಂಟಿಯಾಗಿದ್ದ ತನ್ನ ಹಳೆ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡಿದ್ದಳು. ಆದರೆ ಇದನ್ನು ಸಹಿಸದ ಪತಿ, ಆಕೆಯ ಪ್ರಿಯಕರನನ್ನೇ ಕೊಲೆ ಮಾಡಿದ್ದಾನೆ.
ಕೋಲಾರ ಅ.31: ಪತಿಯನ್ನು ಬಿಟ್ಟು ಬಂದು ಹಳೆ ಪ್ರಿಯಕರನೊಂದಿಗೆ ಸುಖವಾಗಿ ಜೀವನ ಸಾಗಿಸಬೇಕು ಎಂದುಕೊಂಡಿದ್ದ ಮಹಿಳೆಯ ಬಾಳಲ್ಲಿ ಅದೊಂದು ಘನಘೋರ ಘಟನೆ ನಡೆದಿದೆ. ಪತ್ನಿಯು ಪ್ರಿಯಕರನೊಂದಿಗೆ ಇದ್ದಿದ್ದನ್ನು ಸಹಿಸಲಾಗದೆ ಪತಿ ಹಾಗೂ ಪತ್ನಿಯ ತವರು ಮನೆಯವರು ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆ ಬಂಗಾರಪೇಟೆ (Bangarpete) ಪಟ್ಟಣದಲ್ಲಿ ನಡೆದಿದೆ. ದಂಪತಿ ಎರಡು ವರ್ಷ ಸಂಸಾರ ಮಾಡಿದ್ದರು. ಆದರೆ ಸಂಸಾರ ಯಾಕೋ ಸರಿಹೋಗಿಲ್ಲ ಎಂದು ಪತ್ನಿ ಪತಿಯನ್ನು ಬಿಟ್ಟು, ಒಂಟಿಯಾಗಿದ್ದ ತನ್ನ ಹಳೆ ಪ್ರೇಮಿಯೊಂದಿಗೆ ವಾಸವಾಗಿದ್ದಳು. ಆದರೆ ಇದನ್ನು ಸಹಿಸದ ಪತಿ ಹಳೆ ಪ್ರಿಯಕರನನ್ನೇ ಕೊಲೆ ಮಾಡಿದ್ದಾನೆ. ಅಷ್ಟಕ್ಕೂ ಏನಿದು ಹಳೆ ಲವ್ ಸ್ಟೋರಿ ಹೊಸ ಮರ್ಡರ್ ಇಲ್ಲಿದೆ ಡೀಟೇಲ್ಸ್..
ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಶ್ರೀನಿವಾಸಗೌಡ ಲೇಔಟ್ನ ಕೃಷ್ಣಪ್ಪ ಎಂಬುವರು ತನ್ನ ಮಗ ಹೇಮಂತ್ ಎಂಬಾತ ನಾಪತ್ತೆ ಯಾಗಿದ್ದಾನೆಂದು ನೀಡಿದ ಪ್ರಕರಣವೇ ಇಂದು ಕೊಲೆ ಪ್ರಕರಣವಾಗಿ ಬದಲಾಗಿದೆ. ಅಷ್ಟಕ್ಕೂ ಆಗಿದ್ದೇನು ಅಂತ ನೋಡಿದರೇ ಇದೇ ಅಕ್ಟೋಬರ್ 15 ರಂದು ಕೃಷ್ಣಪ್ಪನವರ ಮಗ ಹೇಮಂತ್ ಕುಮಾರ್ ಕೆಲಸದ ನಿಮಿತ್ತ ಬಂಗಾರಪೇಟೆಯಿಂದ ಬೆಂಗಳೂರಿಗೆ ಹೋಗಿದ್ದನು. ಬೆಂಗಳೂರಿಗೆ ಹೋದವನು ಅಂದು ತಿರುಗಿ ಮನೆಗೆ ಹೋಗಿರಲಿಲ್ಲ.
