Karnataka Budget 2024 Highlights: ಬಜೆಟ್​​ನಲ್ಲಿ ಏನೇನು ಘೋಷಣೆ ಮಾಡಿದರು ಸಿಎಂ ಸಿದ್ದರಾಮಯ್ಯ? ಇಲ್ಲಿವೆ ಮುಖ್ಯಾಂಶಗಳು

Ganapathi Sharma
|

Updated on:Feb 16, 2024 | 2:17 PM

Karnataka Budget 2024-25 Live Updates: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಮಂಡನೆ ಮಾಡಿದ 15ನೇ ಬಜೆಟ್ ಇದಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಜೆಟ್ ಮೇಲಿನ ನಿರೀಕ್ಷೆ, ಕುತೂಹಲಗಳೂ ಹೆಚ್ಚಾಗಿದ್ದವು. ಸಿದ್ದರಾಮಯ್ಯ ಅವರ ಬಜೆಟ್​ನ ಮುಖ್ಯಾಂಶಗಳು ಇಲ್ಲಿವೆ.

Karnataka Budget 2024 Highlights: ಬಜೆಟ್​​ನಲ್ಲಿ ಏನೇನು ಘೋಷಣೆ ಮಾಡಿದರು ಸಿಎಂ ಸಿದ್ದರಾಮಯ್ಯ? ಇಲ್ಲಿವೆ ಮುಖ್ಯಾಂಶಗಳು

Karnataka Budget 2024-25 Live News Updates: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಫೆಬ್ರವರಿ 16, ಶುಕ್ರವಾರ) ಕರ್ನಾಟಕದ 2024-25ನೇ ಸಾಲಿನ ಬಜೆಟ್ (Karnataka Budget) ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮಂಡಿಸಿ 15ನೇ ಬಜೆಟ್ ಇದಾಗಿದೆ. ಹೀಗಾಗಿ ಅವರ ಪಾಲಿಗೆ ಇದೊಂದು ಮಹತ್ವದ ಕ್ಷಣ. ಮತ್ತೊಂದೆಡೆ ಲೋಕಸಭೆ ಚುನಾವಣೆಯೂ ಸಮೀಪಿಸುತ್ತಿದ್ದು, ಬಜೆಟ್ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳ ಕಾರಣ ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆ ಇದೆ. ಅದೇ ರೀತಿ ಸಾಲದ ಪ್ರಮಾಣವೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಲೋಕಸಭೆ ಚುನಾವಣೆಯ ಕಾರಣ ಆರ್ಥಿಕ ಹೊರೆ ಆಗದಂತೆ ಜನಪ್ರಿಯ ಬಜೆಟ್‌ ಮಂಡನೆ ಮಾಡಬೇಕಾದ ಅನಿವಾರ್ಯತೆಯೂ ಸಿದ್ದರಾಮಯ್ಯ ಮುಂದಿದೆ. 5 ಗ್ಯಾರಂಟಿಗಳಿಗೆ 58 ಸಾವಿರ ಕೋಟಿ ಮೀಸಲು ಅನಿವಾರ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಆದಾಗ್ಯೂ, ತೆರಿಗೆ ಹೆಚ್ಚಳ ಮಾಡದೆ ಬಜೆಟ್‌ ಮಂಡಿಸುವ ಸವಾಲು ಕೂಡ ಅವರ ಮುಂದಿದೆ.

ಕಳೆದ ಬಾರಿ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ 3.50 ಲಕ್ಷ ಕೋಟಿ ಅಥವಾ 3.80 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಕಳೆದ ಬಜೆಟ್‌ನಲ್ಲಿ 85,815 ಕೋಟಿ ರೂ. ಸಾಲದ ಮೊರೆ ಹೋಗಿತ್ತು ಸರ್ಕಾರ. ಈ ಬಾರಿ ಅಂದಾಜು 1 ಲಕ್ಷ ಕೋಟಿಗೆ ಸಾಲ ಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

LIVE NEWS & UPDATES

The liveblog has ended.
  • 16 Feb 2024 02:16 PM (IST)

    Karnataka Budget 2024 Live: 3 ಗಂಟೆ 14 ನಿಮಿಷ ಸುದೀರ್ಘ ಬಜೆಟ್ ಮಂಡಿಸಿರುವ ಸಿಎಂ

    ಸಿಎಂ ಸಿದ್ದರಾಮಯ್ಯ 3 ಗಂಟೆ 14 ನಿಮಿಷ ಸುದೀರ್ಘ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಗಾತ್ರ ಒಟ್ಟು 3,71,383 ಕೋಟಿ ರೂಪಾಯಿ ಆಗಿದೆ. ಬಜೆಟ್ ಭಾಷಣ ಮುಕ್ತಾಯವಾದ ಕಾರಣ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ 10.15ಕ್ಕೆ ಕಲಾಪ ಆರಂಭವಾಗಲಿದೆ.

  • 16 Feb 2024 01:35 PM (IST)

    Karnataka Budget 2024 Live: ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಮುಕ್ತಾಯ; ಸದನ ಸೋಮವಾರಕ್ಕೆ ಮುಂದೂಡಿಕೆ

    2024-25ನೇ ಸಾಲಿನ ಕರ್ನಾಟಕ ಬಜೆಟ್​ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ 3 ಗಂಟೆ 15 ನಿಮಿಷ ಕಾಲ ಮಂಡಿಸಿದರು. ಬಜೆಟ್ ಭಾಷಣ ಮುಕ್ತಾಯ ಹಿನ್ನೆಲೆಯಲ್ಲಿ ಸದನವನ್ನು ಸಭಾಪತಿಗಳು ಸೋಮವಾರಕ್ಕೆ ಮುಂದೂಡಿದರು.

