Karnataka Budget 2024: ಮೀನುಗಾರರಿಗೆ ಭರ್ಜರಿ ಗಿಫ್ಟ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Karnataka Siddaramaiah Budget 2024-25: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಸಮುದ್ರ ಮೀನುಗಾರಿಕೆಗೆ ಮೊದಲ ಬಾರಿಗೆ ಆ್ಯಂಬುಲೆನ್ಸ್ ಪರಿಚಯಿಸಿದ್ದಾರೆ. ಹಾಗೆ 10,000 ವಸತಿರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ (Karnataka Budget 2024) ಮಂಡನೆ ಮಾಡುತ್ತಿದ್ದು, ಸಮುದ್ರ ಮೀನುಗಾರಿಕೆಗೆ ಮೊದಲ ಬಾರಿಗೆ ಆ್ಯಂಬುಲೆನ್ಸ್ ಪರಿಚಯಿಸಿದ್ದಾರೆ. ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯ ಸರ್ಕಾರ ಪ್ರಪ್ರಥಮ ಬಾರಿಗೆ ಸಮುದ್ರ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಿದೆ. ಇದಕ್ಕೆ 7 ಕೋಟಿ ರೂ. ಮೀಸಲು ಇಡಲಾಗಿದೆ.
ಅಲ್ಲದೆ ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಿನ ವರ್ಷಗಳಲ್ಲಿ 3,000 ಕೋಟಿ ರೂ.ಗಳಷ್ಟು ಬೃಹತ್ ಗಾತ್ರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಹೊನ್ನಾವರ ತಾಲ್ಲೂಕಿನ ಮಂಕಿ/ ಕಾಸರಕೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ. ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಸ್ಥಾಪನೆ. ಆಕ್ವಾ ಪಾರ್ಕ್‌ಗಳ ಸ್ಥಾಪನೆ. ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆ ಹೊರ ಬಂದರು ನಿರ್ಮಾಣ. ವಿಜಯಪುರದ ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ.
ಇದನ್ನೂ ಓದಿ: ಮದ್ಯದ ಬೆಲೆ ಏರಿಸಲು ರಾಜ್ಯ ಸರ್ಕಾರ ನಿರ್ಧಾರ
ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು 1,500 ರೂ.ಗಳಿಂದ 3,000 ರೂ.ಗಳಿಗೆ ಹೆಚ್ಚಿಸಲಾಗುತ್ತದೆ. ಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರ ಆಂಬುಲೆನ್ಸ್ ಸೇವೆ ಆರಂಭಿಸಲಾಗುತ್ತದೆ.
2024-25ನೇ ಸಾಲಿನಲ್ಲಿ 10,000 ವಸತಿರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುತ್ತದೆ. ರಾಜ್ಯದಲ್ಲಿನ 16 ಮೀನು ಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣವನ್ನು ನಬಾರ್ಡ್ ಸಹಯೋಗದೊಂದಿಗೆ 20 ಕೋಟಿ ರೂ. ಮೀಸಲು ಇಡಲಾಗಿದೆ. ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳ ಗಣಿಬಾಧಿತ ಪ್ರದೇಶದಲ್ಲಿ ಮೀನುಗಾರಿಕೆಯನ್ನು ಕೈಗೊಳ್ಳಲು 6 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಜೆಟ್ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