ಹೀಗಾಗಿ ಹೇಮಂತ ಕುಟುಂಬಸ್ಥರು ಅಕ್ಟೋಬರ್ 16 ರಂದು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಆತನ ಸುಳಿವು ಸಿಗಲಿಲ್ಲ. ಹೀಗಾಗಿ ಹೇಮಂತ್ ತಂದೆ ಕೃಷ್ಣಪ್ಪ ಅವರು ತಮಗೆ ಬಂದ ಮಾಹಿತಿ ಆಧಾರದ ಮೇಲೆ, ನನ್ನ ಮಗನನ್ನು ಅಪಹರಿಸಲಾಗಿದೆ ಎಂದು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಮತ್ತು ಕೆಲವು ಜನರ ಮೇಲೆ ಸಂಶಯ ವ್ಯಕ್ತಪಡಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿಯುತ್ತಾರೆ.
ಇದೇ ವೇಳೆ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಶವದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ, ಪೊಲೀಸರು ಶವ ಸಂಸ್ಕಾರ ಮಾಡಿಬಿಟ್ಟರು. ಈ ವಿಷಯ ತಿಳಿದು ಬಂಗಾರಪೇಟೆ ಪೊಲೀಸರು, ಯಲಹಂಕ ಪೊಲೀಸರನ್ನು ಸಂಪರ್ಕ ಸಾಧಿಸಿ ಅಪರಿಚತ ಶವದ ಬಟ್ಟೆ ಮತ್ತು ಇನ್ನೀತರ ವಸ್ತುಗಳನ್ನು ಪರಿಶೀಲಿಸಲು ಹೇಮಂತ್ ಕುಟುಂಬಸ್ಥರಿಗೆ ನೀಡಿದರು. ಆಗ ಹೇಮಂತ್ ಕುಟುಂಬಸ್ಥರು ಇವು ಹೇಮಂತ್ನದ್ದೇ ಬಟ್ಟೆ ಮತ್ತು ವಸ್ತುಗಳು ಎಂದು ಧೃಡಪಡಿಸಿದರು.
ಇದನ್ನೂ ಓದಿ: ಉದ್ಯಮಿ ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ: 20 ಕೋಟಿ ರೂ.ಗೆ ಬೇಡಿಕೆ ಇಟ್ಟ ಆರೋಪಿ
ಈಗ ಬಂಗಾರಪೇಟೆ ಪೊಲೀಸರಿಗೆ ಕಿಡ್ನಾಪ್ ಆ್ಯಂಡ್ ಮರ್ಡರ್ ಎಂದು ಧೃಡವಾಯಿತು. ಇನ್ನು ಹೇಮಂತ್ನನ್ನು ಕೊಲೆ ಮಾಡಿದ್ದು ಯಾಕೆ, ಕೊಲೆ ಮಾಡಿದವರು ಎಂದು ಪೊಲೀಸರು ತನಿಖೆಗೆ ಮಾಡಲು ಶುರು ಮಾಡಿದಾಗ ಅಸೂಹೆ ಮತ್ತು ಧ್ವೇಷದ ಕಥೆ ಶುರುವಾಗುತ್ತದೆ.
ಹೇಮಂತ್ಗೆ ಮದುವೆಯಾಗಿತ್ತು. ಒಂದು ವರ್ಷ ಸಂಸಾರ ಮಾಡಿ ಪತ್ನಿಗೆ ವಿಚ್ಚೇದನ ನೀಡಿ ನಂತರ ಏಕಾಂಗಿಯಾಗಿದ್ದನು. ಆದರೆ ಕಳೆದ ಆರು ತಿಂಗಳಿಂದ ಹೇಮಂತ್ ತನ್ನ ಹಳೆಯ ಪ್ರಿಯತಮೆ ಆಶಾ ಎಂಬಾಕೆಯೊಂದಿಗೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಮನೆ ಮಾಡಿ ಸಂಸಾರ ನಡೆಸುತ್ತಿದ್ದನು. ಆಶಾ ಕೂಡಾ ತಮಿಳುನಾಡು ಬೀಳಾಲಂ ಎಂಬ ಗ್ರಾಮದ ತನ್ನ ಸೋದರ ಸಂಬಂಧಿ ಭರತ್ ಎಂಬುವರ ಜೊತೆಗೆ ಮದುವೆಯಾಗಿದ್ದಳು. ಎರಡು ವರ್ಷ ಸಂಸಾರ ಮಾಡಿದ್ದ ಆಶಾ ಭರತ್ನನ್ನು ಬಿಟ್ಟು ಹಳೆಯ ಪ್ರಿಯಕರ ಹೇಮಂತ್ ಜೊತೆಗೆ ಬಂದು ಸಂಸಾರ ಮಾಡುತ್ತಿದ್ದಳು.