  • 16 Feb 2024 01:21 PM (IST)

    Karnataka Budget 2024 Live: ಕನ್ನಡ ಭಾಷಾಂತರಕ್ಕೆ ನೂತನ ತಂತ್ರಾಂಶ ಕನ್ನಡ ಕಸ್ತೂರಿ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ

    ಕನ್ನಡ ಭಾಷಾಂತರಕ್ಕೆ ನೂತನ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು. ಕನ್ನಡ ಕಸ್ತೂರಿ ಎಂಬ ನೂತನ ತಂತ್ರಾಂಶ ಅಭಿವೃದ್ಧಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದಾರೆ.

  • 16 Feb 2024 01:18 PM (IST)

    Karnataka Budget 2024 Live: ಆಡಳಿತ ವ್ಯವಸ್ಥೆ ಬಲಪಡಿಸಲು ತಂತ್ರಜ್ಞಾನ ಬಳಕೆ

    ಆಡಳಿತ ವ್ಯವಸ್ಥೆ ಬಲಪಡಿಸಲು ತಂತ್ರಜ್ಞಾನ ಬಳಕೆ ಮಾಡಲಾಗುವುದು. ಕೃತಕ ಬುದ್ಧಿಮತ್ತೆ, ಮಿಷನ್ ಲರ್ನಿಂಗ್ ತಂತ್ರಜ್ಞಾನ ಬಳಕೆ ಮಾಡಲಾಗುವುದು. ನೂತನ ಪೊಲೀಸ್​ ಠಾಣಾ ಕಟ್ಟಡಗಳಿಗೆ ₹30 ಕೋಟಿ ಮೀಸಲು ಇಡಲಾಗುವುದು. ವಿಧಿ ವಿಜ್ಞಾನ ಪ್ರಯೋಗಾಲಯಗಳ ಮೊಬೈಲ್ ಫೊರೆನ್ಸಿಕ್​, ಆಡಿಯೋ ಮತ್ತು ವಿಡಿಯೋ ವಿಭಾಗ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. 10 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಉಪಕರಣ, ತಂತ್ರಾಂಶ ಪೂರೈಕೆ ಮಾಡಲಾಗುವುದು. ಎಲ್ಲಾ ಕಾರಾಗೃಹಗಳ ಸುಗಮ ಆಡಳಿತ ಹಾಗೂ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ ಎಐ ತಂತ್ರಾಂಶ ಬಳಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

  • 16 Feb 2024 01:01 PM (IST)

    Karnataka Budget 2024 Live: ಬೆಂಗಳೂರಿನ 4 ಸ್ಥಳಗಳಲ್ಲಿ ಹೈಟೆಕ್​ ಕ್ರೀಡಾ ಸಂಕೀರ್ಣ

    ಬೆಂಗಳೂರಿನ 4 ಸ್ಥಳಗಳಲ್ಲಿ ಹೈಟೆಕ್​ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಕ್ರೀಡಾನಗರ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ. 70 ಎಕರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾನಗರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.  ರಾಜ್ಯದ 14 ವರ್ಷದ ಕ್ರೀಡಾಪಟುಗಳಿಗೆ ಮಿನಿ ಒಲಿಂಪಿಕ್ಸ್ ಆಯೋಜನೆ ಮಾಡಲಾಗುವುದು. ರಾಜ್ಯದ ಕ್ರೀಡಾಪಟುಗಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

  • 16 Feb 2024 01:00 PM (IST)

    Karnataka Budget 2024 Live: ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸೂಫಿ ಅಧ್ಯಯನ ಪೀಠ

    ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸೂಫಿ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು. ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸಿದ್ದರಾಮೇಶ್ವರ ಅಧ್ಯಯನ ಪೀಠ ರಚನೆ ಮಾಡಲಾಗುವುದು. ಮಾಜಿ ಸಿಎಂ ಬಂಗಾರಪ್ಪನವರ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

  • 16 Feb 2024 12:51 PM (IST)

    Karnataka Budget 2024 Live: ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್: ಸಿಎಂ ಸಿದ್ದರಾಮಯ್ಯ

    ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್​ ಆರಂಭಿಸಲಾಗುವುದು. ಗ್ರಾಮ ಪಂಚಾಯಿತಿಗಳ ಸಭೆ, ಕಾರ್ಯಕಲಾಪಗಳ ನೇರಪ್ರಸಾರ ಮಾಡಲಾಗುವುದು. ರಾಜ್ಯದ 50 ಗ್ರಾ.ಪಂ.ಗಳಿಗೆ ಹೊಂಬೆಳಕು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿ ಕನಿಷ್ಠ 2ರಂತೆ ಬೂದುನೀರು ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

  • 16 Feb 2024 12:23 PM (IST)

    Karnataka Budget 2024 Live: 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆ ಬಾಗಿಲಿಗೆ ಆಹಾರ: ಅನ್ನ ಸುವಿಧಾ ಯೋಜನೆ ಘೋಷಣೆ

    80 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ಅನ್ನ ಸುವಿಧಾ ಯೋಜನೆಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಈ ಯೋಜನೆ ಮೂಲಕ ಅಂಥ ವೃದ್ಧರ ಮನೆ ಬಾಗಿಲಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ, 10 ಜಿಲ್ಲೆಗಳಲ್ಲಿ ವಲಸೆ ನಿರ್ಮಾಣ ಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುವುದು. ತಾತ್ಕಾಲಿಕ ವಸತಿ ಸಮುಚ್ಚಯಕ್ಕಾಗಿ 100 ಕೋಟಿ ರೂ. ಅನುದಾನ ನೀಡಲಾಗುವುದು. ಕೊಳಗೇರಿ ನಿವಾಸಿಗಳಿಗೆ ಶೀಘ್ರದಲ್ಲೇ 48,796 ಮನೆಗಳ ಹಸ್ತಾಂತರ ಮಾಡಲಾಗುವುದು. ಕಾರ್ಮಿಕರಿಗೆ ESI ಯೋಜನೆಯಡಿ ಸೂಪರ್​ಸ್ಪೆಷಾಲಿಟಿ ಸೇವೆಗೆ 313 ಕೋಟಿ ರೂ. ಅನುದಾನ ಮೀಸಲು ಇಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

  • 16 Feb 2024 11:59 AM (IST)

    Karnataka Budget 2024 Live: 1,500 ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ

    ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆಗೆ 4 ಕೇಂದ್ರಗಳನ್ನು ಆರಂಭಿಸಲಾಗುವುದು. 4 ಅನುಪಾಲನಾ ಕೇಂದ್ರಗಳ ಸ್ಥಾಪನೆಗೆ 2 ಕೋಟಿ ರೂ. ಅನುದಾನ ಒದಗಿಸಲಾಗುವುದು. 1,500 ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

  • 16 Feb 2024 11:50 AM (IST)

    Karnataka Budget 2024 Live: ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್

    ಅಂಗನವಾಡಿ ಕಾರ್ಯಕರ್ತರಿಗೆ 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು. 100 ಕೋಟಿ ವೆಚ್ಚದಲ್ಲಿ 1,000 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

  • 16 Feb 2024 11:47 AM (IST)

    Karnataka Budget 2024 Live: ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ: ಬಜೆಟ್​ನಲ್ಲಿ ಮಹತ್ವದ ಘೋಷಣೆ

    ಬೆಂಗಳೂರಿನ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆ ಒದಗಿಸಲಾಗುವುದು. ಇದಕ್ಕೆ 430 ಪ್ರಯೋಗಾಲಯಗಳ ಸ್ಥಾಪನೆಗೆ 20 ಕೋಟಿ ಮೀಸಲು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ವೈದ್ಯಕೀಯ ಕಾಲೇಜುಗಳ ನಿರ್ಮಾಣ, ಉಪಕರಣ ಖರೀದಿಗೆ 400 ಕೋಟಿ ಅನುದಾನ ನೀಡಲಾಗುವುದು. ಸೂಪರ್​ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 130 ಕೋಟಿ ರೂ. ಒದಗಿಸಲಾಗುವುದು ಎಂದು ಅವರು ತಿಳಿಸಿದರು.

  • 16 Feb 2024 11:38 AM (IST)

    Karnataka Budget 2024 Live: ಖಾಲಿ ಇರುವ ಶಿಕ್ಷಕರ, ಉಪನ್ಯಾಸಕರ ನೇಮಕಕ್ಕೆ ಕ್ರಮ: ಸಿಎಂ ಘೋಷಣೆ

    ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಕ, ಉಪನ್ಯಾಸಕರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಕಾಲೇಜು ಸೌಲಭ್ಯಕ್ಕಾಗಿ 250 ಕೋಟಿ ರೂಪಾಯಿ ಮೀಸಲು ಇಡಲಾಗುವುದು. ಖಾಲಿ ಇರುವ ಶಿಕ್ಷಕರ, ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

  • 16 Feb 2024 11:30 AM (IST)

    Karnataka Budget 2024 Live: ಶಿಕ್ಷಣ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಏನೇನು ಸಿಕ್ತು? ಇಲ್ಲಿದೆ ವಿವರ

    ರಾಜ್ಯದ ಅಸ್ಮಿತೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಉಪನ್ಯಾಸಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಕಾಲೇಜುಗಳಿಗೆ ಉಚಿತ ಕರೆಂಟ್ ನೀಡಲಾಗುವುದು. ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ನಿರಂತರ ನೀರಿನ ಸೌಲಭ್ಯ, ಫ್ರೀ ಕರೆಂಟ್​ಗೆ 25 ಕೋಟಿ ರೂಪಾಯಿ ಮೀಸಲು ಇಡಲಾಗುವುದು. ಮಹಿಳಾ ಪಾಲಿಟೆಕ್ನಿಕ್​​ ಉನ್ನತೀಕರಣಕ್ಕೆ 30 ಕೋಟಿ ರೂ. ಮೀಸಲು ಇಡಲಾಗುವುದು. ರಾಜ್ಯದ 20 ಸಾವಿರ ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗಾಗಿ 10 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಅನುದಾನ, ಕಾಲೇಜು ಸೌಲಭ್ಯಕ್ಕಾಗಿ 250 ಕೋಟಿ ರೂಪಾಯಿ ಮೀಸಲು ಇಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

  • 16 Feb 2024 11:25 AM (IST)

    Karnataka Budget 2024 Live: ವಕ್ಫ್​​ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ.

    ವಕ್ಫ್​​ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರೂ. ಒದಗಿಸಲಾಗುವುದು. ಜೈನ್​ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

  • 16 Feb 2024 11:23 AM (IST)

    Karnataka Budget 2024 Live: ಸೈನ್ಸ್​ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿಗೆ 10 ಕೋಟಿ ರೂ.

    ರಾಜ್ಯದ 20 ಸಾವಿರ ಸೈನ್ಸ್​ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗೆ 10 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.

  • 16 Feb 2024 11:20 AM (IST)

    Karnataka Budget 2024 Live: 2 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ

    ಸರ್ಕಾರಿ ಪ್ರೌಢ ಶಾಲೆಗಳ ಅಭಿವೃದ್ಧಿಗೆ 50 ಕೋಟಿ ರೂ. ಮೀಸಲಿಡಲಾಗುವುದು. ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್​ ಹಾಗೂ ಇಂಟರ್​ನೆಟ್​ ಸೌಲಭ್ಯಕ್ಕೆ 50 ಕೋಟಿ ಪ್ಯಾಕೇಜ್ ನೀಡಲಾಗುವುದು. 2 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

  • 16 Feb 2024 11:16 AM (IST)

    Karnataka Budget 2024 Live: ಸುಳ್ಳು ಸುದ್ದಿ ತಡೆಗೆ ಸತ್ಯಶೋಧನಾ ತಂಡ: ಸಿಎಂ ಘೋಷಣೆ

    ಸುಳ್ಳು ಸುದ್ದಿ ತಡೆಗಟ್ಟಲು ಐಟಿಬಿಟಿ ಇಲಾಖೆಯ ಸಹಯೋಗದಲ್ಲಿ ಸತ್ಯ ತಪಾಸಣಾ ತಂಡ ಹಾಗೂ ವಿಶೇಷ ಕೋಶ ರಚನೆ ಮಾಡಲಾಗುವುದು. ದೀಫ್​ ಫೇಕ್​​ ಹಾಗೂ ಸೈಬರ್ ಕ್ರೈಂ ತಡೆಗೆ 43 ಹೊಸ ಪೊಲೀಸ್​ ಸಿಇಎನ್​ ಠಾಣೆ ಆರಂಭಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ.