ಆದರೆ ಆಶಾ ಹೇಮಂತ್ ಜೊತೆಗೆ ಇರುವುದು ಯಾರಿಗೂ ತಿಳಿದಿರಲಿಲ್ಲ, ಈ ವೇಳೆ ಆಶಾ ಎಲ್ಲಿದ್ದಾಳೆ ಎಂದು ಹುಡುಕಿದಾಗ ಆಶಾ ಹಳೆಯ ಪ್ರಿಕಯರ ಹೇಮಂತ್ ಜೊತೆಗೆ ಇರುವುದು ತಿಳಿಯುತ್ತದೆ. ಇದು ಆಶಾ ಪತಿ ಭರತ್ ಹಾಗೂ ಆಶಾ ಕುಟುಂಬಸ್ಥರ ಕಣ್ಣು ಕೆಂಪಾಗಿಸಿತ್ತು. ಈ ಕಾರಣದಿಂದಲೇ ಎಲ್ಲರೂ ಸೇರಿ ಪ್ಲಾನ್ ಮಾಡಿ ಅಕ್ಟೋಬರ್15 ರಂದು ಬಂಗಾರಪೇಟೆ ಕೆಂಪೇಗೌಡ ಸರ್ಕಲ್ನಲ್ಲಿ ಬೆಂಗಳುರಿಗೆ ಹೋಗಲು ನಿಂತಿದ್ದ ಹೇಮಂತ್ ಕುಮಾರ್ನನ್ನು ಇನೋವಾ ಕಾರ್ನಲ್ಲಿ ಕಿಡ್ನಾಪ್ ಮಾಡಿ, ನಂತರ ಕೊಲೆ ಮಾಡಿ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಸಾಡಿ ಹೋಗಿದ್ದರು. ಸದ್ಯ ಹೇಮಂತ್ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬಯಲಾಗಿದೆ. ಸದ್ಯ ಪೊಲೀಸರು ಆಶಾ ಪತಿ ಭರತ್, ಆಶಾ ತಾಯಿ ಪುಷ್ಪ, ಆಶಾ ತಮ್ಮ ಶ್ರೀಕಾಂತ್, ಹಾಗೂ ಭರತ್ ಸ್ನೇಹಿತರಾದ ಮಹಾತ್ಮಗಾಂಧಿ, ಸುದರ್ಶನ್, ಆನಂದ್, ಗಿರೀಶ್, ಪ್ರಶಾಂತ್ ಸೇರಿ ಒಟ್ಟು 8 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಟ್ಟಾರೆಯಾಗಿ ಇಲ್ಲಿ ಇಷ್ಟವಿಲ್ಲದವರ ಜೊತೆಗೆ ಬದುಕಲಾಗದೆ ಇಷ್ಟಪಟ್ಟವರ ಜೊತೆಗೆ ಬದುಕಲು ಹೋದ ಇಬ್ಬರು ಹಳೆಯ ಪ್ರೇಮಿಗಳಿಗೆ ಬದುಕಲು ಬಿಟ್ಟಿಲ್ಲ. ನಮಗೆ ಯಾರ ಸಹವಾಸವೂ ಬೇಡವೆಂದು ನೆಮ್ಮದಿಯಾಗಿದ್ದವರ ನೆಮ್ಮದಿಯನ್ನು ಆರೋಪಿಗಳು ಹಾಳು ಮಾಡಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Tue, 31 October 23