  • 16 Feb 2024 11:13 AM (IST)

    Karnataka Budget 2024 Live: ಗೃಹಲಕ್ಷ್ಮೀ ಯೋಜನೆಗೆ 28 ಸಾವಿರದ 608 ಕೋಟಿ ರೂಪಾಯಿ ಮೀಸಲು

    ಗೃಹಲಕ್ಷ್ಮೀ ಯೋಜನೆಗೆ 28 ಸಾವಿರದ 608 ಕೋಟಿ ರೂಪಾಯಿ ಮೀಸಲು ಇಡಲಾಗುವುದು. 1.33 ಕೋಟಿ ಮಹಿಳೆಯರಿಗೆ ಯೋಜನೆಯಿಂದ ಲಾಭವಾಗಲಿದೆ. ಜನವರಿ 31ರವರೆಗೆ 1.27 ಕೋಟಿ ಮಹಿಳೆಯರ ನೋಂದಣಿಯಾಗಿದೆ, 11726 ಕೋಟಿ ನೇರವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. 2024-25ರಲ್ಲಿ 28,608 ಕೋಟಿ ಹಣ ರೂಪಾಯಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಘೋಷಣೆ ಮಾಡಿದರು.

  • 16 Feb 2024 11:09 AM (IST)

    Karnataka Budget 2024 Live: 76 ಗೋದಾಮುಗಳ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

    76 ಗೋದಾಮುಗಳ ನಿರ್ಮಾಣಕ್ಕೆ 376 ಕೋಟಿಗಳ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಲಾಗಿದೆ. ಜತೆಗೆ APMCಗಳಲ್ಲಿ ವಿದ್ಯುತ್​ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಪೆಟ್ರೋಲ್​ ಬಂಕ್​ಗಳ  ಮಾದರಿಯಲ್ಲಿ ಇವುಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

  • 16 Feb 2024 11:06 AM (IST)

    Karnataka Budget 2024 Live: 2024ರ ಮೇನಲ್ಲಿ ಕಾವೇರಿ ಹಂತ-5 ಕಾರ್ಯಾರಂಭ

    2024ರ ಮೇನಲ್ಲಿ ಕಾವೇರಿ ಹಂತ-5 ಕಾರ್ಯಾರಂಭಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. 5550 ಕೋಟಿ ರೂ. ವೆಚ್ಚದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯಿಂದ ಯೋಜನೆ. ಪ್ರತಿ ದಿನ 12 ಲಕ್ಷ ಜನರಿಗೆ 110 ಲಕ್ಷ ಲೀಟರ್ ಕುಡಿಯುವ ನೀರು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ. ಕಾವೇರಿ ಹಂತ-5ರಡಿ ಡಿಸೆಂಬರ್ 24ರಲ್ಲಿ ಒಳಚರಂಡಿ ಕಾಮಗಾರಿ ಪೂರ್ಣ. ಇದರಿಂದ 228 ಕಿ.ಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದರು.

  • 16 Feb 2024 11:04 AM (IST)

    Karnataka Budget 2024 Live: ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ

    ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಾಣ ಮಾಡಲಾಗುವುದು. 35 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

  • 16 Feb 2024 11:02 AM (IST)

    Karnataka Budget 2024 Live: ಬೆಂಗಳೂರು ಉಪ ರೈಲು ಯೋಜನೆ ಚುರುಕುಗೊಳಿಸಲು ನಿರ್ಧಾರ

    ಬೆಂಗಳೂರು ಉಪ ರೈಲು ಯೋಜನೆ ಚುರುಕುಗೊಳಿಸಲು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗಿನ ಕಾರಿಡಾರ್-2 ವೇಗವಾಗಿ ಅನುಷ್ಠಾನ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು. ಬಿಎಂಟಿಸಿಗೆ ಹೊಸದಾಗಿ 1334 ಹೊಸ ಇವಿ ಬಸ್‌ ಖರೀದಿಗೆ ನಿರ್ಧಾರ, ಜೊತೆಗೆ ಬಿಎಂಟಿಸಿಗೆ 820 ಬಿಎಸ್‌6 ಡೀಸೆಲ್‌ ಬಸ್‌ ಸೇರ್ಪಡೆ, ಮಹಿಳೆಯರ ಸುರಕ್ಷತೆಗಾಗಿ ಬಿಎಂಟಿಸಿ ಬಸ್‌ಗಳಲ್ಲಿ ಆ್ಯಪ್ ಅನುಷ್ಠಾನ, ವೆಹಿಕಲ್ ಟ್ರ್ಯಾಕಿಂಗ್‌ ಹೊಂದಿರುವ ಆ್ಯಪ್ ಅನುಷ್ಠಾನ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ.

  • 16 Feb 2024 10:59 AM (IST)

    Karnataka Budget 2024 Live: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಬಜೆಟ್​​ನಲ್ಲಿ ಸಿಎಂ ಘೋಷಣೆ

    ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ಇದರೊಂದಿಗೆ, ಗ್ರಾಮೀಣ ಪತ್ರಕರ್ತರ ದಶಕಗಳ ಕನಸು ನನಸಾಗಿದೆ.

  • 16 Feb 2024 10:51 AM (IST)

    Karnataka Budget 2024 Live: ಮೀನುಗಾರರ ರಕ್ಷಣೆಗೆ ಸಮುದ್ರ ಆಂಬುಲೆನ್ಸ್: ಸಿಎಂ ಘೋಷಣೆ

    ಮೀನುಗಾರಿಕೆ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ 3 ಸಾವಿರ ಕೋಟಿ ಯೋಜನೆ ಘೋಷಿಸಿದ್ದಾರೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಮಾಡುವುದಕ್ಕಾಗಿ ಅತ್ಯಾಧುನಿಕ ಸಮುದ್ರ ಆಂಬುಲೆನ್ಸ್ ಖರೀದಿಸಲಾಗುವುದು ಎಂದು ಅವರು ಘೋಷಣೆ ಮಾಡಿದ್ದಾರೆ.

    ಹೊನ್ನಾವರ ಅಥವಾ ಕಾಸರಗೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಭದ್ರಾವತಿಯಲ್ಲಿ ಹೈಟೆಕ್​ ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

  • 16 Feb 2024 10:49 AM (IST)

    arnataka Budget 2024 Live: ಬಿಜೆಪಿ ನಾಯಕರ ಸಭಾತ್ಯಾಗ

    ವಿಪಕ್ಷ ಬಿಜೆಪಿ ನಾಯಕರು ಬಜೆಟ್​ಗೆ ಬಹಿಷ್ಕಾರ ಹಾಕಿ ಹೊರನಡೆದರು. ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು, ‘ಏನಿಲ್ಲಾ ಏನಿಲ್ಲಾ, ಬುರುಡೆ ಬುರುಡೆ’ ಎಂದು ಕೂಗುತ್ತಾ ಸಭಾತ್ಯಾಗ ಮಾಡಿದರು. ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರು ಪೋಸ್ಟರ್ ಅಂಟಿಸಿದರು.

  • 16 Feb 2024 10:46 AM (IST)

    Karnataka Budget 2024 Live: ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು

    ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ಜಿಲ್ಲೆಯು ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದರು.

    ಏಷ್ಯಾದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿರುವ ರೇಷ್ಮೆ ಮಾರುಕಟ್ಟೆಗಳನ್ನು ಮೊದಲನೇ ಹಂತದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ಮಾರುಕಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ 250 ಕೋಟಿ ರೂ. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

  • 16 Feb 2024 10:43 AM (IST)

    Karnataka Budget 2024 Live: ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್

    ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್​ ನಿರ್ಮಾಣ ಮಾಡಲಾಗುವುದು. ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ, ಬೆಂಗಳೂರು ಗ್ರಾ. ಜಿಲ್ಲೆ ಮೂಗೆನಹಳ್ಳಿ ಬಳಿ ಆಹಾರ ಪಾರ್ಕ್​ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

  • 16 Feb 2024 10:41 AM (IST)

    Karnataka Budget 2024 Live: ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್‌ನಲ್ಲಿ ನಿರ್ಧಾರ

    ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. 73 ಕಿ.ಮೀ ಉದ್ದದ ರಸ್ತೆಯನ್ನು 27 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಪಿಪಿಪಿ ಮಾದರಿಯಲ್ಲಿ ಆರ್‌ಎಫ್‌ಪಿ ಕರೆಯಲಾಗುವುದು. ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ ಮಾಡಲಾಗುವುದು. ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ನಗರಾಭಿವೃದ್ಧಿ ಅಂಗಸಂಸ್ಥೆ ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ ಮಾಡಲಾಗುವುದು. 2025ರೊಳಗೆ 44 ಕಿ.ಮೀ ಮೆಟ್ರೋ ಮಾರ್ಗ ಸೇರ್ಪಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.

  • 16 Feb 2024 10:37 AM (IST)

    Karnataka Budget 2024 Live: ಕೇಂದ್ರ ವಿರುದ್ಧ ಟೀಕೆಗೆ ಪ್ರತಿಪಕ್ಷ ಕಿಡಿ: ಬಜೆಟ್ ಮಂಡನೆ ವೇಳೆ ಗದ್ದಲ

    ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದು, ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಬಜೆಟ್​ ಅನ್ನು ಕೇಂದ್ರದ ವಿರುದ್ಧ ಟೀಕೆಗೆ ಬಳಸಿಕೊಳ್ಳುತ್ತೀರಾ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದರು. ಈ ವೇಳೆ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸ್ಪೀಕರ್ ಯುಟಿ ಖಾದರ್ ಪರಿಪರಿಯಾಗಿ ಬೇಡಿಕೊಂಡರೂ ಪ್ರತಿಪಕ್ಷ ನಾಯಕರು ಆಕ್ರೋಶದ ಮಾತುಗಳನ್ನು ಕಡಿಮೆ ಮಾಡಲಿಲ್ಲ.

  • 16 Feb 2024 10:35 AM (IST)

    Karnataka Budget 2024 Live: ಮದ್ಯದ ದರ ಮತ್ತೆ ಹೆಚ್ಚಳ: ಬಜೆಟ್​​ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

    ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML, ಬಿಯರ್‌ ಸ್ಲಾಬ್‌ ಪರಿಷ್ಕರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಿಸಿದರು. 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ, ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ. 2024-25ನೇ ಸಾಲಿಗೆ 38,525 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

  • 16 Feb 2024 10:32 AM (IST)

    Karnataka Budget 2024 Live: ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

    2023-24ರಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ. ಜನವರಿ ತಿಂಗಳ ಅಂತ್ಯದವರೆಗು 58,180 ಕೋಟಿ ರೂ.ಗಳ SGST ತೆರಿಗೆ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.14 ರಷ್ಟು ಬೆಳವಣಿಗೆಯಾಗಿರುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

  • 16 Feb 2024 10:31 AM (IST)

    Karnataka Budget 2024 Live: ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಳ: ಸಿಎಂ ಸಿದ್ದರಾಮಯ್ಯ

    ತೆರಿಗೆ ಸಂಗ್ರಹದಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಳವಾಗಿದೆ. ಇದರ ಪರಿಣಾಮ ತೆರಿಗೆ ಸಂಗ್ರಹ ಹೆಚ್ಚಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

  • 16 Feb 2024 10:29 AM (IST)

    Karnataka Budget 2024 Live: ಎಲ್ಲರನ್ನೂ ಒಳಗೊಂಡ ಬಜೆಟ್ ನಮ್ಮದು: ಸಿಎಂ

    ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್‌ ಅಲ್ಲ. 5 ಗ್ಯಾರಂಟಿ ಜಾರಿಯಿಂದ ಇಡೀ ಜಗತ್ತು ರಾಜ್ಯದತ್ತ ನೋಡುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಸಂತಸಗೊಂಡಿದ್ದಾರೆ. 5 ಗ್ಯಾರಂಟಿ ಜಾರಿಯಿಂದ ಸರ್ಕಾರದಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳ್ತಿದ್ದಾರೆ. ಕೇಂದ್ರ ಸರ್ಕಾರ ಮಾಡದ್ದನ್ನು ನಾವು ಮಾಡಿದ್ದೇವೆ. ಬಿಟ್ಟಿ ಗ್ಯಾರಂಟಿ, ದಿವಾಳಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಎಲ್ಲರನ್ನೂ ಒಳಗೊಂಡಂತೆ ರಾಜ್ಯ ಅಭಿವೃದ್ಧಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

  • 16 Feb 2024 10:25 AM (IST)

    Karnataka Budget 2024 Live: ಬಜೆಟ್​​ನ ಒಟ್ಟು ಗಾತ್ರ 3,71,383 ಕೋಟಿ ರೂ.

    ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು ಸೀಮಿತವಾಗಿರುವುದಿಲ್ಲ ಎಂದ ಸಿದ್ದರಾಮಯ್ಯ ಬಜೆಟ್ ಮಂಡನೆಯ ಆರಂಭದಲ್ಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳ ಟೀಕೆಯನ್ನು ಉಲ್ಲೇಖಿಸಿದರು. ಬಜೆಟ್​​ನ ಒಟ್ಟು ಗಾತ್ರ 3,71,383 ಕೋಟಿ ರೂ. ಎಂದು ತಿಳಿಸಿದರು.

  • 16 Feb 2024 10:22 AM (IST)

    Karnataka Budget 2024 Live: ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ: ಸಿಎಂ ಸಿದ್ದರಾಮಯ್ಯ

    ಕಾಂಗ್ರೆಸ್ ಸರ್ಕಾರ ರೂಪಿಸಿರುವ ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್​ಗಳಲ್ಲ. ಬಡವರ ಏಳಿಗೆಗಾಗಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೈಗೊಂಡಿದೆ. ಗ್ಯಾರಂಟಿ ಜಾರಿಗಾಗಿ ಇಡೀ ಜಗತ್ತು ನಮ್ಮತ್ತ ತಿರುಗಿ ನೋಡುತ್ತಿವೆ. ಹಲವು ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ನಮ್ಮ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿವೆ: ಸಿದ್ದರಾಮಯ್ಯ

  • 16 Feb 2024 10:20 AM (IST)

    Karnataka Budget 2024 Live: ಆಗದು ಎಂದು ಕೈಕಟ್ಟಿ ಕುಳಿತರೆ…

    ಸದನದಲ್ಲಿ ಸಿಎಂ ಸಿದ್ದರಾಮಯ್ಯ 15ನೇ ಆಯವ್ಯಯ ಮಂಡನೆ. ಶರಣಚಿಂತನೆಯನ್ನ ಓದಿ ಹೇಳಿದ ಸಿಎಂ, ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಡಾ.ರಾಜ್ ಕುಮಾರ್ ಹಾಡಿನ ಸಾಲು ಉಲ್ಲೇಖಿಸಿದರು.

  • 16 Feb 2024 10:19 AM (IST)

    Karnataka Budget 2024 Live: 15ನೇ ಬಜೆಟ್ ಮಂಡನೆ ಮಾಡುತ್ತಿದ್ದೇನೆ: ಸಿದ್ದರಾಮಯ್ಯ

    ದೇಶ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸುಸಂದರ್ಭದಲ್ಲಿ ನನ್ನ 15ನೇ ಆಯವ್ಯಯ ಮಂಡನೆ ಮಾಡುತ್ತಿದ್ದೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ಸಮಾನತೆಯ ಉದ್ದೇಶದೊಂದಿಗೆ ಈ ಬಜೆಟ್ ಮಂಡನೆ ಮಾಡುತ್ತಿದ್ದೇನೆ.

  • 16 Feb 2024 10:16 AM (IST)

    Karnataka Budget 2024 Live: ಸದನದಲ್ಲಿ ಪ್ಲಕಾರ್ಡ್ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಶಾಸಕರಿಗೆ ತಡೆ

    ಬಜೆಟ್ ಮಂಡನೆ ವೇಳೆ ಸದನದಲ್ಲಿ ಪ್ಲಕಾರ್ಡ್ ಪ್ರದರ್ಶನಕ್ಕೆ ಬಿಜೆಪಿ ಮುಂದಾಗಿದೆ. ಆದರೆ, ಪ್ಲಕಾರ್ಡ್​​ಗಳನ್ನು ಒಳಗೆ ತೆಗೆದುಕೊಂಡು ಹೋಗಲು ಮಾರ್ಷಲ್​ಗಳು ಬಿಡಲಿಲ್ಲ. ಹೀಗಾಗಿ ಪೋಸ್ಟರ್ ಪ್ರದರ್ಶನಕ್ಕೆ ವಿಪಕ್ಷ ಬಿಜೆಪಿ ಸಿದ್ಧತೆ ಮಾಡಿದೆ. ಬಿಜೆಪಿ ಶಾಸಕರು ಪೋಸ್ಟರ್ ಗಳನ್ನು ತೆಗೆದುಕೊಂಡು ಬಂದಿದ್ದಾರೆ. ‘ಏನಿಲ್ಲಾ ಏನಿಲ್ಲಾ ಬಜೆಟ್​​ನಲ್ಲಿ ಹೇಳಿರುವುದೆಲ್ಲಾ ನಿಜವಲ್ಲ’ ಎಂದು ಬರೆಯಲ್ಪಟ್ಟಿರುವ ಪೋಸ್ಟರ್​​ಗಳನ್ನು ಬಿಜೆಪಿ ಶಾಸಕರು ತಂದಿದ್ದಾರೆ.

  • 16 Feb 2024 10:16 AM (IST)

    Karnataka Budget 2024 Live: ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

    ಸಂಪುಟ ಸಹೋದ್ಯೋಗಿಗಳಿಂದ ಬಜೆಟ್​​​ಗೆ ಅನುಮೋದನೆ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ ವಿಧಾನಸಭೆ ಕಲಾಪಕ್ಕೆ ಆಗಮಿಸಿದರು. ಇದರ ಬೆನ್ನಲ್ಲೇ ವಿಧಾನಸಭಾ ಕಲಾಪ ಆರಂಭವಾಯಿತು. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್‌ ಭಾಷಣ ಆರಂಭಿಸಿದರು. ಸಿಎಂ ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ.

  • 16 Feb 2024 09:58 AM (IST)

    Karnataka Budget 2024 Live: ಬಜೆಟ್​​ಗೆ ಅನುಮೋದನೆ ಪಡೆದ ಸಿಎಂ ಸಿದ್ದರಾಮಯ್ಯ

    ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್​​ಗೆ ಅನುಮೋದನೆ ಪಡೆದರು. ವಿಶೇಷ ಸಚಿವ ಸಂಪುಟ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ತಡವಾಗಿ ಆಗಮಿಸಿದರು.

  • 16 Feb 2024 09:30 AM (IST)

    Karnataka Budget 2024 Live: ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಕೆಲವೇ ಹೊತ್ತಿನಲ್ಲಿ ಸಂಪುಟ ಸಭೆ

    ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ ಆರಂಭವಾಗಲಿದ್ದು, ಬಜೆಟ್​ಗೆ ಸಿದ್ದರಾಮಯ್ಯ ಅನುಮೋದನೆ ಪಡೆಯಲಿದ್ದಾರೆ.

  • 16 Feb 2024 09:24 AM (IST)

    Karnataka Budget 2024 Live: ಸಿಎಂ ಸಿದ್ದರಾಮಯ್ಯಗೆ ಬಜೆಟ್ ಪ್ರತಿ ಹಸ್ತಾಂತರಿಸಿದ ಅಧಿಕಾರಿಗಳು

    ಕೆಲವೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಕಾವೇರಿ ನಿವಾಸದಲ್ಲಿ ಅಧಿಕಾರಿಗಳು ಅವರಿಗೆ ಬಜೆಟ್ ಪ್ರತಿ ಹಸ್ತಾಂತರಿಸಿದರು.

  • 16 Feb 2024 09:17 AM (IST)

    Karnataka Budget 2024 Live: ಕೆಲವೇ ಹೊತ್ತಿನಲ್ಲಿ ಬಜೆಟ್​ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

    ಕೆಲವೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲು ಕಾವೇರಿ ನಿವಾಸಕ್ಕೆ ಸಚಿವರು, ಶಾಸಕರು ಆಗಮಿಸುತ್ತಿದ್ದಾರೆ.

  • 16 Feb 2024 08:47 AM (IST)

    Karnataka Budget 2024 Live: ಪ್ರಸಕ್ತ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ದೊರೆಯುವ ತೆರಿಗೆ ಪಾಲಿನ ವಿವರ

    ಪ್ರಸಕ್ತ ಸಾಲಿನಲ್ಲಿ ಅಂದರೆ, 2024 25 ನೇ ಸಾಲಿನಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ದೊರೆಯುವ ತೆರಿಗೆ ಪಾಲಿನ ವಿವರ

    ಐದು ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಪಡೆಯುತ್ತಿದೆ. ಉತ್ತರ ಪ್ರದೇಶ 2,18,816 ಕೋಟಿ, ಬಿಹಾರ 1,22,685 ಕೋಟಿ, ಮಧ್ಯಪ್ರದೇಶ 95,752 ಕೋಟಿ, ಪಶ್ಚಿಮಬಂಗಾಳ 91,764 ಕೋಟಿ, ಮಹಾರಾಷ್ಟ್ರ 77,053 ಕೋಟಿ ರೂಪಾಯಿ.

    ದಕ್ಷಿಣ ಭಾರತದ ರಾಜ್ಯಗಳಿಗೆ ದೊರೆಯುವ ಕೇಂದ್ರದ ಪಾಲು

    ಆಂಧ್ರಪ್ರದೇಶ 49,364 ಕೋಟಿ, ತಮಿಳುನಾಡು 49,754 ಕೋಟಿ, ಕರ್ನಾಟಕ 44,485 ಕೋಟಿ ರೂಪಾಯಿ.

  • 16 Feb 2024 08:45 AM (IST)

    Karnataka Budget 2024 Live: 2022 23ನೇ ಸಾಲಿನಲ್ಲಿ ಉತ್ತರ ಭಾರತದ ರಾಜ್ಯಗಳು ಪಡೆಯುತ್ತಿರುವ ವಿವರಗಳು

    2022 23ನೇ ಸಾಲಿನಲ್ಲಿ ಉತ್ತರ ಭಾರತದ ರಾಜ್ಯಗಳು ಪಡೆಯುತ್ತಿರುವ ವಿವರಗಳು

    ಉತ್ತರ ಪ್ರದೇಶ 1,69,745 ಕೋಟಿ, ಬಿಹಾರ 95,509 ಕೋಟಿ, ಮಧ್ಯಪ್ರದೇಶ 74,542 ಕೋಟಿ, ಪಶ್ಚಿಮಬಂಗಾಳ 71,434 ಕೋಟಿ, ಮಹಾರಾಷ್ಟ್ರ 60,000 ಕೋಟಿ ರೂಪಾಯಿ.

    2022 23 ನೇ ಸಾಲಿನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪಡೆಯುತ್ತಿರುವ ತೆರಿಗೆ ಪಾಲಿನ ವಿವರ

    ಆಂಧ್ರಪ್ರದೇಶ 38,176 ಕೋಟಿ, ತಮಿಳುನಾಡು 38,731 ಕೋಟಿ, ಕರ್ನಾಟಕ 34,596 ಕೋಟಿ, ತೆಲಂಗಾಣ 19,605 ಕೋಟಿ ರೂಪಾಯಿ.

  • 16 Feb 2024 08:44 AM (IST)

    Karnataka Budget 2024 Live: ತೆರಿಗೆ ಪಾಲುಗಳ ಬಗ್ಗೆ ಬಜೆಟ್​ನಲ್ಲಿ ಉಲ್ಲೇಖ

    ಉತ್ತರ ಭಾರತದ ರಾಜ್ಯಗಳು ಎಷ್ಟು ತೆರಿಗೆ ಪಾಲು ಪಡೆದಿವೆ, ದಕ್ಷಿಣ ಭಾರತದ ರಾಜ್ಯಗಳು ಎಷ್ಟು ತೆರಿಗೆ ಪಾಲು ಪಡೆದಿವೆ ಎಂದು ಬಜೆಟ್​ನಲ್ಲಿ ಉಲ್ಲೇಖ ಮಾಡುವ ಸಾಧ್ಯತೆ ಇದೆ. 2018-19 ಸಾಲಿನಲ್ಲಿ ಉತ್ತರ ಭಾರತ ಪಡೆದ ಪಾಲುಗಳನ್ನು ನೋಡುವುದಾದರೆ, ಉತ್ತರಪ್ರದೇಶ – 1,36,766 ಕೋಟಿ, ಬಿಹಾರ – 73,602 ಕೋಟಿ, ಮಧ್ಯಪ್ರದೇಶ- 57486 ಕೋಟಿ, ಪಶ್ಚಿಮ ಬಂಗಾಳ 55,775 ಕೋಟಿ, ಮಹಾರಾಷ್ಟ್ರ 42050 ಕೋಟಿ ರೂ. ಪಡೆದಿದೆ.

    2018-2019 ರಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪಡೆದಿರುವ ತೆರಿಗೆ ವಿವರಗಳನ್ನು ನೋಡುವುದಾದರೆ, ಆಂಧ್ರ ಪ್ರದೇಶ 32,787 ಕೋಟಿ, ತಮಿಳುನಾಡು 30,638 ಕೋಟಿ, ಕರ್ನಾಟಕ 35,894 ಕೋಟಿ, ತೆಲಂಗಾಣ 18,560 ಕೋಟಿ ರೂ. ಆಗಿದೆ.

  • 16 Feb 2024 08:01 AM (IST)

    Karnataka Budget 2024 Live: ಮದ್ಯ ಪ್ರಿಯಕರಿಗೆ ಶಾಕ್ ನೀಡುತ್ತಾ ಸರ್ಕಾರ?

    ಗ್ಯಾರಂಟಿ ಯೋಜನೆಗಳ ಜೊತೆಗೆ ಹೊಸ ಯೋಜನೆಗಳನ್ನು ನೀಡುವ ದೊಡ್ಡ ಸವಾಲು ಸಿದ್ದರಾಮಯ್ಯ ಮುಂದೆ ಇದ್ದು, ಬಜೆಟ್ ಗಾತ್ರ ಮತ್ತು ಸಾಲದ ಹೊರೆ ಹೆಚ್ಚಾಗಲಿದೆ. ಬಜೆಟ್​ನಲ್ಲಿ ಮದ್ಯದ ಮೇಲಿನ ಸುಂಕವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಆ ಮೂಲಕ ಆದಾಯ ಕ್ರೋಢೀಕರಣಕ್ಕೆ ಸಿದ್ದರಾಮಯ್ಯ ಕ್ರಮಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

  • 16 Feb 2024 07:59 AM (IST)

    Karnataka Budget 2024 Live: ದಾಖಲೆಯ ಬಜೆಟ್​ನಲ್ಲಿ ಸಿಹಿ ನೀಡುತ್ತಾರಾ ಸಿದ್ದರಾಮಯ್ಯ?

    ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಜೆಟ್​​ನಲ್ಲಿ ಮಹತ್ವದ ಘೋಷಣೆಗಳು ಹೊರಬೀಳುವ ನಿರೀಕ್ಷೆಗಳೂ ಇವೆ. ಈ ಬಾರಿ ಬಜೆಟ್ ಗಾತ್ರ ಸುಮಾರು 50 ಸಾವಿರ ಕೋಟಿ ರೂಪಾಯಿ ಹೆಚ್ಚಳವಾಗಲಿದೆ.

    ಇನ್ನಷ್ಟು ಓದಿ: ಇಂದು ರಾಜ್ಯ ಬಜೆಟ್​, ದಾಖಲೆಯ ಬಜೆಟ್​ನಲ್ಲಿ ಸಿಹಿ ನೀಡ್ತಾರಾ ಸಿದ್ದರಾಮಯ್ಯ? ನಿರೀಕ್ಷೆಗಳೇನು?

  • 16 Feb 2024 07:56 AM (IST)

    Karnataka Budget 2024 Live: ಬಜೆಟ್ ಗಾತ್ರ, ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆ

    ಕಳೆದ ಬಾರಿ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ 3.50 ಲಕ್ಷ ಕೋಟಿ ಅಥವಾ 3.80 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಕಳೆದ ಬಜೆಟ್‌ನಲ್ಲಿ 85,815 ಕೋಟಿ ರೂ. ಸಾಲದ ಮೊರೆ ಹೋಗಿತ್ತು. ಈ ಬಾರಿ ಅಂದಾಜು 1 ಲಕ್ಷ ಕೋಟಿಗೆ ಸಾಲ ಹೆಚ್ಚಾಗುವ ಸಾಧ್ಯತೆ ಇದೆ.

  • Published On - Feb 16,2024 7:54 AM

    Follow us